ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಜಿಪಂ ಅಧ್ಯಕ್ಷಗಾದಿಗೆ ಸುಜಾತಾ, ಭೀಮಾಶಂಕರ ನಡುವೆ ಅಂತಿಮ ಪೈಪೋಟಿ

Last Updated 29 ಜೂನ್ 2020, 15:07 IST
ಅಕ್ಷರ ಗಾತ್ರ

ವಿಜಯಪುರ: ತೀವ್ರ ಕುತೂಹಲ ಕೆರಳಿಸಿರುವ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಗಾದಿಗೆ ಜೂನ್‌ 30 ಮಧ್ಯಾಹ್ನ 3ಕ್ಕೆ ಚುನಾವಣೆ ನಿಗದಿಯಾಗಿದೆ.

ಒಟ್ಟು 42 ಸದಸ್ಯ ಸಂಖ್ಯಾ ಬಲ ಇರುವ ಜಿಲ್ಲಾ ಪಂಚಾಯ್ತಿಯಲ್ಲಿ ಬಿಜೆಪಿ 20, ಕಾಂಗ್ರೆಸ್ 18, ಜೆಡಿಎಸ್‌ 3 ಮತ್ತು ಪಕ್ಷೇತರ 1 ಸದಸ್ಯ ಬಲ ಹೊಂದಿದೆ. ಯಾವೊಂದು ಪಕ್ಷವೂ ಸ್ಪಷ್ಟ ಬಹುಮತ ಹೊಂದಿಲ್ಲದಿರುವುದರಿಂದ ಅತಂತ್ರ ಪರಿಸ್ಥಿತಿಯಲ್ಲಿ ಅಧ್ಯಕ್ಷ ಗಾದಿ ಯಾರ ಪಾಲಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಕಾಂಗ್ರೆಸ್‌, ಬಿಜೆಪಿ ಪೈಪೋಟಿ:

ಕಾಂಗ್ರೆಸ್‌ನಿಂದ ಸಾರವಾಡ ಕ್ಷೇತ್ರದ ಸುಜಾತಾ ಕಳ್ಳಿಮನಿ ಮತ್ತು ಬಿಜೆಪಿಯಿಂದ ನಿವರಗಿ ಕ್ಷೇತ್ರದ ಭೀಮಾಶಂಕರ ಬಿರಾದಾರ ಅವರು ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಎರಡೂ ಪಕ್ಷಗಳು ತಮ್ಮ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ವಿಪ್‌ ಜಾರಿಗೊಳಿಸಿವೆ. ಜೆಡಿಎಸ್‌ ತನ್ನ ಸದಸ್ಯರಿಗೆ ಮೌಖಿಕವಾಗಿ ಸೂಚನೆ ನೀಡಿದೆ.

ಜಿಲ್ಲಾ ಪಂಚಾಯ್ತಿಯಲ್ಲಿ ಬಿಜೆಪಿಗೆ ಸಂಖ್ಯಾಬಲ ಹೆಚ್ಚಿದ್ದರೂ ಈ ಹಿಂದಿನ ಎರಡೂ ಅವಧಿಯಲ್ಲಿ ಅಧ್ಯಕ್ಷ ಸ್ಥಾನವನ್ನು ತನ್ನದಾಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್‌ ಎರಡು ಅವಧಿಯಲ್ಲೂ ಅಧಿಕಾರ ನಡೆಸಿ, ಇದೀಗ ಕೊನೆಯ ಅವಧಿ ಅಧಿಕಾರವನ್ನು ತನ್ನ ಬಳಿ ಉಳಿಸಿಕೊಳ್ಳಲು ಹರಸಾಹಸ ಮಾಡತೊಡಗಿದೆ.

ರೆಸಾರ್ಟ್‌ ಸೇರಿರುವ ಬಿಜೆಪಿ ಸದಸ್ಯರು:

ಬಿಜೆಪಿ ಈಗಾಗಲೇ ತನ್ನ ಸದಸ್ಯರಿಗೆ ವಿಪ್‌ ಚಾರಿಗೊಳಿಸಿದೆ. ಸದಸ್ಯರನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ಈಗಾಗಲೇ ಬಿಜೆಪಿ 16 ಸದಸ್ಯರು ಬಾಗಲಕೋಟೆಯ ಕಂಠಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಈ ನಡುವೆ ರೆಸಾರ್ಟ್‌ಗೆ ಹೋಗದೇ ತಪ್ಪಿಸಿಕೊಂಡಿರುವ ಮೊರಟಗಿ ಕ್ಷೇತ್ರದ ಬಿಜೆಪಿ ಸದಸ್ಯ ಬಿಂದುರಾಯಗೌಡ ಪಾಟೀಲ ಮತ್ತು ಯಂಕಂಚಿ ಕ್ಷೇತ್ರದ ಬಿಜೆಪಿ ಸದಸ್ಯ ಮಹಾಂತಗೌಡ ಶಂಕರಗೌಡ ಪಾಟೀಲ ನಡೆ ರಾಜಕೀಯವಾಗಿ ಕುತೂಹಲ ಕೆರಳಿಸಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ, ಬಿಜೆಪಿಯ ಒಮ್ಮತದ ಅಭ್ಯರ್ಥಿಯನ್ನಾಗಿ ಭೀಮಾಶಂಕರ ಬಿರಾದಾರ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ. ಇಬ್ಬರು ಕಾಂಗ್ರೆಸ್‌ ಬೆಂಬಲಿಸಲಿದ್ದಾರೆ ಎಂಬುದು ಊಹಾಪೂಹ. ನಮ್ಮ ಪ್ರಯತ್ನ ನಡೆದಿದೆ. ಈ ಬಾರಿ ಬಿಜೆಪಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್‌ ಬೆಂಬಲ ಯಾರಿಗೆ?:

ಮೂರು ಸದಸ್ಯ ಬಲ ಹೊಂದಿರುವ ಜೆಡಿಎಸ್‌ನಲ್ಲಿ ಇಬ್ಬರು ಕಾಂಗ್ರೆಸ್‌ನತ್ತ, ಒಬ್ಬರು ಬಿಜೆಪಿಯತ್ತ ಒಲವು ಹೊಂದಿದ್ದಾರೆ. ಅಲ್ಲದೇ, ಪಕ್ಷೇತರ ಸದಸ್ಯರೊಬ್ಬರೂ ಸಹ ಬಿಜೆಪಿ ಬೆಂಬಲಿಸಿದ್ದಾರೆ. ಹೀಗಾಗಿ ಕದನ ಕಣ ಕುತೂಹಲ ಕೆರಳಿಸಿದೆ.

ಕಾಂಗ್ರೆಸ್‌, ಬಿಜೆಪಿಯಲ್ಲಿ ಯಾವೊಂದು ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲದಿರುವುದರಿಂದ ಕೊನೆಯ ಕ್ಷಣದ ವರೆಗೂ ಯಾರು ಅಧ್ಯಕ್ಷರಾಗುತ್ತಾರೆ ಎಂಬುದು ಫಿಫ್ಟಿ–ಫಿಫ್ಟಿ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT