ಗುರುವಾರ , ಅಕ್ಟೋಬರ್ 21, 2021
24 °C
ಸಿಂದಗಿ: ವಿಧಾನಸಭೆ ಉಪ ಚುನಾವಣೆಯಲ್ಲಿ ಗೆಲುವು ಖಚಿತ:– ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಿಶ್ವಾಸ

ಜೆಡಿಎಸ್‌ಗೆ ಮತ ಹಾಕಿದರೆ ಕಸದ ಬುಟ್ಟಿಗೆ ಕಸ ಹಾಕಿದಂತೆ: ಈಶ್ವರ ಖಂಡ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂದಗಿ: ‘ಜೆಡಿಎಸ್ ಬಣ್ಣ ಬಯಲಾಗಿದೆ. ಕಾಂಗ್ರೆಸ್ ಮತ ವಿಭಜನೆಗಾಗಿ ಅಲ್ಪಸಂಖ್ಯಾತರರಿಗೆ ಬಸವಕಲ್ಯಾಣದಂತೆ ಸಿಂದಗಿಯಲ್ಲೂ ಟಿಕೆಟ್ ನೀಡಿದ್ದಾರೆ. ಜೆಡಿಎಸ್‌ಗೆ ಮತ ಹಾಕಿದರೆ ಕಸದ ಬುಟ್ಟಿಗೆ ಹಾಕಿದಂತೆ, ಬಿಜೆಪಿಗೆ ಸಹಕರಿಸಿದಂತೆ. ಅಲ್ಪಸಂಖ್ಯಾತರರು ಕಾಂಗ್ರೆಸ್ ಜೊತೆ ಇದ್ದಾರೆ. ಬಿಜೆಪಿ ದುರಾಡಳಿತ ವಿರುದ್ದ ಎಲ್ಲ ಮುಖಂಡರು ಒಗ್ಗಟ್ಟಾಗಿ ಶ್ರಮಿಸುತ್ತಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ಇಲ್ಲಿಯ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಸೋಮವಾರ ಕಾರ್ಯಕರ್ತರ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿ, ಸಿಂದಗಿ ಮತಕ್ಷೇತ್ರದ ಹಿಂದಿನ ಶಾಸಕ ದಿವಂಗತ ಎಂ.ಸಿ.ಮನಗೂಳಿ ಕಾಂಗ್ರೆಸ್ ಬಗ್ಗೆ ಒಲವು ಇಟ್ಟುಕೊಂಡ ಜಾತ್ಯತೀತ ವ್ಯಕ್ತಿಯಾಗಿದ್ದರು. ಅವರು ಮತಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ, ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಐದು ವರ್ಷ ನಡೆಸಿದ ಕಳಂಕರಹಿತ ಆಡಳಿತ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ’ ಎಂದರು.

‘ಹಾನಗಲ್ ಮತ್ತು ಸಿಂದಗಿ ಎರಡೂ ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತೇವೆ. ಇಲ್ಲಿಯ ಅಭ್ಯರ್ಥಿ ಅಶೋಕ ಮನಗೂಳಿ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರ ರೈತ ವಿರೋಧಿ
ಕೃಷಿ ಕಾನೂನು ಜಾರಿಗೆ ತರುವುದರ ಜೊತೆಗೆ ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರ, ವರ್ಗಾವಣೆ ದಂಧೆಯಲ್ಲಿ ಮುಳುಗಿತು. ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ವಿರುದ್ದ ಖಂಡ್ರೆ ವಾಗ್ದಾಳಿ ನಡೆಸಿದರು.

ಜೆಡಿಎಸ್ ಅಹಿಂದ ಕಾರ್ಯಕರ್ತ
ರಿಗೆ ಕಾಂಗ್ರೆಸ್ ಅಭ್ಯರ್ಥಿ ಬೆದರಿಕೆ ಹಾಕುತ್ತಿ
ದ್ದಾರೆ ಎಂಬ ಜೆಡಿಎಸ್ ಮುಖಂಡರ ಆರೋಪದ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ಶಾಸಕ ಎಂ.ಬಿ.ಪಾಟೀಲ ಅವರುಪ್ರಶ್ನೆಗೆ ಉತ್ತರಿಸುವಂತೆ ಅಶೋಕ ಮನಗೂಳಿಯವರ ಕಡೆಗೆ ಕೈ ತೋರಿಸಿದರೂ ಅಶೋಕ ಮೌನವಾಗಿದ್ದರು.

ಶಾಸಕರಾದ ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ಮಾಜಿ ಶಾಸಕ ಸಿ.ಎಸ್.ನಾಡಗೌಡ, ಕಾಂಗ್ರೆಸ್ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ರಾಜೂ ಆಲಗೂರ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಠ್ಠಲ ಕೊಳ್ಳುರ
ಇದ್ದರು.

ಕಾಂಗ್ರೆಸ್ ಮುಖಂಡರಾದ ಮಾಜಿ ಶಾಸಕ ಶರಣಪ್ಪ ಸುಣಗಾರ, ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ಮೈಬೂಬಸಾಬ ತಾಂಬೋಳಿ(ಎಂ.ಆರ್.ಟಿ) ಸಭೆಗೆ ಗೈರಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು