ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠಾಣೆಗೆ ಗ್ರಾಮಸ್ಥರ ಮುತ್ತಿಗೆ

Last Updated 3 ಜನವರಿ 2011, 11:15 IST
ಅಕ್ಷರ ಗಾತ್ರ

ವಿಜಾಪುರ: ತಾಲ್ಲೂಕಿನ ಅತಾಲಟ್ಟಿ ಗ್ರಾಮದಲ್ಲಿ ಡಿ. 31ರಂದು ನಡೆದಿದೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ ಗ್ರಾಮದ ನಾಲ್ವರ ವಿರುದ್ಧ ವಿಜಾಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಿ.ಪಂ. ಮತ್ತು ತಾ.ಪಂ. ಚುನಾವಣೆಯ ಮತದಾನದ ವೇಳೆ ಅತಾಲಮಟ್ಟಿಯ ಮತಗಟ್ಟೆಯ ಬಂದೋಬಸ್ತ್‌ನಲ್ಲಿ ಪೊಲೀಸರು ಗ್ರಾಮಸ್ಥರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಅತಾಲಟ್ಟಿಯ ಸುಮಾರು 50ಕ್ಕೂ ಹೆಚ್ಚು ಜನರು ಗ್ರಾಮೀಣ ಪೊಲೀಸ್ ಠಾಣೆಯ ಎದುರು ಭಾನುವಾರ ಧರಣಿ ನಡೆಸಿದರು.

‘ಅತಾಲಟ್ಟಿಯಲ್ಲಿ ಮತದಾನದ ವೇಳೆ ಗ್ರಾಮದ ಕೆಲವರು ಮತಗಟ್ಟೆ ಬಳಿ ದಾಂಧಲೆ ನಡೆಸುತ್ತಿದ್ದರು. ಇದಲ್ಲದೇ ಸರತಿಯಲ್ಲಿ ಬಂದು ಮತದಾನ ಮಾಡಲು ಹೇಳಿದರೆ ನಮ್ಮ ಪೊಲೀಸ್ ಪೇದೆಯ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಮತದಾನ ಕಾರ್ಯಕ್ಕೆ ಅಡ್ಡಿಯನ್ನುಂಟು ಮಾಡಲು ಯತ್ನಿಸಿದ ಹನುಮಂತ ಹಂಚನಾಳ, ಪಿಂಟು ಬಟಗಿ, ಲಕ್ಷ್ಮಣ ಸೊನ್ನದ, ಅಪ್ಪು ಕೆಂಚನಾಳ ಅವರ ವಿರುದ್ಧ ದೂರು ದಾಖಲಿಸಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಫ್.ಎ. ಟ್ರಾಸ್ಗರ ‘ಪ್ರಜಾವಾಣಿ’ಗೆ ತಿಳಿಸಿದರು.

ಹಳೆಯ ದ್ವೇಷ: ‘ಅತಾಲಮಟ್ಟಿಯಲ್ಲಿ ನಮ್ಮ ಸಿಬ್ಬಂದಿ ದೌರ್ಜನ್ಯ ನಡೆಸಿಲ್ಲ. ಇದು ಕೆಲವರು ಸೃಷ್ಟಿಸಿದ ಸುಳ್ಳು ವದಂತಿ. ಚುನಾವಣೆ ಕಾರ್ಯದಲ್ಲಿದ್ದ ನಮ್ಮ ಪೊಲೀಸ್ ಪೇದೆಗಳು ಸರತಿಯಲ್ಲಿ ನಿಂತು ಮತದಾನ ಮಾಡುವಂತೆ ಜನರಿಗೆ ಹೇಳಿದ್ದಾರೆ. ಅದಕ್ಕೆ ಗ್ರಾಮದ ಹನುಮಂತ ಹಂಚನಾಳ, ಪಿಂಟು ಬಟಗಿ, ಲಕ್ಷ್ಮಣ ಸೊನ್ನದ, ಅಪ್ಪು ಕೆಂಚನಾಳ ಮತ್ತಿತರರು ಪೊಲೀಸ್ ಪೇದೆಯ ಮೇಲೆ ಹಲ್ಲೆ ನಡೆಸಿ, ಬಟ್ಟೆ ಹರಿದಿದ್ದಾರೆ. ಹೀಗಾಗಿ ಆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ವಿಷಯ ಅತಾಲಟ್ಟಿ ಗ್ರಾಮಸ್ಥರಿಗೆ ತಿಳಿದ ಕೂಡಲೇ ಪೊಲೀಸರ ಮೇಲೆಯೇ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದರು.

ಪೊಲೀಸರ ದೌರ್ಜನ್ಯ: ‘ಕುಡಿದ ಅಮಲಿನಲ್ಲಿದ್ದ ಪೊಲೀಸರು ನಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ. ದೌರ್ಜನ್ಯ ನಡೆಸಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಅತಾಲಟ್ಟಿಯ ಗ್ರಾಮಸ್ಥರು ಭಾನುವಾರ ವಿಜಾಪುರ ಗ್ರಾಮೀಣ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಕೆಲಹೊತ್ತು ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಫ್.ಎ. ಟ್ರಾಸ್ಗರ, ಈ ಘಟನೆಯ ಕುರಿತು ಎಎಸ್‌ಪಿ ಅಜಯ ಹಿಲೋರಿ ಸಂಪೂರ್ಣ ತನಿಖೆ ನಡೆಸಲಿದ್ದಾರೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಆಗ ಗ್ರಾಮಸ್ಥರು ಧರಣಿ ಹಿಂತಕ್ಕೆ ಪಡೆದರು.

ಆಸ್ಪತ್ರೆಗೆ ದಾಖಲು:  ಪೊಲೀಸರಿಂದ ದೌರ್ಜನ್ಯಕ್ಕೊಳಗಾಗಿದ್ದಾನೆ ಎನ್ನಲಾದ ಹಣಮಂತ ಹಂಚನಾಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT