ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸೀದಿಗಳಲ್ಲಿ ಆಜಾನ್‌; ಉಲ್ಮಾಗಳ ನಿರ್ಧಾರ ಅಂತಿಮ

ವಕ್ಫ್‌ ಬೋರ್ಡ್‌ ಅಧ್ಯಕ್ಷ ಮೌಲಾನಾ ಎನ್‌.ಕೆ.ಮಹಮ್ಮದ್ ಷಫಿ ಸಅದಿ ತಿಳಿಸಿದರು.
Last Updated 15 ಮೇ 2022, 12:39 IST
ಅಕ್ಷರ ಗಾತ್ರ

ಉಡುಪಿ: ಮಸೀದಿಗಳಲ್ಲಿ ಆಜಾನ್‌ ಕರೆ ನೀಡುವ ವಿಚಾರ ಷರಿಷತ್‌ ವ್ಯಾಪ್ತಿಗೆ ಒಳಪಟ್ಟಿರುವ ಕಾರಣ ವಕ್ಫ್‌ ಬೋರ್ಡ್‌ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಬೋರ್ಡ್‌ ಅಧ್ಯಕ್ಷ ಮೌಲಾನಾ ಎನ್‌.ಕೆ.ಮಹಮ್ಮದ್ ಷಫಿ ಸಅದಿ ತಿಳಿಸಿದರು.

ಭಾನುವಾರ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 10ರಿಂದ 6ರವರೆಗೆ ಯಾವುದೇ ಕಾರ್ಯಕ್ರಮಗಳಲ್ಲಿ ಲೌಡ್‌ ಸ್ಪೀಕರ್ ಬಳಸುವಂತಿಲ್ಲ ಎಂದು 2005ರಲ್ಲಿ ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. ನ್ಯಾಯಾಲಯದ ಆದೇಶದಿಂದ ಮಸೀದಿಗಳಲ್ಲಿ ಬೆಳಗಿನ ಆಜಾನ್‌ಗೆ ಕರೆ ನೀಡಲು ತೊಂದರೆಯಾಗಿದ್ದು, ಬಗೆಹರಿಸುವಂತೆ ಸಮುದಾಯದ ಮುಖಂಡರು ವಕ್ಫ್‌ ಮಂಡಳಿಗೆ ಮನವಿ ಸಲ್ಲಿಸಿದ್ದಾರೆ.

ಆದರೆ, ಆಜಾನ್‌ ವಿಚಾರದಲ್ಲಿ ಉಲ್ಮಾಗಳು ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿರುವ ಕಾರಣ ವಕ್ಫ್‌ ಮಂಡಳಿ ಮಧ್ಯೆ ಪ್ರವೇಶಿಸುವುದಿಲ್ಲ. ಈಗಾಗಲೇ ಬೆಂಗಳೂರಿನಲ್ಲಿ ಉಲ್ಮಾಗಳು ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ಕರಾವಳಿ ಬಾಗದ ಉಲ್ಮಾಗಳು ಕೂಡ ಒಂದೆರಡು ದಿನಗಳಲ್ಲಿ ಸಭೆ ಸೇರಿ ಸಮಸ್ಯೆ ಕುರಿತ ಚರ್ಚಿಸಲಿದ್ದಾರೆ. ಆಜಾನ್ ಕಾರಣಕ್ಕೆ ಸಮಾಜದಲ್ಲಿ ಗಲಭೆಗಳು ಹಾಗೂ ಅಹಿತಕರ ಘಟನೆಗಳು ನಡೆಯಬಾರದು ಎಂಬುದು ವಕ್ಫ್‌ ಬೋರ್ಡ್ ಉದ್ದೇಶ ಎಂದು ಎನ್‌.ಕೆ.ಮಹಮ್ಮದ್ ಷಫಿ ತಿಳಿಸಿದರು.

ಸುಪ್ರೀಂ ಆದೇಶ ಪಾಲನೆ

2005ರ ಸುಪ್ರೀಂಕೋರ್ಟ್‌ ತೀರ್ಪಿನಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 6ರವರೆಗೆ ಲೌಡ್ ಸ್ಪೀಕರ್ ಬಳಕೆಗೆ ನಿರ್ಬಂಧವಿದ್ದು, ಅದರಂತೆಯೇ ಮಸೀದಿಗಳಲ್ಲಿ ಆಜಾನ್ ಕರೆ ನೀಡುವಾಗ ನಿರ್ಧಿಷ್ಟ ಶಬ್ಧ (ಡೆಸಿಬಲ್‌) ಹೊರಸೂಸುವ ಸ್ಪೀಕರ್‌ಗಳನ್ನು ಮಾತ್ರ ಬಳಸುವಂತೆ 2021ರ ಮಾರ್ಚ್‌ 9ರಂದು ವಕ್ಫ್‌ಬೋರ್ಡ್‌ ಆದೇಶ ನೀಡಿತ್ತು.

ನ್ಯಾಯಾಲಯದ ಆದೇಶದಿಂದ ಬೆಳಗಿನ ಆಜಾನ್‌ಗೆ ತೊಂದರೆಯಾಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಮಾರ್ಚ್‌ 17, 2021ರಂದು ವಕ್ಫ್‌ ಬೋರ್ಡ್‌ ತುರ್ತು ಸಭೆ ಸೇರಿ ಪರಿಷ್ಕೃತ ಆದೇಶ ಹೊರಡಿತ್ತು.

ಅದರಂತೆ, ಕೈಗಾರಿಕಾ ಪ್ರದೇಶದಲ್ಲಿರುವ ಮಸೀದಿಗಳಲ್ಲಿ ಆಜಾನ್ ನೀಡುವಾಗ ಬೆಳಿಗ್ಗೆ 75 ಹಾಗೂ ರಾತ್ರಿ 70 ಡಿಸೆಬಲ್‌, ವಾಣಿಜ್ಯ ಪ್ರದೇಶದಲ್ಲಿ ಬೆಳಿಗ್ಗೆ 65, ರಾತ್ರಿ 55, ಜನವಸತಿ ಪ್ರದೇಶಗಳಲ್ಲಿ ಬೆಳಿಗ್ಗೆ 55, ರಾತ್ರಿ 45, ನಿಶ್ಯಬ್ದ ವಲಯಗಳಲ್ಲಿ ಬೆಳಿಗ್ಗೆ 50, ರಾತ್ರಿ 40 ಡೆಸಿಬಲ್‌ ಹೊರಸೂಸುವ ಸ್ಪೀಕರ್‌ಗಳನ್ನು ಮಾತ್ರ ಬಳಸುವಂತೆ ಸೂಚನೆ ನೀಡಲಾಗಿತ್ತು ಎಂದು ತಿಳಿಸಿದರು.

ಐಎಎಸ್, ಐಪಿಎಸ್ ತರಬೇತಿ ಕೇಂದ್ರ

ವಕ್ಫ್‌ ಬೋರ್ಡ್‌ ಅಧ್ಯಕ್ಷನಾದ ಬಳಿಕ ಬೆಂಗಳೂರಿನ ಬಡೇಮಕಾನ್‌ನಲ್ಲಿ 15 ಕೋಟಿ ವೆಚ್ಚದಲ್ಲಿ ಐಎಎಸ್‌, ಐಪಿಎಸ್‌ ತರಬೇತಿ ಕೇಂದ್ರ, ತುಮಕೂರಿನಲ್ಲಿ ಮಹಿಳಾ ಕಾಲೇಜು, ಬೆಂಗಳೂರಿನಲ್ಲಿ ₹ 9 ಕೋಟಿ ವೆಚ್ಚದಲ್ಲಿ ಮಹಿಳಾ ಕಾಲೇಜು ಹಾಗೂ ಹಾಸ್ಟೆಲ್‌ ನಿರ್ಮಾಣಕ್ಕೆ ಜೂನ್‌ನಲ್ಲಿ ಶಿಲಾನ್ಯಾಸ ನೆರವೇರಿಸಲಾಗುವುದು.ರಾಜ್ಯದಾದ್ಯಂತ 10 ಮಹಿಳಾ ಕಾಲೇಜುಗಳನ್ನು ನಿರ್ಮಿಸಲು ಜಾಗ ಗುರುತಿಸಲಾಗಿದೆ ಎಂದು ತಿಳಿಸಿದರು.

ವಕ್ಫ್‌ ಬೋರ್ಡ್‌ ಆಸ್ತಿ ಕಬಳಿಕೆ ತಡೆಯಲು ಡ್ರೋಣ್ ಸರ್ವೆಗೆ ಸರ್ಕಾರ ₹ 2.5 ಕೋಟಿ ಅನುದಾನ ನೀಡಿದ್ದು, ಶೀಘ್ರ ಸರ್ವೇ ಮುಗಿಯಲಿದೆ. ವಕ್ಫ್‌ ಬೋರ್ಡ್‌ಗೆ ನಿತ್ಯವೂ ದೂರುದ ಜಿಲ್ಲೆಗಳಿಂದ ನೂರಾರು ಅಧಿಕಾರಿಗಳು, ಸದಸ್ಯರು ಭೇಟಿ ನೀಡುತ್ತಿದ್ದು, ವಾಸ್ತವ್ಯಕ್ಕೆ ಸಮಸ್ಯೆ ಎದುರಾಗಿದೆ. ದಾಖಲೆಗಳ ಸಂಗ್ರಹಕ್ಕೆ ಪ್ರತ್ಯೇಕ ಕೊಠಡಿಗಳ ಅಗತ್ಯತೆ ಇದ್ದು, ವಕ್ಫ್‌ ಮಂಡಳಿಯ ಕಟ್ಟಡ ನವೀಕರಣಕ್ಕೆ ಸರ್ಕಾರ ₹ 2 ಕೋಟಿ ಅನುದಾನ ಬಿಡುಗಡೆ ಮಾಡಿದೆ. ವಕ್ಫ್‌ ಜಾಗವನ್ನು ಶೈಕ್ಷಣಿಕ ಉದ್ದೇಶಗಳಿಗೆ ಬಳಸಲು ಹೆಚ್ಚು ಒತ್ತು ನೀಡಲಾಗುವುದು ಎಂದು ಮಹಮ್ಮದ್ ಷಫಿ ತಿಳಿಸಿದರು.

‘ರಾಷ್ಟ್ರಪ್ರೇಮ ಮನದಾಳದಿಂದ ಬರಬೇಕು’

ರಾಜ್ಯದಲ್ಲಿ ಜಮಾತ್‌, ಎಸ್‌ಎಸ್‌ಎಫ್‌ ಅಡಿ 2,000 ಹಾಗೂ ವಕ್ಫ್‌ ಬೋರ್ಡ್ ಅಡಿ 1,800 ಮದರಸಗಳಿದ್ದು ಎಲ್ಲೆಡೆಯೂ ರಾಷ್ಟ್ರಗೀತೆ ಹಾಗೂ ರಾಷ್ಟ್ರೀಯತೆ ಬೋಧನೆ ನಡೆಯುತ್ತಿದೆ. ರಾಷ್ಟ್ರಪ್ರೇಮ, ರಾಷ್ಟ್ರಗೀತೆ ಮನದಾಳದಿಂದ ಬರಬೇಕು. ಯಾರ ಮೇಲೂ ಅಭಿಪ್ರಾಯಗಳನ್ನು ಹೇರುವುದು ಸರಿಯಲ್ಲ. ಸಿಂಧಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದವರೆಲ್ಲ ರಾಷ್ಟ್ರಪ್ರೇಮದ ಪಾಠ ಹೇಳಲು ಬರುತ್ತಿರುವುದು ಹಾಸ್ಯಾಸ್ಪದ. ಸಂವಿಧಾನಬದ್ಧವಾಗಿ ಎಲ್ಲರಿಗೂ ಬದುಕುವ ಅವಕಾಶವಿದೆ ಎಂದು ಮಹಮ್ಮದ್ ಷಫಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT