ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಸೂರ್ಯೋದಯಕ್ಕೆ ಮುನ್ನ ಕೆರೆಯಂಗಳದಲ್ಲಿ ಹಕ್ಕಿಗಳದೇ ಕಲರವ, ಚೂರುಪಾರು ಮೋಡಗಳು ಚದುರಿ ಆಗಸದಲ್ಲಿ ನೇಸರನ ಕಿರಣ ಮೂಡುತ್ತ ಬೆಳಕು ಹರಿಯುತ್ತಿದ್ದಂತೆಯೇ ಬಾನಂಗಳದಲ್ಲಿ ರಂಗೋಲಿ ಬಿಡಿಸಿದಂತೆ ಬಣ್ಣಬಣ್ಣದ ಚಿತ್ತಾರ, ಗುಂಪಾಗಿ ಹಾರಾಡುವ ಹಕ್ಕಿಗಳ ರೆಕ್ಕೆಗಳಿಂದ ಬೀಸುವ ತಂಗಾಳಿ ಸುಂಯ್ ಸುಂಯ್ ಎನ್ನುವ ಭಾವ, ನೂರಾರು ಗೂಡುಗಳಲ್ಲಿ ಮರಿಗಳಿಗೆ ತುತ್ತು ತಿನ್ನಿಸುವ ಸಂಭ್ರಮ, ನೀರಿಗೆ ಜಿಗಿದು ಮೀನು ಹಿಡಿದು ಕೊಕ್ಕಿನಲ್ಲಿ ಕಚ್ಚಿ ಸಾಗಿಸುವ ಉತ್ಸಾಹ...ನೋಡುತ್ತಿದ್ದರೆ ಮನದಲ್ಲಿ ಮೂಡುವ ರಸಋಷಿ ಕುವೆಂಪು. ದೇವರು ರುಜು ಮಾಡಿದನು ಎಂಬ ಅಮೋಘ ಉಪಮೆ... ಇದೆಲ್ಲ ಏನು ಗೊತ್ತೇ ಅಂಕಸಮುದ್ರ ಪಕ್ಷಿಧಾಮದ ಹೊರನೋಟ.

ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶದಿಂದ ಕೂಗಳತೆ ದೂರದಲ್ಲಿರುವ ಅಂಕಸಮುದ್ರ ಪಕ್ಷಿಧಾಮ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಒಂದು ಪ್ರೇಕ್ಷಣೀಯ ಸ್ಥಳ. ದಶಕದ ಹಿಂದೆ ಒಂದು ಪುಟ್ಟ ಗ್ರಾಮ ಅಷ್ಟೇ. ಇಲ್ಲಿರುವ 244.4 ಎಕರೆ ವಿಸ್ತಾರ ಪ್ರದೇಶದ ಕೆರೆಯೊಂದು ರೈತರ ಕೃಷಿ ಜಮೀನುಗಳಿಗೆ ಅಗತ್ಯವಾದ ಕೊಳವೆಬಾವಿಗಳ ಅಂತರ್ಜಲ ಹೆಚ್ಚಿಸಲು ನೆರವಾಗಿತ್ತು, ಜಲಚರಗಳಿಗೆ ಆಶ್ರಯ ತಾಣವಾಗಿತ್ತು. ಇಲ್ಲಿ ಹರಡಿದ್ದ ಸಾವಿರಾರು ಕರಿ ಜಾಲಿ ಮರಗಳು ಅಪರೂಪದ ಸಹಸ್ರಾರು ದೇಶಿ ವಿದೇಶಿ ಬಾನಾಡಿಗಳಿಗೆ ರಕ್ಷಣೆ ನೀಡಿದ್ದವು. ಕೆರೆಯೊಂದು ಪಕ್ಷಿಧಾಮ ಎಂದು ಹೆಗ್ಗಳಿಕೆ ಪಡೆಯಿತು, ಕಲ್ಯಾಣ ಕರ್ನಾಟಕದ ಮೊದಲ ಪಕ್ಷಿಧಾಮ ಎನಿಸಿತು.

ಕೆರೆಯ ಸುತ್ತಲೂ ಆವೃತವಾದ ನೀರು ಹಕ್ಕಿಗಳಿಗೆ ರಕ್ಷಣಾ ಕವಚದಂತಿದೆ, ಕೆರೆಯ ಮಧ್ಯದ ಪ್ರದೇಶದಲ್ಲಿ ನಿರ್ಮಿಸಿರುವ 50ಕ್ಕೂ ಹೆಚ್ಚು ಕೃತಕ ನಡುಗಡ್ಡೆಗಳಲ್ಲಿ, ಎತ್ತರದ ಮತ್ತು ನೆಲಕ್ಕೊರಗಿದ ಗಿಡ ಮರಗಳಲ್ಲಿ ಪಕ್ಷಿಗಳು ತಮ್ಮ ಬದುಕು ಕಂಡುಕೊಂಡಿವೆ. ಜತೆಗೆ ನೀರಿನಲ್ಲಿ ಹೇರಳವಾಗಿ ದೊರೆಯುವ ಆಹಾರ ಕೂಡ ಪಕ್ಷಿಗಳಿಗೆ ವರದಾನವಾಗಿದೆ. ತುಂಗಭದ್ರಾ ಹಿನ್ನೀರು ಮೂಲಕ ಯಂತ್ರಗಳ ಸಹಾಯದಿಂದ ಕೆರೆಗೆ ನೀರು ಹರಿಸಿದ್ದು ಮತ್ತು ಉತ್ತಮ ಮುಂಗಾರು ಮಳೆಯಿಂದಾಗಿ ಕೆರೆ ಸಂಪೂರ್ಣ ಭರ್ತಿಯಾಗಿದ್ದು, ಸೌಂದರ್ಯ ದುಪ್ಪಟ್ಟಾಗಿದೆ.

ವಿಜಯನಗರ-ಬಳ್ಳಾರಿ ಜಿಲ್ಲೆಯ ಪಕ್ಷಿ ತಜ್ಞರು, ಪಕ್ಷಿ ಪ್ರೇಮಿಗಳು, ಅಂಕಸಮುದ್ರ ಗ್ರಾಮದ ಯುವಬ್ರಿಗೇಡ್ ಸದಸ್ಯರು, ಹಗರಿಬೊಮ್ಮನಹಳ್ಳಿಯ ಗ್ರೀನ್ ಎಚ್ಬಿಎಚ್ ತಂಡದ ಸದಸ್ಯರ ಇಚ್ಛಾಶಕ್ತಿ ಮತ್ತು ನಿರಂತರ ಶ್ರಮ, ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ ಪರಿಣಾಮವಾಗಿ ಬಾನಾಡಿಗಳಿದ್ದ ಕೆರೆಯೊಂದು ಪಕ್ಷಿಧಾಮವಾಗುವ ಮೂಲಕ ಈ ಭಾಗದ ಪಕ್ಷಿ ಪ್ರೇಮಿಗಳು ಕಂಡಿದ್ದ ಕನಸು ನನಸಾಗಿಯೇ ಬಿಟ್ಟಿತು.

2016ರ ಸೆಪ್ಟೆಂಬರ್ನಲ್ಲಿ ರಾಜ್ಯ ವನ್ಯಜೀವಿ ಸಲಹಾಮಂಡಳಿಯಲ್ಲಿ ಪಕ್ಷಿಧಾಮಕ್ಕಾಗಿ ಪಕ್ಷಿ ತಜ್ಞರಾದ ಸಮದ್ ಕೊಟ್ಟೂರು ಮತ್ತು ಹಗರಿಬೊಮ್ಮನಹಳ್ಳಿಯ ವಿಜಯ್ ಇಟ್ಟಿಗಿ ಮತ್ತು ತಂಡ ಸಲ್ಲಿಸಿದ್ದ ಪ್ರಸ್ತಾವನೆ ಅಂಗೀಕಾರಗೊಂಡು 2017ರ ಫೆಬ್ರುವರಿಯಲ್ಲಿ ಅಂಕಸಮುದ್ರ ಕೆರೆ ಪಕ್ಷಿಗಳ ಸಂರಕ್ಷಿತ ಪ್ರದೇಶವೆಂದು ಘೋಷಣೆಗೊಂಡಿತು. ಈ ಪ್ರದೇಶ ಅರಣ್ಯ ಇಲಾಖೆಯ ಸುಪರ್ದಿಗೆ ಸೇರಿತು. ಒಂದೊಂದೇ ಮೂಲಸೌಕರ್ಯಗಳು ಬರತೊಡಗಿದವು. ಒತ್ತುವರಿಯಾಗಿದ್ದ ಕೆರೆಯ ಪ್ರದೇಶವನ್ನು ನ್ಯಾಯಾಧೀಶರ ನೆರವಿನಿಂದ ತೆರವುಗೊಳಿಸಲಾಯಿತು. ವೀಕ್ಷಣಾ ಗೋಪುರ ನಿರ್ಮಾಣಗೊಂಡಿತು. ನಾಲ್ಕು ಜನ ಕಾವಲುಗಾರರ ನೇಮಕವೂ ಆಯಿತು. ಮೀನುಗಾರರು ಬಲೆಗಳನ್ನು ಹಾಕಿ ಪಕ್ಷಿಗಳ ಪ್ರಾಣಕ್ಕೆ ಕಂಟಕವಾಗಿದ್ದನ್ನು ತಡೆಯುವುದಕ್ಕೆ ಸಾಧ್ಯವಾಯಿತು.

ಇಲ್ಲಿ ವಾಸ್ತವ್ಯ ಹೂಡಿರುವ ಲಕ್ಷಕ್ಕೂ ಹೆಚ್ಚು ಪಕ್ಷಿಗಳು, ವಿಶೇಷವಾಗಿ ಅಲಾಸ್ಕ, ಸೈಬೇರಿಯಾ, ಯುರೋಪ್ ಸೇರಿದಂತೆ ದೇಶ ವಿದೇಶಗಳಿಂದ ಆಹಾರ ಅರಸಿ ವಲಸೆ ಬರುವ ಬಾನಾಡಿಗಳು, ಸಂತಾನೋತ್ಪತ್ತಿ ನಡೆಸುವ ರೆಕ್ಕೆ ಮಿತ್ರರು ಹಾಗೂ ಐಯುಸಿಎನ್ (ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್) ವರದಿಯಂತೆ ಅಳಿವಿನಂಚಿನಲ್ಲಿರುವ ದೇಶೀಯ ಹೆಜ್ಜಾರ್ಲೆ ಸಂತತಿ ಹೆಚ್ಚಿಸಿಕೊಂಡಿರುವುದು ಇಲ್ಲಿನ ವೈಶಿಷ್ಟ್ಯ. ಇಲ್ಲಿ ಹೇರಳವಾಗಿ ದೊರೆಯುವ ಮೀನು ಸಹಿತ ಜಲಚರಗಳು ಮತ್ತು ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿನ ಭಕ್ಷ್ಯ ಭೋಜನವನ್ನು ಸವಿಯಲು ಗುಂಪುಗುಂಪಾಗಿ ಬೆಳಗಿನ ಜಾವ ತೆರಳುವ, ಸಂಜೆ ವೇಳೆ ಆಗಮಿಸುವ ದೃಶ್ಯವಂತೂ ನೋಡುವುದೇ ಚಂದ, ಅದೊಂದು ದೃಶ್ಯ ಕಾವ್ಯದಂತಿರುತ್ತದೆ.

2024ರ ಫೆಬ್ರುವರಿಯಲ್ಲಿ ಪಕ್ಷಿ ತಜ್ಞರು ನಡೆಸಿದ ಗಣತಿ ಕಾರ್ಯದಲ್ಲಿ ಸ್ಥಳೀಯ ಮತ್ತು ದೇಶ-ವಿದೇಶಗಳ 168 ಪ್ರಭೇದಗಳ 48,825 ಪಕ್ಷಿಗಳು ಪತ್ತೆಯಾಗಿದ್ದವು. ಈ ವರ್ಷ ಜನವರಿ 25ರಂದು ನಡೆಸಿದ ಗಣತಿಯಲ್ಲಿ 132 ಪ್ರಭೇದಗಳ 50 ಸಾವಿರಕ್ಕೂ ಹೆಚ್ಚು ಬಾನಾಡಿಗಳು ಕಂಡುಬಂದಿವೆ.

2025 ಜನವರಿಯಲ್ಲಿ ನಡೆಸಿದ ಪಕ್ಷಿ ತಜ್ಞರು ನಡೆಸಿದ ಗಣತಿ ಕಾರ್ಯದಲ್ಲಿ 155 ಪ್ರಭೇದಗಳ ಲಕ್ಷಾಂತರ ಸಂಖ್ಯೆಯ ಬಾನಾಡಿಗಳನ್ನು ಗುರುತಿಸಿದರು. ಇವುಗಳಲ್ಲಿ ಮುಖ್ಯವಾಗಿ 40 ಪ್ರಭೇದಗಳು ವಲಸೆ ಹಕ್ಕಿಗಳಾಗಿರುವುದು ವಿಶೇಷ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಂಕಸಮುದ್ರ ಪಕ್ಷಿಧಾಮದಲ್ಲಿ ಸಂತಾನೋತ್ಪತ್ತಿ ನಡೆಸಿರುವ ಫುಲ್ವಸ್ ವಿಸಿಲಿಂಗ್ ಡಕ್ ಆರಂಭದಲ್ಲಿ ಇದ್ದ ಕೇವಲ 4 ಸಂಖ್ಯೆಯನ್ನು ಈಗ 120ಕ್ಕೆ ಹೆಚ್ಚಿಸಿಕೊಂಡಿದೆ. ಪೈಡ್ ಸ್ಟಾರ್ಲಿಂಗ್ ಕೂಡ ಸಂತಾನೋತ್ಪತ್ತಿಗೆ ಮುಂದಾಗಿರುವುದು ವಿಶೇಷ.

ನವೆಂಬರ್ ತಿಂಗಳಿನಿಂದ ಮಾರ್ಚ್ವರೆಗೂ ಜಲಪಕ್ಷಿಗಳ ಆವಾಸಸ್ಥಾನ ಸದಾ ಗಿಜಿಗುಟ್ಟುವ ಪ್ರದೇಶವಾಗಿದೆ. ಈ ಪ್ರದೇಶವನ್ನು ಸುಂದರಗೊಳಿಸಿ ಹೆಚ್ಚು ಪ್ರಭೇದಗಳ ಪಕ್ಷಿಗಳು ಇಲ್ಲಿ ಬದುಕು ಕಂಡುಕೊಂಡಿದ್ದರ ಫಲವೇ 2024ರ ಜನವರಿ 31ರಂದು ಅಪರೂಪದ ಜೀವವೈವಿಧ್ಯ ಹೊಂದಿರುವ ಜಾಗತಿಕ ಮನ್ನಣೆ ಪಡೆದ ರಾಮ್ಸಾರ್ ತಾಣವಾಯಿತು.

ಇಲ್ಲಿ ಪ್ರತಿವರ್ಷ ಚಳಿಗಾಲದಲ್ಲಿ ಬಾನಾಡಿಗಳ ಕುಂಭಮೇಳವೇ ನಡೆಯುತ್ತದೆ. ವಲಸೆ ಬರುವ ಬಾರ್ನ್ ಸ್ವಾಲೋ (ಕವಲು ತೋಕೆ), ರೋಸಿ ಸ್ಟಾರ್ಲಿಂಗ್ ( ಗುಲಾಬಿ ಕಬ್ಬಕ್ಕಿ), ಓಸ್ಪ್ರೆ (ಮೀನು ಡೇಗೆ), ವಿಸ್ಕರ್ಡ್ ಟರ್ನ್ (ಮೀಸೆ ರೀವ), ಗ್ರೀನಿಷ್ ವಾರ್ಬಲರ್ (ಹಸಿರು ಎಲೆ ಉಲಿಯಕ್ಕಿ), ಗ್ರೇ ವಾಗ್ಟೆಲ್ (ಬೂದು ಸಿಪಿಲೆ), ಮಾರ್ಷ್ ಹ್ಯಾರಿಯರ್ (ಜೌಗು ಸೆಳೆವ), ಚೆಸ್ಟ್ನಟ್ ಟೇಲ್ಡ್ ಸ್ಟಾರ್ಲಿಂಗ್, ಕಾಮನ್ ಸ್ಯಾಂಡ್ಪೈಪರ್ (ಗದ್ದೆಗೊರವ), ಬ್ರೌನ್ ಶ್ರೈಕ್ (ಕಂದು ಕಳಿಂಗ), ಕಾಮನ್ ಸ್ಟೋನ್ಚಾಟ್ (ಕಲ್ಲು ಚಟಕ), ವುಡ್ ಸ್ಯಾಂಡ್ಪೈಪರ್ (ಚುಕ್ಕೆ ಗದ್ದೆಗೊರವ), ಬ್ಲಾಕ್ ಹೆಡೆಡ್ ಬಂಟಿಂಗ್ (ಕಪ್ಪು ತಲೆಯ ದೊಡ್ಡ ಗುಬ್ಬಚ್ಚಿ), ಸ್ಪೋಟೆಡ್ ರೆಡ್ಶಾಂಕ್, ಯುರೆಸಿಯನ್ ವಿಜಿಯನ್, ನಾರತನ್ ಪಿನ್ಟೆಲ್, ರೂಡಿ ಶೆಲ್ಡಕ್, ಗಾರ್ಗೆನಿ (ಬಿಳಿ ಹುಬ್ಬಿನ ಬಾತು), ನಾರ್ಥರ್ನ್ ಶೋವಲರ್ (ಚಲುಕ ಬಾತು), ಕಾಮನ್ ಟೆಲ್ ಹೀಗೆ ಬಾನಾಡಿಗಳ ಪ್ರಭೇದಗಳ ಸಂಖ್ಯೆ ಬೆಳೆಯುತ್ತಲೇ ಹೋಗುತ್ತದೆ.

ಸಂತಾನೋತ್ಪತ್ತಿ ನಡೆಸುವುದಕ್ಕಾಗಿ ಬರುವ 80ಕ್ಕೂ ಹೆಚ್ಚು ಪ್ರಭೇದಗಳಲ್ಲಿ ಮುಖ್ಯವಾಗಿ ಪೇಂಟೆಂಡ್ ಸ್ಟಾರ್ಕ್(ಬಣ್ಣದ ಕೊಕ್ಕರೆ), ಸ್ಪಾಟ್ ಬಿಲ್ಡ್ ಪೆಲಿಕಾನ್ (ಹೆಜ್ಜಾರ್ಲೆ), ಕೋಂಬ್ ಡಕ್ (ಬಾಚಣಿಗೆ ಬಾತುಕೋಳಿ), ಇಂಡಿಯನ್ ಕಾರ್ಮೊರೆಂಟ್ (ಉದ್ದಕೊಕ್ಕಿನ ಕಾಗೆ), ಡಾರ್ಟರ್ (ಹಾವಕ್ಕಿ), ಲೆಸರ್ ವಿಸಿಲಿಂಗ್ ಡಕ್ (ಚಿಕ್ಕ ಸಿಳ್ಳೆಬಾತು), ಲಿಟಲ್ ಕಾರ್ಮೊರೆಂಟ್ (ಸಣ್ಣ ನೀರು ಕಾಗೆ), ಲಾರ್ಜ್ ಕಾರ್ಮೊರೆಂಟ್ (ದೊಡ್ಡ ನೀರುಕಾಗೆ), ಗ್ಲೋಸಿ ಐಬೀಸ್ (ಮಿಂಚು ಕೆಂಬರಲು), ಕಾಮನ್ ಟೇಲರ್ ಬರ್ಡ್ (ಸಿಂಪಿಗೆ), ರೆಡ್ ವೆಂಟೆಡ್ ಬುಲ್ಬುಲ್ (ಕೆಂಪು ಚಿಬ್ಬೊಟ್ಟೆಯ ಪಿಕಳಾರ), ಲಾರ್ಜ್ ಗ್ರೇ ಬಾಬ್ಲರ್, ಕಾಪರ್ಸ್ಮಿತ್ ಬಾರ್ಬೆಟ್ ಸೇರಿದಂತೆ ಇಲ್ಲಿನ ಪ್ರದೇಶವನ್ನು ಹೆರಿಗೆ ಮನೆಯನ್ನಾಗಿಸಿಕೊಂಡಿವೆ. ದಾಸಕೊಕ್ಕರೆ, ಮಿಂಚು ಕೆಂಬರಲು, ನೀರು ಕಾಗೆಗಳು ಸ್ವಾವಲಂಬಿಗಳಾಗಿ ಕೊಕ್ಕಿನ ಮೂಲಕ ಕಟ್ಟಿಗೆ ತಂದು ತಮ್ಮ ಮನೆಗಳನ್ನು ನಿರ್ಮಿಸಿಕೊಳ್ಳುವ ದೃಶ್ಯ ಕಣ್ಣಿಗೆ ಮುದ ನೀಡುತ್ತದೆ.

ಕಳೆದ ವರ್ಷ ಫೆ.14ರಂದು ಲಂಡನ್ ಪ್ರವಾಸಿಗರಾದ ಡೆನ್ನಿಸ್ ಮತ್ತು ಸ್ಯಾಂಟ್ರೋ ಪಕ್ಷಿಧಾಮಕ್ಕೆ ಭೇಟಿ ನೀಡಿದ್ದರು, ಅವರು ಸಹಸ್ರಾರು ಸಂಖ್ಯೆಯಲ್ಲಿರುವ ಪೇಂಟೆಡ್ ಸ್ಟಾರ್ಕ್, ಕಾರ್ಮೋರೆಂಟ್, ಗ್ಲೋಸಿ ಐಬೀಸ್ ಪಕ್ಷಿಗಳನ್ನು ವೀಕ್ಷಿಸಿ ಹಿರಿಹಿರಿ ಹಿಗ್ಗಿದ್ದರು, ಇಷ್ಟು ಸಂಖ್ಯೆಯ ಬಾನಾಡಿಗಳನ್ನು ಬೇರೆಲ್ಲೂ ನೋಡಿಲ್ಲ, ಇದೊಂದು ಅದ್ಭುತ ದೃಶ್ಯ ಎಂದಿದ್ದರು.

‘ನೀರು ನಾಯಿಗಳ ಒನಪು ವಯ್ಯಾರ’

ಪಕ್ಷಿಗಳ ಕಾಶಿ ಎನ್ನುವ ಹೆಗ್ಗಳಿಕೆಯ ಇಲ್ಲಿಗೆ ಹೊಸದಾದ ಅಪರೂಪದ ನಾಜೂಕಿನ ಅತಿಥಿಯೊಬ್ಬರ ಆಗಮನವಾಗಿದೆ. ಪಕ್ಷಿ ಜಾತಿಗೆ ಸೇರಿಲ್ಲ, ‘ಅದು ನೀರು ನಾಯಿ’.

ಪಕ್ಷಿಧಾಮದಿಂದ ಕೂಗಳತೆ ದೂರದಲ್ಲಿರುವ ತುಂಗಭದ್ರಾ ಹಿನ್ನೀರಿನಿಂದ ಪಂಪ್ಹೌಸ್ ಕಾಲುವೆ ಮೂಲಕ ಕೆರೆ ದಿಬ್ಬವನ್ನು ಏರಿ ಪಕ್ಷಿಧಾಮಕ್ಕೆ ಬರುವ ನೀರುನಾಯಿಗಳು ಯಥೇಚ್ಛ ಸಂಖ್ಯೆಯಲ್ಲಿರುವ ಕ್ಯಾಟ್ ಫಿಶ್ (ಮುರುಗೊಡ) ತಿಂದು ತೇಗುತ್ತವೆ. ಬಾನಾಡಿಗಳ ಜೀವ ವೈವಿಧ್ಯಕ್ಕೆ ಕಂಟಕವಾಗಿರುವ ಕ್ಯಾಟ್ಫಿಶ್ಗಳ ಆಟೋಟಪಕ್ಕೆ ಬ್ರೇಕ್ ಹಾಕಲು ಪ್ರಕೃತಿಯೇ ನೀರು ನಾಯಿಗಳನ್ನು ಪಕ್ಷಿಧಾಮಕ್ಕೆ ಆಹ್ವಾನಿಸಿದಂತಿದೆ. ಪಕ್ಷಿಧಾಮದ ಕೆರೆಗೆ ಮೊಟ್ಟ ಮೊದಲ ಬಾರಿಗೆ ಬಂದಿರುವ ಆರು ನೀರು ನಾಯಿಗಳು, ಈಗ ತಮ್ಮ ಸಂಖ್ಯೆಯನ್ನು 10ಕ್ಕೆ ಹೆಚ್ಚಿಸಿಕೊಂಡಿವೆ. ಕಂದು ಮೈಬಣ್ಣ, ಚೂಪಾದ ಮೀಸೆಗಳು, ತುಪ್ಪಳದ ಚರ್ಮ, ಚಪ್ಪಟೆಯಾದ ತಲೆ, ಬಲವಾದ ಬಾಲ, ಹುಟ್ಟುಗಳಂತೆ ಕಾಣುವ ಪಾದಗಳು ಇದು ನೀರು ನಾಯಿಗಳ ಪ್ರಮುಖ ಲಕ್ಷಣ. ಇವು ನಾಯಿ ಜಾತಿಗೆ ಸೇರಿದವುಗಳಲ್ಲ, ನಾಯಿ ಮುಖ ಹೋಲುತ್ತಿರುವುದರಿಂದ ನೀರು ನಾಯಿಗಳು ಎಂದು ನಾಮಕರಣವಾಗಿದೆ ಅಷ್ಟೇ.ನೀರು ನಾಯಿಗಳ ಆಗಮನದಿಂದ ಪಕ್ಷಿಗಳ ಕಲರವ ಮತ್ತಷ್ಟೂ ಹೆಚ್ಚಾಗಿದೆ, ಪಕ್ಷಿಪ್ರಿಯರ ಸಂತಸಕ್ಕೆ ಕಾರಣವಾಗಿದೆ. ನೀರು ನಾಯಿಗಳನ್ನು ನೋಡುವುದಕ್ಕೆ ಕೆಲವರು ಸದಾ ಧ್ಯಾನಸ್ಥ ಸ್ಥಿತಿಯಲ್ಲಿ ಪಕ್ಷಿಧಾಮದ ದಂಡೆಯಲ್ಲಿ ಕುಳಿತುಕೊಳ್ಳುವುದು ಈಗ ಸಾಮಾನ್ಯವಾಗಿದೆ.

ಹರಿದು ಬಂದ ಹೆಚ್ಚು ನೀರು

ಅಂಕಸಮುದ್ರ ಪಕ್ಷಿಧಾಮದ ಜೀವ ವೈವಿಧ್ಯತೆಗೆ ಧಕ್ಕೆ ತರುವಂತೆ ಅಗತ್ಯಕ್ಕಿಂತ ಹೆಚ್ಚು ನೀರು ಹರಿದು ಬರುತ್ತಿರುವ ಕಾರಣದಿಂದಾಗಿ ಕೆಲವು ಪ್ರಭೇದಗಳ ಬಾನಾಡಿಗಳ ಸಂಖ್ಯೆ ಕ್ಷೀಣವಾಗಿವೆ, ಚಿಲುವಾರು ಬಂಡಿ ಏತನೀರಾವರಿಯಿಂದ ಪರೀಕ್ಷಾರ್ಥ ಪ್ರಯೋಗದಿಂದ ಹರಿದು ಬರುತ್ತಿರುವ ನೀರು ಇದಕ್ಕೆ ಕಾರಣವಾಗಿದೆ.

ಬ್ಲಾಕ್ ಟೇಲ್ಡ್ ಗಾಡ್ವಿತ್, ಫೆಸಿಫಿಕ್ ಗೋಲ್ಡನ್ಫ್ಲವರ್, ಸ್ಪಾಟೆಟ್ ರೆಡ್ಶಾಂಕ್, ಕಾಮನ್ ರೆಡ್ಶಾಂಕ್, ಮಾರ್ಶ್ ಸ್ಯಾಂಡ್ಪೈಪರ್, ಕಾಮನ್ ಗ್ರೀನ್ಶಂಕ್, ವುಡ್ ಸ್ಯಾಂಡ್ಪೈಪರ್, ಕಾಮನ್ಸ್ಯಾಂಡ್ ಪೈಪರ್ ಇವುಗಳಿಗೆ ತೆಳ್ಳನೆಯ ನೀರು ಸಾಕು, ಹೆಚ್ಚು ನೀರು ಬೇಕಾಗಿಲ್ಲ, ತೆಳ್ಳನೆಯ ನೀರಿನಲ್ಲಿ ದೊರೆಯುವ ಕೀಟಗಳು ಇವುಗಳಿಗೆ ಅಚ್ಚುಮೆಚ್ಚು, ಕೆರೆಯ ದಂಡೆಯಲ್ಲಿ ಸಿಗುವ ಆಹಾರ ಇವುಗಳಿಗೆ ಮೃಷ್ಟಾನ್ನ, ದಂಡೆಯ ತುಂಬೆಲ್ಲಾ ನೀರು ಆವರಿಸಿರುವುದು ಇವುಗಳ ಆವಾಸಕ್ಕೆ ತೊಂದರೆಯಾಗಿದೆ.

ಯುರೋಪ್ನಿಂದ ಬಂದಿಳಿದಿರುವ ಹಗಲು ಹೊತ್ತಿನಲ್ಲಿ ವಿಶ್ರಮಿಸಿ ಇಲ್ಲಿಂದ ಆಹಾರ ಅರಸಿ ತುಂಗಭದ್ರಾ ಹಿನ್ನೀರು ಪ್ರದೇಶಕ್ಕೆ ತೆರಳುವ ಹಕ್ಕಿಗಳ ದಿಬ್ಬಣ ಕಣ್ತುಂಬಿಕೊಳ್ಳುವುದೇ ಖುಷಿ. ಇಂತಹ ಕೆಲವು ಹಕ್ಕಿಗಳಲ್ಲಿ ನಾರ್ತನ್ ಪಿಂಟೈಲ್, ನಾರ್ತನ್ ಶೆವಲರ್, ಗಾರ್ಗೆನಿ, ಕಾಮನ್ ಟೇಲ್, ಯುರೇಸಿಯನ್ ವಿಜನ್ ಸೇರಿದ್ದು, ಅವುಗಳ ಸಂಖ್ಯೆ ಹೆಚ್ಚಿದೆ.

ಮಳೆಗಾಲದಲ್ಲಿ ಬಂದ ನೀರು ಚಳಿಗಾಲದಲ್ಲಿ ಕಡಿಮೆ ಆಗಬೇಕು, ಆದರೆ ಈ ಬಾರಿ ಅದು ಆಗಿಲ್ಲ. ಚಳಿಗಾಲದಲ್ಲೂ ಎಲ್ಲೆಲ್ಲೂ ನೀರೇ ತುಂಬಿಕೊಂಡಿದೆ. ಇದರಿಂದಾಗಿ ಕೆರೆ ತಟದಲ್ಲಿ, ಕೆಸರಿನಲ್ಲಿ, ಆವಾಸ ಮಾಡಿಕೊಳ್ಳುವ ಅನೇಕ ಪಕ್ಷಿಗಳಿಗೆ ತೊಂದರೆಯಾಗಿದೆ, ಇಲ್ಲಿಗೆ ಬರಬೇಕಿದ್ದ ಪಕ್ಷಿಗಳು ಹಿನ್ನೀರು ಪ್ರದೇಶದಲ್ಲಿ ಬೀಡುಬಿಟ್ಟಿವೆ ಎನ್ನುತ್ತಾರೆ ಪಕ್ಷಿ ತಜ್ಞರು.

ಪಕ್ಷಿಧಾಮಕ್ಕೆ ಬೇಕಿದೆ ರಸ್ತೆ

ಅಂಕಸಮುದ್ರ ಕೆರೆಯ ಪ್ರವೇಶದಿಂದ ವೀಕ್ಷಣಾ ಗೋಪುರಕ್ಕೆ ತೆರಳಲು ಪಕ್ಷಿಪ್ರೇಮಿಗಳಿಗೆ ಕಷ್ಟವಾಗುತ್ತಿದೆ. 500 ಮೀಟರ್ ರಸ್ತೆಯುದ್ದಕ್ಕೂ 1 ಅಡಿ ಆಳದ ತಗ್ಗುಗುಂಡಿಗಳಿವೆ, ದ್ವಿಚಕ್ರವಾಹನ ಸಾವಾರರು ಅನೇಕರು ಇಲ್ಲಿ ಗಾಯಗೊಂಡಿರುವ ಘಟನೆಗಳು ನಡೆದಿವೆ. ಹೀಗಾಗಿ ಮುಖ್ಯ ದ್ವಾರದಲ್ಲಿಯೇ ವಾಹನಗಳನ್ನು ನಿಲ್ಲಿಸಿ, ಅಲ್ಲಿಂದ ಕಾಲ್ನಡಿಗೆಯಲ್ಲಿ ತೆರಳುವುದು ಈಗ ಸಾಮಾನ್ಯವಾಗಿದೆ.

ವಿದ್ಯುತ್ ಸಂಪರ್ಕ ಇಲ್ಲ, ಕುಡಿಯುವ ನೀರಿನ ಸೌಲಭ್ಯ ಮರೀಚಿಕೆ

ಅರಣ್ಯ ಇಲಾಖೆ ಮತ್ತು ಜೆಸ್ಕಾಂ ಇಲಾಖೆಯ ಅಧಿಕಾರಿಗಳ ಮಧ್ಯೆ ಸಂವಹನದ ಕೊರತೆಯಿಂದಾಗಿ ಸಾವಿರಾರು ರೂಪಾಯಿ ಬೆಲೆ ಬಾಳುವ ಶುದ್ಧ ನೀರಿನ ಘಟಕದ ಯಂತ್ರಗಳು ಮತ್ತು ಸಲಕರಣೆಗಳು ಪಕ್ಷಿ ವೀಕ್ಷಣಾ ಗೋಪುರದ ಕೊಠಡಿಯ ಮೂಲೆ ಸೇರಿ ದೂಳು ಹಿಡಿದಿವೆ, ಯಂತ್ರಗಳನ್ನು ಖರೀದಿಸಿ ವರ್ಷ ಮೇಲಾಗಿದೆ. ವಿದ್ಯುತ್ ಸಂಪರ್ಕ ಇಲ್ಲದಿರುವುದರಿಂದ ಹೊಸ ಯಂತ್ರ ಪ್ರದರ್ಶನದ ವಸ್ತುವಿನಂತಾಗಿದೆ.

ಬೇಸಿಗೆ ಕಾಲದಲ್ಲಿ ಸಾವಿರಾರು ಪಕ್ಷಿಗಳು ಇಲ್ಲಿ ಬದುಕು ಕಂಡುಕೊಳ್ಳುತ್ತಿವೆ, ಬಣ್ಣದ ಕೊಕ್ಕರೆ ಪಕ್ಷಿಗಳಿಗೆ ಇದು ಹೆರಿಗೆ ಮನೆಯಾಗಿದೆ, ಇವುಗಳನ್ನು ವೀಕ್ಷಿಸಲು ಬರುವ ಪಕ್ಷಿಪ್ರೇಮಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲಿಲ್ಲ, ನೀರು ತರಲು 2 ಕಿ.ಮೀ ದೂರದ ಗ್ರಾಮಕ್ಕೆ ತೆರಳಬೇಕು.

ಪಕ್ಷಿಗಳ ಕಾಲೋನಿಗೆ ಬೇಕಿದೆ ರಕ್ಷಣೆ

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಬ್ಲೂಟೇಲ್ಟ್ ಬೀ ಈಟರ್, ಓರಿಯಂಟಲ್ ಪ್ರಾಟಿನ್ಕೋಲ್, ಸ್ಮಾಲ್ ಪ್ರಾಟಿನ್ಕೋಲ್ ಪಕ್ಷಿಗಳು ಸಂತಾನೋತ್ಪತ್ತಿ ನಡೆಸುತ್ತವೆ, ಅವುಗಳಿಗೆ ರಕ್ಷಣೆ ನೀಡಬೇಕೆಂದು ಗ್ರೀನ್ ಎಚ್ಬಿಎಚ್ ತಂಡ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದೆ, ಈ ಪ್ರದೇಶದಲ್ಲಿ ಕಳ್ಳಿಪೀರಗಳ ರಕ್ಷಣೆಗೆ ಕಲ್ಲುಗಳ ಗೋಡೆಯನ್ನೇ ನಿರ್ಮಿಸಲಾಗಿದೆ.

ಬಿಎನ್ಎಚ್ಎಸ್ ಕಚೇರಿ ಸ್ಥಾಪನೆಯಾಗಿದ್ದು ಪಕ್ಷಿಧಾಮದ ಹೆಗ್ಗಳಿಕೆ

ಹಗರಿಬೊಮ್ಮನನಳ್ಳಿಯಲ್ಲಿ (ಬಿಎನ್ಎಚ್ಎಸ್)ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಕಚೇರಿ ಆರಂಭಗೊಂಡಿರುವುದು ಇಲ್ಲಿನ ಅಪರೂಪದ ಜೀವವೈವಿಧ್ಯಕ್ಕೆ ಸಾಕ್ಷಿಯಾಗಿದೆ. ಅಂಕಸಮುದ್ರ ಪಕ್ಷಿಧಾಮದಲ್ಲಿ ಅಧ್ಯಯನ, ಸಂಶೋಧನೆ ಮತ್ತು ಸಂರಕ್ಷಣೆ, ವನ್ಯಜೀವಿ ಸಂಶೋಧನೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ. ಪಕ್ಷಿಗಳಿಗೆ ರಿಂಗಿಂಗ್ ಮಾಡುವ ಕಾರ್ಯವೂ ನಡೆದಿದೆ.

ಪಕ್ಷಿಧಾಮ ರಕ್ಷಣೆಗೆ ಟೊಂಕಕಟ್ಟಿ ನಿಂತ ‘ಗ್ರೀನ್ ಎಚ್ಬಿಎಚ್’ ತಂಡ

ಹಗರಿಬೊಮ್ಮನಹಳ್ಳಿಯ ಸಮಾನ ಮನಸ್ಕರ ತಂಡ- ‘ಗ್ರೀನ್ ಎಚ್ಬಿಚ್’ ತಾಲ್ಲೂಕಿನಲ್ಲಿರುವ ವನ್ಯಸಂಪತ್ತಿನ ರಕ್ಷಣೆಗೆ ಮುಂದಾಗಿದೆ, ತನು, ಮನ, ಧನವನ್ನು ಈ ಭಾಗದ ಜೀವ ವೈವಿಧ್ಯಕ್ಕೆ, ಪಕ್ಷಿಗಳ ಆವಾಸದ ರಕ್ಷಣೆಗೆ ಅರ್ಪಿಸಿದೆ. ಸರ್ಕಾರವನ್ನು ದೂಷಿಸದೇ ನೂರಾರು ಗಿಡಗಳನ್ನು ನೆಟ್ಟಿದ್ದಾರೆ. ಅವುಗಳನ್ನು ಪೋಷಿಸಿದ ಫಲವಾಗಿ ಬಸವೇಶ್ವರ ಬಜಾರ್ ರಸ್ತೆಯ ಎರಡೂ ಬದಿಯಲ್ಲಿ ಬೆಳೆದು ನಿಂತು ನೆರಳು ನೀಡುತ್ತಿವೆ. ‘ರಾಮ್ಸಾರ್ ತಾಣ’ ಆಗುವುದಕ್ಕೆ ಈ ತಂಡದ ಸದಸ್ಯರ ಶ್ರಮ ಅಧಿಕವಾಗಿದೆ. ಈ ತಂಡದ ಅವಿರತ ಶ್ರಮದಿಂದಾಗಿ ಅಂಕಸಮುದ್ರ ಪಕ್ಷಿಧಾಮದ ಅಭಿವೃದ್ದಿಗೆ ₹21 ಕೋಟಿ ಅನುದಾನವೂ ಮಂಜೂರಾಗಿದೆ. 2021ರಲ್ಲಿ ಗ್ರೀನ್ ಎಚ್ಬಿಎಚ್ ನೇತೃತ್ವದಲ್ಲಿ ‘ಹಕ್ಕಿ ಹಬ್ಬವೂ’ ನಡೆದಿತ್ತು.

ಸಮಗ್ರ ಅಭಿವೃದ್ಧಿಯ ಡಿಪಿಆರ್ ಸಿದ್ಧ: ಡಿಸಿಎಫ್

ಅಂಕಸಮುದ್ರ ಪಕ್ಷಿಧಾಮವನ್ನು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ (ಕೆಎಂಇಆರ್ಇ) ₹21 ಕೋಟಿ ಅನುದಾನದಲ್ಲಿ ಸಮಗ್ರ ಅಭಿವೃದ್ಧಿಗೆ ಈಗಾಗಲೇ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ. ಗ್ರೀನ್ ಎಚ್ಬಿಎಚ್ ತಂಡ ಈ ಕೆಲಸ ಮಾಡಿದೆ. ಇದಕ್ಕೆ ಸರ್ಕಾರದಿಂದ ಅನುಮತಿ ದೊರೆತ ತಕ್ಷಣ ಕೆಲಸಗಳು ಆರಂಭವಾಗಲಿವೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಎಚ್.ಅನುಪಮಾ ‘ಪ್ರಜಾವಾಣಿ’ಗೆ ತಿಳಿಸಿದರು.

ಇನ್ನೊಂದು ವೀಕ್ಷಣಾ ಗೋಪುರ ನಿರ್ಮಾಣ, ಸಂಪರ್ಕ ರಸ್ತೆಯ ಕಾಂಕಿಟೀಕರಣ, ಸುತ್ತಲೂ ಬೇಲಿ ಅಳವಡಿಕೆ, ಮಕ್ಕಳು ಮಾತ್ರವಲ್ಲದೆ ಪ್ರವಾಸಿಗರು ಹಕ್ಕಿಗಳನ್ನು ಸಮೀಪದಿಂದ ನೋಡುವ ಸಲುವಾಗಿ ರ್ಯಾಂಪ್ ಅಳವಡಿಕೆ, ಕುಡಿಯುವ ನೀರಿನ ಘಟಕ ಮೊದಲಾದ ಕೆಲಸಗಳು ನಡೆಯಲಿವೆ. ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಈ ಅಭಿವೃದ್ಧಿ ಯೋಜನೆಗಳನ್ನು ಶೀಘ್ರ ಅನುಷ್ಠಾನಕ್ಕೆ ತೆರುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದು ಅವರು ಹೇಳಿದರು.

ಅಧಿಕ ನೀರು ಹರಿದು ಸ್ವಲ್ಪಮಟ್ಟಿಗೆ ಸಮಸ್ಯೆಯಾಗಿರುವುದು ನಿಜ, ಆದರೆ ತೊಂದರೆ ಆಗುತ್ತಿರುವುದು ಗೊತ್ತಾದಂತೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ. ಹೆಚ್ಚುವರಿ ನೀರು ಹರಿದು ಹೋಗಲು ಇರುವ ತೂಬು ಕಟ್ಟಿಕೊಂಡಿದ್ದು, ಅದನ್ನು ದುರಸ್ತಿಗೊಳಿಸುವ ಕೆಲಸ ನಡೆಯಲಿದೆ, ಅಂಕಸಮುದ್ರದ ಸಮಗ್ರ ಅಭಿವೃದ್ಧಿ ಯೋಜನೆಯಲ್ಲಿ ಇದು ಸಹ ಸೇರಿಕೊಂಡಿದೆ. ಬಳಿಕ ಇಂತಹ ಸಮಸ್ಯೆಗಳು ತಲೆದೋರದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.