ಮಂಗಳವಾರ, ಮೇ 18, 2021
23 °C

ಅಧ್ಯಯನ ಮಾಡದೆ ಗಾಡ್ಗಿಳ್ ವರದಿಗೆ ವಿರೋಧ ಸಲ್ಲ: ಶ್ಲೇಷಕ ಶಂಕರ ಶರ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಸಾಗರ: ‘ಪಶ್ಚಿಮಘಟ್ಟಗಳನ್ನು ಉಳಿಸಿಕೊಳ್ಳುವ ಮೂಲಕ ಪರಿಸರ ಸಮತೋಲವನ್ನು ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಸಲಹೆ ಸೂಚನೆಗಳನ್ನು ಒಳಗೊಂಡಿದ್ದ ಮಾಧವ ಗಾಡ್ಗಿಳ್ ವರದಿಯನ್ನು ಅಧ್ಯಯನ ಮಾಡದೆ ಹಲವರು ವಿರೋಧಿಸಿದ್ದು ದುರದೃಷ್ಟಕರ ಸಂಗತಿಯಾಗಿದೆ’ ಎಂದು ವಿದ್ಯುತ್ ನೀತಿ ವಿಶ್ಲೇಷಕ ಶಂಕರ ಶರ್ಮ ಹೇಳಿದರು.

ಇಲ್ಲಿನ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಪ್ರಜ್ಞಾ ರಂಗ ತಂಡ ಹಾಗೂ ಸ್ವಾನ್ ಎಂಡ್ ಮ್ಯಾನ್ ಸಂಸ್ಥೆ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಮಾಧವ ಗಾಡ್ಗಿಳ್ ವರದಿ: ಏನು-ಎತ್ತ?’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

‘1985 ರ ಅರಣ್ಯ ನೀತಿಯ ಪ್ರಕಾರ ನಮ್ಮ ಭೂಭಾಗದ ಪೈಕಿ ಶೇ 33ರಷ್ಟು ಪ್ರದೇಶದಲ್ಲಿ ಅರಣ್ಯ ಇರಲೇಬೇಕು. ಸರ್ಕಾರಿ ಅಂಕಿ ಅಂಶಗಳ ಪ್ರಕಾರವೆ ಈಗ ನಮ್ಮಲ್ಲಿ ಶೇ 21ರಷ್ಟು ಅರಣ್ಯ ಮಾತ್ರ ಉಳಿದಿದೆ. ವಾಸ್ತವವಾಗಿ ಈಗ ಉಳಿದಿರುವುದು ಶೇ.7ರಷ್ಟು ಮಾತ್ರ ಎನ್ನುವ ಆಘಾತಕಾರಿ ಸಂಗತಿಯನ್ನು ಮಾಧವ ಗಾಡ್ಗಿಳ್ ವರದಿ ಬಹಿರಂಗಪಡಿಸಿದೆ’ ಎಂದು ತಿಳಿಸಿದರು.

‘ಮಾಧವ ಗಾಡ್ಗಿಳ್ ವರದಿಯನ್ನು ಹಲವು ಕ್ಷೇತ್ರಗಳ ತಜ್ಞರೊಂದಿಗೆ ವಿವರವಾಗಿ ಸಮಾಲೋಚಿಸಿದ ನಂತರವೆ ಪ್ರಕಟಿಸಲಾಗಿದೆ. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ತಯಾರಿಸಿರುವ ವರದಿ ಇದಲ್ಲ. ಆದಾಗ್ಯೂ ಈ ವರದಿ ಜಾರಿಯಾದರೆ ಅರಣ್ಯ ಪ್ರದೇಶದಲ್ಲಿರುವ ರೈತರು, ಬುಡಕಟ್ಟು ಸಮುದಾಯದವರನ್ನು ಒಕ್ಕಲೆಬ್ಬಿಸಲಾಗುತ್ತದೆ ಎಂದು ಹುಯಿಲು ಎಬ್ಬಿಸಿದ್ದು ಬೇಸರದ ಸಂಗತಿ’ ಎಂದರು.

‘ಮಾಧವ ಗಾಡ್ಗಿಳ್ ವರದಿಗೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ರಚಿಸಿದ ಕಸ್ತೂರಿ ರಂಗನ್ ಸಮಿತಿ ನೀಡಿರುವ ವರದಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಕಡಿಮೆ ಮಾಡಿರುವುದು ಬಿಟ್ಟರೆ ಉಳಿದ ಸಂಗತಿಗಳು ಗಾಡ್ಗಿಳ್ ವರದಿಗೆ ಹತ್ತಿರವಾಗಿದೆ. ಆದರೆ ಈ ವರದಿಗೂ ವಿರೋಧ ವ್ಯಕ್ತವಾಗುತ್ತಿರುವುದು ದುರದೃಷ್ಟಕರ’ ಎಂದು ಹೇಳಿದರು.

‘2030ರ ಹೊತ್ತಿಗೆ ಜಾಗತಿಕ ತಾಪಮಾನ 1.5 ಡಿಗ್ರಿಯಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರ ವರದಿ ಎಚ್ಚರಿಸಿದೆ. ಕಾಡುಗಳನ್ನು ಉಳಿಸಿಕೊಳ್ಳದೆ ಇದ್ದರೆ ಇಂತಹ ಅನಾಹುತಗಳನ್ನು ತಪ್ಪಿಸಲು ಸಾಧ್ಯವೇ ಇಲ್ಲ’ ಎಂದರು.

ಶಂಕರಶರ್ಮ ಹಾಗೂ ಹಿರಿಯ ರಂಗ ಕಲಾವಿದ ವಸಂತ ಕುಗ್ವೆ ಅವರನ್ನು ಸನ್ಮಾನಿಸಲಾಯಿತು. ಪ್ರಜ್ಞಾ ರಂಗ ತಂಡದ ಎಚ್.ಬಿ. ರಾಘವೇಂದ್ರ, ಸ್ವಾನ್ ಎಂಡ್ ಮ್ಯಾನ್ ಸಂಸ್ಥೆಯ ಅಖಿಲೇಶ್ ಚಿಪ್ಪಳಿ ಹಾಜರಿದ್ದರು.

ಸಿದ್ದಾಪುರದ ರಂಗ ಸೌಗಂಧ ತಂಡದವರು ‘ಮಾಯದ ಕೊಡಲಿ’ (ರಚನೆ: ಐ.ಕೆ.ಬೋಳುವಾರ, ನಿರ್ದೇಶನ: ಗಣಪತಿ ಹೆಗಡೆ ಹುಲಿಮನೆ) ನಾಟಕವನ್ನು ಪ್ರದರ್ಶಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು