ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟಗೇರಾ ಗ್ರಾಮದ ಯುವಕ ಶಿವನಾಗೇಶಗೆ ಒಲಿದ 5 ಹುದ್ದೆಗಳು

Last Updated 2 ಮಾರ್ಚ್ 2021, 4:32 IST
ಅಕ್ಷರ ಗಾತ್ರ

ಯರಗೋಳ: ಗ್ರಾಮೀಣ ಪ್ರದೇಶದ, ಕೃಷಿಕ ಕುಟುಂಬದ ಯುವಕ ಶಿವನಾಗೇಶ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಆಗಿ 5 ಸರ್ಕಾರಿ ಹುದ್ದೆಗಳನ್ನು ಪಡೆದು ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.

ಕೋಟಗೇರಾ ಗ್ರಾಮದ ರೈತ ನಾಗಪ್ಪ, ಲಕ್ಷ್ಮಿ ದಂಪತಿಯ ಹಿರಿಯ ಪುತ್ರ ಶಿವನಾಗೇಶ ಛಲ ಬಿಡದೆ ಓದಿ, ಸರ್ಕಾರಿ ನೌಕರಿ ಪಡೆದು ತಂದೆ– ತಾಯಿ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಸದ್ಯ ವಡಗೇರಾ ತಾಲ್ಲೂಕಿನ ಬೆಂಡೆಬೆಂಬಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೋಟಗೇರಾ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 10ನೇ ತರಗತಿವರೆಗೆ ಅಭ್ಯಾಸ ಮಾಡಿದ ಶಿವನಾಗೇಶ, ಯಾದಗಿರಿ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಕಲಾ ವಿಭಾಗದಲ್ಲಿ ದ್ವಿತೀಯ ಪಿಯುಸಿ, ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಬಿಎ, ಕಲಬುರ್ಗಿಯ ಶ್ಯಾಮಸುಂದರ ವಿದ್ಯಾಲಯದಲ್ಲಿ ಬಿಪಿ ಇ.ಡಿ ಪದವಿ ಪಡೆದಿದ್ದಾರೆ. ನಂತರ ಧಾರವಾಡದಲ್ಲಿ 2 ವರ್ಷಗಳ ಕಾಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದರು.

ಶಿವನಾಗೇಶ 2016ರಿಂದ 2018ರ ವರೆಗೆ ಅಬಕಾರಿ ರಕ್ಷಕ, ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ), ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ), ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ, ಅಲ್ಪಸಂಖ್ಯಾತ ಇಲಾಖೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದರು.

2018ರಲ್ಲಿ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದೈಹಿಕ ಶಿಕ್ಷಣ ಶಿಕ್ಷಕ ಹುದ್ದೆಗೆ ನೇಮಕದ ಆದೇಶ ಪಡೆದುಕೊಂಡು ಕರ್ತವ್ಯಕ್ಕೆ ಹಾಜರಾದರು. ತದನಂತರ ಒಂದರ ಹಿಂದೆ ಒಂದು ಹುದ್ದೆಗಳಿಗೆ ನೇಮಕಾತಿ ಆದೇಶಗಳು ಕೈಸೇರಿದವು. ಮೊರಾರ್ಜಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ನೇಮಕಗೊಂಡು ಕರ್ತವ್ಯಕ್ಕೆ ಹಾಜರಾದ ಹಿನ್ನೆಲೆಯಲ್ಲಿ ಅಬಕಾರಿ ರಕ್ಷಕ ಹುದ್ದೆ ಹಾಗೂ ದ್ವಿತಿಯ ದರ್ಜೆ ಸಹಾಯಕ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

‘ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಪ್ರತಿದಿನ ಬೆಳಿಗ್ಗೆ 4 ಗಂಟೆಗಳ ಕಾಲ ಓದುತ್ತಿದ್ದೆ. ಪ್ರತಿ ಸಲ ಓದಿದ್ದನ್ನು ಪುನರ್ ಮನನ ಮಾಡಿಕೊಳ್ಳುವುದು. ಹಳೆಯ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬಿಡಿಸುವುದು. ಸಮಯಕ್ಕೆ ಸರಿಯಾಗಿ ಊಟ, ನಿದ್ರೆ ಮಾಡುವುದನ್ನು ತಪ್ಪಿಸುತ್ತಿರಲಿಲ್ಲ’ ಎಂದು ಶಿವನಾಗೇಶ ಹೇಳುತ್ತಾರೆ.

ಪರೀಕ್ಷೆ ಸಿದ್ಧತೆಗೆ ‘ಪ್ರಜಾವಾಣಿ’ ದಿನಪತ್ರಿಕೆ ಸಹಕಾರಿಯಾಯಿತು. ಜೊತೆಗೆ ಸ್ಪರ್ಧಾತ್ಮಕ ಪತ್ರಿಕೆ ನಿರಂತರವಾಗಿ
ಓದುತ್ತಿದ್ದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರು ಅಚಲ ನಿರ್ಧಾರ, ಸತತ ಪ್ರಯತ್ನ, ತಂದೆ– ತಾಯಿ, ಗುರು, ಹಿರಿಯರ ಮಾರ್ಗದರ್ಶನ ಪಡೆಯ ಬೇಕು’ ಎಂದ ಅವರು, ಸ್ನೇಹಿತರ ಸಹಾಯವನ್ನು ಕೂಡ ನೆನೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT