ಗುರುವಾರ , ಮೇ 6, 2021
25 °C
ಕೋಟೆ ಗುಡ್ಡದ ಸುತ್ತಮುತ್ತ ಏಳು ಸಮುದಾಯವರ ವಾಸ

ನಮ್ಮ ಊರು ನಮ್ಮ ಜಿಲ್ಲೆ: ‘ಏತಗಿರಿ’ ಇತಿಹಾಸ ಸಾರುವ 7 ಅಗಸಿ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಒಂದು ಊರಿಗೆ ಒಂದೋ, ಎರಡೋ ಅಗಸಿಗಳಿರುತ್ತವೆ. ಆದರೆ, ನಗರದಲ್ಲಿ ಮಾತ್ರ 7 ಅಗಸಿಗಳಿರುವುದು ವಿಶೇಷವಾಗಿದೆ. ಒಂದೊಂದು ಸಮುದಾಯವನ್ನು ಸೂಚಿಸುವ ಅಗಸಿ ಕಟ್ಟೆ ಇವೆ.

ಅಂಬೇಡ್ಕರ್ ನಗರ, ಕೊತ್ವಾಲಗೇರಿ, ತಪ್ಪಡಗೇರಾ, ಮುಳ್ಳು ಅಗಸಿ, ಹೆಂಡಗಾರ ಅಗಸಿ, ಹಿರೇ ಅಗಸಿ, ಇಂದಿರಾ ನಗರ ಬಡಾವಣೆಗಳಲ್ಲಿ ಅಗಸಿ ಇರುವ ಕುರುಹು ಇವೆ.

ಕೋಟೆ ಸುತ್ತಮುತ್ತ ಜನ ವಾಸ: ಯಾದಗಿರಿ ಐತಿಹಾಸಿಕ ನಗರವಾಗಿದೆ. ಕಲ್ಯಾಣ ಚಾಲುಕ್ಯರ ರಾಜಧಾನಿಯಾಗಿತ್ತು. ಯಾದಗಿರಿಯನ್ನು ‘ಏತಗಿರಿ’ ಎಂತಲೂ ಕರೆಯುತ್ತಿದ್ದರು. ಕೋಟೆ ಗುಡ್ಡದ ಸುತ್ತಮುತ್ತ ಜನರು ಜೀವನ ಸಾಗಿಸುತ್ತಿದ್ದರು. ಅದರಂತೆ ವಿವಿಧ ಪ್ರದೇಶಗಳಿಗೆ ಹೊಂದಿಕೊಂಡಂತೆ ಆಯಾ ಜನರು ವಾಸ ಮಾಡುವ ಕಡೆ ಅಗಸಿ ಕಟ್ಟೆ ನಿರ್ಮಾಣ ಮಾಡಿಕೊಂಡು ಹಬ್ಬ ಹರಿದಿನಗಳಲ್ಲಿ ಪೂಜೆ ಮಾಡುತ್ತಿದ್ದರು.

ಕಾರ ಹುಣ್ಣಿಮೆಯ ವಿಶೇಷ: ಅಗಸಿ ಕಟ್ಟೆ ಬಳಿ ರೈತರು ಕಾರ ಹುಣ್ಣಿಮೆ ದಿನ ಎತ್ತುಗಳನ್ನು ಮೆರವಣಿಗೆ ಮಾಡುವುದು ವಿಶೇಷವಾಗಿದೆ. ಅಗಸಿ ಕಟ್ಟೆಯಿಂದ ಮನೆ ತನಕ ಮೆರವಣಿಗೆ ಮೂಲಕ ಎತ್ತುಗಳನ್ನು ಓಡಿಸಿಕೊಂಡು ಬರುವುದು ಸಂಪ್ರದಾಯ. ಇದು ಅಗಸಿ ಬಳಿಯಿಂದಲೇ ಆರಂಭವಾಗುತ್ತಿತ್ತು.

ನಗರದಲ್ಲಿ 7 ಅಗಸಿಗಳಿದ್ದರೂ ಪ್ರಮುಖವಾಗಿ ಹಿರೇ ಅಗಸಿ ಮುಖ್ಯವಾಗಿದೆ. ಇದು ಕೋಟೆ ದ್ವಾರಬಾಗಿಲು ಆಗಿತ್ತು. ಈ ಮೂಲಕವೇ ಪುರ ಪ್ರವೇಶವಾಗುತ್ತಿತ್ತು.

‘ಹಿಂದೆ ಕೋಟೆಯಲ್ಲಿ ಮಾತ್ರ ಜನ ವಾಸ ಮಾಡುತ್ತಿದ್ದರು. ಕ್ರಮೇಣ ಕೋಟೆ ಸುತ್ತಮುತ್ತ ವಾಸ ಮಾಡಲು ಆರಂಭಿಸಿದರು. ನಂತರ ತಮ್ಮ ಸಮುದಾಯದವರೇ ಸೇರಿ ಅಗಸಿ ನಿರ್ಮಿಸಿಕೊಂಡಿದ್ದಾರೆ. ಈ ಮೂಲಕ ನಗರದಲ್ಲಿ 7 ಅಗಸಿಗಳು ನಿರ್ಮಾಣವಾಗಿವೆ. ತಮ್ಮ ಊರು, ಬಡಾವಣೆ ಸೂಚಿಸುವ ಪ್ರಮುಖ ಸ್ಥಳ ಅಗಸಿ ಕಟ್ಟೆಯಾಗಿದೆ. ಇದರ ಅಕ್ಕಪಕ್ಕದಲ್ಲಿ ಹನುಮಾನ ದೇವಸ್ಥಾನ ನಿರ್ಮಾಣ ಮಾಡಿರುವುದನ್ನು ಬಹುತೇಕ ಕಡೆ ಕಾಣಬಹುದು. ಊರ ಹೊರಗಡೆ ಇದ್ದು, ಹನುಮ ಕಾಪಾಡುತ್ತಾನೆ ಎನ್ನುವುದು ಆಗಿನ ಜನರ ನಂಬಿಕೆಯಾಗಿತ್ತು’ ಎನ್ನುತ್ತಾರೆ ಸಂಶೋಧಕ ಡಾ.ಭೀಮರಾಯ ಲಿಂಗೇರಿ.

‘ಅಗಸಿ ಕಟ್ಟೆಗಳು ಊರು ಪ್ರವೇಶಿಸುವ ಪ್ರಮುಖ ದಾರಿಯಾಗಿವೆ. ಜೊತೆಗೆ ನ್ಯಾಯ ತೀರ್ಮಾನಗಳು ಇಲ್ಲಿಯೇ ಬಗೆ ಹರಿಯುತ್ತಿದ್ದವು. ಹಬ್ಬ, ಅಮಾವಾಸ್ಯೆ, ಹುಣ್ಣಿಮೆಗೆ ಅಗಸಿ ಬಳಿ ಇರುವ ಕಲ್ಲಿಗೆ ಎಣ್ಣೆ ಹಾಕಿ ಪೂಜೆ ಮಾಡುವ ಸಂಪ್ರಾದಾಯ ಇಂದಿಗೂ ಕಂಡು ಬರುತ್ತಿದೆ. ಅಗಸಿಗೆ ಅಷ್ಟೊಂದು ಪ್ರಾಧಾನ್ಯತೆಯನ್ನು ನಮ್ಮ ಹಿರಿಯರು ಕೊಟ್ಟಿದ್ದರು’ ಎನ್ನುತ್ತಾರೆ ಅವರು.

ಸರ್ಕಾರ, ಸ್ಥಳೀಯರ ನಿರ್ಲಕ್ಷ್ಯ: ಐತಿಹಾಸಿಕ ಘಟನೆಗೆ ಸಾಕ್ಷಿಯಾದ ಈ ಅಗಸಿಗಳು ಈಗ ಅವಸಾನದ ಅಂಚಿಗೆ ತಲು‍ಪಿವೆ. ಎಲ್ಲಿಯೂ ಸಂರಕ್ಷಣೆ ಮಾಡುವ ಕಾರ್ಯ ಕಂಡು ಬಂದಿಲ್ಲ. ಹಿರೇ ಅಗಸಿ ಬಳಿ ಆಟೊ, ಸೈಕಲ್‌ ರಿಕ್ಷಾ ನಿಲ್ಲಿಸಲಾಗುತ್ತಿದೆ. ಭಿಕ್ಷುಕರ ಆಶ್ರಯ ತಾಣವಾಗಿಯೂ ಮಾರ್ಪಟ್ಟಿದೆ. ಕೆಲ ಕಡೆ ಅಗಸಿ ಕಟ್ಟೆಯೇ ಇಲ್ಲ. ಕೇವಲ ಬಡಕಲ್‌ ಮಾತ್ರ ಉಳಿದುಕೊಂಡಿದೆ. ಇಂದಿಗೂ ತನ್ನ ಇರುವಿಕೆಯನ್ನು ಕೇವಲ ಕಲ್ಲುಗಳು ಮಾತ್ರ ಸಾಕ್ಷಿ ಹೇಳುತ್ತವೆ. ಹೆಂಡೆಗಾರ ಅಗಸಿ ಬಳಿ ಒಂದು ಬದಿಯ ಕಲ್ಲುಗಳು ಬಿದ್ದಿವೆ. ಅವುಗಳನ್ನು ಯಾರು ಸಂರಕ್ಷಣೆ ಮಾಡಬೇಕು ಎನ್ನುವ ಜಿಜ್ಞಾಸೆಯೂ ಮೂಡಿಸಿದೆ. ಒಂದು ಕಾಲದಲ್ಲಿ ಅಗಸಿಯೇ ಪ್ರಮುಖ ಸ್ಥಳವಾಗಿತ್ತು. ಈಗ ಅವುಗಳು ನಾಶವಾಗುತ್ತಿವೆ. ಇವುಗಳನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಇತಿಹಾಸ ತಿಳಿಸುವ ಕೆಲಸವನ್ನು ಸಂಬಂಧಿಸಿದವರು ಮಾಡಬೇಕಿದೆ.

***

ನೂರಾರು ವರ್ಷಗಳ ಇತಿಹಾಸ ಸಾರುವ ಅಗಸಿಗಳು ಇರುವುದು ನಮ್ಮ ಅದೃಷ್ಟವಾಗಿದೆ.
-ಮಹಮದ್‌ ಅಜಗರ್‌ ಸ್ಥಳೀಯ ನಿವಾಸಿ

***

ಅಗಸಿ ಬಳಿ ಇರುವ ಕಲ್ಲಿನ ಬಳಿ ಐದು ಸುತ್ತು ಹಾಕಿ ಪೂಜೆ ಮಾಡುವುದು ಇಂದಿಗೂ ನಡೆಯುವ ಪದ್ಧತಿಯಾಗಿದೆ.
-ತಿಪ್ಪಯ್ಯ ಬಿರನೂರು ಸ್ಥಳೀಯ ನಿವಾಸಿ

***

ಐತಿಹಾಸಿಕ ಹಿನ್ನೆಲೆ ಹೊಂದಿರುವ 7 ಅಗಸಿಗಳು ಯಾದಗಿರಿಯಲ್ಲಿ ಇರುವುದು ದಾಖಲೆಯಾಗಿದೆ. ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಎರಡು ಅಗಸಿ ಕಟ್ಟೆಗಳಿವೆ.
-ಡಾ.ಭೀಮರಾಯ ಲಿಂಗೇರಿ, ಸಂಶೋಧಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು