ಶನಿವಾರ, ಮೇ 21, 2022
25 °C
ಖಾಸಗಿ ಕಾಲೇಜಿನಲ್ಲಿ ಉಪನ್ಯಾಸ ವೃತ್ತಿ ಜತೆಗೆ ಈಚಲಿನ ಕೆಲಸದಲ್ಲಿ ತೊಡಗಿದ ಹಣಮಂತ್ರಾಯ

ಸುರಪುರ: ಪದವೀಧರನ ಕೈಯಲ್ಲಿ ಅರಳುವ ಬುಟ್ಟಿ

ಅಶೋಕ ಸಾಲವಾಡಗಿ Updated:

ಅಕ್ಷರ ಗಾತ್ರ : | |

Prajavani

ಸುರಪುರ: ಕುಂಬಾರಪೇಟೆಯ ಬೀದರ್‌–ಬೆಂಗಳೂರು ರಸ್ತೆ ಪಕ್ಕದಲ್ಲಿನ ಬಡಾವಣೆಗೆ ಕಾಲಿಟ್ಟರೆ ಮೊದಲ ಗುಡಿಸಿಲಿನ ಮುಂದೆ ಈಚಲು ಬುಟ್ಟಿ ಹೆಣೆಯುವ ವ್ಯಕ್ತಿ ಕಣ್ಣಿಗೆ ಬೀಳುತ್ತಾರೆ. ಕೌಶಲ ಹಾಗೂ ಚಾಕಚಕ್ಯತೆಯಿಂದ ಹೆಣೆದ ವೈವಿಧ್ಯಮಯ ಬುಟ್ಟಿಗಳು ನೋಡುತ್ತ ನಿಲ್ಲುವಂತೆ ಮಾಡುತ್ತವೆ.

ಬಡತನದ ಬೇಗೆಯಲ್ಲಿ ಅರಳಿದ ಹಣಮಂತ್ರಾಯ ಭಜಂತ್ರಿ ಸೂಜಿಗಲ್ಲಿನಂತೆ ಸೆಳೆಯುತ್ತಾರೆ. ಅವರ ನಯ ವಿನಯ, ವ್ಯಕ್ತಿತ್ವ, ಮಾತನಾಡಿಸುವ ರೀತಿ ಗಮನಸೆಳೆಯುತ್ತದೆ. ಎಂಥವರನ್ನೂ ಕೆಲ ಹೊತ್ತು ಅಲ್ಲಿ ಇರುವಂತೆ ಮಾಡುತ್ತದೆ.

ಹಣಮಂತ್ರಾಯ ಚಿಕ್ಕಂದಿನಲ್ಲಿಯೇ ತಂದೆ ತಾಯಿಯಿಂದ ಕುಲಕಸಬು ಬುಟ್ಟಿ ಹೆಣೆಯುವ ಕಾಯಕ ಕರಗತ ಮಾಡಿಕೊಂಡಿದ್ದಾರೆ. ಇವರ ಕೈಯಲ್ಲಿ ಅರಳುವ ಗುಮ್ಮಿ, ಜಲ್ಲಿಪುಟ್ಟಿ, ಹೆಂಡೆಪುಟ್ಟಿ, ತೂರುವ ಪುಟ್ಟಿ, ಹಡ್ಲಿಗಿ ಪುಟ್ಟಿ, ಎತ್ತುಗಳ ಮುಖಕ್ಕೆ ಹಾಕುವ ಚಿಕ್ಕ, ನೆಲುವು, ಬಾರಿಗೆ ಖರೀದಿಸುವಂತೆ ಮಾಡುತ್ತವೆ.

ರಾಜ್ಯಶಾಸ್ತ್ರ ಮತ್ತು ಕನ್ನಡದಲ್ಲಿ ಎಂ.ಎ., ಎಂ.ಎಸ್.ಡಬ್ಲ್ಯೂ, ಎಂ.ಫಿಲ್., ಎಂ.ಇಡಿ. ಪದವಿಗಳನ್ನು ಪೂರೈಸಿರುವ ಹಣಮಂತ್ರಾಯ ಅವರಿಗೆ ಸರ್ಕಾರಿ ನೌಕರಿ ಸಿಗದಿರುವುದು ವಿಪರ್ಯಾಸ. ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಹಣಮಂತ್ರಾಯ ಅವರಿಗೆ ಸಂಸಾರದ ಭಾರ. ಹೀಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಲು ಆಗಲಿಲ್ಲ.

ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, ಅಲ್ಪ ಸಂಬಳ ಪಡೆಯುತ್ತಾರೆ. ತಮ್ಮ ಕುಲಕಸಬು ಬುಟ್ಟಿ ಹೆಣೆದು, ಮದುವೆ, ಮುಂಜಿಗಳಲ್ಲಿ ಬ್ಯಾಂಡ್ ಕಂಪನಿಯಲ್ಲಿ ಕೆಲಸ ಮಾಡಿ ಸಂಸಾರ ತೂಗಿಸುತ್ತಾರೆ. ಅದ್ಭುತ ಶಹನಾಯಿ ಮತ್ತು ಡೋಲು ವಾದಕರಾಗಿದ್ದಾರೆ.

ಹೆಣ್ಣು ಮಗು, ವೃದ್ಧ ತಾಯಿ, ಮಾನಸಿಕ ಅಸ್ವಸ್ಥ ತಮ್ಮ, ಸಹೋದರಿಯರ ಜವಾಬ್ದಾರಿ ಇವರ ಮೇಲಿದೆ. ಕಷ್ಟಪಟ್ಟು ಸಹೋದರಿಯರ ಮದುವೆ ಮಾಡಿದ್ದಾರೆ. ತಂಗಿಗೂ ಡಿ.ಇಡಿ. ಓದಿಸಿದ್ದಾರೆ. ಪತ್ನಿ ಎಂ.ಎ.ಬಿ.ಇಡಿ ಪದವೀಧರೆಯಾಗಿದ್ದು, ಸರ್ಕಾರೇತರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ.

‘ನಮ್ಮ ತಂದೆ, ತಾತ ಮೊದಲು ಹಂದಿ ಸಾಕಾಣಿಕೆ ಮಾಡುತ್ತಿದ್ದರು. ಒಳ್ಳೆಯ ಲಾಭವೂ ಇತ್ತು. ಆದರೆ ಪ್ರಬಲ ಕೋಮಿನವರು ನಮ್ಮನ್ನು ಇದರಿಂದ ವಂಚಿತಗೊಳಿಸಿದರು. ಈಗ ನಮ್ಮ ಕುಲಕಸುಬು ಬುಟ್ಟಿ ಹೆಣೆಯುವಿಕೆಯೇ ಆಸರೆ. ಮೊದಲು ಹೊಲದ ಬದಿಗಳಲ್ಲಿ ಈಚಲು ಮರ ಸಮೃದ್ಧವಾಗಿ ಬೆಳೆಯುತ್ತಿದ್ದವು. ಎಲ್ಲೆಡೆ ಭತ್ತದ ಗದ್ದೆಗಳು ಉದಯಿಸಿದ ಮೇಲೆ ಈಚಲು ಮರ ನಶಿಸಿಹೋಗಿವೆ. ಜತೆಗೆ ಪ್ಲಾಸ್ಟಿಕ್ ಯುಗ ನಮ್ಮ ಹೊಟ್ಟೆಗೆ ತಣ್ಣೀರು ಹಾಕಿದೆ’ ಎನ್ನುತ್ತಾರೆ.

‘ತಮ್ಮ ಸಮಾಜದ ಬಗ್ಗೆ ಅಧ್ಯಯನ ನಡೆಸುತ್ತಿರುವ ಅವರು, ಮೂಲತಃ ನಮ್ಮ ಜನಾಂಗ ತಮಿಳುನಾಡು, ಕೇರಳದಿಂದ ಬಂದವರು. ಕೋತಿ ಆಡಿಸುವುದು ಮೂಲ ಕಾಯಕ. ಮಂಗಳವಾದನದಲ್ಲೂ ಪರಿಣಿತರು. ಸಮಾರಂಭಗಳಲ್ಲಿ ಕೆಲಸ ಮಾಡುವುದು ಮುಸುರೆ ಎತ್ತುವುದು ಮಾಡುತ್ತಿದ್ದರು. ಬರುಬರುತ್ತಾ ವಲಸೆ ಬಂದು ಎಲ್ಲಡೆ ಪಸರಿಸಿದ್ದಾರೆ’ ಎಂದು ಅವರು ವಿವರಿಸುತ್ತಾರೆ. ‘ಅಲ್ಪಸಂಖ್ಯಾತರಾಗಿದ್ದು ಸಂಘಟನೆ ಇಲ್ಲ. ಸಂಭಾಯಿತ ಜನ. ಬಡತನವೇ ಹೆಚ್ಚು. ಹಕ್ಕುಗಳಿಗಾಗಿ ಹೋರಾಟ ಮಾಡುವ ಮನೋಭಾವ ಇಲ್ಲ. ಹೀಗಾಗಿ ಮೀಸಲಾತಿಗೆ ಒಳಪಟ್ಟರೂ ಅದರ ಉಪಯೋಗ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಹಣಮಂತ್ರಾಯ ಭಜಂತ್ರಿ ಅವರು.

ಹಣಮಂತ್ರಾಯ ಭಜಂತ್ರಿ ಅವರ ಮೊ.ಸಂ: 9945339681.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು