ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಫುಟ್‌ಪಾತ್ ಆಕ್ರಮಿಸಿದ ಅಂಗಡಿ ಮುಂಗಟ್ಟು

ರಸ್ತೆ ಮೇಲೆ ನಡೆದಾಡುವ ಪಾದಚಾರಿಗಳು, ತೆರವುಗೊಳಿಸದೆ ಕಣ್ಮುಚ್ಚಿ ಕುಳಿದ ನಗರಸಭೆ, ಪುರಸಭೆ ಅಧಿಕಾರಿಗಳು
Published 11 ಡಿಸೆಂಬರ್ 2023, 7:08 IST
Last Updated 11 ಡಿಸೆಂಬರ್ 2023, 7:08 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಮೂರು ನಗರಸಭೆ, ಮೂರು ಪುರಸಭೆ, ಒಂದು ಪಟ್ಟಣ ಪಂಚಾಯಿತಿ ಇದ್ದು, ಎಲ್ಲಿಯೂ ಫುಟ್‌ಪಾತ್‌ ನಿಯಮಗಳನ್ನು ಪಾಲನೆ ಮಾಡಿಲ್ಲ.

ಯಾದಗಿರಿ, ಶಹಾಪುರ, ಸುರಪುರ ನಗರಸಭೆ, ಕಕ್ಕೇರಾ, ಕೆಂಭಾವಿ, ಗುರುಮಠಕಲ್‌ ಪುರಸಭೆ, ಹುಣಸಗಿ ಪಟ್ಟಣ ಪಂಚಾಯಿತಿ ಸ್ಥಾನಮಾನ ಹೊಂದಿವೆ. ದಿನೆ ದಿನೇ ನಗರ, ಪಟ್ಟಣಗಳು ಅಭಿವೃದ್ಧಿಯಾಗುತ್ತಿದ್ದು, ಅದಕ್ಕೆ ತಕ್ಕಂತೆ ಪಾದಚಾರಿಗಳಿಗೆ ಸೌಲಭ್ಯಗಳು ಸಿಗುತ್ತಿಲ್ಲ.

ನಗರದಲ್ಲಿ ಪಾದಚಾರಿ ಮಾರ್ಗಕ್ಕಿಂತ ಅತಿಕ್ರಮಣಕ್ಕೆ ಒಳಗಾದ ರಸ್ತೆಗಳೇ ಹೆಚ್ಚು. ಕೆಲ ಕಡೆ ಪಾದಚಾರಿ ಮಾರ್ಗಗಳಿದ್ದರೂ ನಡೆದಾಡಲು ಸೂಕ್ತವಾಗಿಲ್ಲ. ಅಲ್ಲಲ್ಲಿ ಹತ್ತಿ ಇಳಿದು ಸಂಚಾರ ಮಾಡುವ ದುಃಸ್ಥಿತಿ ಇದೆ.

ನಗರದಲ್ಲಿ ಕೋರ್ಟ್‌ ರಸ್ತೆ, ರೈಲ್ವೆ ನಿಲ್ದಾಣ ರಸ್ತೆ, ಹೊಸ, ಹಳೆ ಬಸ್‌ ನಿಲ್ದಾಣ, ಚಿತ್ತಾಪುರ ರಸ್ತೆ, ಮಹಾತ್ಮಗಾಂಧಿ ವೃತ್ತ, ತರಕಾರಿ ಮಾರುಕಟ್ಟೆ, ಹತ್ತಿಕುಣಿ ಕ್ರಾಸ್‌, ಮೈಲಾಪುರ ಅಗಸಿ, ಗಂಜ್‌ ವೃತ್ತ ಸಮೀಪ ಸೇರಿದಂತೆ ಹಲವೆಡೆ ಫುಟ್‌ಪಾತ್‌ ಆಕ್ರಮಿಸಿದ್ದರೆ, ಇನ್ನೂ ಹಲವು ಕಡೆ ಫುಟ್‌ಪಾತ್‌ ಇಲ್ಲ. ಇದರಿಂದ ಪಾದಚಾರಿಗಳು ರಸ್ತೆಯ ಮೇಲೆ ನಡೆಯುವುದು ಮಾತ್ರ ತಪ್ಪಿಲ್ಲ.

ಪಾದಚಾರಿಗಳ ಮಾರ್ಗಗಳು ಭರ್ಜರಿ ಆದಾಯ ತರುವ ಕೇಂದ್ರಗಳಾಗಿವೆ. ತರಕಾರಿ, ಮಿರ್ಚಿ ಭಜಿ, ಪಾನಿಪುರಿ, ತಿಂಡಿ ತಿನಿಸು ಮಾರುವ ತಳ್ಳುಗಾಡಿಗಳು, ಎಳನೀರು ಕೇಂದ್ರ, ಹಣ್ಣು ಹಂಪಲು ಮಾರಾಟದ ತಳ್ಳುಗಾಡಿ, ಗೂಡಂಗಡಿ, ಟೀ ಅಂಗಡಿ, ವಿವಿಧ ಅಟಿಕೆ ಸಾಮಾನುಗಳ ಅಂಗಡಿ ಇಡಲಾಗುತ್ತಿದೆ.

ಚಿತ್ತಾಪುರ ರಸ್ತೆಯ ಎರಡು ಬದಿಯಲ್ಲಿ ಬೈಕ್‌, ಕಾರು, ಟಂಟಂ, ಕ್ರೂಸರ್‌ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತಿದೆ. ಪಾದಚಾರಿ ಮಾರ್ಗದಲ್ಲೂ ಅಂಗಡಿ ಮುಂಗಟ್ಟುಗಳವರು ತಮ್ಮ ಸಾಮಾನು ಸರಂಜಾಮುಗಳನ್ನು ಇಟ್ಟಿರುತ್ತಾರೆ. ಇವುಗಳನ್ನು ಹಾದು ಹೋಗಲು ಹರಸಾಹಸ ಪಡಬೇಕಾಗಿದೆ. ಸುಭಾಷ ವೃತ್ತ, ಗಾಂಧಿ ವೃತ್ತ, ಶಾಸ್ತ್ರಿ ವೃತ್ತದಲ್ಲಿ ಸಂಚಾರಿ ಪೊಲೀಸರಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪಾದಚಾರಿಗಳು ಆರೋಪಿಸುತ್ತಾರೆ.

‘ಬಸ್‌ ನಿಲ್ದಾಣ ಪ್ರದೇಶದಲ್ಲಿ ಸದಾ ಜನ ಮತ್ತು ವಾಹನ ದಟ್ಟಣೆಯಿರುತ್ತದೆ. ಹಲವು ಬಾರಿ ಬಸ್‌ಗಳು ನಿಲ್ದಾಣದ ಒಳ ಹೋಗಲು ಮತ್ತು ಹೊರಬರಲೂ ಆಗದಷ್ಟು ಸಮಸ್ಯೆಯಿದೆ. ತಾಲ್ಲೂಕು ಕೇಂದ್ರಗಳಲ್ಲಿ ದಟ್ಟಣೆ ಹೆಚ್ಚುತ್ತಿದೆ. ಆದರೆ, ಅದಕ್ಕೆ ತಕ್ಕಂತೆ ನಗರ, ಪಟ್ಟಣದ ವ್ಯವಸ್ಥೆ ಅಭಿವೃದ್ಧಿಯಾಗುತ್ತಿಲ್ಲ’ ಎಂದು ನಿವೃತ್ತ ಶಿಕ್ಷಕರೊಬ್ಬರು ಅಭಿಪ್ರಾಯಪಟ್ಟರು.

‘ಯಾದಗಿರಿ, ಶಹಾಪುರ ನಗರದ ಹಳೆ ಬಸ್ ನಿಲ್ದಾಣದ ಹತ್ತಿರ ಲಾಡ್ಜ್, ಆಸ್ಪತ್ರೆ, ಬಾರ್, ರೆಸ್ಟೋರೆಂಟ್‌ ಇವೆ. ಭವ್ಯ ಕಟ್ಟಡ ನಿರ್ಮಿಸಿದ್ದಾರೆ. ಆದರೆ, ನಿಗದಿಪಡಿಸಿದ ಪಾರ್ಕಿಂಗ್ ಜಾಗವನ್ನು ತೆರವುಗೊಳಿಸಿ ಮಳಿಗೆ ನಿರ್ಮಿಸಿದ್ದಾರೆ. ಇದರಿಂದ ರಾಜ್ಯ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕಟ್ಟಡದ ಮುಂದುಗಡೆ ವಾಹನ ನಿಲ್ಲಿಸುತ್ತಾರೆ. ಇದರಿಂದ ಸಂಚಾರಕ್ಕೆ ತುಂಬಾ ಅಡೆಚಣೆಯಾಗುತ್ತಿದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಉಮೇಶ ಕುಲಕರ್ಣಿ.

ರಸ್ತೆಯ ಎರಡೂ ಬದಿಗಳಲ್ಲಿ ಮುಖ್ಯ ರಸ್ತೆಯ ಕೊನೆಯ ಬದಿಯಲ್ಲಿ ಚರಂಡಿ ನಿರ್ಮಿಸಲಾಗಿದ್ದು, ಅದರ ಮೇಲೆ ಹೊದಿಕೆ ಹಾಕಲಾಗಿದೆ. ಅಲ್ಲಿ ಪಾದಚಾರಿಗಳು ಸಂಚರಿಸಲು ಅನುಕೂಲ ಇಲ್ಲದಂತಾಗಿದೆ. ರಸ್ತೆ ಬದಿಯ ಅಂಗಡಿಗಳು ಈ ಚರಂಡಿ ಹೊದಿಕೆಯನ್ನು ಆಕ್ರಮಿಸಿಕೊಂಡಿದ್ದಾರೆ.

‘ನಗರ, ಪಟ್ಟಣದ ಸೌಂದರೀಕರಣಕ್ಕೆ ಒತ್ತು ನೀಡಬೇಕಾದ ನಗರಸಭೆ, ಪುರಸಭೆ ಅಧಿಕಾರಿಗಳು ಫುಟ್‌ಪಾತ್‌ ಆಕ್ರಮಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳದೆ ಹಾಗೆಯೇ ಬಿಟ್ಟಿದ್ದಾರೆ. ಇದರಿಂದ ಪಾದಚಾರಿಗಳು ವಾಹನಗಳ ಮಧ್ಯೆ ರಸ್ತೆಯಲ್ಲಿ ತಿರುಗಾಡಬೇಕಾಗಿದೆ. ಶೀಘ್ರ ಅಧಿಕಾರಿಗಳು, ಸಂಬಂಧಿಸಿವರು ಇತ್ತ ಗಮನಹರಿಸಲಿ’ ಎನ್ನುತ್ತಾರೆ ನಾಗರಿಕರು.

ಪೂರಕ ವರದಿ: ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾ

ಯಾದಗಿರಿ ನಗರದ ತಹಶೀಲ್ದಾರ್‌ ಕಚೇರಿ ಮುಂಭಾಗದ ಫುಟ್‌ಪಾತ್ ಮೇಲೆ ಡಬ್ಬಾ ಅಂಗಡಿ ಮುಂಗಟ್ಟುಗಳನ್ನು ನಿರ್ಮಿಸಿರುವುದು
ಪ್ರಜಾವಾಣಿ ಚಿತ್ರಗಳು/ ರಾಜಕುಮಾರ ನಳ್ಳಿಕರ
ಯಾದಗಿರಿ ನಗರದ ತಹಶೀಲ್ದಾರ್‌ ಕಚೇರಿ ಮುಂಭಾಗದ ಫುಟ್‌ಪಾತ್ ಮೇಲೆ ಡಬ್ಬಾ ಅಂಗಡಿ ಮುಂಗಟ್ಟುಗಳನ್ನು ನಿರ್ಮಿಸಿರುವುದು ಪ್ರಜಾವಾಣಿ ಚಿತ್ರಗಳು/ ರಾಜಕುಮಾರ ನಳ್ಳಿಕರ
ನಗರದ ವಿವಿಧೆಡೆ ಫುಟ್‌ಪಾತ್‌ ಅಕ್ರಮಿಸಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಇವುಗಳನ್ನು ತೆರವುಗೊಳಿಸಲು ತಂಡ ರಚನೆ ಮಾಡಲಾಗುವುದು. ಶೀಘ್ರವೇ ತೆರವುಗೊಳಿಸುವ ಕೆಲಸ ಮಾಡಲಾಗುವುದು
ಲಕ್ಷ್ಮೀಕಾಂತ ನಗರಸಭೆ ಪ್ರಭಾರಿ ಪೌರಾಯುಕ್ತ ಯಾದಗಿರಿ
ಪಾದಚಾರಿ ರಸ್ತೆಯ ಮೇಲೆ ಮಳಿಗೆ ಸ್ಥಾಪಿಸಿರುವುದು ಕಂಡು ಬಂದಿದೆ. ತೆರವುಗೊಳಿಸಲು ಯತ್ನಿಸಲಾಗುವುದು. ಬೀದಿ ವ್ಯಾಪಾರಿಗಳಿಗೆ ನಿಗದಿತ ಸ್ಥಳದಲ್ಲಿ ವ್ಯಾಪಾರ ಮಾಡಲು ಸೂಚಿಸಿದೆ
ರಮೇಶ ಬಡಿಗೇರ ಪೌರಾಯುಕ್ತ ಶಹಾಪುರ
ತಾಲ್ಲೂಕು ಕೇಂದ್ರವಾಗಿರುವ ಹುಣಸಗಿ ಪಟ್ಟಣದಲ್ಲಿ ಪಾದಚಾರಿಗಳಿಗೆ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಇಲ್ಲಿನ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಿಂದೆ ಬಿದ್ದಿದ್ದಾರೆ
ಮಹಾದೇವಿ ಬೇನಾಳಮಠ ರಾಜ್ಯ ರೈತ ಸಂಘದ ರಾಜ್ಯ ನಾಯಕಿ
ನಗರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಫುಟ್‌ಪಾತ್ ಅತಿಕ್ರಮಣ ರಾಜಾರೋಷವಾಗಿ ನಡೆದಿದೆ. ಸಂಬಂಧಿಸಿದ ಅಧಿಕಾರಿಗಳು ತೆರವುಗೊಳಿಸದೇ ಸುಮ್ಮನೆ ಕುಳಿತಿದ್ದಾರೆ. ಕೂಡಲೇ ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಬೇಕು
ಸಾಮಾಜಿಕ ಕಾರ್ಯಕರ್ತ

ಕಚೇರಿಗಳ ಮುಂಭಾಗದಲ್ಲೇ ಅಕ್ರಮ:

ಯಾದಗಿರಿ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಪ್ರಮುಖ ಸರ್ಕಾರಿ ಕಚೇರಿಗಳ ಮುಂಭಾಗದಲ್ಲಿ ಫುಟ್‌ಪಾತ್‌ ಮೇಲೆಯೇ ಅಂಗಡಿ ಮುಂಗಟ್ಟುಗಳನ್ನು ಸ್ಥಾಪನೆ ಮಾಡಲಾಗಿದೆ. ಇನ್ನೂ ಕೆಲವರು ಸರ್ಕಾರ ಜಾಗದಲ್ಲೇ ಡಬ್ಬಾ ಅಂಗಡಿಗಳನ್ನು ಸ್ಥಾಪಿಸಿ ಕೆಲವರಿಗೆ ಬಾಡಿಗೆ ಆಧಾರದ ಮೇಲೆ ನೀ‌ಡುತ್ತಿದ್ದಾರೆ. ಇದರಿಂದ ಸರ್ಕಾರದ ಜಾಗವನ್ನು ಖಾಸಗಿ ವ್ಯಕ್ತಿಗಳು ಅಕ್ರಮಿಸಿಕೊಂಡು ಬಾಡಿಗೆ ನೀಡುವುದು ಎಷ್ಟು ಸರಿ ಎನ್ನುವುದು ನಾಗರಿಕರ ಪ್ರಶ್ನೆಯಾಗಿದೆ. ‘ಯಾದಗಿರಿ ನಗರದಲ್ಲಿ ಕೆಲವರು ಡಬ್ಬಾ ಅಂಗಡಿಗಳ ಬಾಡಿಗೆ ದಂಧೆಯನ್ನು ಶುರು ಮಾಡಿಕೊಂಡಿದ್ದಾರೆ. ತಹಶೀಲ್ದಾರ್‌ ಕಚೇರಿ ಹೊಸ ಬಸ್‌ ನಿಲ್ದಾಣ ಚಿತ್ತಾಪುರ ರಸ್ತೆ ಸೇರಿದಂತೆ ವಿವಿಧೆಡೆ ಫುಟ್‌ಪಾತ್‌ ರಸ್ತೆ ಆಕ್ರಮಿಸಿಕೊಳ್ಳಲಾಗಿದೆ. ಇದರಿಂದ ಪಾದಚಾರಿಗಳು ರಸ್ತೆ ಮೇಲೆ ನಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ನಗರಸಭೆ ಅಧಿಕಾರಿಗಳು ತೆರವುಗೊಳಿಸಿ ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಬೇಕು’ ಎನ್ನುತ್ತಾರೆ ಯುವ ಮುಖಂಡ ಹಣಮಂತ ಬಂದಳ್ಳಿ.

ಶಹಾಪುರ ನಗರದ ಹೆದ್ದಾರಿಯ ಪಾದಚಾರಿ ರಸ್ತೆಯ ಮೇಲೆ ತಾತ್ಕಾಲಿಕ ಮಳಿಗೆ ಸ್ಥಾಪಿಸಿರುವುದು
ಶಹಾಪುರ ನಗರದ ಹೆದ್ದಾರಿಯ ಪಾದಚಾರಿ ರಸ್ತೆಯ ಮೇಲೆ ತಾತ್ಕಾಲಿಕ ಮಳಿಗೆ ಸ್ಥಾಪಿಸಿರುವುದು

ಚರಂಡಿ ಮೇಲೆ ಮಳಿಗೆ ಸ್ಥಾಪನೆ

ಶಹಾಪುರ ನಗರದ ಬೀದರ್‌-ಶ್ರೀರಂಗಪಟ್ಟಣದ ಹೆದ್ದಾರಿಯ ಎಡ ಮತ್ತು ಬಲ ಭಾಗದ ಪಾದಚಾರಿ ರಸ್ತೆಯ ಮೇಲೆ ಕೆಲ ವ್ಯಕ್ತಿಗಳು ಮಳಿಗೆ ಸ್ಥಾಪಿಸಿದ್ದಾರೆ. ಇದರಿಂದ ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಯ ಪಕ್ಕದಲ್ಲಿಯೇ ಓಡಾಡಬೇಕು. ನಗರದಲ್ಲಿ ವಾಹನ ನಿಲುಗಡೆಗೆ ಸೂಕ್ತ ಜಾಗವಿಲ್ಲ. ಹೊಸ ಬಸ್ ನಿಲ್ದಾಣದ ಎದುರುಗಡೆ ತಾತ್ಕಾಲಿವಾಗಿ ವಾಹನ ನಿಲ್ಲಿಸುತ್ತಾರೆ. ‘ನಗರದ ಬಸವೇಶ್ವರ ವೃತ್ತದ ಬಳಿ ಕಿರಾಣಿ ಹಾಗೂ ಇನ್ನಿತರ ಅಂಗಡಿಯವರು ರಸ್ತೆಯನ್ನು ಒತ್ತುವರಿ ಮಾಡಿ ಸಾಮಗ್ರಿಗಳನ್ನು ಇಡುತ್ತಾರೆ. ಇದರಿಂದ ರಸ್ತೆ ಮತ್ತಷ್ಟು ಇಕ್ಕಟ್ಟಾಗಿದೆ. ಅಲ್ಲದೆ ಕೆಲ ಸ್ಥಳೀಯ ಪ್ರಭಾವಿ ವ್ಯಕ್ತಿಗಳು ನಗರಸಭೆಯ ಜಾಗ ಒತ್ತುವರಿ ಮಾಡಿ ಮಳಿಗೆ ನಿರ್ಮಿಸಿದ್ದಾರೆ. ಅಲ್ಲದೆ ರಾಜಕಾಲುವೆ ಮೇಲೆ ಮಳಿಗೆ ನಿರ್ಮಿಸಿ ಬಾಡಿಗೆ ನೀಡಿದ್ದಾರೆ. ಇದರಿಂದ ಚರಂಡಿ ಸ್ವಚ್ಛಗೊಳಿಸಲು ತುಂಬಾ ತೊಡಕಾಗಿದೆ’ ಎಂದು ನಗರಸಭೆ ಸಿಬ್ಬಂದಿಯೊಬ್ಬರು ತಿಳಿಸಿದರು.

ನಿತ್ಯವೂ ಇಲ್ಲಿ ಪಾದಚಾರಿಗಳ ಪರದಾಟ:

ಹುಣಸಗಿ ಪಟ್ಟಣದ ಬಸವೇಶ್ವರ ವೃತ್ತದಿಂದ ಮಹಾಂತಸ್ವಾಮಿ ವೃತ್ತದವರೆಗೆ ಸುಮಾರು 1.5 ಕಿ.ಮೀ ಉದ್ದದ ಮುಖ್ಯ ರಸ್ತೆಯಲ್ಲಿ ಪಾದಚಾರಿ ರಸ್ತೆಯೇ ಇಲ್ಲದಂತಾಗಿದೆ. ದೊಡ್ಡದಾದ ಮುಖ್ಯ ರಸ್ತೆ ಇದ್ದರೂ ಅದರ ಮಧ್ಯೆ ರಸ್ತೆ ವಿಭಜಕ ಹಾಗೂ ವಿದ್ಯುತ್ ಕಂಬಗಳನ್ನು ಪಟ್ಟಣ ಪಂಚಾಯಿತಿಯಿಂದ ಅಳವಡಿಸಲಾಗಿದೆ. ಆದರೆ ಸುಗಮ ಸಂಚಾರಕ್ಕೆ ಪಾದಚಾರಿ ರಸ್ತೆಯೇ ಇಲ್ಲದಂತಾಗಿದೆ. ಪಟ್ಟಣದ ಪ್ರವಾಸಿ ಮಂದಿರದ ಬಳಿ ಕಳೆದ ಒಂದು ವಾರದಿಂದ ಕೆಲವರು ರಸ್ತೆ ಬದಿಯಲ್ಲಿ ಡಬ್ಬಾ ಅಂಗಡಿಗಳನ್ನು ನಿರ್ಮಿಸುತ್ತಿದ್ದರೂ ಅಧಿಕಾರಿಗಳು ತಡೆಯುತ್ತಿಲ್ಲ. ಇನ್ನು ಪಟ್ಟಣದ ಬಸ್ ನಿಲ್ದಾಣದ ಬಳಿಯಂತೂ ವಾಹನ ದಟ್ಟಣೆ ಹೆಚ್ಚಾಗಿದೆ. ಇಲ್ಲಿ ಪಾದಚಾರಿ ರಸ್ತೆ ಅಗತ್ಯ ಹೆಚ್ಚಾಗಿದ್ದು ಗೂಡಂಗಡಿಗಳು ಮುಖ್ಯ ರಸ್ತೆಯನ್ನೇ ಆವರಿಸಿಕೊಂಡಿದ್ದರಿಂದಾಗಿ ಪಾದಚಾರಿಗಳು ನಿತ್ಯ ಸಾಕಷ್ಟು ಪ್ರಯಾಸಪಟ್ಟು ತೆರಳುವಂತಿದೆ. ‘ಮಹಿಳೆಯರು ವೃದ್ಧರು ಹಿರಿಯ ನಾಗರಿಕರ ಅನುಕೂಲಕ್ಕಾಗಿ ಇಲ್ಲಿನ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿ’ ಎಂದು ಕರವೇ ಅಧ್ಯಕ್ಷ ರಮೇಶ ಬಿರಾದಾರ ಕೊಡೇಕಲ್ಲ ಒತ್ತಾಯಿಸಿದ್ದಾರೆ.

ಹೆದ್ದಾರಿಯ ಎಂಟ್ರಿ ಎಕ್ಸಿಟ್‌ಗಷ್ಟೇ ಫುಟ್‌ಪಾತ್‌

ಗುರುಮಠಕಲ್‌ ಪಟ್ಟಣದಲ್ಲಿ ಹಾದು ಹೋದ ವಿಜಯಪುರ-ಹೈದರಾಬಾದ್‌ ಹೆದ್ದಾರಿಯಲ್ಲಿ ಯಾದಗಿರಿಯಿಂದ ನಗರಕ್ಕೆ ಪ್ರವೇಶ ಮತ್ತು ಹೈದರಾಬಾದ್‌ ಮಾರ್ಗದ ಪಟ್ಟಣದ ಹೊರ ಭಾಗದಲ್ಲಿ ಮಾತ್ರ ಫುಟ್‌ಪಾತ್‌ ವ್ಯವಸ್ಥೆಯಿದೆ. ಯಾದಗಿರಿ ನಗರದಿಂದ ಬರುವ ಹೆದ್ದಾರಿಯಲ್ಲಿ ಗುರುಮಠಕಲ್‌ ಪ್ರವೇಶಿಸುವಲ್ಲಿನ ನೀರಿನ ಮೇಲ್ತೊಟ್ಟಿಯಿಂದ ಪಟ್ಟಣದ ಅಂಬೇಡ್ಕರ್ ವೃತ್ತದ ಹತ್ತಿರದ ಸ್ಮಶಾನದವರೆಗೆ ರಸ್ತೆ ಇಬ್ಬದಿಯಲ್ಲಿ ಮತ್ತು ಪಟ್ಟಣದಿಂದ ಹೈದರಾಬಾದ್‌ಗೆ ತೆರಳುವ ಮಾರ್ಗದ ಹಳೇ ತಹಶೀಲ್ದಾರ್ ಕಚೇರಿಯಿಂದ ಬಸವೇಶ್ವರ ಗಂಜ್‌ನ ಕೊನೆಯವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಫುಟ್‌ಪಾತ್‌ ವ್ಯವಸ್ಥೆ ಹೊರತುಪಡಿಸಿ ಪಟ್ಟಣದ ಯಾವೊಂದು ರಸ್ತೆಗೂ ಫುಟ್‌ಪಾತ್‌ಯಿಲ್ಲ. ‘ಸದ್ಯ ಈಗಿರುವ ಎರಡೂ ಫುಟ್‌ಪಾತ್‌ಗಳೂ ಸಂಜೆ ವೇಳೆ ವಾಕಿಂಗ್‌ ಮಾಡಲು ಬಳಸಲು ಅನುಕೂಲವಾಗಿವೆ. ಆದರೆ ಪಟ್ಟಣದ ಒಳಗಿನ ಪ್ರಮುಖ ರಸ್ತೆಗಳಲ್ಲಿ ಫುಟ್‌ಪಾತ್‌ ವ್ಯವಸ್ಥೆಯಿದ್ದರೆ ಪಾದಚಾರಿಗಳಿಗೆ ಅನುಕೂಲ ಮತ್ತು ಅಡ್ಡಾದಿಡ್ಡಿ ಜಮಾವಣೆಯಾಗುವ ವಾಹನದಟ್ಟಣೆ ನಿಯಂತ್ರಿಸಬಹುದು’ ಎನ್ನುವುದು ಪದವಿ ವಿದ್ಯಾರ್ಥಿಗಳ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT