ಶಹಾಪುರ: ನಾಗರಪಂಚಮಿ ಹಬ್ಬದಂದು ಗೋಗಿ ಗ್ರಾಮದಲ್ಲಿ ಹಮ್ಮಿಕೊಂಡ ಎತ್ತಿನ ಬಂಡಿಯಲ್ಲಿ ಭಾರ ಎಳೆಯುವ ಸ್ಪರ್ಧೆಯಲ್ಲಿ ಭೀಮರಡ್ಡಿ ಮತ್ತು ಮಾಳಪ್ಪ ಅವರು ಸಾಹಸ ಮೆರೆದಿದ್ದಾರೆ.
ಐದು ಕ್ವಿಂಟಲ್ ಜೋಳದ ಚೀಲಗಳನ್ನು ಎತ್ತಿನ ಬಂಡಿಯಲ್ಲಿ ಹಾಕಿಕೊಂಡು ಗೋಗಿ ಗ್ರಾಮದಿಂದ ಯಾದಗಿರಿಯ ಸುಭಾಸ ಚೌಕದವರೆಗೆ 46 ಕಿ.ಮೀ. ದೂರ ಸಾಗಿದರು. ಇಬ್ಬರಿಗೂ ತಲಾ ಐದು ತೋಲ ಬೆಳ್ಳಿ ಕಡಗ ನೀಡಿ ಗೌರವಿಸಲಾಯಿತು.
ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮದ ಮುಖಂಡ ಯಲ್ಲಪ್ಪ ಅವರು ’ಕ್ರೀಡೆ ಮತ್ತು ಸಾಹಸ ಸ್ಪರ್ಧೆಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ, ಗೋಗಿ ಪರಿಸರದಲ್ಲಿ ಹಲವು ಗ್ರಾಮೀಣ ಕ್ರೀಡೆಗಳು ಮತ್ತು ಸಾಹಸ ಸ್ಪರ್ಧೆಗಳು ಉಳಿಸಿ ಬೆಳೆಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಗ್ರಾಮದ ಮುಖಂಡ ಯಲ್ಲಪ್ಪ ಅಭಿಪ್ರಾಯಪಟ್ಟರು.
’ಉತ್ತಮ ಆರೋಗ್ಯ ಕಾಪಾಡಿಕೊಂಡವರಿಗೆ ಮಾತ್ರ ಇಂತಹ ಸಾಹಸ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ಸಾಹಸ ಕ್ರೀಡೆಯಲ್ಲಿ ಮತ್ತು ಭಾರ ಎಳೆಯುವ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಶಕ್ತಿ ಮತ್ತು ಸಾಮರ್ಥ್ಯ ಮೆರೆಯಬೇಕು ಎಂದು ಮಾರುತಿ ಮುಂದಿನಮನಿ ತಿಳಿಸಿದರು.
ಹಿರಿಯರಾದ ಸಿದ್ರಾಮಪ್ಪ ಬಡಿಗೇರ, ಈರಪ್ಪ ಬದ್ದೆಳಿ, ದೇವಪ್ಪ ಬದ್ದೆಳಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.