ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುರಪುರ | ರಕ್ತಹೀನತೆ ನಿವಾರಣೆಗೆ ಕಟ್ಟುನಿಟ್ಟಿನ ಕ್ರಮ: ಆರೋಗ್ಯಾಧಿಕಾರಿ ಡಾ.ರಾಜಾ

Published 23 ನವೆಂಬರ್ 2023, 6:40 IST
Last Updated 23 ನವೆಂಬರ್ 2023, 6:40 IST
ಅಕ್ಷರ ಗಾತ್ರ

ಸುರಪುರ: ‘ರಾಜ್ಯ ಸರ್ಕಾರದ ಆದೇಶದಂತೆ ಆರೋಗ್ಯ ಇಲಾಖೆ ಅನೀಮಿಯಾ(ರಕ್ತ ಹೀನತೆ) ಮುಕ್ತ ಕರ್ನಾಟಕದ ಗುರಿ ಹೊಂದಿದೆ. ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಎಂಬ ಯೋಜನೆಯ ಮೂಲಕ ಜಾರಿಗೊಳಿಸಲಾಗುತ್ತಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಜಾ ವೆಂಕಪ್ಪನಾಯಕ ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಅನೀಮಿಯಾ ಮುಕ್ತ ಕರ್ನಾಟಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನವಜಾತ ಶಿಶುಗಳು, ಮಕ್ಕಳು, ಹದಿಹರೆಯದವರು, ಗರ್ಭಿಣಿಯರು, ತಾಯಂದಿರಲ್ಲಿನ ರಕ್ತಹೀನತೆ ಮತ್ತು ಅಪೌಷ್ಟಿಕತೆ ನಿವಾರಿಸುವುದು ಈ ಯೋಜನೆಯ ಉದ್ದೇಶ’ ಎಂದು ವಿವರಿಸಿದರು.

‘ವಿವಿಧ ಹಂತಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು,‌ ಮೊದಲ ಹಂತದಲ್ಲಿ ರಕ್ತಹೀನತೆ, ಅಪೌಷ್ಟಿಕತೆ ಪತ್ತೆ ಮಾಡಲು ಸಾಮೂಹಿಕವಾಗಿ ತಪಾಸಣೆ ನಡೆಸಲಾಗುವುದು. ಮೂರು ವರ್ಷದೊಳಗಿನ ಮಕ್ಕಳಿಗೆ ವರ್ಷಕ್ಕೆ ಎರಡು ಬಾರಿ ವಿಟಮಿನ್ ‘ಎ’ ಮಾತ್ರೆ ಪೂರೈಕೆ ಸಮಯದಲ್ಲಿ ರಕ್ತಹೀನತೆ ತಪಾಸಣೆ ಮಾಡಲಾಗುವುದು. ಪ್ರಸವಪೂರ್ವ ಆರೈಕೆಯ ಸಂದರ್ಭದಲ್ಲಿ ಗರ್ಭಿಣಿಯರಿಗೆ ತಪಾಸಣೆ ನಡೆಸಲಾಗುವುದು’ ಎಂದರು.

‘ಎರಡನೇ ಹಂತದಲ್ಲಿ ಲಭ್ಯ ಅಂಕಿ–ಅಂಶಗಳ ಮೇಲೆ ನಿಗಾ ವಹಿಸಲಾಗುವುದು. ಮೂರನೇ ಹಂತದಲ್ಲಿ ಕಬ್ಬಿಣಾಂಶ, ಫೋಲಿಕ್ ಆಮ್ಲ ನೀಡುವಿಕೆ ಮತ್ತು ಜಂತುಹುಳು ನಿವಾರಣೆಗೆ ಕ್ರಮ ಜರುಗಿಸಲಾಗುವುದು. ರಕ್ತಹೀನತೆಯಿಂದ ಬಳಲುತ್ತಿವವರನ್ನು ಗುರುತಿಸಿ ಚಿಕಿತ್ಸೆ ನೀಡಲಾಗುವುದು’ ಎಂದರು.

‘ಈ ಅಭಿಯಾನಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ನಗರಾಭಿವೃದ್ಧಿ ಇಲಾಖೆಗಳು ಕೈಜೋಡಿಸಲಿವೆ. ಸಾರ್ವಜನಿಕರ ಸಹಕಾರವೂ ಮುಖ್ಯ. ಎಲ್ಲರೂ ಸೇರಿ ಅನೀಮಿಯಾ ಮುಕ್ತ ಕರ್ನಾಟಕಕ್ಕೆ ಪಣ ತೊಡೋಣ’ ಎಂದರು ಕೋರಿದರು.

ಪ್ರಾಚಾರ್ಯ ಬಸವರಾಜ ಇನಾಮದಾರ, ಉಪನ್ಯಾಸಕರಾದ ಸೈದಾ ಜಮಾದಾರ, ಮಹ್ಮದ್ ರಫೀಕ್‌, ಆರೋಗ್ಯ ಇಲಾಖೆ ಸಿಬ್ಬಂದಿ, ವಿದ್ಯಾರ್ಥಿನಿಯರು ಇದ್ದರು.

ವಿದ್ಯಾರ್ಥಿನಿಯರ ಹಿಮೊಗ್ಲೊಬಿನ್‌ ಪ್ರಮಾಣ ಪರಿಶೀಲನೆ, ಅನೀಮಿಯಾ ಪರೀಕ್ಷೆ ಇತರ ತಪಾಸಣೆಗಳನ್ನು ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT