ಶುಕ್ರವಾರ, ಅಕ್ಟೋಬರ್ 23, 2020
24 °C
ಸಮಸ್ಯೆಗಳಿಂದ ರೈತರು ಹೈರಾಣು; ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ: ಸಾರ್ವಜನಿಕರ ಆರೋಪ

ಎಪಿಎಂಸಿ: ಅವ್ಯವಸ್ಥೆ, ಮೂಲಸೌಕರ್ಯ ಕೊರತೆ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯ ಶಹಾಪುರ, ಸುರಪುರ ಮತ್ತು ಗುರುಮಠಕಲ್‌ನಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಅವ್ಯವಸ್ಥೆ ವ್ಯಾಪಕವಾಗಿದೆ.

ಎಪಿಎಂಸಿ ಮೂಲಸೌಕರ್ಯ ಅಭಿವೃದ್ಧಿಗೆ ಹಣವಿದ್ದರೂ ಸಮರ್ಪಕ ಸೌಲಭ್ಯಗಳು ರೈತರಿಗೆ ಸಿಗುತ್ತಿಲ್ಲ. ಇದರಿಂದ ಮಾರುಕಟ್ಟೆಗೆ ಬರುವ ರೈತರು ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. 

ರೈತರು ಈಗ ಮುಂಗಾರು ಹಂಗಾಮಿನ ಹೆಸರು ಬೆಳೆಯನ್ನು ಮಾರುಕಟ್ಟೆಗೆ ತರುತ್ತಿದ್ದಾರೆ. ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹಲವಾರು ವರ್ಷಗಳಿಂದ ಸೂಕ್ತ ಸೌಲಭ್ಯವನ್ನೇ ಕಂಡಿಲ್ಲ. 

ಆವರಣದಲ್ಲಿ ಹದಗೆಟ್ಟ ರಸ್ತೆ: ಎಪಿಎಂಸಿ ಆವರಣದೊಳಗೆ ಪ್ರವೇಶಿಸಿದರೆ ಮೊದಲು ತಗ್ಗು ದಿನ್ನೆಗಳಿಂದ ಕೂಡಿದ ರಸ್ತೆ ಕಣ್ಣಿಗೆ ಕಾಣಿಸುತ್ತದೆ. ಕೆಲ ಕಡೆ ಮಳೆ ನೀರು ನಿಂತು ರಾಡಿಯಾಗಿದೆ. ಇನ್ನೂ ಕೆಲ ಕಡೆ ಡಾಂಬಾರು ರಸ್ತೆ ಕಿತ್ತುಹೋಗಿದ್ದು, ಸಂಪೂರ್ಣ ಹದಗೆಟ್ಟಿದೆ. ಇಂಥ ರಸ್ತೆಯಲ್ಲೇ ರೈತರು ತಮ್ಮ ಉತ್ಪನ್ನಗಳನ್ನು ತಂದು ಮಾರುತ್ತಿದ್ದಾರೆ. 

ಮುರಿದ ಹಿಂಭಾಗದ ಗೇಟ್: ಎಪಿಎಂಸಿ ಹಿಂಭಾಗದ ಗೇಟ್‌ಗಳು ಮುರಿದಿದ್ದು, ಅದನ್ನು ಈವರೆಗೂ ಸರಿಪಡಿಸಲಾಗಿಲ್ಲ.  ಮುಂಭಾಗದಲ್ಲಿ ಮಾತ್ರ ರಸ್ತೆ ಸರಿಯಿದ್ದು, ಹಿಂಭಾಗದಲ್ಲಿ ತಗ್ಗು ದಿನ್ನೆಗಳಿಂದ ಕೂಡಿದೆ. ಅಲ್ಲಲ್ಲಿ ಕಂದಕಗಳು ನಿರ್ಮಾಣ ಆಗಿವೆ.

ಕೆಟ್ಟ ನಿಂತ ಕೊಳವೆ ಬಾವಿ: ನೀರಿನ ವ್ಯವಸ್ಥೆಗಾಗಿ ಮಾರುಕಟ್ಟೆಯಲ್ಲಿ ಕೊಳವೆ ಬಾವಿ ಕೊರೆಸಲಾಗಿದೆ. ಆದರೆ, ಅವು ಕೆಟ್ಟು ನಿಂತಿವೆ. ಹಮಾಲರು, ವ್ಯಾಪಾರಸ್ಥರು ತಾವೇ ನೀರು ತಂದುಕೊಳ್ಳುತ್ತಿದ್ದಾರೆ. ಇದರಿಂದ ನೀರಿನ ಸಮಸ್ಯೆಯೂ ಸಾಕಷ್ಟಿದೆ.

‘ಪೈಪ್‌ಲೈನ್‌ ಮೂಲಕ ನೀರು ಸರಬರಾಜು ಕೂಡ ಸಮರ್ಪಕವಾಗಿಲ್ಲ. ಕುಡಿಯುವ ನೀರಿಗಾಗಿ ವ್ಯವಸ್ಥೆ ಮಾಡಿದ್ದರೂ ಅದು ಹಾಳು ಬಿದ್ದಿದೆ. ಇದರಿಂದ ಬೇರೆಡೆ ತೆರಳಿ ರೈತರು ನೀರು ತಂದುಕೊಳ್ಳುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ’ ಎಂದು ಹಮಾಲಿ ಯಲ್ಲಪ್ಪ ಮುಂಡರಗಿ ಹೇಳುತ್ತಾರೆ. 

ರೈತ ಭವನದ ಸುತ್ತ ಹುಲ್ಲು: ‘ರೈತರ ಅನುಕೂಲಕ್ಕಾಗಿ ಮಾಡಿದ ರೈತ ಭವನದ ಸುತ್ತಮುತ್ತ ಕಳೆ ಹುಲ್ಲು ಆವರಿಸಿದ್ದು, ಕಟ್ಟಡ ಹಾಳು ಬಿದ್ದಂತೆ ಕಾಣುತ್ತಿದೆ. ಭವನದೊಳಗೆ ತೆರಳಲು ಜಾಗವಿಲ್ಲದಂತೆ ಹುಲ್ಲು, ಗಿಡಗಂಟಿ ಬೆಳೆದಿದೆ. ಇದನ್ನು ಕೂಡ ನಿರ್ವಹಣೆ ಮಾಡದೆ ಹಾಳುಗೆಡವಲಾಗಿದೆ’ ಎಂದು ರೈತರು ಆರೋಪಿಸಿದ್ದಾರೆ. 

ಶೌಚಾಲಯ ಇದ್ದರೂ ಬಳಕೆ ಇಲ್ಲ: ಮಾರುಕಟ್ಟೆ ಆವರಣದ ಅಲ್ಲಲ್ಲಿ ಸಾರ್ವಜನಿಕ ಮೂತ್ರಾಲಯ ನಿರ್ಮಿಸಲಾಗಿದೆ. ಆದರೆ, ಸರಿಯಾದ ನಿರ್ವಹಣೆ ಇಲ್ಲದೆ ಅವು ಪಾಳು ಬಿದ್ದಿವೆ. ಎಪಿಎಂಸಿಗೆ ಬಂದ ರೈತರು ಅದರೊಳಗೆ ತೆರಳದೆ ಅದರ ಮುಂಭಾಗದಲ್ಲೇ ಮೂತ್ರ ವಿಸರ್ಜಿಸುತ್ತಾರೆ. ಮಹಿಳಾ ಕೂಲಿ ಕಾರ್ಮಿಕರು ಶೌಚಾಲಯಕ್ಕೆ ತೆರಳಲು  ಪರದಾಡುತ್ತಾರೆ.

ಕುಡುಕರ ಹಾವಳಿ ಜಾಸ್ತಿ: ಸಂಜೆ ವೇಳೆಗೆ ಮಾರುಕಟ್ಟೆ ಆವರಣ ಕುಡುಕರ ಅಡ್ಡೆಯಾಗಿ ಮಾರ್ಪಡುತ್ತದೆ. ಕುರಿ ಮತ್ತು ಮೇಕೆ ಮಾರುಕಟ್ಟೆ ಆವರಣದಲ್ಲಿ ಒಡೆದ ಬಾಟಲಿ, ಪ್ಲಾಸ್ಟಿಕ್‌ ಗ್ಲಾಸ್‌ಗಳು ಕಾಣಸಿಗುತ್ತವೆ. 

‘ಸುಲಭ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. 60 ಬೀದಿ ದೀಪಗಳು ಬಂದಿವೆ. ಒಂದು ಕಿ.ಮೀ.ಪೈಪ್‌ ಲೈನ್ ಇರಲಿಲ್ಲ. ವಿವಿಧ ಕಾಮಗಾರಿಗಳಿಗಾಗಿ ₹23 ಲಕ್ಷ ವೆಚ್ಚದ ಕ್ರಿಯಾ ಯೋಜನೆ ತಯಾರಾಗಿದೆ’ ಎನ್ನುತ್ತಾರೆ ಎಪಿಎಂಸಿ ಸಹಾಯಕ ನಿರ್ದೇಶಕ ಭೀಮರಾಯ ಎಂ.

ಕಡಿಮೆಯಾದ ಸೆಸ್‌ ಶುಲ್ಕ ಸಂಗ್ರಹ: ಎಪಿಎಂಸಿಗೆ ಕಳೆದ ವರ್ಷಕ್ಕಿಂತ ಈ ವರ್ಷ ಸೆಸ್‌ ಶುಲ್ಕ ಕಡಿಮೆಯಾಗಿದೆ. 2020ರಲ್ಲಿ ಯಾದಗಿರಿ ₹2 ಕೋಟಿ, ಶಹಾಪುರ ₹50 ಸಾವಿರ, ಸುರಪುರ ಎಪಿಎಂಸಿಗೆ ₹3ರಿಂದ ₹4 ಕೋಟಿ ಸೆಸ್‌ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. 

ವರ್ತಕರಿಂದ ₹100ಗೆ ₹35 ಪೈಸೆ ಸೆಸ್ ಸಂಗ್ರಹ ಮಾಡಲಾಗುತ್ತಿದೆ. ಕಳೆದ ವರ್ಷ ₹1.50 ಪೈಸೆ ವಸೂಲಿ ಮಾಡಲಾಗುತ್ತಿತ್ತು. ಹೊಸ ಕಾಯ್ದೆ ಅನ್ವಯ ಸೆಸ್‌ ಕಡಿಮೆಯಾಗಿದೆ. 

2020ರ ಆಗಸ್ಟ್ ತಿಂಗಳಲ್ಲಿ ಯಾದಗಿರಿಯಲ್ಲಿ ₹98 ಸಾವಿರ, ಸುರಪುರದಲ್ಲಿ ₹2 ಲಕ್ಷ, ಶಹಾಪುರದಲ್ಲಿ ₹3 ಸಾವಿರ ಸೆಸ್‌ ಸಂಗ್ರಹವಾಗಿದೆ. ಸೆಸ್‌ ಶುಲ್ಕ ಕಡಿಮೆಯಾಗಿದ್ದರಿಂದ ಸಂಗ್ರಹವೂ ಕಡಿಮೆಯಾಗಿದೆ.

ಶಹಾಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೆ, ಶೌಚಾಲಯದ ಸಮಸ್ಯೆ ಇದೆ. ರಸ್ತೆ, ಬೀದಿ ವ್ಯವಸ್ಥೆ ಇದೆ. ಸದ್ಯ ಮಾರುಕಟ್ಟೆಯಲ್ಲಿ ಯಾವುದೇ ಅವಕವಿಲ್ಲ.

ಸುರಪುರ: ಮಾರುಕಟ್ಟೆ ಭಣ ಭಣ

ಸುರಪುರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಒಂದು ತಿಂಗಳಿಂದ ಕೃಷಿ ಉತ್ಪನ್ನಗಳು ಬಾರದೇ ಇರುವ ಕಾರಣ ಮಾರುಕಟ್ಟೆ ಭಣ ಭಣ ಎನ್ನುತ್ತಿದೆ. ಈಗ ಹೆಸರುಕಾಳಿನ ಸೀಸನ್. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಹೆಸರು ಕಾಳಿನ ಆವಕ ಅಧಿಕವಾಗಿರುತ್ತಿತ್ತು. ಅತಿವೃಷ್ಟಿಯಿಂದ ಹೆಸರು ಬೆಳೆ ಹಾನಿಯಾಗಿರುವುದರಿಂದ ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿ ದಿನ ಕೇವಲ 20 ರಿಂದ 30 ಕ್ವಿಂಟಲ್ ಮಾತ್ರ ಹೆಸರು ಬರುತ್ತಿದೆ.

‘ಸೆಪ್ಟೆಂಬರ್ 1 ರಿಂದ ಈವರೆಗೆ ₹ 83 ಸಾವಿರ ಮಾರುಕಟ್ಟೆ ಶುಲ್ಕ ವಸೂಲಿಯಾಗಿದೆ. ಈ ತಿಂಗಳಲ್ಲಿ ಕನಿಷ್ಠ ₹5 ರಿಂದ 6 ಲಕ್ಷ ಶುಲ್ಕ ಬರುತ್ತಿತ್ತು. ಮಾರುಕಟ್ಟೆಯ ವಾರ್ಷಿಕ ಶುಲ್ಕ ₹ 5 ಕೋಟಿ ಸಂಗ್ರಹವಾಗುತ್ತದೆ’ ಎನ್ನುತ್ತಾರೆ ಎಪಿಎಂಸಿ ಕಾರ್ಯದರ್ಶಿ ಸುರೇಶಬಾಬು.

‘ಮಾರುಕಟ್ಟೆಯಲ್ಲಿ ರೈತರಿಗೆ ಸೌಲಭ್ಯವಿಲ್ಲ. ರೈತ ಭವನದಲ್ಲಿ ಹಳೆ ಸಾಮಗ್ರಿ ಸಂಗ್ರಹಿಸಿಡಲಾಗಿದೆ. ನಿರ್ವಹಣೆ ಇಲ್ಲ.  ರೈತರಿಗೆ ಉಪಯೋಗವಿಲ್ಲ. ಮಾರುಕಟ್ಟೆಗೆ ಬರುವ ರೈತರಿಗೆ ವಿಶ್ರಾಂತಿ ಕೋಣೆ, ಶೌಚಾಲಯ ನಿರ್ಮಿಸಿಲ್ಲ’ ಎಂ‌ದು ರೈತ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟೆ ಆರೋಪಿಸುತ್ತಾರೆ.

‘ಮಾರುಕಟ್ಟೆ ಪ್ರವೇಶ ದ್ವಾರದಲ್ಲೆ ರಸ್ತೆಗೆ ಕೊರಕಲು ಬಿದ್ದಿದೆ. ರಸ್ತೆ, ಬೀದಿದೀಪ ನಿರ್ವಹಣೆ ಸರಿಯಾಗಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಮಾರುಕಟ್ಟೆಗೆ ಬಸ್ ವ್ಯವಸ್ಥೆ ಇಲ್ಲ. ಇದರಿಂದ ರೈತರಿಗೆ ತೊಂದರೆಯಾಗಿದೆ’ ಎನ್ನುತ್ತಾರೆ ಅವರು.

ಗುರುಮಠಕಲ್‌: ಸಮಸ್ಯೆಗಳು ಭರಪೂರ

ಜಿಲ್ಲೆಯ ಗುರುಮಠಕಲ್‌ ಎಪಿಎಂಸಿಯಲ್ಲಿಯೂ ಸಮಸ್ಯೆಗಳು ಭರಪೂರ ಇವೆ. ಚರಂಡಿ ವ್ಯವಸ್ಥೆ ಸರಿಯಿಲ್ಲ. ಬೀದಿ ದೀಪ ವ್ಯವಸ್ಥೆ ಇದ್ದರೂ ಬೆಳಗುತ್ತಿಲ್ಲ. ನೀರು ಶುದ್ಧೀಕರಣ ಘಟಕ ಇದೆ.

‘ಈಗ ಹೆಸರು ಕಾಳು ಬರುತ್ತಿದೆ. ಉದ್ದು ಆವಕ ಕಡಿಮೆಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ₹1.5 ಲಕ್ಷ ಸೆಸ್‌ ಬರುವ ನಿರೀಕ್ಷೆ ಇದೆ. ಆಗಸ್ಟ್‌ನಲ್ಲಿ 2 ಲಕ್ಷ  ಸೆಸ್‌ ಸಂಗ್ರಹ ಆಗಿತ್ತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ದೊಡ್ಡ ಖರೀದಿದಾರರು ಬಂದು ರೈತರ ಉತ್ಪನ್ನಗಳನ್ನು ಹರಾಜಿನಲ್ಲಿ ಖರೀದಿಸುವಂತಾಗಬೇಕು. ಪ್ರಸ್ತುತ ಕಮಿಷನ್ ಏಜೆಂಟ್ ಅಂಗಡಿಗಳಲ್ಲಿ ಮಾರುವಂತಹ ಸ್ಥಿತಿಯಿದೆ’ ಎಂದು ಹೇಳುತ್ತಾರೆ ಯುವ ಕೃಷಿಕ ಮಹಾದೇವಪ್ಪ ಎಂ.ಟಿ.ಪಲ್ಲಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು