ಬುಧವಾರ, ಫೆಬ್ರವರಿ 1, 2023
16 °C
ಪಾದಚಾರಿ ಮಾರ್ಗ ತೆರವುಗೊಳಿಸದ ಸ್ಥಳೀಯ ಸಂಸ್ಥೆಗಳು

ಯಾದಗಿರಿ। ಎಗ್ಗಿಲ್ಲದೇ ಫುಟ್‌ಪಾತ್‌ ಅತಿಕ್ರಮಣ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಅತಿಕ್ರಮಣವಾಗಿದ್ದು, ಇದನ್ನು ತೆರವುಗೊಳಿಸುವ ಗೋಜಿಗೆ ಸಂಬಂಧಿಸಿದ ನಗರಸಭೆಗಳು ಮುಂದಾಗಿಲ್ಲ.

ಯಾದಗಿರಿ, ಶಹಾಪುರ, ಸುರಪುರ ನಗರಸಭೆ ಹೊಂದಿದ್ದು, ಕೆಂಭಾವಿ, ಕಕ್ಕೇರಾ, ಗುರುಮಠಕಲ್‌ ಪುರಸಭೆ, ಹುಣಸಗಿ ಪಟ್ಟಣ ಪಂಚಾಯಿತಿ, ವಡಗೇರಾ ಗ್ರಾಮ ಪಂಚಾಯಿತಿ ಸ್ಥಾನ ಹೊಂದಿವೆ.

ಹಲವು ವರ್ಷಗಳ ಹಿಂದೆ ರಸ್ತೆಬದಿಯ ಕಟ್ಟಡ ತೆರವು ಕಾರ್ಯಾಚರಣೆ ಕೈಗೊಂಡಿದ್ದು ಬಿಟ್ಟರೆ ಪಾದಚಾರಿ ಮಾರ್ಗವನ್ನು ಅಕ್ರಮಿಸಿಕೊಂಡವರ ವಿರುದ್ಧ ಕ್ರಮಕ್ಕೆ ಸ್ಥಳೀಯ ಸಂಸ್ಥೆಗಳು ಮುಂದಾಗಿಲ್ಲ.

ಹಳೇ ತಾಲ್ಲೂಕುಗಳಲ್ಲಿ ಮಾತ್ರ ಕೆಲವು ಕಡೆ ಪಾದಚಾರಿ ಮಾರ್ಗ ನಿರ್ಮಾಣ ಮಾಡಿದ್ದರೆ ಹೊಸ ತಾಲ್ಲೂಕು ಕೇಂದ್ರಗಳಲ್ಲಿ ಪಾದಚಾರಿ ಮಾರ್ಗವನ್ನೇ ಗುರುತಿಸಿಲ್ಲ. ಇದರಿಂದ ಅತಿಕ್ರಮಣ ಮಾಡುವವರಿಗೆ ಯಾವುದೇ ಭಯವಿಲ್ಲದಂತೆ ಆಗಿದೆ.

ನಗರ ಪ್ರದೇಶಗಳ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಬೀದಿ ಬದಿಯ ವ್ಯಾಪಾರಿಗಳು ಫುಟಪಾತ್‌ ಆಕ್ರಮಿಸಿಕೊಂಡಿದ್ದರೆ, ಪಾದಚಾರಿಗಳು ರಸ್ತೆಯಲ್ಲಿ ನಡೆದಾಡಿ ಅಪಘಾತಗಳಿಗೆ ಈಡಾಗುತ್ತಿದ್ದಾರೆ.

ಯಾದಗಿರಿ ನಗರದಲ್ಲಿ ಗಂಜ್‌ ವೃತ್ತದಿಂದ ಚಿತ್ತಾಪುರ ರಸ್ತೆವರೆಗೆ ಅಲ್ಲಲ್ಲಿ ಪಾದಚಾರಿ ಮಾರ್ಗವಿದೆ. ಕೆಲವೆಡೆ ನಿರ್ಮಾಣ ಕಾರ್ಯ ಬಾಕಿ ಇದೆ. ಸುಭಾಷ್ ವೃತ್ತದಿಂದ ಪದವಿ ಮಹಾವಿದ್ಯಾಲಯದವರೆಗೆ ಪಾದಚಾರಿ ಮಾರ್ಗಗಳೇ ವ್ಯಾಪಾರಸ್ಥರ ಸ್ಥಳವಾಗಿವೆ. ಎರಡು ಇಕ್ಕೆಲಗಳಲ್ಲಿ ಸಣ್ಣಪುಟ್ಟ ಬೈಕ್ ದುರಸ್ತಿ, ಅಂಗಡಿ ಮುಂಗಟ್ಟುಗಳ ಸಾಮಗ್ರಿ, ತಳ್ಳುಗಾಡಿ ಇಡುವ ಜಾಗ, ಕಟ್ಟಿಗೆ ಶೇಖರಿಸುವ ಸ್ಥಳವಾಗಿ ಮಾರ್ಪಟ್ಟಿದೆ. ಇದನ್ನು ತೆರವುಗೊಳಿಸುವ ಬಗ್ಗೆ ನಗರಸಭೆ ನಿರ್ಲಕ್ಷಿಸಿದೆ.

‘ನಗರ ಸೇರಿದಂತೆ ಜಿಲ್ಲೆಯಾದ್ಯಂತ ಫುಟಪಾತ್‌ಗಳು ಅತಿಕ್ರಮಣಕ್ಕೆ ಒಳಗಾಗಿವೆ. ಬಹುಮಹಡಿ ಕಟ್ಟಡ ನಿರ್ಮಿಸಿದರೂ ಪಾರ್ಕಿಂಗ್‌ ಜಾಗ ಮಾಡದೇ ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸಲಾಗುತ್ತಿದೆ. ಇದರಿಂದ ಪಾದಚಾರಿಗಳು ರಸ್ತೆ ಮೇಲೆ ನಡೆಯಬೇಕಾಗಿದೆ. ಪಾದಚಾರಿಗಳ ಮಾರ್ಗವನ್ನು ಅತಿಕ್ರಮಿಸಿಕೊಂಡವರ ವಿರುದ್ಧ ನಗರಸಭೆ, ಸಂಚಾರ ಪೊಲೀಸರು ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ’ ಎನ್ನುತ್ತಾರೆ ನಗರ ನಿವಾಸಿ ಬಸವರಾಜ ಸ್ವಾಮಿ.

***

ಪಾದಚಾರಿ ರಸ್ತೆಯನ್ನೇ ಡಬ್ಬಾ ಅಂಗಡಿ ನುಂಗಿತ್ತಾ!

ಶಹಾಪುರ: ನಗರದ ಹೃದಯ ಭಾಗದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಗೆ ನಗರದ ಹೊಸ ಬಸ್ ನಿಲ್ದಾಣದಿಂದ ಸಿ.ಬಿ ಕಮಾನ್‌ವರೆಗೆ ಪಾದಾಚಾರಿಗಳಿಗಾಗಿ ಪ್ರತ್ಯೇಕ ಫುಟ್‌ಪಾತ್ ನಿರ್ಮಿಸಲಾಗಿದೆ. ಆದರೆ, ಅಲ್ಲಿ ಚಹಾದಂಗಡಿ, ಹೋಟೆಲ್, ಬಟ್ಟೆ ವ್ಯಾಪಾರ, ಹಣ್ಣು ಮಾರಾಟ ಮಳಿಗೆಯನ್ನು ತಾತ್ಕಾಲಿವಾಗಿ ನಿರ್ಮಿಸಿ ವ್ಯಾಪಾರ ನಡೆಸುತ್ತಿದ್ದಾರೆ. ಅಲ್ಲದೆ ರಸ್ತೆಯ ಮೇಲೆಯೇ ತಳ್ಳು ಬಂಡಿ ವ್ಯಾಪಾರ ನಡೆಯುತ್ತದೆ. ಅನಿವಾರ್ಯವಾಗಿ ರಸ್ತೆಯ ಮೇಲೆ ಜನತೆ ಓಡಾಡಬೇಕು. ರಸ್ತೆ ಅಪಘಾತ ಆಗುವುದು ಇಲ್ಲಿ ಸಾಮಾನ್ಯವಾಗಿದೆ.

ಅಲ್ಲದೆ ಹೆದ್ದಾರಿ ಅಕ್ಕಪಕ್ಕದ ಮೇಲೆ ಲಾಡ್ಜ್, ಹೋಟೆಲ್, ಕಿರಾಣಿ ಅಂಗಡಿಯವರು ವಾಹನ ನಿಲುಗಡೆಯ ಸ್ಥಳವನ್ನು ಒತ್ತುವರಿ ಮಾಡಿ ಅಲ್ಲಿ ಮಳಿಗೆ ನಿರ್ಮಿಸಿ ಬಾಡಿಗೆ ನೀಡಿದ್ದಾರೆ. ಇದರಿಂದ ವಾಹನಗಳನ್ನು ರಸ್ತೆ ಮೇಲೆ ನಿಲ್ಲಿಸುತ್ತಾರೆ. ಇದರಿಂದ ರಸ್ತೆ ಮತ್ತಷ್ಟು ಕಿರಿದಾಗಿದೆ ಎನ್ನುತ್ತಾರೆ ನಗರದ ನಿವಾಸಿ ಯಲ್ಲಪ್ಪ.

ಅನಧಿಕೃತವಾಗಿ ಸ್ಥಾಪಿಸಿದ ಡಬ್ಬಾ ಅಂಗಡಿ ಮೇಲೆ ಕೆಲ ಸ್ಥಳೀಯ ರಾಜಕೀಯ ಮುಖಂಡರು ಬಾಡಿಗೆ ಪಡೆದುಕೊಳ್ಳುತ್ತಿದ್ದಾರೆ. ತೆರವಿಗೆ ಮುಂದಾದರೆ ರಾಜಕೀಯ ಪ್ರಭಾವ ಬಳಸಿ ತಡೆಹಾಕುವುದು ಹಲವು ವರ್ಷದಿಂದ ಸಾಗಿದೆ ಎನ್ನುತ್ತಾರೆ ನಗರಸಭೆಯ ಅಧಿಕಾರಿ ಒಬ್ಬರು.

*****

ಪಾದಚಾರಿ ಮಾರ್ಗ ಅತಿಕ್ರಮಣ

ಸುರಪುರ: ನಗರದಲ್ಲಿ ವಾಹನ ದಟ್ಟಣೆ ದಿನೇ ದಿನೇ ಹೆಚ್ಚಾಗುತ್ತಿದೆ. ಜನ ಸಂಖ್ಯೆಯೂ ಅಧಿಕವಾಗಿದೆ. ರಸ್ತೆಗಳು ಮಾತ್ರ ಇಕ್ಕಟ್ಟಾಗಿಯೇ ಇವೆ.

ಕೆಲ ವರ್ಷಗಳ ಹಿಂದೆ ಕೆಲವು ಮುಖ್ಯ ರಸ್ತೆಗಳನ್ನು ವಿಸ್ತರಣೆ ಮಾಡಲಾಯಿತು. ಎರಡೂ ಬದಿಯಲ್ಲಿ ಚರಂಡಿ ನಿರ್ಮಿಸಿ ಅದರ ಮೇಲೆ ಪಾದಚಾರಿ ಮಾರ್ಗ ನಿರ್ಮಿಸಲಾಗಿದೆ. ಸುರಪುರದಲ್ಲಿ ಒಟ್ಟು 6 ಪಾದಚಾರಿ ಮಾರ್ಗಗಳಿವೆ.

ರಸ್ತೆಯ ಬದಿ ವಾಹನಗಳನ್ನು ಪಾರ್ಕ್ ಮಾಡಲಾಗುತ್ತಿದೆ. ಕೆಲ ವ್ಯಾಪಾರಸ್ಥರು ಪಾದಚಾರಿ ಮಾರ್ಗವನ್ನು ಅತಿಕ್ರಮಣ ಮಾಡಿದ್ದಾರೆ. ಕೆಲವರು ಈ ಮಾರ್ಗದ ಮೇಲೆ ಮಾರಾಟ ಮಾಡುವ ವಸ್ತುಗಳನ್ನು ಇಡುತ್ತಾರೆ. ಬೀದಿ ಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗದ ಮೇಲೆ ವ್ಯಾಪಾರ ಮಾಡುತ್ತಾರೆ. ಇದರಿಂದ ಪಾದಚಾರಿಗಳಿಗ ತಿರುಗಾಡಲು ತೊಂದರೆಯಾಗಿದೆ.

ಮಕ್ಕಳು, ವೃದ್ಧರು, ಮಹಿಳೆಯರು ಪರದಾಡುವಂತಾಗಿದೆ. ಹಲವು ಬಾರಿ ಪಾದಚಾರಿಗಳಿಗೆ ವಾಹನಗಳು ಡಿಕ್ಕಿ ಹೊಡೆದ ಘಟನೆಗಳು ನಡೆದಿವೆ. ಪಾದಚಾರಿಗಳು ರಸ್ತೆಯ ಮೇಲೆ ನಡೆಯುವುದರಿಂದ ವಾಹನ ಸಂಚಾರಕ್ಕೂ ತೊಂದರೆಯಾಗಿದೆ.

*****

ನಿತ್ಯವೂ ಪಾದಚಾರಿಗಳ ಪರದಾಟ

ಹುಣಸಗಿ: ಪಟ್ಟಣದ ಬಸವೇಶ್ವರ ವೃತ್ತದಿಂದ ಮಹಾಂತ ಸ್ವಾಮಿ ವೃತ್ತದವರೆಗೂ ತೆರಳುವ ಒಂದು ಕಿಲೋ ಮೀಟರ್ ರಸ್ತೆಯಲ್ಲಿ ಪಾದಚಾರಿಗಳು ತೊಂದರೆ ಪಡುವಂತಾಗಿದೆ.

ಈ ಮುಖ್ಯ ರಸ್ತೆಯಲ್ಲಿ ಡಬ್ಬಾ ಅಂಗಡಿ ಹಾಗೂ ತರಕಾರಿ ಅಂಗಡಿಗಳು, ತಳ್ಳು ಬಂಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವುದರಿಂದ ಪಾದಚಾರಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

‘ಹಣ್ಣಿನ ಅಂಗಡಿ, ತರಕಾರಿ ಬಂಡಿಗಳು ಇಟ್ಟಿದ್ದರಿಂದ ಬಹುತೇಕ ರಸ್ತೆ ಒತ್ತುವರಿಯಾಗಿದೆ. ಈ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸುವುದು ಅವಶ್ಯಕತೆ ಇದೆ’ ಎಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಜುಮ್ಮಣ್ಣ ಗುಡಿಮನಿ ಹೇಳಿದರು.

‘ಪಟ್ಟಣ ಪಂಚಾಯಿತಿ ಆದ ಬಳಿಕ ಪಾದಚಾರಿ ರಸ್ತೆ ಇನ್ನೂ ನಾವು  ಗುರುತಿಸಿಲ್ಲ. ಆದರೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು’ ಎಂದು ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಪ್ರಕಾಶ್ ಬಾಗ್ಲಿ ತಿಳಿಸಿದರು.

***

ಪಾದಚಾರಿ ಮಾರ್ಗದಲ್ಲಿ ಅನಧಿಕೃತವಾಗಿ ಯಾವುದೇ ಅಂಗಡಿ ಇಟ್ಟಿದ್ದರೂ ಅದನ್ನು ನಗರಸಭೆಯಿಂದ ತೆರವುಗೊಳಿಸಲಾಗುವುದು. ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಲಾಗುವುದು
ಸುರೇಶ ಅಂಬಿಗೇರ, ನಗರಸಭೆ ಅಧ್ಯಕ್ಷ

***

ಪಾದಚಾರಿ ಮಾರ್ಗವನ್ನು ವ್ಯಾಪಾರಿಗಳು ಬಳಸುವಂತಿಲ್ಲ. ಅತಿಕ್ರಮಣ ಕಂಡುಬಂದರೆ ನೋಟಿಸ್ ನೀಡಿ ತೆರವುಗೊಳಿಸಲಾಗುವುದು
ಜೀವನಕುಮಾರ ಕಟ್ಟಿಮನಿ, ಪೌರಾಯುಕ್ತ, ಸುರಪುರ ನಗರಸಭೆ

***

ಬಹುತೇಕ ಮುಖ್ಯ ರಸ್ತೆಗಳಲ್ಲಿ ಪಾದಚಾರಿ ಮಾರ್ಗವಿಲ್ಲ. ಇದ್ದ ಕೆಲವೆಡೆ ಬಳಕೆಗೆ ಬಾರದಂತಾಗಿವೆ. ಇದರಿಂದ ಪಾದಚಾರಿಗಳಿಗೆ ತೊಂದರೆಯಾಗಿದೆ. ನಗರಸಭೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು
ರವಿಚಂದ್ರ ಠಾಣಾಗುಂದಿ,ಸಾಮಾಜಿಕ ಕಾರ್ಯಕರ್ತ

***

ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.