ಗುರುವಾರ , ಮೇ 26, 2022
30 °C
ಹಸಿರುಡೆಗೆಯುಟ್ಟ ಬೆಟ್ಟಗಳು; ಮಲೆನಾಡ ನೆನಪಿಸುವ ಪ್ರಕೃತಿ ಸೌಂದರ್ಯ

ಗುರುಮಠಕಲ್: ಬಂಡಲೋಗು ಜಲಪಾತದ ಸೊಬಗು

ಎಂ.ಪಿ.ಚಪೆಟ್ಲಾ Updated:

ಅಕ್ಷರ ಗಾತ್ರ : | |

Prajavani

ಗುರುಮಠಕಲ್: ಸುತ್ತಲೂ ಹಸಿರುಡುಗೆಯುಟ್ಟು ಮೈದುಂಬಿ ಕಂಗೊಳಿಸುವ ಗುಡ್ಡಗಾಡು ಪ್ರದೇಶ, ಮಧ್ಯದಲ್ಲಿನ ಬಂಡೆಗಲ್ಲುಗಳ ಹಳ್ಳದಲ್ಲಿ ಹರಿಯುವ ನೀರು, ಹಕ್ಕಿಗಳ ಕಲರವ, ನೀರಿನ ಜುಳುಜುಳು ನಾದ.. ಹೀಗೆ ಮಲೆನಾಡಿನ ಅನುಭವವನ್ನು ನೀಡುತ್ತಾ ಪ್ರವಾಸಿಗರನ್ನು ಆಕರ್ಷಿಸುತ್ತಿರುವುದು ಬಂಡಲೋಗು ಜಲಪಾತ.

ಪಟ್ಟಣದಿಂದ ನಾರಾಯಣಪೇಟ ನಗರಕ್ಕೆ ಹೋಗುವ ಮಾರ್ಗದಲ್ಲಿ ಎರಡು ಕಿ.ಮೀ. ಕ್ರಮಿಸಿದ ನಂತರ ಸಿಗುವ ಮಲ್ಲಾ ಕಾಡಿನಲ್ಲಿರುವ ಬಂಡಲೋಗು ಜಲಪಾತ ಇತ್ತೀಚೆಗೆ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣವಾಗುತ್ತಿದೆ. ಪ್ರಶಾಂತವಾದ ವಾತಾವರಣ, ಸುತ್ತಲೂ ಬೆಟ್ಟಗಳ ಹಸಿರು ತಪ್ಪಲು, ಹಕ್ಕಿಗಳ ಕಲರವದಿಂದ ಮನಸ್ಸಿಗೆ ಉಲ್ಲಾಸ ಬರುತ್ತದೆ. ಸುಮಾರು 30 ಅಡಿಗಳಿಂದ ಧುಮ್ಮಿಕ್ಕುವ ನೀರಿನ ಕೆಳಗೆ ನಿಲ್ಲುವುದು ಇಷ್ಟವಾಗುತ್ತದೆ ಎನ್ನುತ್ತಾರೆ ನಾರಾಯಣಪೇಟದಿಂದ ಬಂದಿದ್ದ ಲಕ್ಷ್ಮಣರಾವ್, ಭುವನಾ ಹಾಗೂ ಅವರ
ಕುಟುಂಬ.

ಗುರುಮಠಕಲ್‌ನಿಂದ ನಾರಾಯಣಪೇಟ ಮುಖ್ಯರಸ್ತೆಯಲ್ಲಿ ಸಿಗುವ ಕಾಡಿನಲ್ಲಿ ಬಲಕ್ಕೆ ಸ್ವಲ್ಪ ದೂರ ಕ್ರಮಿಸಿದರೆ ಹಳ್ಳ ಸಿಗುತ್ತದೆ. ಅಲ್ಲಿಂದ ಹಳ್ಳದೊಡನೆ ಸುಮಾರು ಒಂದೂವರೆ ಕಿ.ಮೀ. ಕ್ರಮಿಸಿದರೆ ಜಲಪಾತದ ಆವರಣಕ್ಕೆ ತಲುಪಬಹುದು. ಜಲಪಾತ ತಲುಪುವುದಕ್ಕೂ ಮೊದಲೇ ಮೂರು ಮಿನಿ ಜಲಪಾತಗಳನ್ನು ನೋಡಿದ ಅನುಭವವೂ ಸಿಗಲಿದೆ. ತಂಪಾದ ನೀರಿನಲ್ಲಿ ನಡೆಯುತ್ತಾ ಸುತ್ತಲಿನ ನಿಸರ್ಗದ ಸೌಂದರ್ಯವನ್ನೂ ಸವಿಯಬಹುದು.

ಇದು ಮಳೆಯಾಧಾರಿತ ಜಲಪಾತವಾಗಿದ್ದು, ಉತ್ತಮ ಮಳೆಯಾದಾಗ ಸುಮಾರು 30 ಅಡಿಗಳಷ್ಟು ಎತ್ತರದಿಂದ ಹಾಗೂ 80 ಅಡಿಗಳ ಅಗಲದಲ್ಲಿ ನೀರು ಧುಮ್ಮಿಕ್ಕುತ್ತದೆ. ಆಗ ಜಲಪಾತದ ಹತ್ತಿರಕ್ಕೆ ಹೋಗುವುದಕ್ಕೆ ಭಯವಾಗುತ್ತದೆ. ಸಾಮಾನ್ಯ ದಿನಗಳಲ್ಲಿ ನೀರು ಮತ್ತು ರಭಸ ಕಡಿಮೆ. ಬೇಸಿಗೆಯಲ್ಲೂ ನೀರು ಹರಿಯುತ್ತವಾದರೂ ಅಷ್ಟು ಆಕರ್ಷಕವಲ್ಲ ಎನ್ನುತ್ತಾರೆ ಇಲ್ಲಿನ ದನಗಾಹಿಯೊಬ್ಬರು.

ತೆಲುಗು ಭಾಷೆಯ ಪ್ರಭಾವ: ತೆಲಂಗಾಣದ ಗಡಿಭಾಗ ಹಾಗೂ ಈ ಮೊದಲು ನಿಜಾಮರ ಆಡಳಿತದ ಭಾಗವಾದ್ದರಿಂದ ತೆಲುಗು ಭಾಷೆಯ ಪ್ರಭಾವವಿದೆ. ಬಂಡೆಗಳ ಮೇಲೆ ಹರಿಯುವ ಹಳ್ಳ ಎನ್ನುವ ಕಾರಣಕ್ಕೆ ಇದನ್ನು ತೆಲುಗಿನಲ್ಲಿ ಬಂಡಲೋಗು ಎಂದೂ, ಈ ಹಳ್ಳದಿಂದ ಹರಿದು ಹೋಗುವ ನೀರಿನ ಜಲಪಾತವು ಬಂಡಲೋಗು ಜಲಪಾತವಾಗಿದೆ. ಇದಕ್ಕೆ 'ಚಿನ್ನಗುಂಡಂ’ ಎಂದೂ ಹೆಸರಿದೆ. ದಬ್ ದಭಿ ಜಲಪಾತಕ್ಕಿಂತ ಬಂಡಲೋಗು ಜಲಪಾತ ಚಿಕ್ಕದು, ಆದ್ದರಿಂದ ಇದನ್ನು 'ಚಿಕ್ಕ ತೀರ್ಥ' ಎನ್ನುವ ಅರ್ಥದಲ್ಲಿ ನಜರಾಪುರ ಗ್ರಾಮಸ್ಥರು ‘ಚಿನ್ನಗುಂಡಂ’ ಎನ್ನುತ್ತಾರೆ.

‘ಸೂಚನಾ ಫಲಕ ಅಳವಡಿಸಿ’: ಈಚೆಗೆ ಬಂಡಲೋಗು ಜಲಪಾತಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ವಾರಾಂತ್ಯದ ಸಮಯದಲ್ಲಿ ಪ್ರವಾಸಿಗರು ಬರುತ್ತಾರೆ. ಆದರೆ, ಕಾಡಿನಲ್ಲಿ ಬರುವಾಗ ಸರಿಯಾದ ದಾರಿ ಸಿಗದಿದ್ದರೆ ಸಮಸ್ಯೆಯಂತೂ ಖಂಡಿತ. ಆದ್ದರಿಂದ ಅರಣ್ಯ ಇಲಾಖೆಯವರು ಅಲ್ಲಲ್ಲಿ ಸೂಚನಾ ಫಲಕ ಅಳವಡಿಸಲಿ. ಉಳಿದಂತೆ ಮುಖ್ಯರಸ್ತೆಯಲ್ಲಿ ಒಂದು ನಾಮಫಲಕ ಅಳವಡಿಸಿದರೆ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎನ್ನುವುದು ಪಟ್ಟಣದ, ನಜರಾಪುರ ಹಾಗೂ ಕೇಶ್ವಾರ ಗ್ರಾಮಸ್ಥರ ಅನಿಸಿಕೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.