ಸೋಮವಾರ, ಸೆಪ್ಟೆಂಬರ್ 20, 2021
27 °C

ಭೀಮಾ ಪ್ರವಾಹ; ಮುನ್ನೆಚ್ಚರಿಕೆ ವಹಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಮಳೆಯಿಂದಾಗಿ ಭೀಮಾನದಿಗೆ ನೀರು ಹರಿದು ಬರುತ್ತಿರುವುದರಿಂದ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಇದ್ದು, ಅಧಿಕಾರಿಗಳು ಪರಿಸ್ಥಿತಿ ಎದುರಾದರೆ, ನಿಭಾಯಿಸಲು ಮುಂಜಾಗ್ರತೆಗಾಗಿ ಕಾಳಜಿ ಕೇಂದ್ರಗಳನ್ನು ಸಿದ್ಧತೆ ಮಾಡಿಕೊಂಡು ಸನ್ನದ್ದರಾಗಿರುವಂತೆ ಮತ್ತು ಸುರಕ್ಷಿತ ಸ್ಥಳಗಳಿಗೆ ಜನ, ಜಾನುವಾರುಗಳನ್ನು ಸ್ಥಳಾಂತರಿಸಿ ವ್ಯವಸ್ಥೆ ಕಲ್ಪಿಸುವ ಸಿದ್ದತೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಭೀಮಾ ನದಿ ಪ್ರವಾಹ ಮುಂಜಾಗ್ರತಾ ಸಭೆಯಲ್ಲಿ ಅವರು ಮಾತನಾಡಿದರು.

ನದಿಗೆ ಹರಿಯುವ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನದಿ ಪಾತ್ರದಲ್ಲಿನ ಗ್ರಾಮಗಳ ಸುರಕ್ಷತೆ ಬಗ್ಗೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

2 ಲಕ್ಷ ಕ್ಯುಸೆಕ್‌ ಮೇಲ್ಪಟ್ಟು ನೀರು ಬಂದರೆ ವಡಗೇರಾ ತಾಲ್ಲೂಕಿನ ಜೋಳದಡಗಿ ಸೇತುವೆ ಮುಳಗಡೆಯಾಗುವ ಸಾಧ್ಯತೆ ಇರು ತ್ತದೆ. 3 ಲಕ್ಷ ಕ್ಯುಸೆಕ್‌ ನೀರು ಬಂದರೆ ವಡಗೇರಾ ತಾಲ್ಲೂಕಿನ ಕಂದಳ್ಳಿ ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇರುತ್ತದೆ. 3.5 ಲಕ್ಷ ಕ್ಯುಸೆಕ್‌ ನೀರು ಹರಿದು ಬಂದರೆ ಯಾದಗಿರಿ ತಾಲ್ಲೂಕಿನ ಆನೂರ್ (ಬಿ) ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಭೀಮಾನದಿಗೆ 4 ರಿಂದ 5 ಲಕ್ಷ ಕ್ಯುಸೆಕ್‌ ನೀರು ಹರಿದು ಬಂದಾಗ ಯಾದಗಿರಿ ತಾಲ್ಲೂಕಿನ ಠಾಣಗುಂದಿ, ಅರಕೇರಾ ಬಿ, ಮುದ್ನಾಳ, ವರ್ಕನಳ್ಳಿ, ಮುಷ್ಟೂರು, ಕೌಳೂರು, ಲಿಂಗೇರಿ, ಮಲ್ಹಾರ, ಬೆಳಗುಂದಿ, ಆನೂರ್ (ಕೆ), ಗೊಂದಡಗಿ, ಗೂಡೂರು, ಬಾಡಿಯಾಳ ಗ್ರಾಮಗಳಲ್ಲಿ ಪ್ರವಾಹ ಉಂಟಾಗುತ್ತದೆ. ಶಹಾಪುರ ತಾಲ್ಲೂಕಿನ ಅಣಬಿ, ರೋಜಾ ಎಸ್ ಶಿರವಾಳ, ಶಿರವಾಳ, ಹುರಸಗುಂಡಗಿ, ಇಬ್ರಾಹಿಂಪುರ, ತಂಗಡಗಿ ಚಟ್ನಳ್ಳಿ ಗ್ರಾಮಗಳಲ್ಲಿ ಪ್ರವಾಹ ಉಂಟಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ವಡಗೇರಾ ತಾಲ್ಲೂಕಿನ ನಾಯ್ಕಲ್, ಗುಲಸರಂ, ಬಿರನಾಳ, ಬಬಲಾದ, ಗೆಡ್ಡೆಸೂಗೂರು, ಹಾಲಗೇರಾ, ಗೋಡಿಹಾಳ, ಕುಮನೂರು, ಅರ್ಜುಣಗಿ, ಕಂದಳ್ಳಿ, ಬಿಳ್ಹಾರ, ಮಾಚನೂರ, ಭೀಮನಳ್ಳಿ, ಬೆನಕನಹಳ್ಳಿ, ಶಿವನೂರ, ಜೋಳದಡಗಿ, ಕೊಂಗಂಡಿ, ಸೂಗೂರು, ಸಂಗಮ ಗ್ರಾಮಗಳು ಪ್ರವಾಹ ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ಸಂಬಂಧಿಸಿದ ತಹಶೀಲ್ದಾರರು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿ, ನೋಡಲ್ ಅಧಿಕಾರಿಗಳು ಸ್ಥಳೀಯ ಪೊಲೀಸರೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಕೋರಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಶಾ ಆಲಂ ಹುಸೇನ್, ಯಾದಗಿರಿ ತಹಶೀಲ್ದಾರ ಚನ್ನಮಲ್ಲಪ್ಪ ಘಂಟಿ, ವಡಗೇರಾ ತಹಶೀಲ್ದಾರ ಸುರೇಶ ಅಂಕಲಗಿ, ಶಹಾಪುರ ತಹಶೀಲ್ದಾರ ಮಧುರಾಜ್, ಜಿಲ್ಲಾ ಅಲ್ಪಸಂಖ್ಯಾತರ ಅಧಿಕಾರಿ ರಾಜು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು