ಸೋಮವಾರ, ಜೂನ್ 27, 2022
26 °C
ಡಾ.ಬಿ.ಆರ್.ಅಂಬೇಡ್ಕರ್ ಅವರ 130ನೇ ಜಯಂತಿ ಸರಳ ಆಚರಣೆ; ಶಾಸಕರು, ಸಚಿವರ ಗೈರಿಗೆ ಆಕ್ರೋಶ

ಜಿಲ್ಲಾದ್ಯಂತ ಸಂವಿಧಾನ ಶಿಲ್ಪಿಯ ಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕೊರೊನಾ ಕಾರಣದಿಂದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಜಿಲ್ಲೆಯಾದ್ಯಂತ ಸಂವಿಧಾನ ಶಿಲ್ಪಿಯ ಸ್ಮರಣೆ ಅನುರಣಿಸಿದ್ದು ಶಾಲೆ, ಕಾಲೇಜು, ಕಚೇರಿ, ಸಂಘ-ಸಂಸ್ಥೆಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಸರಳವಾಗಿ ಆಚರಿಸಿ ಅವರ ತತ್ವಗಳನ್ನು ಹಾಗೂ ಸಾಧನೆಯನ್ನು ಸ್ಮರಿಸಲಾಯಿತು.

ಜಿಲ್ಲಾಡಳಿತ ಭವನ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ಅವರು ಬೋಧಿಸಿದ ತತ್ವಗಳನ್ನು ಹಾಗೂ ಅವರು ಸಾಗಿದ ಮಾರ್ಗವನ್ನು ನಾವೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅಂಬೇಡ್ಕರ್ ಅವರನ್ನು ಗೌರವಿಸೋಣ ಎಂದು ಜಿಲ್ಲಾಧಿಕಾರಿ ಡಾ.ಆರ್. ರಾಗಪ್ರಿಯಾ ಅವರು ಕರೆ ನೀಡಿದರು.

ಬುಧವಾರ ಜಿಲಾಡಳಿತ ಭವನದ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 130ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅನ್ಯಾಯ, ಶೋಷಣೆ, ಅಸ್ಪೃಶ್ಯತೆ ಮೊದಲಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿದರು. ಅವರು ತಮ್ಮಿಡೀ ಜೀವನದಲ್ಲಿ ಸ್ವಾರ್ಥ ತ್ಯಜಿಸಿ ತುಳಿತಕ್ಕೊಳಗಾದವರ ಬದುಕನ್ನು ಮೇಲೆತ್ತಲು ಮುಡುಪಾಗಿಟ್ಟರು ಎಂದರು.

ಓದುವುದರಲ್ಲಿ ಅಪಾರ ಆಸಕ್ತಿ, ಚುರುಕು ತನದಿಂದ ಅಧ್ಯಾಪಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಂಬೇಡ್ಕರ್ ಅವರ ಬುದ್ಧಿವಂತಿಕೆ ಮೆಚ್ಚಿಕೊಂಡು ಪ್ರೀತಿ ಮತ್ತು ವಾತ್ಸಲ್ಯದಿಂದ ಬ್ರಾಹ್ಮಣ ಅಧ್ಯಾಪಕರೊಬ್ಬರು ತಮ್ಮ ಮನೆತನದ ಹೆಸರಾದ ಅಂಬೇಡ್ಕರ್ ಎನ್ನುವುದನ್ನು ಬಾಲಕ ಭೀಮರಾವ್ ಅವರಿಗೆ ನೀಡಿದ್ದರು. ಅಂಬೇಡ್ಕರ್ ಅವರು ಕೇವಲ ಯಾವುದೋ ಜಾತಿಗೆ ಸೀಮಿತರಾದವರಲ್ಲ ಬದಲಿಗೆ, ವಿಶ್ವಮಟ್ಟದ ಮಹಾ ನಾಯಕರು, ಮಾನವತಾವಾದಿ, ನಮ್ಮೆಲ್ಲರ ಬದುಕನ್ನು ಸುಧಾರಿಸಲು ತಮ್ಮ ಬದುಕನ್ನು ಸವೆಸಿದ ಮೇರು ಪರ್ವತವಾಗಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾಡಿ, ಭಾರತಕ್ಕೆ ವಿಶ್ವವೇ ಮೆಚ್ಚುವಂತಹ ಸಂವಿಧಾನವನ್ನು ರಚಿಸಿಕೊಟ್ಟ ಮಹಾನ್ ನಾಯಕ ಅಂಬೇಡ್ಕರ್ ಅವರು. ಸರ್ವರಿಗೂ ಸಮಪಾಲ, ಸಮಬಾಳು, ಸಮಾನ ಅವಕಾಶಗಳ ತತ್ವಗಳನ್ನು ಸಂವಿಧಾನದಲ್ಲಿ ಅಳವಡಿಸಿ ಮಾದರಿಯಾಗಿಸಿದ್ದಾರೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶ್ಯಾಂಸನ್ ಮಾಳಿಕೇರಿ, ಭಾಗಪ್ಪ ಬೆಳ್ಳಿ, ಶಿವಪ್ಪ ಗಿರೆಪ್ನೋರ, ರಾಮಣ್ಣ ಕಲ್ಲದೇವನಹಳ್ಳಿ, ಚಂದ್ರ ಚಕ್ರವರ್ತಿ, ಗುರುನಾಥ ತಲಾರಿ ಅವರನ್ನು ಸನ್ಮಾನಿಸಲಾಯಿತು.

ಜಿ.ಪಂ. ಉಪಾಧ್ಯಕ್ಷೆ ಗಿರಿಜಮ್ಮ ಸದಾಶಿವಪ್ಪಗೌಡ ರೋಟ್ನಡಿಗಿ, ನಗರಾ ಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಎಸ್.ಚಂಡ್ರಿಕಿ, ನಗರಸಭೆಯ ಅಧ್ಯಕ್ಷ ವಿಲಾಸ ಬಿ.ಪಾಟೀಲ್, ನಗರಸಭೆಯ ಉಪಾಧ್ಯಕ್ಷೆ ಪ್ರಭಾವತಿ ಕಲಾಲ್, ಡಾ.ಬಿ.ಆರ್. ಅಂಬೇಡ್ಕರ್ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ್, ಸಹಾಯಕ ಆಯುಕ್ತರಾದ ಶಂಕರಗೌಡ ಸೋಮನಾಳ, ಡಿವೈಎಸ್ಪಿ ಸಂತೋಷ ಬನ್ನಟ್ಟಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಭು ದೊರೆ, ಉಪನ್ಯಾಸಕ ಬಿ.ಆರ್.ಅಂಚೆಸೂಗುರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಮಚಂದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ, ಗುರು ಪ್ರಸಾದ್ ಇದ್ದರು.

ಕರವೇ: ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಯಿತು. ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್.ಭೀಮುನಾಯಕ, ಯುವ ಘಟಕದ ಅಧ್ಯಕ್ಷ ವಿಶ್ವಾರಾಧ್ಯ ದಿಮ್ಮೆ, ಅಂಬುರಾಜ ನಾಯಕ, ಸಿದ್ದುನಾಯಕ ಹತ್ತಿಕುಣಿ, ಅರ್ಜುನ ಪವಾರ, ಸಾಬು ಹೋರುಂಚ, ರಿಯಾಜ ಪಟೇಲ್, ಅಬ್ದುಲ್ ಅಜೀಜ್, ನಾಗರಾಜ್ ತಾಮಡೂರಕರ್, ಹರೀಶ ವಾಲಿ, ದೀಪಕ ವಡೆಯರಮ ಸೇರಿದಂತೆ ಕಾರ್ಯಕರ್ತರು ಇದ್ದರು.

ಜಯ ಕರ್ನಾಟಕ ಸಂಘಟನೆ: ಕಾರ್ಯಾಲಯದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಜಯಂತಿಯನ್ನು ಆಚರಿಸಲಾಯಿತು. ಜಿಲ್ಲಾ ಘಟಕದ ಅಧ್ಯಕ್ಷ ಬಿ. ಎನ್. ವಿಶ್ವನಾಥ್ ನಾಯಕ, ರಾಜ್ಯ ಘಟಕದ ಕಾರ್ಯದರ್ಶಿ ವಿಜಯಕುಮಾರ ಮೊಗದಂಪುರ್, ಶಿವರಾಜ ಗುತ್ತೇದಾರ್, ಮಾರುತಿ ಮುದ್ನಾಳ, ವಿಶಾಲ ಕೌಳೂರು, ಬಸ್ಸು ಪೂಜಾರಿ, ತಾಯಪ್ಪ ಜಗ್ಗೇಶ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು