ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿನೂತನ ಪ್ರತಿಭಟನೆ ಮಾಡಿದ ಬಿಜೆಪಿ

ಚಹಾ ತಯಾರಿಸಿ ಹಾಲಿನ ಬೆಲೆ‌ ಏರಿಕೆ ಖಂಡಿಸಿದ ರೈತ ಮೋರ್ಚಾ
Published 3 ಜುಲೈ 2024, 15:05 IST
Last Updated 3 ಜುಲೈ 2024, 15:05 IST
ಅಕ್ಷರ ಗಾತ್ರ

ಯಾದಗಿರಿ: ಹಾಲಿನ ದರ ಏರಿಕೆ ಖಂಡಿಸಿ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕರಿ ಚಹಾ (ಬ್ಲಾಕ್ ಟೀ) ತಯಾರಿಸಿ ಕುಡಿಯುವ ಮೂಲಕ ಬುಧವಾರ ವಿನೂತನ ಪ್ರತಿಭಟನೆ ಮಾಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಕರಣಗಿ ಅವರ ನೇತೃತ್ವದಲ್ಲಿ ಗ್ಯಾಸ್ ಸ್ಟೌ ತಂದು ಬ್ಲಾಕ್ ಟೀ ತಯಾರಿಸಿ ಗಮನ ಸೆಳೆದರು. ರೈತರಿಗೆ ಹಾಲಿನ ಪ್ರೋತ್ಸಾಹ ಧನವನ್ನು ಕೂಡಲೇ ಪಾವತಿಸಬೇಕು. ಪೆಟ್ರೋಲ್ ಡೀಸೆಲ್ ದರ ಇಳಿಕೆ ಮಾಡಬೇಕು, ರೈತಪರ ಯೋಜನೆ ಗಳನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಮುಖಂಡರು, ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಮೇಲೆ ಬೆಲೆ ಏರಿಕೆ ಬರೆ ಎಳೆದಿದೆ. ಎಲ್ಲ ವಸ್ತುಗಳ ದರಗಳನ್ನು ಏರಿಸುವ ಮೂಲಕ ಜನರ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ರೈತ ವಿದ್ಯಾನಿಧಿ, ಭೂ ಸಿರಿ ಕಾಯ್ದೆ, ಗೋಶಾಲೆ, ಕಿಸಾನ್ ಸಮ್ಮಾನ್ ಸೇರಿದಂತೆ ಹಲವು ಯೋಜನೆಗಳನ್ನು ಸ್ಥಗಿತ ಮಾಡುವ ಮೂಲಕ ರೈತರ ಶಕ್ತಿ ಕುಗ್ಗಿಸಲು ಮುಂದಾಗಿದೆ ಎಂದು ದೂರಿದರು.

ಪರಿಶಿಷ್ಟರಿಗೆ ಮೀಸಲಿಟ್ಟಿದ್ದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುವ ಮೂಲಕ ದ್ರೋಹ ಮಾಡಲಾಗಿದೆ. ಹಾಲಿನ ಪ್ರೋತ್ಸಾಹ ಧನವನ್ನು ಪಶುಪಾಲನಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಕಿಡಿಕಾರಿದರು.

ಪೆಟ್ರೋಲ್, ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ. ಹಾಲಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ಧನವನ್ನು 6 ತಿಂಗಳಿಂದ ನೀಡಿಲ್ಲ. ರೈತರು, ಕಾರ್ಮಿಕರು, ಜನರಿಗೆ ಅನ್ಯಾಯ ಮಾಡುತ್ತಿರುವ ಕನ್ನಡಿಗರ ವಿರೋಧಿ ಸರ್ಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ ಕಾಡಂನೊರ, ಗುರುಮಠಕಲ್ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಹೊನಗೇರಾ, ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೇರಿ, ಮುಖಂಡರಾದ ವೆಂಕಟರಡ್ಡಿ ಅಬ್ಬೆತುಮಕೂರು, ದೇವಿಂದ್ರಪ್ಪ ಕೋನೇರ, ರಮೇಶ್ ದೊಡಮನಿ, ಸಿದ್ದನಗೌಡ ತಂಗಡಗಿ, ರಾಘವೇಂದ್ರ ಯಂಕ್ಷಿಂತಿ, ವೀಣಾ ಮೋದಿ, ಮೌನೇಶ ಬೆಳಿಗೇರ, ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮುಂಡರಗಿ, ದೇವರಾಜ ಚವಾಣ್‌, ಸಿದ್ರಾಮಪ್ಪ ಕುಂಬಾರ, ನಿತ್ಯಾನಂದ ಸ್ವಾಮಿ ಯರಗೋಳ, ಅನಿಲ್ ಹದನೂರು, ಮಹೇಶ ಕುಮಾರ, ವಿರುಪಾಕ್ಷಗೌಡ ಮಾಚನೂರ, ಶಕುಂತಲಾ ಜಿ, ರಮಾದೇವಿ ಕಾವಲಿ, ಸುನಿತಾ ಚವಾಣ್, ಭೀಮಾಬಾಯಿ, ಸ್ನೇಹಾ ರಸಾಳಕರ್‌, ನಾಗಪ್ಪ ಗಚ್ಚಿನಮನಿ, ಸಾಬು ಚಂಡ್ರಕಿ, ಬಸ್ಸು ಬಳಿಚಕ್ರ, ಸೋಮಣ್ಣಗೌಡ ಬಿರಾದರ, ಶ್ರಿಕಾಂತ ಸುಂಗಲ್ಕರ ಸೇರಿದಂತೆ ಅನೇಕ ರೈತ ಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿಜೆಪಿ ಕಾರ್ಯಕರ್ತೆಯರು ಬ್ಲಾಕ್ ಟೀ ತಯಾರಿಸಿ ಕುಡಿಯುವ ಮೂಲಕ ಬುಧವಾರ ವಿನೂತನ ಪ್ರತಿಭಟನೆ ಮಾಡಿದರು
ಬಿಜೆಪಿ ಕಾರ್ಯಕರ್ತೆಯರು ಬ್ಲಾಕ್ ಟೀ ತಯಾರಿಸಿ ಕುಡಿಯುವ ಮೂಲಕ ಬುಧವಾರ ವಿನೂತನ ಪ್ರತಿಭಟನೆ ಮಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT