ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ತನಪಾನ ಶಿಶುವಿಗೆ ಅಮೃತಕ್ಕೆ ಸಮಾನ: ಡಾ.ಹಣಮಂತ ಪ್ರಸಾದ್

ಐಎಪಿ ಮತ್ತು ಯಿಮ್ಸ್ ಸಹಯೋಗದಲ್ಲಿ ಸ್ತನಪಾನ ಜಾಗೃತ ಸಪ್ತಾಹ ಸಮಾರೋಪ
Published 10 ಆಗಸ್ಟ್ 2024, 15:45 IST
Last Updated 10 ಆಗಸ್ಟ್ 2024, 15:45 IST
ಅಕ್ಷರ ಗಾತ್ರ

ಯಾದಗಿರಿ: ‘ನವಜಾತ ಶಿಶುಗಳಿಗೆ ತಾಯಿಯ ಎದೆಹಾಲು ಉಣಿಸುವುದು ಅವಶ್ಯಕ’ ಎಂದು ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ.ಹಣಮಂತ ಪ್ರಸಾದ್ ಹೇಳಿದರು.

ನಗರದ ಹಳೆ ಜಿಲ್ಲಾ ಆಸ್ಪತ್ರೆಯಲ್ಲಿ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಐಎಪಿ) ಮತ್ತು ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಯಿಮ್ಸ್ ಸಹಯೋಗದಲ್ಲಿ ವಿಶ್ವ ಸ್ತನಪಾನ ದಿನಾಚರಣೆಯ ನಿಮಿತ್ತ ಹಮ್ಮಿಕೊಂಡ ಸಪ್ತಾಹ ಸಮಾರೋಪದಲ್ಲಿ ಮಾತನಾಡಿದರು.

ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್‌ನ ಅಧ್ಯಯನದ ಪ್ರಕಾರ ಮಗು ಜನನದ ಒಂದು ಗಂಟೆ ಒಳಗೆ ಸ್ತನ್ಯಪಾನ ಪ್ರಾರಂಭಿಸಬೇಕು. ಮೊದಲ ಆರು ತಿಂಗಳವರೆಗೆ ಕೇವಲ ಸ್ತನ್ಯಪಾನ ಮುಂದುವರಿಯಬೇಕು. ಬಳಿಕ ಸ್ತನ್ಯಪಾನದ ಜೊತೆಗೆ ಸೂಕ್ತ ಪೂರಕ ಆಹಾರವನ್ನು ಪ್ರಾರಂಭಿಸಬೇಕು. ಎರಡು ವರ್ಷಗಳವರೆಗೆ ಅಥವಾ ಅದಕ್ಕೂ ಮೀರಿ ಮುಂದುವರಿಸಬೇಕು ಎಂದು ಹೇಳಿದರು.

ಸ್ತನ್ಯಪಾನದ ಬಗ್ಗೆ ಮಕ್ಕಳ ತಜ್ಞರು, ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸ್ತನಪಾನದ ಮಹತ್ವ ಕುರಿತು ಗರ್ಭಿಣಿಯರಿಗೆ, ಬಾಣತಿಯರಿಗೆ ಜಾಗೃತಿ ಮೂಡಿಸುವುದು ಅತ್ಯವಶ್ಯಕ ಎಂದರು.

ಯಿಮ್ಸ್‌ನ ಸರ್ಜನ್ ರಿಜ್ವಾನ್ ಅಫ್ರೀನ್ ಮಾತನಾಡಿ, ‘ಸ್ತನಪಾನ ನಂತರದ ಜೀವನದಲ್ಲಿ ಅಧಿಕ ರಕ್ತದೋತ್ತಡ, ಮಧುಮೇಹ, ಸ್ಥೂಲಕಾಯತೆ ಮತ್ತು ಹೃದಯ ಕಾಯಿಲೆಗಳಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳ (ಎನ್‌ಸಿಡಿ) ಅಪಾಯವನ್ನು ಕಡಿಮೆ ಮಾಡುತ್ತದೆ. ಮಗುವಿನ ಬುದ್ಧಿಮತ್ತೆಯನ್ನು ಸುಧಾರಿಸುತ್ತದೆ ಮತ್ತು ಲ್ಯುಕೇಮಿಯಾ(ರಕ್ತಕ್ಯಾನ್ಸರ್) ಸಂಭವವನ್ನು ಕಡಿಮೆ ಮಾಡುತ್ತದೆ’ ಎಂದು ವಿವರಿಸಿದರು.

ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಯಾದಗಿರಿ ಜಿಲ್ಲಾ ಕಾರ್ಯದರ್ಶಿ ಡಾ. ಪ್ರಶಾಂತ ಬಾಸುತ್ಕರ್ ಮಾತನಾಡಿ, ‘ನಮ್ಮ ಸಂಸ್ಥೆ ಸ್ತನ್ಯಪಾನವನ್ನು ಉತ್ತೇಜಿಸಲು ಮತ್ತು ಮಕ್ಕಳ ಆರೋಗ್ಯದಲ್ಲಿನ ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಐಎಪಿ) ರಾಷ್ಟ್ರವ್ಯಾಪಿ ‘ಐಎಪಿ ಕಿ ಬಾತ್, ಸಮುದಾಯ ಕೆ ಸಾಥ್’ ಅಭಿಯಾನ ಪ್ರಾರಂಭಿಸಿದೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಜಿಲ್ಲಾ ಅಧ್ಯಕ್ಷ ಡಾ. ಸುರೇಶ ಕುಮಾರ್, ಯಿಮ್ಸ್‌ನ ಡಾ. ಕುಮಾರ್ ಅಂಗಡಿ, ಡಾ. ಶಿವಕುಮಾರ್ ಮತ್ತು ನೋಡಲ್ ಆಫಿಸರ್ ಡಾ. ಅಲ್ತಾಫ್ ಅತ್ತರ್, ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT