ಶನಿವಾರ, ಜನವರಿ 28, 2023
20 °C
ಆಯೋಗದ ಕ್ರಮಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರ ತೀವ್ರ ಆಕ್ರೋಶ

‘ನಾಯ್ಕಲ್ ಜಿ.ಪಂ ಕ್ಷೇತ್ರ ರದ್ದು ಅವೈಜ್ಞಾನಿಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯ ವಡಗೇರಾ ತಾಲ್ಲೂಕಿನ ನಾಯ್ಕಲ್ ಜಿಲ್ಲಾ ಪಂಚಾಯಿತಿ ಕ್ಷೇತ್ರ ರದ್ದುಪಡಿಸಿ ವಡಗೇರಾದಲ್ಲಿ ಸೇರ್ಪಡೆ ಮಾಡಿರುವುದು ಅವೈಜ್ಞಾನಿಕವಾಗಿದ್ದು, ಕೂಡಲೇ ಇದನ್ನು ಕೈಬಿಟ್ಟು ಎಂದಿನಂತೆ ನಾಯ್ಕಲ್ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಮುಂದುವರಿಸಬೇಕೆಂದು ಮುಖಂಡರು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ನಾಯ್ಕಲ್ ಜಿ.ಪಂ ಕ್ಷೇತ್ರ ವ್ಯಾಪ್ತಿಯ ಕುರಕುಂದಿ, ನಾಯ್ಕಲ್, ಗುರುಸಣಗಿ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಗ್ರಾಮಸ್ಥರು, ವಿವಿಧ ಪಕ್ಷಗಳ ಮುಖಂಡರು, ಸಂಘ–ಸಂಸ್ಥೆಗಳ ಪ್ರಮುಖರು ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿ ಕ್ಷೇತ್ರ ರಚನೆ ಮಾಡಲು ಇರುವ ಬಹುತೇಕ ನಿಯಮಾವಳಿಗಳನ್ನು ಗಾಳಿಗೆ ತೂರಿ ಈ ಕ್ಷೇತ್ರವನ್ನು ರದ್ದುಪಡಿಸಿ ವಡಗೇರಾ ಕ್ಷೇತ್ರಕ್ಕೆ ಹಳ್ಳಿಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಪಂಚಾಯತ್‌ ರಾಜ್ ಸೀಮಾ ನಿರ್ಣಯ ಆಯೋಗದ ನಿಯಮಗಳ ಪ್ರಕಾರ ಜಿ.ಪಂ ಕ್ಷೇತ್ರದ ಕೇಂದ್ರ ಸ್ಥಾನವು ಹೆದ್ದಾರಿ ಇಲ್ಲವೇ ಮುಖ್ಯ ರಸ್ತೆಗೆ ಹೊಂದಿಕೊಂಡಿರಬೇಕು ಎಂಬುದನ್ನು ಗಾಳಿಗೆ ತೂರಲಾಗಿದೆ. ಈ ಹಿಂದೆ ಮೂರು ಅವಧಿಗೆ ಜಿ.ಪಂ ಚುನಾವಣೆ ನಡೆದಿದ್ದು, ನಾಯ್ಕಲ್ ಕ್ಷೇತ್ರವನ್ನು ಹಲವು ಮುಖಂಡರು ಪ್ರತಿನಿಧಿಸಿದ್ದಾರೆ ಎಂದರು.

ಈಗಾಗಲೇ ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಕೇಂದ್ರ ಸ್ಥಾನವಾಗಿದೆ. ಅಲ್ಲದೇ ನಾಯ್ಕಲ್ 13ಸಾವಿರ ಜನಸಂಖ್ಯೆ ಹೊಂದಿದೆ. ವಡಗೇರಾ ತಾಲ್ಲೂಕಿನಲ್ಲಿಯೇ ದೊಡ್ಡ ಗ್ರಾಮವಾಗಿದೆ. ಆದರೆ, ಈ ಎಲ್ಲ ಅಂಶಗಳನ್ನು ಪರಿಗಣಿಸಿಯೇ ಈ ಹಿಂದೆ ಜಿ.ಪಂ ಕ್ಷೇತ್ರ ರಚಿಸಲಾಗಿತ್ತು. ಆದರೆ, ಈ ಬಾರಿ ಈ ಎಲ್ಲ ಅಂಶಗಳನ್ನು ಕಡೆಗಣಿಸಿ ಕ್ಷೇತ್ರವನ್ನೇ ರದ್ದು ಮಾಡಿರುವುದು ಅವೈಜ್ಞಾನಿಕ ಮತ್ತು ಈ ನಿರ್ಣಯ ಕೈಗೊಂಡವರ ಬುದ್ಧಿಮತ್ತೆಯನ್ನು ಎತ್ತಿ ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮರೆಮ್ಮ, ಮರುಳಸಿದ್ದ ನಾಯ್ಕಲ್, ಭೀಮ ಆರ್ಮಿಯ ಸೈದಪ್ಪ ಕಣಜಿಕರ್, ಬಸವರಾಜ ಮೇತ್ರಿ ನಾಯ್ಕಲ್, ಮಲ್ಲಿಕಾರ್ಜುನ ಕುರಕುಂದಿ, ಖಾಜಾ ಮೈನೋದ್ದಿನ್ ಜೇಮ್ ಶೇರಿ, ಮಲ್ಲಪ್ಪ ಹತ್ತಿಕುಣಿ, ಮಲ್ಲಿಕಾರ್ಜುನ ಅನಸುಗೂರು, ಮಾಣಿಕರೆಡ್ಡಿ ಕುರಕುಂದಿ, ವಕೀಲ ಮಲ್ಲಿಕಾರ್ಜುನ ಕಣಜಿಕರ್ ನಾಯ್ಕಲ್, ಇಸ್ಮಾಯಿಲ್ ಸಾಬ ಕುರಕುಂದಾ, ಶಿವರಾಯ ನಾಟೇಕರ್, ಮರೆಪ್ಪ ಕಣಜಿಕರ್, ಚಂದ್ರಶೇಖರ ಕಣಜಿಕರ್, ಮರೆಪ್ಪ ಭಂಡಾರಿ, ಅಲ್ಲಿಸಾಬ ಮುಜಾವರ್, ಭೀಮರಾಯ ಸುಂಗಲ್ಕರ್, ಅಬ್ದುಲ್ ರಜಾಕ್ ಚಟ್ನಳ್ಳಿ, ಮಲ್ಲಪ್ಪ ಹಳಿಮನಿ, ನಾಗರಾಜ ಕಣಜಿಕರ್, ಮರಲಿಂಗಪ್ಪ ಭಂಡಾರಿ, ಅಶೋಕ ಕಣಜಿಕರ್, ಸದಾನಂದ ಬದ್ದೆಹಳ್ಳಿ, ವಿಜಯ ಮಲ್ಯ ಗೋಗಿ, ಮುಗದುಮ್ ಕುರಕುಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.