ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ: ಸಂತೆಯಲ್ಲಿ ಜಾನುವಾರುಗಳ ಮಾರಾಟ ಜೋರು

ಜಿಲ್ಲೆಯ ವಿವಿಧೆಡೆಯಿಂದ ಮಾರಾಟಕ್ಕೆ ತಂದ ರಾಸುಗಳು; ಕೃಷಿ ಚಟುವಟಿಕೆಗೆ ಮುನ್ನುಡಿ
Published 22 ಮೇ 2024, 6:32 IST
Last Updated 22 ಮೇ 2024, 6:32 IST
ಅಕ್ಷರ ಗಾತ್ರ

ಯಾದಗಿರಿ: ಒಂದೆಡೆ ಭೀಕರ ಬರ, ಮತ್ತೊಂದೆಡೆ ಈ ಬಾರಿಯ ಮುಂಗಾರು ಹಂಗಾಮಿಗೆ ರೈತರು ಸಿದ್ಧತೆಯಲ್ಲಿ ತೊಡಗಿದ್ದಾರೆ. ಬಿತ್ತನೆಗೆ ಭೂಮಿ ಹದಗೊಳಿಸಲು ರಾಸುಗಳ ಖರೀದಿಯೂ ಜೋರಾಗಿ ನಡೆದಿದೆ.

ಆಗಾಗ ಮಳೆ ಸುರಿದರೂ ಸಮರ್ಪಕ ಹಸಿರು ಮೇವು ಸಿಗದ ಕಾರಣ ರೈತರು ರಾಸುಗಳು ಮಾರಾಟ ಮಾಡುವುದು ಕಂಡು ಬರುತ್ತಿದೆ. ಮುಂಗಾರು ಹಂಗಾಮಿಗೆ ಇನ್ನೂ ಕಾಲಾವಕಾಶ ಇರುವಾಗಲೇ ರೈತರು ಜಾನುವಾರುಗಳ ಮಾರಾಟ ಮಾಡಿ ಮುಂಗಾರಿಗೆ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ.

ಮೇವಿನ ಬರ ಎದುರಾಗಿದ್ದರಿಂದ ಜಾನುವಾರುಗಳನ್ನು ಸಂರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ಸಿಕ್ಕ ಬೆಲೆಗೆ ಮಾರಾಟ ಮಾಡಿ ತುತ್ತಿನ ಚೀಲ ತುಂಬಿಸಿಕೊಳ್ಳಲು ರೈತಾಪಿ ವರ್ಗ ಮುಂದಾಗಿದೆ. ನಗರದ ಎಪಿಎಂಸಿ ಮೈದಾನದ ಆವರಣದಲ್ಲಿ ಟಂಟಂ ವಾಹನ, ಡಿಸಿಎಂ ಲಾರಿ ಸೇರಿದಂತೆ ಇನ್ನಿತರ ವಾಹನಗಳಲ್ಲಿ ರಾಸುಗಳನ್ನು ತುಂಬಿಕೊಂಡು ರೈತರು, ವ್ಯಾಪಾರಿಗಳು ಸಂತೆಗೆ ಆಗಮಿಸಿದ್ದರು.

ರೈತರ ಜೀವ ನದಿ ಕೃಷ್ಣಾ, ಭೀಮಾ ನದಿ, ಸಂಪೂರ್ಣವಾಗಿ ನೀರಿಲ್ಲದೆ ಬರಿದಾಗಿದೆ. ಜಲ ಕ್ಷಾಮ ಉಂಟಾಗಿದ್ದು, ಮೂಕ ಪ್ರಾಣಿ ಹಾಗೂ ಜಲಚರಗಳು ನೀರಿಗೆ ತತ್ವಾರ ಎದುರಿಸುವಂತಾಗಿದೆ. ಜಾನುವಾರುಗಳಿಗೆ ನೀರಿನ ದಾಹ ನೀಗಿಸಿಕೊಳ್ಳಲು ಹಾಹಾಕಾರ ಉಂಟಾಗಿದ್ದು, ನದಿ ತೀರದ ಗ್ರಾಮಸ್ಥರಿಗೆ ಸಂಕಷ್ಟ ಒದಗಿಬಂದಿದೆ. ನೀರಿಗಾಗಿ ಮೂಕ ಪ್ರಾಣಿಗಳು ಹಾಗೂ ಜಾನುವಾರು ಅಲೆದಾಟ ಶುರುವಾಗಿದೆ. ಹೀಗಾಗಿ ಅನೇಕ ಮಾಲೀಕರು ರಾಸುಗಳನ್ನು ಸಂತೆಯಲ್ಲಿ ಮಾರಾಟಕ್ಕೆ ತಂದಿರುವುದು ಕಂಡು ಬಂದಿತು.

‘ರಾಜ್ಯ ಸರ್ಕಾರ ಚುನಾವಣೆ, ಪೆನ್ ಡ್ರೈವ್ ಪ್ರಕರಣ ಸೇರಿದಂತೆ ವಿವಿಧ ವಿಷಯಗಳಲ್ಲಿ ಮಗ್ನವಾಗಿ ಅಭಿವೃದ್ಧಿ ಶೂನ್ಯವಾಗಿದೆ. ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದು 1 ವರ್ಷ ಪೂರ್ಣಗೊಂಡಿದೆ. ಗ್ರಾಮೀಣ ಭಾಗದಲ್ಲಿ ರಸ್ತೆ, ಕುಡಿವ ನೀರು, ಬರ ನಿರ್ವಹಣೆ, ಮೇವು ಕೇಂದ್ರ, ನೀರಿನ ಸೌಲಭ್ಯ ಹೀಗೆ ಎಲ್ಲವೂ ಮರೆತಿದೆ’ ಎಂದು ಗ್ರಾಮಸ್ಥರಾದ ನಾಗರಾಜ ಹಳ್ಳಿಮನೆ, ನಜೀರ್‌ ಅಹ್ಮದ್‌, ಫಕೀರ್‌ ಸಾಬ್‌ ಅಲವತ್ತುಕೊಂಡರು.

ಯಾದಗಿರಿ ನಗರದ ಎಪಿಎಂಸಿ ಮೈದಾನದಲ್ಲಿ ಮಂಗಳವಾರ ಜಾನುವಾರು ಸಂತೆಯಲ್ಲಿ ಕುರಿ ವ್ಯಾಪಾರ ನಡೆಯಿತು
ಯಾದಗಿರಿ ನಗರದ ಎಪಿಎಂಸಿ ಮೈದಾನದಲ್ಲಿ ಮಂಗಳವಾರ ಜಾನುವಾರು ಸಂತೆಯಲ್ಲಿ ಕುರಿ ವ್ಯಾಪಾರ ನಡೆಯಿತು
ಬಿತ್ತನೆ ಮಾಡಲು ಹಣ ಇಲ್ಲದ ಕಾರಣ ಕುರಿಗಳನ್ನು ‌ಮಾರಿ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ.
–ಅಯ್ಯಣ್ಣ ಅನವಾರ, ಕುರಿ‌ ಮಾಲಿಕ
ಮುಂಗಾರು ಸಮೀಪಿಸುತ್ತಿದೆ. ಅದಕ್ಕಾಗಿ ಹೊಸ ಎತ್ತುಗಳನ್ನು ಖರೀದಿ ಮಾಡಿದ್ದೇನೆ. ಈ ವರ್ಷ ಬೆಳೆ ಚೆನ್ನಾಗಿ ಬರುವ ವಿಶ್ವಾಸವಿದೆ.
–ಸುರೇಶ, ಉಳ್ಳೆಸುಗೂರು ತಾಂಡಾ ರೈತ
ಕಳೆದ ಬಾರಿ ಬೇರೆ ರಾಜ್ಯದಿಂದ ಕಳಪೆ ಮಟ್ಟದ ಹತ್ತಿ ಬೀಜಗಳು ಸರಬರಾಜು ಮಾಡಿ ರೈತರಿಗೆ ಲಕ್ಷಾಂತರ ರೂಪಾಯಿ ಹಾನಿಯಾಗಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ದೂರು ಕೊಟ್ಟರೂ ಯಾವುದೇ ಪ್ರಯೋಜನ ಆಗಿಲ್ಲ.
–ಮಲ್ಲಿಕಾರ್ಜುನರೆಡ್ಡಿ, ವಡವಡಿಗಿ ನಾಯ್ಕಲ್‌ ಗ್ರಾಮದ ಪ್ರಗತಿಪರ ರೈತ

ಪೂರ್ವ ಸಿದ್ಧತೆಗೆ ಮನವಿ

ಪ್ರಸಕ್ತ ಸಾಲಿನಲ್ಲಿ ಮುಂಗಾರು ಪೂರ್ವ ಮಳೆಯಾಗಿದ್ದು ರೈತರು ಹೊಲಗಳನ್ನು ಹದ ಮಾಡಿಕೊಂಡು ಬಿತ್ತನೆಗೆ ತಯಾರು ಮಾಡಿಕೊಂಡಿದ್ದಾರೆ. ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜ ರಸಗೊಬ್ಬರವನ್ನು ಪೂರೈಕೆ ಮಾಡಲು ಮತ್ತು ಕೃಷಿ ಇಲಾಖೆಯಿಂದ ಮಾನ್ಯತೆ ಪಡೆದ ಅದರಲ್ಲೂ ವಿಶೇಷವಾಗಿ ಹತ್ತಿ ಬೀಜಗಳನ್ನು ಸಿಗುವ ವ್ಯವಸ್ಥೆ ಕೃಷಿ ಇಲಾಖೆ ಅಧಿಕಾರಿಗಳು ಮಾಡಬೇಕು ಎನ್ನುವುದು ರೈತರ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT