ಭಾನುವಾರ, ಜೂನ್ 26, 2022
28 °C
ಮೂಲ ಸೌಲಭ್ಯ ವಂಚಿತ ಗ್ರಾಮ, ಶೌಚಾಲಯ ಸಮಸ್ಯೆ

ಸುರಪುರ: ಚಂದಲಾಪುರ ಹೆಸರಲ್ಲಷ್ಟೇ ಚಂದ

ಅಶೋಕ ಸಾಲವಾಡಗಿ Updated:

ಅಕ್ಷರ ಗಾತ್ರ : | |

Prajavani

ಸುರಪುರ: ತಾಲ್ಲೂಕು ಕೇಂದ್ರದಿಂದ 15 ಕಿ.ಮೀ ಅಂತರದಲ್ಲಿರುವ ಚಂದಲಾಪುರದ ಗ್ರಾಮಸ್ಥರು ಮೂಲ ಸೌಕರ್ಯಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.

ಒಂದು ಕಾಲದಲ್ಲಿ ಸ್ವಚ್ಛತೆಗೆ ಹೆಸರಾಗಿದ್ದ ಕಾರಣ ಈ ಊರಿಗೆ ಚಂದದ ಊರು ಚಂದಲಾಪುರ ಎಂಬ ಹೆಸರು ಬಂತು. 2 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ 300ಕ್ಕೂ ಹೆಚ್ಚು ಮನೆಗಳಿವೆ. 4 ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಇನ್ನೂ 25 ಕುಟುಂಬಗಳು ಗುಡಿಸಲಿನಲ್ಲೇ ವಾಸಿಸುತ್ತಿವೆ.

ಗ್ರಾಮ ಪ್ರವೇಶಿಸುತ್ತಿದ್ದಂತೆ ತಿಪ್ಪೆ ಗುಂಡಿಗಳದ್ದೇ ಸಾಮ್ರಾಜ್ಯ ಗೋಚರಿಸುತ್ತದೆ. ಗ್ರಾಮಸ್ಥರು ಅಲ್ಲಲ್ಲಿ ತಮ್ಮ ತಿಪ್ಪೆಗಳನ್ನು ಮಾಡಿಕೊಂಡಿದ್ದು ಅಲ್ಲಿ ಸೆಗಣಿ, ಕಸ ಹಾಕುತ್ತಾರೆ. ಅದನ್ನು ಗೊಬ್ಬರವಾಗಿ ಹೊಲಕ್ಕೆ ಬಳಸುತ್ತಾರೆ. ಗ್ರಾಮಕ್ಕೆ ಈ ತಿಪ್ಪೆಗಳೇ ಈಗ ಸಮಸ್ಯೆಗಳಾಗಿವೆ. ಅರ್ಧ ಎಕರೆ ಪ್ರದೇಶವನ್ನು ಈ ತಿಪ್ಪೆಗಳು ವ್ಯಾಪಿಸಿಕೊಂಡಿವೆ. 60 ರಿಂದ 70 ತಿಪ್ಪೆಗಳಿವೆ.

ಮಳೆ ಬಂದ ಕಾರಣ ಈ ತಿಪ್ಪೆಗಳ ಆಜುಬಾಜು ನೀರು ನಿಂತಿದೆ. ಸೊಳ್ಳೆಗಳ ಕಾಟ ಅಧಿಕವಾಗಿದೆ. ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಗ್ರಾಮದ ನೀರೆಲ್ಲ ಈ ತಿಪ್ಪೆಗಳ ಮಧ್ಯೆ ಸಂಗ್ರಹವಾಗಿದೆ.

ಈ ತಿಪ್ಪೆಗಳ ಮಧ್ಯೆಯೇ ಸಾರ್ವಜನಿಕ ಶೌಚಾಲಯ ಇದೆ. ಶೌಚಾಲಯ ಕಟ್ಟಡ ಕೆಲಸ ಅರ್ಧಕ್ಕೆ ನಿಂತಿದ್ದು ಮಹಿಳೆಯರಿಗೆ ಬಯಲು ಶೌಚ ಅನಿವಾರ್ಯ ಎಂಬಂತಾಗಿದೆ. ರಾತ್ರಿ ಸಮಯದಲ್ಲಿ ಅಥವಾ ಮುಳ್ಳು ಕಂಟೆಗಳ ಮರೆಯಲ್ಲಿ ಶೌಚಕ್ಕೆ ಹೋಗುವ ಅನಿವಾರ್ಯತೆ ಇದೆ ಎಂದು ಗ್ರಾಮಸ್ಥರು ತಿಳಿಸುತ್ತಾರೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಹಳೆಯದಾ ಗಿರುವುದರಿಂದ ಅದನ್ನು ಭಾಗಶಃ ನೆಲಸಮ ಮಾಡಿದ್ದಾರೆ. ಈಗ ಎರಡೇ ಕೋಣೆಗಳು ಉಳಿದಿವೆ. 1 ರಿಂದ 7 ನೇ ತರಗತಿವರೆಗೆ ಇರುವ ಈ ಶಾಲೆಯಲ್ಲಿ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಶಿಕ್ಷಕರ ಕೊರತೆ ಇದೆ.

ಉಪ ಪಶು ಚಿಕಿತ್ಸಾ ಕೇಂದ್ರ ಕಟ್ಟಲಾಗಿತ್ತು. ಉದ್ಘಾಟನೆ ಭಾಗ್ಯ ದೊರೆಯಲಿಲ್ಲ. ಈ ಕಟ್ಟಡ ಈಗ ಬಿದ್ದು ಹೋಗಿದೆ. ರೈತರು ತಮ್ಮ ಜಾನುವಾರುಗಳನ್ನು ತೆಗೆದುಕೊಂಡು 5 ಕಿ.ಮೀ ದೂರದ ಸೂಗೂರಿಗೆ ಹೋಗಬೇಕು. ಕೊರೊನಾ ಕಾರಣ ಕಳೆದ 3 ತಿಂಗಳಿಂದ ಗ್ರಾಮಕ್ಕೆ ಬಸ್ ಬಂದಿಲ್ಲ. ಖಾಸಗಿ ವಾಹನಗಳನ್ನೇ ಆಶ್ರಯಿಸಬೇಕಿದೆ.

ಸಿ.ಸಿ. ರಸ್ತೆ ಸಮರ್ಪಕವಾಗಿಲ್ಲ. ಚರಂಡಿ ಇಲ್ಲವೇ ಇಲ್ಲ. ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನಮ್ಮ ಗ್ರಾಮವನ್ನು ನಿರ್ಲಕ್ಷಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.