ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆನ್‍ಲೈನ್ ಖರೀದಿ ಮುನ್ನ ವೆಬ್‍ಸೈಟ್ ನೈಜತೆ ಪರಿಶೀಲಿಸಿ’

ಸೈಬರ್ ಅಪರಾಧಗಳ ಜಾಗೃತಿ ಕಾರ್ಯಕ್ರಮ
Last Updated 18 ಫೆಬ್ರುವರಿ 2020, 16:14 IST
ಅಕ್ಷರ ಗಾತ್ರ

ಯಾದಗಿರಿ: ಅಗತ್ಯವಿರುವ ವಸ್ತುಗಳನ್ನು ಆನ್‍ಲೈನ್ ಮೂಲಕ ಖರೀದಿಸುವಾಗ ವೆಬ್‍ಸೈಟ್‍ಗಳ ನೈಜತೆಯ ಬಗ್ಗೆ ಪರಿಶೀಲಿಸಿ ಖಚಿತಪಡಿಸಿಕೊಂಡು ವ್ಯವಹಾರ ಮಾಡಬೇಕು ಎಂದು ಸುರಪುರ ಡಿಎಸ್‍ಪಿ ವೆಂಕಟೇಶ್ ಉಗಿಬಂಡಿ ಸಲಹೆ ನೀಡಿದರು.

ನಗರದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪೊಲೀಸ್ ಹಾಗೂ ಎಸ್‍ಬಿಐ ಬ್ಯಾಂಕ್ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸೈಬರ್ ಅಪರಾಧಗಳ ಜಾಗೃತಿ ಕಾರ್ಯಕ್ರಮದಲ್ಲಿ ‘ಸಾಮಾಜಿಕ ಜಾಲತಾಣಗಳಿಂದಾಗುವ ದುರುಪಯೋಗ’ ಎಂಬ ಶೀರ್ಷಿಕೆ ಅಡಿ ಕಾನೂನಿನ ಕ್ರಮಗಳ ಕುರಿತು ವಿವರಿಸಿದರು.

ಸಾರ್ವಜನಿಕರು ಅಥವಾ ಗ್ರಾಹಕರು ತಮ್ಮ ಎಟಿಎಂ ಕಾರ್ಡ್‍ಗಳನ್ನು ಅಪರಿಚಿತ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ಕೊಡಬಾರದು. ಯಾವುದೇ ಕಾರಣಕ್ಕೂ ಫೋನ್ ಕರೆ ಮೂಲಕ ಓಟಿಪಿ ಸಂಖ್ಯೆಗಳನ್ನುಹಂಚಿಕೊಳ್ಳಬಾರದು. ಒಂದು ವೇಳೆ ವಂಚನೆ ಬಗ್ಗೆ ಅನುಮಾನ ಇದ್ದಲ್ಲಿ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ, ನಿಮ್ಮ ಅಕೌಂಟನ್ನು ಬ್ಲಾಕ್ ಮಾಡಿಸಿ, ಸಂಭವಿಸಬಹುದಾದ ಹೆಚ್ಚಿನ ನಷ್ಟ ತಡೆಯಬಹುದು ಎಂದು ಹೇಳಿದರು.

ಎಸ್‍ಬಿಐ ಪ್ರಾದೇಶಿಕ ವ್ಯವಸ್ಥಾಪಕ ರಾಮಕೃಷ್ಣ ಶಣೈ ಮಾತನಾಡಿ, ಎಟಿಎಂ ಕಾರ್ಡ್ ಹಾಗೂ ಬ್ಯಾಂಕ್ ಖಾತೆಗಳು ಬ್ಲಾಕ್ ಆಗಿದೆ ಎಂಬುದಾಗಿ ಎಲ್‌ಐಸಿ ಏಜೆಂಟ್ ಅಥವಾ ಬ್ಯಾಂಕ್ ಪ್ರತಿನಿಧಿಗಳೆಂದು ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಒಟಿಪಿ ಪಡೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಇಂತಹ ಅಪರಿಚಿತ ಕರೆಗಳನ್ನು ಯಾವುದೇ ಕಾರಣಕ್ಕೂ ನಂಬಬಾರದು. ಎಟಿಎಂ ಕಾರ್ಡ್ ಬಳಕೆ ಮಾಡಲು ಗೊತ್ತಿಲ್ಲದಿದ್ದಾಗ ಅಪರಿಚಿತ ವ್ಯಕ್ತಿಗಳ ಕೈಯಲ್ಲಿ ಎಟಿಎಂಕಾರ್ಡ್ ಕೊಟ್ಟರೆ ಅವರು ನಿಮ್ಮ ಗಮನಕ್ಕೆ ಬಾರದಂತೆ ಅದನ್ನು ಕ್ಲೋನಿಂಗ್ ಮಾಡುವ, ಎಟಿಎಂ ಕಾರ್ಡನ್ನೇ ಬದಲಾಯಿಸುವ ಸಾಧ್ಯತೆಗಳಿರುತ್ತವೆ ಎಂದು ತಿಳಿಸಿದರು.

ಬ್ಯಾಂಕ್ ಖಾತೆ ಮಾಹಿತಿಗಳನ್ನು ಹೊಂದಿದ ಎಸ್‌ಎಂಎಸ್, ವಾಟ್ಸ್‌ಆ್ಯಪ್, ಇ-ಮೇಲ್ ಸಂದೇಶಗಳ ಲಿಂಕ್‍ಗಳನ್ನು ಕ್ಲಿಕ್ ಮಾಡಬಾರದು. ಎಸ್‌ಎಂಎಸ್, ವಾಟ್ಸ್‍ಆ್ಯಪ್, ಇ-ಮೇಲ್ ಮುಖಾಂತರ ನಿಮಗೆ ಲಾಟರಿ ಹತ್ತಿದೆ ಎಂದು ಸಂದೇಶಗಳು ಬಂದಾಗ ಯಾವುದೇ ಕಾರಣಕ್ಕೂ ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನೀಡಬಾರದು ಎಂದು ಎಚ್ಚರಿಸಿದರು.

ಎಸ್‍ಬಿಐ ಬೆಂಗಳೂರು ಐಟಿಎಸ್ ವಿಭಾಗದ ಮುಖ್ಯ ವ್ಯವಸ್ಥಾಪಕ ರವಿ ಕುಸಬಿಆನ್‍ಲೈನ್ ಅಪರಾಧ ವಿಧಗಳು ಹಾಗೂ ಸೈಬರ್ ಅಪರಾಧಗಳನ್ನು ತಡೆಗಟ್ಟುವ ವಿಧಾನಗಳನ್ನು ಪವರ್ ಪಾಯಿಂಟ್ ಪ್ರೆಜೆಂಟೇಶನ್ ಮೂಲಕ ಸರಳವಾಗಿ ಹಾಗೂ ಪರಿಣಾಮಕಾರಿಯಾಗಿ ವಿವರಿಸಿ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಿದರು.

ಯಾದಗಿರಿ ಡಿಎಸ್‍ಪಿ ಯು.ಶರಣಪ್ಪ ಅಧ್ಯಕ್ಷತೆ ವಹಿಸಿದ್ದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಿ.ಎ.ಕೃಷ್ಣ ಇದ್ದರು.

ಯಾದಗಿರಿ ಸುತ್ತಮುತ್ತಲಿನ ಗ್ರಾಮಸ್ಥರು, ಸಾರ್ವಜನಿಕರು, ವಿವಿಧ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ನಿವೃತ್ತ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿಯವರು, ಹಿರಿಯ ನಾಗರಿಕರು ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ದೌಲತ್ ಎನ್.ಕೆ., ಸ್ವಾಗತಿಸಿದರು. ಸಂತೋಷ ಜಯಕರ ನಿರೂಪಿಸಿದರು. ಗಿರೀಶ್ ಪಾಟೀಲ ವಂದಿಸಿದರು.

***

ಅವಹೇಳನಕಾರಿ, ಪ್ರಚೋದನಕಾರಿ ಅಥವಾ ಇನ್ನೊಬ್ಬರಿಗೆ ಮಾನಹಾನಿಯಾಗುವಂತಹ ಪೋಸ್ಟ್‌ಗಳನ್ನು ಹಾಕಿ ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡಿಕೊಳ್ಳಬಾರದು
-ವೆಂಕಟೇಶ್ ಉಗಿಬಂಡಿ,ಸುರಪುರ ಡಿಎಸ್‍ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT