ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಿಂದ ಬಾಲ್ಯವಿವಾಹ ತಡೆ

Last Updated 15 ಜನವರಿ 2020, 11:20 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲಾ ಕೇಂದ್ರವಾದ ಯಾದಗಿರಿಯ ಡಾ.ಬಿ.ಆರ್.ಅಂಬೇಡ್ಕರ್ ನಗರದಲ್ಲಿ ಮಂಗಳವಾರ ನಡೆಯುತ್ತಿದ್ದ ಬಾಲ್ಯವಿವಾಹವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಕಾರ್ಮಿಕ ಇಲಾಖೆ, ಪೊಲೀಸ್ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಅನಿರೀಕ್ಷಿತ ದಾಳಿ ನಡೆಸಿ ತಡೆ ಹಿಡಿದಿದ್ದಾರೆ.

ಡಾ.ಬಿ.ಆರ್. ಅಂಬೇಡ್ಕರ್ ನಗರದಲ್ಲಿ ಕೆಲವೇ ಗಂಟೆಗಳಲ್ಲಿ ಬಾಲ್ಯವಿವಾಹ ನಡೆಯುತ್ತಿರುವ ಬಗ್ಗೆ ಮಕ್ಕಳ ಸಹಾಯವಾಣಿ-1098 ಸಂಖ್ಯೆಗೆ ಕರೆ ಬಂದಿದೆ. ಮಕ್ಕಳ ಸಹಾಯವಾಣಿ ಕರೆಯ ಅನುಸಾರ ತಕ್ಷಣ ಕಾರ್ಯಪ್ರವೃತ್ತರಾದ ವಿವಿಧ ಇಲಾಖೆಗಳ ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ತಂಡ, ಡಾ.ಬಿ.ಆರ್. ಅಂಬೇಡ್ಕರ್ ನಗರದ ವೆಂಕಟರಮಣ ದೇವಸ್ಥಾನದಲ್ಲಿ ಬಾಲ್ಯ ವಿವಾಹ ನಡೆಯುವ ಕುರಿತು ಮಾಹಿತಿಯನ್ನು ಕಲೆ ಹಾಕಿದೆ. ಖಚಿತ ಮಾಹಿತಿ ಮೇರೆಗೆ ಅನಿರೀಕ್ಷಿತ ದಾಳಿ ನಡೆಸಿದ ಅಧಿಕಾರಿಗಳು, ಪೋಷಕರಿಂದ ಮತ್ತು ವಧು-ವರರಿಂದ ಸಂಪೂರ್ಣ ಮಾಹಿತಿಯನ್ನು ಪಡೆದರು.‌

ಸರ್ಕಾರದ ನಿಯಮದಂತೆ ವಿವಾಹವಾಗಲು ವರನಿಗೆ 21 ವರ್ಷ ಮತ್ತು ವಧುವಿಗೆ 18 ವರ್ಷ ತುಂಬಿರಬೇಕು. ಆದರೆ, ವಿವಾಹ ಆಗುತ್ತಿದ್ದ ಹುಡುಗನಿಗೆ ಕೇವಲ 17 ವರ್ಷ ಮತ್ತು ಬಾಲಕಿಗೆ ಅಂದಾಜು 14 ವಯಸ್ಸಿತ್ತು. ಅವರ ದಾಖಲಾತಿಗಳ ಪ್ರಕಾರ ವಧು-ವರರಿಬ್ಬರಿಗೆ ವಿವಾಹ ಮಾಡುವ ವಯಸ್ಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೋಷಕರಿಗೆ, ಸಂಬಂಧಿಕರಿಗೆ, ಸ್ಥಳೀಯರಿಗೆ ಮತ್ತು ವಧು-ವರರಿಗೆ ಬಾಲ್ಯ ವಿವಾಹ ನಿಷೇಧ, ಬಾಲಕಾರ್ಮಿಕ ಪದ್ಧತಿ ನಿಷೇಧ, ಸಂಕಷ್ಟದಲ್ಲಿರುವ ಮಕ್ಕಳ ರಕ್ಕಣೆ ಮತ್ತು ಪೋಷಣೆ ಕುರಿತು ಅರಿವು ಮೂಡಿಸಿ ಮದುವೆಯನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು. ನಂತರ ಪೋಷಕರು ಮತ್ತು ಸಂಬಂಧಿಕರಿಗೆ ತಿಳಿಹೇಳಿ ವಧು-ವರರನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ, ನಡೆದ ವಿಷಯವನ್ನು ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರಿಗೆ ತಿಳಿಸಿದರು.

ಬಾಲ್ಯವಿವಾಹಕ್ಕೆ ಒಳಗಾಗುತ್ತಿದ್ದ ಬಾಲಕಿಗೆ ಬಾಲಮಂದಿರದಲ್ಲಿ ರಕ್ಷಣೆ ನೀಡುವುದರ ಜೊತೆಗೆ ಉತ್ತಮ ಶಿಕ್ಷಣ, ವಸತಿ, ಊಟ ಮತ್ತು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕಲ್ಪಿಸುವ ವ್ಯವಸ್ಥೆ ಮಾಡಲಾಯಿತು. ವಯಸ್ಸಿನ ದೃಢೀಕರಣ ಮಾಡಿಸುವುದರ ಜೊತೆಗೆ ಬಾಲಕಿಗೆ 18 ವರ್ಷ ಮೀರುವವರೆಗೂ ವಸತಿ ವ್ಯವಸ್ಥೆ ಕಲ್ಪಿಸಿ, ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಪತ್ರದ ಮೂಲಕ ಅಧಿಕಾರಿಗಳ ತಂಡ ವರದಿ ಮಾಡಿದೆ.

ಬಾಲಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ರಘುವೀರ ಸಿಂಗ್ ಠಾಕೂರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಧಾ ಎಚ್.ಚನ್ನಕ್ಕಿ, ಮೇಲ್ವಿಚಾರಕಿ ಶರಣಮ್ಮ, ಡಿಸಿಪಿಯು ಘಟಕದ ಸಿಬ್ಬಂದಿ ಗೋವಿಂದ್, ಮಕ್ಕಳ ಸಹಾಯವಾಣಿ ಸಿಬ್ಬಂದಿ ಮಲ್ಲಪ್ಪ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ದಾಳಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT