ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ನಿಂದ ಗುಲಾಮಗಿರಿಗೆ ತಳ್ಳುವ ಯತ್ನ: ಸಿ.ಟಿ.ರವಿ

ಈಶಾನ್ಯ ವಲಯ ಪದವೀಧರರ ಕ್ಷೇತ್ರದ ಬಿಜೆ‍ಪಿ ಅಭ್ಯರ್ಥಿ ಪರ ಸಭೆ
Published 29 ಮೇ 2024, 16:18 IST
Last Updated 29 ಮೇ 2024, 16:18 IST
ಅಕ್ಷರ ಗಾತ್ರ

ಯಾದಗಿರಿ: ಕಾಂಗ್ರೆಸ್ ಪಕ್ಷ ಉಚಿತಗಳನ್ನು ಕೊಟ್ಟು, ಜನರನ್ನು ಪರಾವಲಂಬಿಗಳನ್ನಾಗಿ ಮಾಡಿ ನಂತರ ಗುಲಾಮರನ್ನು ಮಾಡುವ ಮೂಲಕ ದೇಶವನ್ನು ದೇಶ ದರಿದ್ರತನಕ್ಕೆ ದೂಡುವ ಮೂಲಕ ಆಡಳಿತ ನಡೆಸಬೇಕೆಂಬ ನೀಚ ಮನಸ್ಥಿತಿ ಹೊಂದಿದೆ’ ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಜರುಗಿದ ಈಶಾನ್ಯ ವಲಯ ಪದವೀಧರರ ಕ್ಷೇತ್ರದ ಬಿಜೆ‍ಪಿ ಅಭ್ಯರ್ಥಿ ಅಮರನಾಥ ಪಾಟೀಲ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ತತ್ವದೊಂದಿಗೆ ಸಾಗಿದರೆ ದೇಶ ಮತ್ತೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

ದೇಶವನ್ನು ವೇಗವಾಗಿ ಮೇಲೆತ್ತುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಮುಂಬರುವ ಅವಧಿಯಲ್ಲಿ 3ನೇ ಸ್ಥಾನಕ್ಕೆ ಕೊಂಡೊಯ್ಯಲಿದ್ದಾರೆ. ಸ್ವಾತಂತ್ರ್ಯ ಬಂದು 100ನೇ ವರ್ಷ ಆಗುವ ವೇಳೆಗೆ ವಿಶ್ವಕ್ಕೆ ಭಾರತ ನಂಬರ್‌ 1ನೇ ಸ್ಥಾನದಲ್ಲಿ ತರುವ ಸಂಕಲ್ಪ ಮಾಡಿದ್ದಾರೆ. ಅಲ್ಲದೇ ಆ ನಿಟ್ಟಿನಲ್ಲಿ ರೂಪುರೇಷೆ ಹಾಕಿಕೊಂಡು ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ದೇಶದ ಜನ ಕೈಜೋಡಿಸಬೇಕಿದೆ ಎಂದು ಹೇಳಿದರು.

ಪ್ರಸಕ್ತ ದೇಶದಲ್ಲಿ ನರೇಂದ್ರ ಮೋದಿ ಅವರ ಆಡಳಿತ ಬಂದ ಮೇಲೆ 10 ವರ್ಷದಲ್ಲಿ ಜಗತ್ತಿನ ಆರ್ಥಿಕತೆಯಲ್ಲಿ 11 ನೇ ಸ್ಥಾನದಲ್ಲಿದ್ದ ದೇಶ 5ನೇ ಶಕ್ತಿ ಆಗಿ ಮೇಲಕ್ಕೇರಿದೆ. ಇದು ದೇಶದ ಆಡಳಿತ ಸರಿಯಾದ ದಾರಿಯಲ್ಲಿ ಸಾಗುತ್ತಿರುವುದರ ಸಂಕೇತವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಒಂದು ಹೆಜ್ಜೆ ಮುಂದೆ ಬಂದಾಗ ದೇಶದ 140 ಕೋಟಿ ಹೆಜ್ಜೆಗಳು ಮುಂದಡಿ ಇಟ್ಟಾಗ ದೇಶ ಬಲಿಷ್ಠವಾಗುತ್ತದೆ ಎಂದು ಹೇಳಿದರು.

ಕಳೆದ ಒಂದು ವರ್ಷದಲ್ಲಿ ಕಾಂಗ್ರೆಸ್ ಏನು ಕೊಟ್ಟಿದೆ ಎಂದು ಕೇಳಿದ ಅವರು, ಕೇವಲ ಗ್ಯಾರೆಂಟಿ ಮಾತನ್ನೇ ಆಡುತ್ತಿದ್ದಾರೆ. ಅದನ್ನು ಹೊರತು ಪಡಿಸಿ ಏನು ಕೊಡಲಾಗಿಲ್ಲ. ಬರಿ ಅಪರಾಧ ಹೆಚ್ಚಳ, ಮಾಡಿದ್ದೇ ಇವರ ಸಾಧನೆ. ಸಾಲದ್ದಕ್ಕೆ ಡಿ.ಕೆ.ಶಿವಕುಮಾರ್‌ ಬ್ರದರ್ಸ್‌ ಬಾರಾಖೂನ್ ಮಾಫ್ ಹೋತಾಹೈ ಹಮಾರ ಸರ್ಕಾರ ಹೈ ಎಂಬ ಉದ್ಧಟತನ ಬೆಳೆಸುವಲ್ಲಿ ಈ ಸರ್ಕಾರ ಕೆಲಸ ಮಾಡುತ್ತಾ ರಾಜ್ಯದಲ್ಲಿ ಜನರಿಗೆ ಭಯದ ವಾತಾವರಣ ನಿರ್ಮಿಸಿದೆ ಎಂದು ದೂರಿದರು.

ಶಿಕ್ಷಕರ ಹಿತ, ಮಕ್ಕಳ ಬಗ್ಗೆ ಕಾಳಜಿ ಇಲ್ಲ. ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ. ಕೇಂದ್ರ ಸರ್ಕಾರ ದೇಶದ ಶಿಕ್ಷಣ ವ್ಯವಸ್ಥೆ ಸಬಲೀಕರಣಕ್ಕಾಗಿ ತಂದ ಎನ್‌ಇಪಿಯನ್ನು ಬದಲಿಸಿ ಎಸ್‌ಇಪಿ ಮಾಡಿ, 7,8,9 ತರಗತಿಗೂ ಬೋರ್ಡ್ ಪರೀಕ್ಷೆ ತರುವ ತುಘಲಕ್ ಮಾದರಿ ಆಡಳಿತ ಮಾಡಲು ಹೊರಟು ಶಿಕ್ಷಣ ಕ್ಷೇತ್ರದಲ್ಲೂ ಚೆಲ್ಲಾಟ ಆಡುತ್ತಿದ್ದಾರೆ. ಇದರಿಂದ ಕೊನೆಗೆ ಜನರಿಗೆ ತೊಂದರೆಯಾಗುತ್ತಿದೆ ಎಂದರು.

ಇಂದಿಗೂ ಕಾಂಗ್ರೆಸ್‌ನ ಶಿಕ್ಷಣ ಪಾಲಿಸಿಯು ಮತ್ತದೇ ಹಳೆ ದಾರಿಯಲ್ಲಿ ಸಾಗುತ್ತಿದೆ ಎನ್ನಲು ಎನ್‌ಇಪಿ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದೇ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಅಮೀನರಡ್ಡಿ ಯಾಳಗಿ ಮಾತನಾಡಿ, ಈ ಬಾರಿ ಮತ್ತೆ ಅಮರನಾಥ ಪಾಟೀಲರು ಗೆಲ್ಲಲು ಎಲ್ಲ ಕಾರ್ಯಕರ್ತರು ಶ್ರಮಿಸಬೇಕು. ಪದವೀಧರರಿಗೆ ತಲುಪಿ ಅವರಿಂದ ಮತಹಾಕಿಸಲು ಮುಂದಾಗಬೇಕು ಎಂದು ಹೇಳಿದರು.

ಯಾದಗಿರಿ ಮತಕ್ಷೇತ್ರ ಸಂಚಾಲಕ ಮಹೇಶರಡ್ಡಿ ಮುದ್ನಾಳ, ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಸುರೇಶ ಸಜ್ಜನ್ ಮಾತನಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಈಶ್ವರಸಿಂಗ್ ಠಾಕೂರು, ಲಲಿತಾ ಅನಪುರ, ಖಂಡಪ್ಪ ದಾಸನ, ವೀಣಾ ಮೋದಿ, ಲಿಂಗಪ್ಪ ಹತ್ತಿಮನಿ, ರಾಜಶೇಖರ ಕಾಡಂನೋರ, ಮಲ್ಲಿಕಾರ್ಜುನ ಹೊನಗೇರಾ ಭಾಗವಹಿಸಿದ್ದರು.

ರಮೇಶ ದೊಡಮನಿ ನಿರೂಪಿಸಿದರು. ಹಣಮಂತ ಇಟಗಿ ಸ್ವಾಗತಿಸಿದರು. ಪರುಶುರಾಮ ಕುರಕುಂದಿ ವಂದಿಸಿದರು.

ಈಶಾನ್ಯ ಕ್ಷೇತ್ರದಲ್ಲಿ ಬಿಜೆಪಿ ಜಯ ನಿಶ್ಚಿತ. ಚಂದ್ರಶೇಖರ ಪಾಟೀಲ ವಿರುದ್ದ ಕಲ್ಯಾಣ ಕರ್ನಾಟಕದಲ್ಲಿನ ಮತದಾರರ ಆಕ್ರೋಶ ವ್ಯಕ್ತವಾಗಿದೆ
-ಸುರೇಶ ಸಜ್ಜನ್, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT