ಶನಿವಾರ, ಜನವರಿ 28, 2023
20 °C
ರಸ್ತೆ ಸುಧಾರಣೆ ಕಾಮಗಾರಿಗೆ ಅಡಿಗಲ್ಲು

ರಸ್ತೆಗಳ ನಿರ್ಮಾಣ ಅಭಿವೃದ್ಧಿಗೆ ಪೂರಕ; ಶಾಸಕ ಮುದ್ನಾಳ ಅಭಿಪ್ರಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಮತಕ್ಷೇತ್ರದ ಗ್ರಾಮೀಣ ಭಾಗಗಳನ್ನು ಸಂಪರ್ಕಿಸುವ ರಸ್ತೆಗಳ ನಿರ್ಮಾಣ ಮಾಡಲಾಗಿದ್ದು, ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಅಭಿಪ್ರಾಯಪಟ್ಟರು.

ಮತಕ್ಷೇತ್ರದ ಶಹಾಪುರ ತಾಲ್ಲೂಕಿನ ಗುಂಡಳ್ಳಿಯಿಂದ ಚಟ್ನಳ್ಳಿ –ಕರಣಗಿ ಗ್ರಾಮಗಳನ್ನು ಸಂಪರ್ಕಿಸುವ ಲೋಕೋಪಯೊಗಿ ಇಲಾಖೆಯ 2022-23 ನೇ ಸಾಲಿನ ಕೆಕೆಆರ್‌ಡಿಬಿ ಮೈಕ್ರೋ ಯೋಜನೆ ಅಡಿಯಲ್ಲಿ ಅಂದಾಜು ₹4.50 ಕೋಟಿ ರಸ್ತೆ ಸುಧಾರಣೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಚಟ್ನಳ್ಳಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಈ ಹಿಂದೆ ಚುನಾವಣೆ ಸಮಯದಲ್ಲಿ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಇನ್ನುಳಿದ ಕೆಲಸಗಳನ್ನು ಆದ್ಯತೆ ಮೇರೆಗೆ ತೆಗೆದುಕೊಂಡು ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುತ್ತೇನೆ ಎಂದು ತಿಳಿಸಿದರು.

ಕಾಂಗ್ರೆಸ್-ಜೆಡಿಎಸ್ ಅಧಿಕಾರಿವಧಿಯಲ್ಲಿ ಜಿಲ್ಲೆಗೆ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅನುಮತಿ ನೀಡಲಿಲ್ಲ. ಇದರಿಂದ ನಾನು ನಿಮ್ಮೊಂದಿಗೆ ಹೋರಾಟ ಮಾಡಿ, ನಂತರದ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ, ಸಮಸ್ಯೆ ವಿವರಿಸಿದೆ. ಕೂಡಲೇ ಅವರು ಮಂಜೂರಾತಿ ನೀಡಿದರು ಎಂದರು.

ಮಳೆಗಾಲ ಸಮಯದಲ್ಲಿ ಭೀಮಾನದಿ ಪ್ರವಾಹದ ಅಪಾರ ಪ್ರಮಾಣ ನೀರು ವ್ಯರ್ಥವಾಗಿ ನೆರೆಯ ತೆಲಂಗಾಣ ರಾಜ್ಯಕ್ಕೆ ಹರಿದು ಹೋಗುತ್ತಿರುವುದನ್ನು ಗಮನಿಸಿದ್ದೇವೆ. ನಾನು ಈಗಾಗಲೇ ನೀರು ಸದ್ಬಳಕೆ ನಮ್ಮ ರೈತರಿಗೆ ಸಿಗಲಿ ಎಂಬ ಮಹತ್ವದ ಸಂಕಲ್ಪದೊಂದಿಗೆ ಠಾಣಾಗುಂದಿ-ನಾಲಡಗಿ ಗ್ರಾಮದ ಧ್ಯೆ ಬ್ರಿಡ್ಜ್ ಕಂ ಬ್ಯಾರೇಜ್ ಹಾಗೂ ಭೀಮಾ ಏತ ನೀರಾವರಿ ಯೋಜನೆಯ ಕಾಮಗಾರಿ ಕ್ರಿಯಾ ಯೋಜನೆಯನ್ನು ಅಧಿಕಾರಿಗಳಿಂದ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಿ, ಮಂಜೂರಾತಿಗೆ ಪ್ರಯತ್ನ ಮುಂದುವರೆದಿದೆ. ಆ ಕಾಮಗಾರಿ ಅನುಷ್ಠಾನಗೊಂಡರೇ ರೈತರ ಜಮೀನು ನೀರಾವರಿ ಕ್ಷೇತ್ರವಾಗಿ ಬದಲಾವಣೆಯಾಗುವ ಜೊತೆಗೆ ಹಲವಾರು ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಸಲು ಸಹಕಾರಿಯಾಗುತ್ತದೆ ಎಂದರು.

ಬಿಜೆಪಿ ಮುಖಂಡರಾದ ಖಂಡಪ್ಪ ದಾಸನ್, ಸಿದ್ದಣಗೌಡ ಕಾಡಂನೋರ ಹಾಗೂ ಪರಶುರಾಮ ಕುರಕುಂದಿ ಮಾತನಾಡಿದರು.

ಸಮಾರಂಭದಲ್ಲಿ ಲೋಕೋಪಯೊಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸಿದ್ಲಿಂಗಪ್ಪ ಐರೆಡ್ಡಿ, ಶಹಾಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ, ಈರಣ್ಣ ಸಾಹು ತಡಬಿಡಿ, ಹಣಮಂತ ರಾಯನೋರ, ಮಲ್ಲಣಗೌಡ ಪಾಟೀಲ ಹತ್ತಿಕುಣಿ, ವಕೀಲರೆಡ್ಡಿ ಚಟ್ನಳ್ಳಿ, ಶರಣಪ್ಪಗೌಡ ಮೆದರಗೋಳ, ಭೀಮರೆಡ್ಡಿ ಚಟ್ನಳ್ಳಿ, ಸಿದ್ದಪ್ಪಗೌಡ ಕಾಳೆಬೆಳಗುಂದಿ, ಅಮೀನರೆಡ್ಡಿ, ವಿಶ್ವನಾಥರೆಡ್ಡಿ ಸಗರ, ನಾಗಶೆಟ್ಟಿ ಅಂಗಡಿ ಇದ್ದರು.

ಕುರಕುಂದಿ, ಕಾಡಂಗೇರಾ, ಗುಂಡಳ್ಳಿ ತಾಂಡಾ ಕರಣಿಗಿ, ಚಟ್ನಳ್ಳಿ, ಖಾನಾಪುರ, ಗ್ರಾಮಗಳ ಜನರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.