ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಮುಂದುವರಿದ ಲಾಕ್‌ಡೌನ್‌

ಅನಾವಶ್ಯಕವಾಗಿ ತಿರುಗಾಡುವವರಿಗೆ ಲಾಠಿ ಏಟು, ತರಕಾರಿಗಾಗಿ 7 ಕಡೆ ವ್ಯವಸ್ಥೆ
Last Updated 27 ಮಾರ್ಚ್ 2020, 8:58 IST
ಅಕ್ಷರ ಗಾತ್ರ

ಯಾದಗಿರಿ: ಕೊರೊನಾ ವೈರಸ್‌ ಭೀತಿಯಿಂದಾಗಿ ಸರ್ಕಾರ ಹೊರಡಿಸಿದ್ದ ಲಾಕ್‌ ಡೌನ್‌ ಜಿಲ್ಲೆಯಾದ್ಯಂತ ಮುಂದುವರಿದಿದೆ. ಆದೇಶ ಉಲ್ಲಂಘಿಸಿ ಹೊರಗೆ ಬಂದವರಿಗೆ ಪೊಲೀಸರಿಂದ ಲಾಠಿ ಏಟು ಬೀಳುತ್ತಿವೆ. ಇದರಿಂದ ಜನತೆ ಹೊರಬಂದರೆ ಪೊಲೀಸರಿಂದ ಒದೆ ತಿನ್ನುತ್ತೇವೆ ಎಂದು ಮನೆಯಲ್ಲಿ ಕುಳಿತುಕೊಳ್ಳುತ್ತಿದ್ದಾರೆ.

ನಗರದ ಗಾಂಧಿಚೌಕ್, ನೇತಾಜಿ ವೃತ್ತ, ಗಂಜ್‌ ಪ್ರದೇಶ, ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಮುಖ್ಯ ಮಾರುಕಟ್ಟೆ, ಪ್ರಮುಖ ಮುಖ್ಯ ರಸ್ತೆಗಳಲ್ಲಿ ಜನರಿಲ್ಲದೇ ಬಿಕೋ ಎನ್ನುತ್ತಿತ್ತು. ಬೆಳಿಗ್ಗೆಯಿಂದಲೇ ಗಸ್ತು ತಿರುಗುತ್ತಿದ್ದ ಪೊಲೀಸರು ಮನೆಯಿಂದ ಹೊರ ಬಂದವರಿಗೆ ಲಾಠಿ ರುಚಿ ತೋರಿಸುತ್ತಿದ್ದರು.

ಅಗತ್ಯ ವಸ್ತುಗಳು ಖರೀದಿಸಲು ಬೈಕ್ ಮೇಲೆ ಆಗಮಿಸಿದ ಜನರಿಗೆ ಪೊಲೀಸರು ಯಾವ ಕಾರಣ ಕೇಳದೇ ಲಾಠಿ ಇಂದ ಹೊಡೆಯುವುದು ಎಲ್ಲರಲ್ಲೂ ಆತಂಕ ಉಂಟುಮಾಡಿದೆ. ಮನೆ ಬಿಟ್ಟು ಹೊರಗೆ ಬಂದರೆ ಪೊಲೀಸರು ಹೊಡೆಯುತ್ತಾರೆ ಎನ್ನುವುದು ಜನತೆಗೆ ಮನದಟ್ಟಾಗಿದೆ. ಇದರಿಂದ ಕೆಲವರು ಮನೆಯಿಂದ ಹೊರ ಬರುತ್ತಿಲ್ಲ.

ಸರ್ಕಾರಿ ನೌಕರರಿಗೆ ತೊಂದರೆ

ಎಲ್ಲಾ ಬಸ್‌ಗಳು, ರೈಲುಗಳ ಸಂಚಾರ ಬಂದ್ ಮಾಡಿ, ಬೇರೆ ಕಡೆ ಕರ್ತವ್ಯ ನಿರ್ವಹಿಸುವಂತೆ ತಿಳಿಸಿರುವುದರಿಂದ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಪ್ರತಿ ನಿತ್ಯವೂ ಸಾವಿರಾರು ರೂಪಾಯಿ ಖರ್ಚು ಮಾಡಿ ಹೋಗಬೇಕಿದೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ಮಹಿಳಾ ಸಿಬ್ಬಂದಿ.

ಮಡಕೆ ವ್ಯಾಪಾರಕ್ಕೆ ಕುತ್ತು

ನಗರದ ವಿವಿಧೆಡೆ ಮಡಕೆ ವ್ಯಾಪಾರ ಮಾಡುತ್ತಿದ್ದ ಕುಂಬಾರರಿಗೆ ಕೊರೊನಾ ವೈರಸ್ ಹರಡುವ ಭೀತಿಯಿಂದ ವ್ಯಾಪಾರ ಮಾಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಮಾರಾಟ ಮಾಡಿದರೆ ₹1 ಸಾವಿರ ದಂಡ ವಿಧಿಸುವುದಾಗಿ ಹೇಳಿದ್ದಾರೆ. ಆದರೆ, ಒಂದು ದಿನಕ್ಕೆ ಇನ್ನೂರು ರೂಪಾಯಿ ಉಳಿದರೆ ಹೆಚ್ಚು. ಅಷ್ಟು ದಂಡ ನಾವೆಲ್ಲಿ ಕಟ್ಟುವುದು ಎಂದು ವ್ಯಾಪಾರ ಮಾಡುವುದು ಬಿಟ್ಟಿದ್ದೇವೆ ಎನ್ನುತ್ತಾರೆ ಮಡಕೆ ವ್ಯಾಪಾರಿ ಈರಣ್ಣ ಕುಂಬಾರ.

ಬಿಕೋ ಎನ್ನುವ ರಸ್ತೆಗಳು

ಪ್ರತಿನಿತ್ಯ ಅನೇಕ ವಾಹನಗಳು ಓಡಾಡುವ ಮುಖ್ಯ ರಸ್ತೆಯಲ್ಲಿ ಈಗ ನೀರವ ಮೌನ ಆವರಿಸಿದೆ. ಜನದಟ್ಟಣೆಯಿಂದ ಕೂಡಿದ್ದ ರಸ್ತೆಗಳು ಈಗ ಬಿಕೋ
ಎನ್ನುತ್ತಿವೆ.

ಸಾಮಾಜಿಕ ಅಂತರ ನಿರಂತರ

ಮೆಡಿಕಲ್‌, ಬ್ಯಾಂಕ್, ದಿನಸಿ ಅಂಗಡಿ ಮುಂಗಟ್ಟುಗಳಲ್ಲಿ 3 ಅಡಿಗಳಿಗಿಂತಲೂ ಹೆಚ್ಚು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಿಲ್ಲಾಡಳಿತ ಸೂಚಿಸಿದೆ. ಅದರಂತೆ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

ಕೊರೊನಾ ವೈರಸ್ ಬಗ್ಗೆ ಯಾದಗಿರಿಯ ನಗರಸಭೆಯಿಂದ ಹಲವು ಜಾಗೃತಿ ಕ್ರಮಗಳನ್ನು ತೆಗೆದುಕೊಂಡು ಸಾರ್ವಜನಿಕರಿಗಾಗಿ ಗುರುತು ಮಾಡಿ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗುತ್ತಿದೆ. ‌‌ಯಾದಗಿರಿ ನಗರದಲ್ಲಿ 7 ಕಡೆ ತರಕಾರಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ಶಹಾಪುರದಲ್ಲಿ 4 ಕಡೆ, ಸುರಪುರ 6 ಕಡೆ ವ್ಯವಸ್ಥೆ ಮಾಡಲಾಗಿದೆ.

ಕಿರಾಣಿ ಅಂಗಡಿ, ನ್ಯಾಯಬೆಲೆ ಅಂಗಡಿ ಸೇರಿದಂತೆ ವಿವಿಧೆಡೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ನಗರಸಭೆ ಅಧಿಕಾರಿಗಳು ವಿವಿಧೆಡೆ ಹಾಕಿದ್ದಾರೆ.

***

ಭಾರತಕ್ಕೆ ಹಿಂತಿರುಗಿದ ದಿನದಿಂದ 14 ದಿನಗಳವರೆಗೆ ರೋಗ ಲಕ್ಷಣಗಳು ಇರಲಿ ಅಥವಾ ಇಲ್ಲದಿರಲಿ ಮನೆಯಲ್ಲಿ ಪ್ರತ್ಯೇಕವಾಗಿರಬೇಕು ಹಾಗೂ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ವರದಿ ಮಾಡಿಕೊಳ್ಳಬೇಕು

-ಪ್ರಕಾಶ್ ಜಿ.ರಜಪೂತ, ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT