ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: ₹11 ಲಕ್ಷ ವೆಚ್ಚವಾದರೂ ಬೆಳಗದ ದೀಪಗಳು!

ಕತ್ತಲೆಯಲ್ಲಿ ಹೆದ್ದಾರಿ; ಬೀದಿ ದೀಪಗಳು, ವಿದ್ಯುತ್ ಸಾಮಗ್ರಿಗಳ ಖರೀದಿ– ತನಿಖೆಗೆ ಒತ್ತಾಯ
Last Updated 4 ನವೆಂಬರ್ 2021, 7:59 IST
ಅಕ್ಷರ ಗಾತ್ರ

ಶಹಾಪುರ:ನಗರದ 31 ವಾ‌ರ್ಡ್‌ಗಳಲ್ಲಿಬೀದಿ ದೀಪಗಳಿಲ್ಲದೇ ಕತ್ತಲೆ ಆವರಿಸಿದೆ. ಆದರೆ, ನಗರಸಭೆ ಲೆಕ್ಕದಲ್ಲಿಮಾತ್ರದೀಪ ಅಳವಡಿಸಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿರುವುದು ದಾಖಲೆಗಳು ಬಹಿರಂಗ ಪಡಿಸಿವೆ.

ಬೀದಿ ದೀಪ ಅಳವಡಿಕೆ, ದುರಸ್ತಿ ಹಾಗೂ ಕಚೇರಿಯ ವಾಹನಗಳಿಗೆ ಡಿಸೇಲ್ ಹಾಕಿಸಿದ ಹೆಸರಿನಲ್ಲಿ ನಗರಸಭೆ ಸಿಬ್ಬಂದಿ ಲಕ್ಷಾಂತರ ಹಣ ವೆಚ್ಚಮಾಡಿರುವುದು ಈಚೆಗೆ ನಡೆದ ಸಾಮಾನ್ಯಸಭೆಯಲ್ಲಿ ಏಳು ತಿಂಗಳದ ಬಳಿಕ ಖರ್ಚು ವೆಚ್ಚದ ಅನುಮೋದನೆ ಪಡೆಯಲು ಸಲ್ಲಿಸಿದ ದಾಖಲೆಯಲ್ಲಿ ಬಹಿರಂಗವಾಗಿದೆ. ವಿದ್ಯುತ್ ಸಾಮಾಗ್ರಿ ಖರೀದಿಯಲ್ಲಿ ಮಾಡಿದ ವೆಚ್ಚವೂ ಜನತೆಯ ಆಕ್ಷೇಪಕ್ಕೆ ಕಾರಣವಾಗಿದೆ. ಬೀದರ್‌-ಶ್ರೀರಂಗಟ್ಟಣದ ಹೆದ್ದಾರಿ ನಗರ ಬೀದಿ ದೀಪಗಳಿಲ್ಲದೆ ಕತ್ತಲು ಆವರಿಸಿದ ಆರೋಪವಿದೆ.

‘ಸಾಮಾನ್ಯ ಸಭೆಯಲ್ಲಿ ಮಂಡಿಸಿದ ಖರ್ಚು ವೆಚ್ಚದ ದಾಖಲೆಯಂತೆ ನಗರದ ಬೀದಿ ದೀಪಗಳ ನಿರ್ವಹಣೆಯ ವೆಚ್ಚ (23ನವೆಂಬರ್‌ 20ರಿಂದ 22ಜನವರಿ 2021) ವರೆಗೆ ₹3,58,888 ವೆಚ್ಚ ಮಾಡಲಾಗಿದೆ. ಮಾರ್ಚ್‌ನಿಂದ ಮೇ ತಿಂಗಳವರೆಗೆ ಬೀದಿ ದೀಪಗಳ ನಿರ್ವಹಣೆ ವೆಚ್ಚ ₹3,63,016 ಆಗಿದೆ. ಅಲ್ಲದೆ ನಗರಸಭೆ ವ್ಯಾಪಿಯಲ್ಲಿ ಬರುವ ಬೀದಿ ದೀಪಗಳನ್ನು ಅಳವಡಿಸಲು ವಿದ್ಯುತ್ ಸಾಮಗ್ರಿಗಳ ಖರೀದಿಗೆ ₹3.81ಲಕ್ಷ ಸೇರಿದಂತೆ ಒಟ್ಟು ಹೀಗೆ ₹11.02 ಲಕ್ಷ ವೆಚ್ಚ ಮಾಡಿದ್ದಾರೆ.

ಇಷ್ಟು ಸಾಲದು ಎನ್ನುವಂತೆ ಈಗಾಗಲೇ ವಿದ್ಯುತ್ ಸಾಮಗ್ರಿ ಖರೀದಿ ಬೀದಿ ದೀಪಗಳ ಅಳವಡಿಕೆಗಾಗಿ ₹25 ಲಕ್ಷ ವೆಚ್ಚದಲ್ಲಿ ಟೆಂಡರ್ ಕರೆದಿರುವುದು ದಾಖಲೆಯಿಂದ ತಿಳಿದು ಬರುತ್ತದೆ. ಇದು ನಗರಸಭೆಯ ದುಂದುವೆಚ್ಚಕ್ಕೆ ಹಿಡಿದ ಕೈಗನ್ನಡಿಯಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಸಿದ್ದಯ್ಯ ಹಿರೇಮಠ ಆರೋಪಿಸಿದ್ದಾರೆ.

‘ಕಚೇರಿ ವಾಹನಗಳಿಗೆ ಪ್ರತಿ ತಿಂಗಳು ಅಂದರೆ ಮಾರ್ಚ್ ತಿಂಗಳು ₹3.49 ಲಕ್ಷ, ಏಪ್ರಿಲ್ ₹3.38 ಲಕ್ಷ, ಮೇ ₹3.67, ಜೂನ್ ₹4.13 ಜುಲೈ ₹4.40 ಲಕ್ಷ ಆಗಸ್ಟ್ ₹3.75ಲಕ್ಷ ವೆಚ್ಚವಾಗಿದೆ. ಪೌರಾಯುಕ್ತ, ಅಧ್ಯಕ್ಷ, ಎಇಇ ಹಾಗೂ ಪರಿಸರ ಎಂಜಿನಿಯರ್ ಅವರ ಪ್ರತಿ ತಿಂಗಳ ವಾಹನದ ಬಾಡಿಗೆ ₹1.02 ಲಕ್ಷ ಪಾವತಿಸುತ್ತಾ ಬರಲಾಗಿದೆ.

ಸರ್ಕಾರಿ ಮಾರ್ಗಸೂಚಿಯ ಪ್ರಕಾರ ಪ್ರವಾಸೋದ್ಯಮ ಇಲಾಖೆ ಮೂಲಕ ವಾಹನ ಬಾಡಿಗೆ ಪಡೆಯಲು ಟೆಂಡರ್ ಕರೆದು ವಾಹನ ಬಾಡಿಗೆ ಪಡೆಯಬೇಕು ಎಂಬ ನಿಯಮವಿದೆ. ಆದರೆ, ಹೆಚ್ಚಿನ ಅಧಿಕಾರಿಗಳು ತಮ್ಮ ಸ್ವಂತ ವಾಹನವನ್ನು ಬಳಸಿಕೊಂಡು ಬಾಡಿಗೆ ರೂಪದಲ್ಲಿ ಹಣ ಪಡೆಯುತ್ತಿದ್ದಾರೆ. ಇದರ ಬಗ್ಗೆ ತನಿಖೆ ನಡೆಸಬೇಕು’ ಎಂದು ಅವರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

‘ನಗರದ ವಾರ್ಡ್ ನಂಬರ್ 30ರಲ್ಲಿ ಇರುವ ಉದ್ಯಾನದಲ್ಲಿ ಬೆಂಚ್ ಹಾಗೂ ಮರಂ ಹಾಕಿದ ಬಿಲ್ ₹90,163 ಆಗಿದೆ. ಅದರಂತೆ ವಾರ್ಡ್ ನಂಬರ್ 2ರಲ್ಲಿ ಉದ್ಯಾನದಲ್ಲಿ ಹಾಗೂ ಇತರ ಸ್ಥಳಗಳಲ್ಲಿ ಆರ್‌ಸಿಸಿ ಬೆಂಚ್ ಹಾಕಲುತಗುಲಿದ ವೆಚ್ಚ ₹95,815 ಆಗಿದೆ. ಉಪಾಧ್ಯಕ್ಷರ ಕೋಣೆ ನವೀಕರಣಕ್ಕೆ ₹91,275 ವೆಚ್ಚ ಮಾಡಲಾಗಿದೆ. ಅಲ್ಲದೆ ನಗರಸಭೆಯ ಐಡಿಎಸ್‌ಎಂಟಿ ಮಳಿಗೆಗಳ ಒಟ್ಟು 125 ಕೆವಿಯಟ್‌ಗಳು. ಪ್ರತಿ ಕೆವಿಯೆಟ್‌ಗೆ₹2 ಸಾವಿರದಂತೆ ಕಾನೂನು ಸಲಹೆಗಾರರಿಗೆ ನೀಡಿದ ಕಾನೂನು ಸಲಹೆಶುಲ್ಕ₹2,16,000 ಆಗಿದೆ ಎಂದು ದಾಖಲೆಗಳುಹೇಳುತ್ತವೆ. ಆದರೆ, 125 ಕೆವಿಯೆಟ್‌ಗಳಿಗೆ ₹2 ಸಾವಿರದಂತೆ ಅಂದರೆ₹2.50 ಲಕ್ಷ ಆಗುತ್ತದೆ. ಕಡಿಮೆ ಹಣ ನಮೂದಿಸಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ’ ಎನ್ನುತ್ತಾರೆ ನಗರದ ನಿವಾಸಿ ದಾವಲಸಾಬ್ ನದಾಫ್.

‘ಕಸ ವಿಂಗಡಣೆ ಮಾಡುವ ಯಂತ್ರವು ತುಕ್ಕು ಹಿಡಿದಿದ್ದು, ಅದಕ್ಕೆ ಬಣ್ಣ ಹಚ್ಚಿದ ಬಿಲ್ ₹4,325 ಆಗಿದೆ. ವಾಸ್ತವವಾಗಿ ಯಂತ್ರವೇ ಚಾಲು ಇಲ್ಲ. ಕೆಟ್ಟು ನಿಂತ ಯಂತ್ರಕ್ಕೆ ಬಣ್ಣ ಬಳಿದು ಹಣ ಎಗರಿಸುವ ಕಾಯಕವಾಗಿದೆ. ಮೋಟಾರ್ ದುರಸ್ತಿ, ಪೈಪ್‌ಲೈನ್ ಅಳವಡಿಕೆ, ಕೊಳವೆಬಾವಿ ದುರಸ್ತಿ ಹೆಸರಿನಲ್ಲಿ ಎಗ್ಗಿಲ್ಲದೆ ಅಧಿಕಾರಿಗಳು ಹಣ ವೆಚ್ಚ ಮಾಡಿದ್ದಾರೆ. ಸಾಮಾನ್ಯ ಸಭೆಯಲ್ಲಿ ಮಂಡಿಸಿದ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಸಮಗ್ರ ತನಿಖೆಗೆ’ ಜಿಲ್ಲಾಧಿಕಾರಿ ಸೂಚಿಸಬೇಕು ಎಂದು ನದಾಫ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT