ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಹತ್ತಿ, ಭತ್ತ ಬೆಳೆದ ರೈತರಿಗೆ ಸಂಕಷ್ಟ

ಬಿತ್ತಿದ ಶೇಕಡ 90ರಷ್ಟು ಬೆಳೆ ಅಧಿಕ ಮಳೆಯಿಂದ ನಾಶ
Last Updated 22 ಡಿಸೆಂಬರ್ 2020, 2:46 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಕೃಷ್ಣಾ, ಭೀಮಾ ನದಿ ಪ್ರವಾಹ ಒಂದೆಡೆಯಾದರೆ ಅಧಿಕ ಮಳೆಯಿಂದ ರೈತರು ಬಿತ್ತದ ಶೇ 90ರಷ್ಟು ಬೆಳೆ ನಾಶವಾಗಿದೆ. ಪ್ರಮುಖವಾಗಿ ಹತ್ತಿ, ಭತ್ತ ನಾಶವಾಗಿದೆ. ರೈತರ ಪರಿಸ್ಥಿತಿ ಗಾಯದ ಮೇಲೆ ಬರೆ ಎಳೆದಂತೆ ಎಂಬಂತಾಗಿದೆ.

ಮುಂಗಾರುಉತ್ತಮವಾಗಿದ್ದರಿಂದ ಕೋವಿಡ್‌ ಮಧ್ಯೆಯೂ ಬಿತ್ತನೆಯಲ್ಲಿ ತೊಡಗಿಸಿಕೊಂಡಿದ್ದರು. ಎರಡು ತಿಂಗಳ ನಂತರ ಅಧಿಕ ಮಳೆಯಾಗಿ ಇದ್ದ ಬೆಳೆ ನೆಲ ಕಚ್ಚಿತ್ತು.

ಮಳೆಯಿಂದ ಹಾನಿ ವಿವರ: ಕೃಷಿ ಇಲಾಖೆ ಮಾಹಿತಿಯಂತೆ ಅಕ್ಟೋಬರ್ ತಿಂಗಳಲ್ಲಿ ಭಾರಿ ಮಳೆಯಿಂದ ಯಾದಗಿರಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ. ವಡಗೇರಾದಲ್ಲಿ ಕಡಿಮೆ ಹಾನಿಯಾಗಿದೆ.ಒಟ್ಟಾರೆ ಜಿಲ್ಲೆಯಲ್ಲಿ ಭತ್ತ 3668.52 ಹೆಕ್ಟೇರ್‌ ನಾಶವಾಗಿದೆ. ಹತ್ತಿ 7435.79 ಹೆಕ್ಟೇರ್‌ನಷ್ಟು ನಾಶವಾಗಿದೆ. 22,144 ರೈತರ ಬೆಳೆ ನಷ್ಟವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಲ್ಲೂಕುವಾರುವಿವರ ಭತ್ತ: ಶಹಾಪುರ ತಾಲ್ಲೂಕಿನಲ್ಲಿ ಭತ್ತ 151.70ಹೆಕ್ಟೇರ್, ವಡಗೇರಾ ತಾಲ್ಲೂಕಿನಲ್ಲಿ 66.00ಹೆಕ್ಟೇರ್, ಸುರಪುರ ತಾಲ್ಲೂಕಿನಲ್ಲಿ 119.87ಹೆಕ್ಟೇರ್, ಹುಣಸಗಿ ತಾಲ್ಲೂಕಿನಲ್ಲಿ 162.62ಹೆಕ್ಟೇರ್, ಯಾದಗಿರಿ ತಾಲ್ಲೂಕಿನಲ್ಲಿ 1700.89, ಗುರುಮಠಕಲ್‌ ತಾಲ್ಲೂಕಿನಲ್ಲಿ 1467.44ಹೆಕ್ಟೇರ್ ಬೆಳೆ ಅಕ್ಟೋಬರ್‌ ತಿಂಗಳಲ್ಲಿ ಮಳೆಯಿಂದ ಹಾನಿಯಾಗಿದೆ.

ತಾಲ್ಲೂಕುವಾರುವಿವರ ಹತ್ತಿ: ಅಕ್ಟೋಬರ್‌ ತಿಂಗಳಲ್ಲಿ ಮಳೆಯಿಂದ ಶಹಾಪುರ ತಾಲ್ಲೂಕಿನಲ್ಲಿಹತ್ತಿ910.20 ಹೆಕ್ಟೇರ್, ವಡಗೇರಾ ತಾಲ್ಲೂಕಿನಲ್ಲಿ1512.00 ಹೆಕ್ಟೇರ್, ಸುರಪುರ ತಾಲ್ಲೂಕಿನಲ್ಲಿ315.78 ಹೆಕ್ಟೇರ್, ಹುಣಸಗಿ ತಾಲ್ಲೂಕಿನಲ್ಲಿ 128.46ಹೆಕ್ಟೇರ್, ಯಾದಗಿರಿ ತಾಲ್ಲೂಕಿನಲ್ಲಿ 1256.64, ಗುರುಮಠಕಲ್‌ ತಾಲ್ಲೂಕಿನಲ್ಲಿ3312.71 ಹೆಕ್ಟೇರ್ ಸೇರಿದಂತೆ ಒಟ್ಟಾರೆ 7435.79 ಬೆಳೆ ಹಾನಿಯಾಗಿದೆ.

ಸುರಪುರ

ಅತಿವೃಷ್ಟಿ ತಾಲ್ಲೂಕಿನ ಭತ್ತ ಮತ್ತು ಹತ್ತಿ ಬೆಳೆದ ರೈತರಿಗೆ ಭಾರಿ ಹೊಡೆತವನ್ನೆ ಕೊಟ್ಟಿದೆ. ಸಾಲದ್ದಕ್ಕೆ ದರ ಕುಸಿತ, ಕಟಾವು ದರ, ದಲ್ಲಾಳಿಗಳ ಹಾವಳಿ ಗಾಯದ ಮೇಲೆ ಬರೆ ಎಳೆದಂತಾಗಿದೆ.

ತಾಲ್ಲೂಕಿನಲ್ಲಿ 12 ಸಾವಿರ ಹೆಕ್ಟೇರ್‌ಗಿಂತ ಹೆಚ್ಚಿನ ಪ್ರದೇಶದಲ್ಲಿ ಹತ್ತಿ ಬಿತ್ತಲಾಗಿತ್ತು. 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ನಾಶವಾಗಿದೆ. ಉಳೆದೆಡೆ ಇಳುವರಿ ಗಣನೀಯವಾಗಿ ಕುಸಿದಿದೆ.

ಹತ್ತಿ ಬಿಡಿಸಲು ಕಾರ್ಮಿಕರ ಬೇಡಿಕೆ ಉಂಟಾಗಿದೆ. ಒಂದು ಕೆ.ಜಿ ಹತ್ತಿ ಬಿಡಿಸಲು ₹ 5 ಕೂಲಿ ನೀಡಲಾಗುತ್ತಿದೆ. ಜೊತೆಗೆ ಕಾರ್ಮಿಕರನ್ನು ಕರೆ ತರುವ ದಲ್ಲಾಳಿಗೆ ಕಮಿಷನ್ ಕೊಡಬೇಕು. ಹೀಗಾಗಿ ಹಲವು ರೈತರು ಹತ್ತಿಯನ್ನು ಹರಗಿ ಬಿಳಿಜೋಳ ಬಿತ್ತನೆ ಮಾಡಿದ್ದಾರೆ.

8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಲಾಗಿತ್ತು. ಹತ್ತಿಗೆ ಹೋಲಿಸಿದರೆ ಭತ್ತ ಹಾನಿ ಕಡಿಮೆ. 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಭಾಗಶಃ ನೆಲಕಚ್ಚಿದೆ.

ಸಾಲದ್ದಕ್ಕೆ ಭತ್ತ ಮತ್ತು ಹತ್ತಿ ಎರಡು ಬೆಳೆಗಳ ಧಾರಣೆ ಕುಸಿದಿದೆ. ಕಳೆದ ವರ್ಷ ಹತ್ತಿ ₹ 5800 (ಪ್ರತಿ ಕ್ವಿಂಟಲ್‌) ಗೆ ಮಾರಾಟವಾಗಿತ್ತು. ಈಗ ₹ 5 ಸಾವಿರ ಇದೆ. ಕಳೆದ ಸಾಲಿನಲ್ಲಿ ಭತ್ತ ಎ ಗ್ರೇಡ್ ಕ್ವಿಂಟಲ್‌ಗೆ ₹ 1,890 ದರವಿತ್ತು. ಈಗ ಕುಸಿದಿದೆ.

ಕಾವೇರಿ ಸೋನಾಕ್ಕೆ ಪ್ರತಿ 75 ಕೆ.ಜಿ ಚೀಲಕ್ಕೆ ₹ 900, ಸೋನಾಕ್ಕೆ ₹ 1,000, ಆರ್‍ಎನ್‍ಆರ್‌ಗೆ ₹ 1,200 ದರ ಸಿಗುತ್ತಿದೆ. ಮಳೆಯಿಂದ ಇಳುವರಿಯೂ ಕುಸಿದಿದೆ. ಕಟಾವು ಮಾಡಲು ತಾಸಿಗೆ ₹ 2,400 ತೆಗೆದುಕೊಳ್ಳಲಾಗುತ್ತಿದೆ.

ಸರ್ಕಾರ ಸಾಮಾನ್ಯ ಭತ್ತಕ್ಕೆ (ಪ್ರತಿ ಕ್ವಿ.) ₹ 1,868, ಎ ಗ್ರೇಡ್ ಭತ್ತಕ್ಕೆ ₹ 1888, ಹತ್ತಿಗೆ ₹ 5515, ಎ ಗ್ರೇಡ್ ಹತ್ತಿಗೆ ₹ 5825 ಬೆಂಬಲ ಬೆಲೆಯನ್ನೇನೋ ನಿಗದಿ ಮಾಡಿದೆ. ಆದರೆ, ಖರೀದಿ ಮಾಡಲು ಇದುವರೆಗೂ ಕೇಂದ್ರಗಳನ್ನು ತೆರೆದಿಲ್ಲ.

ಹುಣಸಗಿ

ಪ್ರಸಕ್ತ ಹಂಗಾಮಿನಲ್ಲಿ ಬೆಳೆಯಲಾಗಿದ್ದ ಭತ್ತ ಬೆಳೆಗಾರರರಿಗೆ ಸಂಕಷ್ಟದ ಸರಮಾಲೆ ಎದುರಾಗಿದ್ದು, ಈ ಬಾರಿ ರೈತರೂ ಹೈರಾಣಾಗುವಂತೆ ಮಾಡಿದೆ.

ಸಾಲ ಸೋಲ ಮಾಡಿಕೊಂಡು ಕೃಷ್ಣಾ ಅಚ್ಚಕಟ್ಟು ಪ್ರದೇಶದಲ್ಲಿ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿತ್ತು. ಆದರೆ, ತಾಲ್ಲೂಕಿನಲ್ಲಿ ಸೆಪ್ಟೆಂಬರ್‌–ಅಕ್ಟೋಬರ್‌ ತಿಂಗಳು ಸುರಿದ ಅತಿವೃಷ್ಟಿ ಮಳೆಯಿಂದಾಗಿ ಬಹುತೇಕ ರೈತರ ಭತ್ತದ ಬೆಳೆ ಅಲ್ಲಲ್ಲಿ ಹಾಳಾಗಿತ್ತು. ಉಳಿದ ಭತ್ತವನ್ನಾದರೂ ಕಟಾವು ಮಾಡಿಕೊಂಡು ರಾಶಿ ಮಾಡುತ್ತಿದ್ದರೆ ಬೆಲೆ ಕುಸಿತದ ಭೂತ ಆವರಿಸಿದೆ.

ಈಗಾಗಲೇ ತಾಲ್ಲೂಕಿನ ವಜ್ಜಲ, ಚನ್ನೂರ, ಮಾಳನೂರ, ಬಲಶೆಟ್ಟಿಹಾಳ, ಕುಪ್ಪಿ, ದ್ಯಾಮನಹಾಳ, ಕೊಡೇಕಲ್ಲ ನಾರಾಯಣಪುರ ಸೇರಿದಂತೆ ಇತರ ಗ್ರಾಮಗಳಲ್ಲಿ ಭತ್ತದ ಕಟಾವು ಆರಂಭವಾಗಿದೆ. ಆದರೆ, ಕಾಟಾವು ಮಾಡಲಾಲಗಿದ್ದ ಭತ್ತಕ್ಕೆ ಬೆಲೆಯೇ ಸಿಗುತ್ತಿಲ್ಲ ಎಂದು ವಜ್ಜಲ ಗ್ರಾಮದ ಸತ್ಯನಾರಾಯಣರಡ್ಡಿ ಹೇಳಿದರು.

75 ಕೆ.ಜಿ ತೂಕದ ಭತ್ತದ ಚೀಲಕ್ಕೆ 64 ತಳಿಯ ಭತ್ತವು ₹ 900 ರಿಂದ ₹ 960 ರ ವರೆಗೆ ಹಾಗೂ ಸೋನಮಸೂರಿ ತಳಿಯ ಭತ್ತಕ್ಕೆ ಕೇವಲ ₹ 1100 ವರೆಗೆ ಮಾತ್ರ ಖರೀದಿ ಆರಂಭವಾಗಿದೆ. ಆದರೂ ಖರೀದಿಗೆ ಇನ್ನೂ ಯಾವುದೇ ಖರೀದಾರರು ಆಸಕ್ತಿ ವಹಿಸಿಲ್ಲ ಎಂದು ತಿಳಿದು ಬಂದಿದೆ. ಕಳೆದ ವರ್ಷದ ಇದೇ ಸಂದರ್ಭದಲ್ಲಿ ಸೋನಮಸೂರಿ ತಳಿಯ ಭತ್ತಕ್ಕೆ ₹ 1,300 ರಿಂದ ₹ 1,380 ರ ವರೆಗೂ ಮಾರಾಟವಾಗಿತ್ತು. ಆದರೆ, ಈ ಬಾರಿ ಆರಂಭದಲ್ಲಿಯೇ ಬೆಲೆ ಕುಸಿತ ಎದುರಾಗಿದೆ ಎಂದು ದ್ಯಾಮನಹಾಳ ಗ್ರಾಮದ ರೈತ ಲಕ್ಷ್ಮಿಕಾಂತ ಕುಲಕರ್ಣಿ ಹೇಳಿದರು.

ಪ್ರತಿ ವರ್ಷವೂ ಭತ್ತವನ್ನು ಖರೀದಿಸಿ ಗೋದಾಮುಗಳಲ್ಲಿ ಶೇಖರಣೆ ಮಾಡಲಾಗುತ್ತಿತ್ತು. ಆದರೆ, ಕೋವಿಡ್‌ನಿಂದಾಗಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಖರೀದಿಸಲಾಗಿರುವ ಭತ್ತಕ್ಕೆ ಬೆಲೆ ಇಲ್ಲದಂತಾಗಿದೆ. ಖರೀದಿ ದರಕ್ಕಿಂತಲೂ ಕಡಿಮೆ ದರಕ್ಕೆ ಮಿಲ್ಲರ್‌ಗಳಿಗೆ ಕೊಡುವ ಅನಿವಾರ್ಯತೆ ಎದುರಾಗಿದ್ದು, ಈ ಹಂಗಾಮಿನಲ್ಲಿ ಭತ್ತಕ್ಕೆ ಸೂಕ್ತ ಬೆಲೆ ಸಿಗುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಹುಣಸಗಿಯ ಆರ್. ವೆಂಕಟರಾವ್ ತಿರುಮಲಾ ಹೇಳಿದರು.

ವಡಗೇರಾ

ವಡಗೇರಾ ತಾಲ್ಲೂಕು ಕೇಂದ್ರವಾಗಿ ಸುಮಾರು ಮೂರು ವರ್ಷಗಳು ಕಳೆದರೂ ಇನ್ನೂ ಎಪಿಎಂಸಿ ಭಾಗ್ಯವಿಲ್ಲದಂತಾಗಿದೆ. ಇದರಿಂದ ರೈತರು ಪರದಾಡುವಂತಾಗಿದೆ.

ತಾಲ್ಲೂಕಿನಲ್ಲಿ ಎರಡು‌ ನದಿಗಳು ಹರಿಯುವುದರಿಂದ ಈ ಭಾಗದ ಭೂಮಿ ಬಹುತೇಕ ನೀರಾವರಿ ಹೊಂದಿದೆ. ನದಿ ತೀರದ ರೈತರು ಹೆಚ್ಚು ಭತ್ತ ಬೆಳೆಯುತ್ತಾರೆ. ಆದರೆ, ಅವರಿಗೆ ಸರ್ಕಾರದಿಂದ ಸರಿಯಾದ ಬೆಂಬಲ ಬೆಲೆ ಇಲ್ಲದಿರುವುದರಿಂದ ನಿರಾಸೆ ಭಾವನೆಯಿಂದ ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ.

ನಮ್ಮ ಭಾಗದಲ್ಲಿ ಎರಡು ನದಿಯಿಂದ ಪ್ರವಾಹದಿಂದ ನಷ್ಟ ಅನುಭವಿಸಿದರೂ ಇನ್ನು ಪರಿಹಾರ ಬಂದಿಲ್ಲ. ಇನ್ನೂ ಬೆಂಬಲ ಬೆಲೆ ಯಾವಾಗ ಘೋಷಣೆ ಮಾಡುತ್ತಾರೆ ಎಂದು ರೈತರು ಪ್ರಶ್ನಿಸುತ್ತಾರೆ.

ನಮ್ಮ ಊರಿನ ಎಲ್ಲಾ ರೈತರು ಹೆಚ್ಚಾಗಿ ಭತ್ತದ ಬೆಳೆಯನ್ನೆ ಬೆಳೆಯುತ್ತಾರೆ. ನಾವೆಲ್ಲರೂ ರಾಶಿ ಮಾಡಿ ಒಂದು ತಿಂಗಳು ಕಳೆಯುತ್ತಿದ್ದರೂ ಇನ್ನೂ ಯಾರು ಖರೀದಿಗಾರರು ಮುಂದೆ ಬರುತ್ತಿಲ್ಲ. ಇದರಿಂದ ಚಿಂತೆಗೆ ಈಡಾಗಿದ್ದೇವೆ. ನಮಗೆ ಸರ್ಕಾರದಿಂದ ಬೆಂಬಲ ಬೆಲೆಯ ಅವಶ್ಯಕತೆ ಇದೆ ಎಂದು ಬಿರನಾಳ ಗ್ರಾಮದ ರೈತ ವಿರೇಶ ಸಾಹುಕಾರ ತಮ್ಮ ಅಳಲನ್ನು ತೊಡಗಿಕೊಂಡರು. ಅತಿಯಾದ ಮಳೆ ಮತ್ತು ಪ್ರವಾಹಕ್ಕೆ ಸಿಲುಕಿ ಮುಕ್ಕಾಲು ಭಾಗದಷ್ಟು ಬೆಳೆ ಹಾನಿಯಾಗಿದೆ. ಇನ್ನೂ ಸ್ವಲ್ಪ ಪ್ರಮಾಣದಲ್ಲಿ ಉಳಿದಿರುವ ಭತ್ತದ ರಾಶಿ ನಡೆಯುತ್ತಿದೆ. ಆದರೆ, ಅದಕ್ಕೆ ಸರ್ಕಾರದಿಂದ ಬೆಂಬಲ ಬೆಲೆ ನಿಗದಿ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಸರ್ಕಾರ ತಕ್ಷಣವೇ ಬೆಂಬಲ ಬೆಲೆ ನೀಡಿ ರೈತರ ಬೆನ್ನೆಲುಬು ಆಗಬೇಕು ಎಂದು ರೈತ ಸಂಘದ (ಹಸಿರು ಸೇನೆ) ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಚಂದ್ರಕಲಾ ಬಾಗೂರು ಒತ್ತಾಯಿಸಿದರು.

ಶಹಾಪುರ

ವಾಣಿಜ್ಯ ಬೆಳೆಯಿಂದ ಅಧಿಕ ಲಾಭ ಪಡೆಯುವ ಉದ್ದೇಶದಿಂದ ತಾಲ್ಲೂಕಿನಲ್ಲಿ ಪ್ರಸಕ್ತ ಬಾರಿ ರೈತರು 43,900 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಿದ್ದರು. ಕಳೆದ ವರ್ಷ ಹತ್ತಿ ಮಾರಾಟದ ವಹಿವಾಟು ಬರೋಬ್ಬರಿ ₹ 2 ಕೋಟಿಗೂ ಅಧಿಕವಾಗಿತ್ತು. ಆದರೆ, ಅಧಿಕ ಮಳೆ, ಪ್ರವಾಹ, ಬೆಲೆ ಕುಸಿತದ ಸಂಕಷ್ಟದ ಒಡಲುರಿ ರೈತರನ್ನು ಕಾಡುತ್ತಿದೆ.

ಭೀಮಾ ಹಾಗೂ ಕೃಷ್ಣಾ ಎರಡು ನದಿಯ ಪ್ರದೇಶದಲ್ಲಿನ ಸುಮಾರು 25ಕ್ಕೂ ಹೆಚ್ಚು ಗ್ರಾಮಗಳ ರೈತರು ಹತ್ತಿ ಬಿತ್ತನೆ ಮಾಡಿದ್ದಾಗ ಪ್ರವಾಹದ ಹೊಡೆತದಿಂದ ತತ್ತರಿಸಿ ಹೋದರು. ಬೆಳೆ ಅಷ್ಟೆ ಅಲ್ಲದೆ ಫವಲತ್ತಾದ ಮಣ್ಣು ಕೊಚ್ಚಿಕೊಂಡ ಹೋದ ಕೊರಗು ರೈತರನ್ನು ಕಾಡುತ್ತಿದೆ. ಮಳೆ ಮತ್ತು ಪ್ರವಾಹ ಎರಡರಿಂದ ನಷ್ಟ ಅನುಭವಿಸಿದಾಗ ಬೆಳೆ ಸಂರಕ್ಷಣೆ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸುತ್ತಾರೆ ನದಿ ದಂಡೆಯ ರೈತರು.

ಪ್ರಸಕ್ತ ಬಾರಿ ಆರಂಭದಲ್ಲಿ ಉತ್ತಮ ಮಳೆಯಾಗಿತ್ತು. ನಂತರ ಸೆಪ್ಟೆಂಬರ್‌ ತಿಂಗಳಲ್ಲಿ ಹೂ ಕಟ್ಟುವ ಹಂತದಲ್ಲಿ ಹೆಚ್ಚಿನ ಮಳೆಯಾಗಿದ್ದರಿಂದ ಫಲ ಉದರಿದವು. ಜೊತೆಗೆ ಕಾಯಿಕಟ್ಟಿದ ಹಂತದಲ್ಲಿಯೂ ಕಾಯಿ ಕೊಳೆತು ನಿಂತವು. ಇದರಿಂದ ಶೇ 40ರಷ್ಟು ಇಳುವರಿ ಕುಂಠಿತವಾಗಿದೆ. ಅದರಲ್ಲಿ ಜೇಡಿಮಣ್ಣು ಮಿಶ್ರಿತ ಜಮೀನುಗಳಲ್ಲಿ ಅಧಿಕ ತೇವಾಂಶದಿಂದ ಬೆಳೆ ನಷ್ಟವಾಗಿದೆ ಎನ್ನುತ್ತಾರೆ ಭೀಮರಾಯನಗುಡಿ ಕೃಷಿ ವಿಜ್ಞಾನಿ ಒಬ್ಬರು.‌

ಅಧಿಕ ಮಳೆಯಿಂದ ಭತ್ತ ನಾಟಿ ಮಾಡಿದ ರೈತರಿಗೆ ವರದಾನವಾಗಿದೆ. ಆದರೆ, ಬೆಲೆ ಕುಸಿತ ಸಂಕಷ್ಟಕ್ಕೆ ಸಿಲುಕಿಸಿದೆ. ಅದರಲ್ಲಿ ಪ್ರಸಕ್ತ ಬಾರಿ ಸೋನಮಸೂರಿ ತಳಿಯ ಭತ್ತದ ಧಾರಣಿಯೂ ತೀವ್ರ ಕುಸಿತವಾಗಿದೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಾಗಿ ಸೋನಮಸೂರಿ ತಳಿಯ ಭತ್ತ ಮಾಡಿರುವುದು ಗಮನಾರ್ಹ. ಭತ್ತ ಖರೀದಿ ಕೇಂದ್ರ ಸ್ಥಾಪಿಸುವುದಾಗಿ ಸರ್ಕಾರ ಹೇಳುತ್ತಿದ್ದರೂ ಇನ್ನೂ ಖರೀದಿ ಕೇಂದ್ರದ ಬಾಗಿಲು ತೆರೆದಿಲ್ಲ ಎಂದು ಮುಖಂಡ ಸಿದ್ದಯ್ಯಸ್ವಾಮಿ ಆರೋಪಿಸಿದರು.

ಕೃಷಿ, ತೋಟಗಾರಿಕೆ ಬೆಳೆ ನಷ್ಟ (ಹೆಕ್ಟೇರ್‌ಗಳಲ್ಲಿ)

ತಾಲ್ಲೂಕು;ಹಾನಿಯಾದ ಕ್ಷೇತ್ರ;ರೈತರ ಸಂಖ್ಯೆ

ಶಹಾಪುರ;9329.34;12018

ವಡಗೇರಾ;11923.33;15064

ಸುರಪುರ;6396.28;7299

ಹುಣಸಗಿ;3549.81;4814

ಯಾದಗಿರಿ;19325.16;23708

ಗುರುಮಠಕಲ್‌;22075.37;24708

ಒಟ್ಟು;72599.74;88471

ಆಧಾರ: ಕೃಷಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT