ಮಂಗಳವಾರ, ಜುಲೈ 27, 2021
21 °C
ವಿವಿಧ ವಯೋಮಾನದ 9.74 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ, ಸದ್ಯ 2.83 ಲಕ್ಷ ಸಾಧನೆ

ಯಾದಗಿರಿ ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆಗೆ ಹಿಂದೇಟು: ಅಭಿಯಾನಕ್ಕೂ ಹಿನ್ನಡೆ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದು, ಇದು ಲಸಿಕಾರಣಕ್ಕೆ ಹಿನ್ನಡೆಯಾಗಿದೆ.

ಜಿಲ್ಲೆಯಲ್ಲಿ ಇದೇ ಜನವರಿ 16ರಿಂದ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಅಂದಿನಿಂದ ಇಲ್ಲಿಯವರೆಗೆ 2.83 ಲಕ್ಷ ಜನರಿಗೆ ಮಾತ್ರ ಲಸಿಕೆ ನೀಡುವ ಸಾಧನೆ ಮಾಡಲಾಗಿದೆ.

9.74 ಲಕ್ಷ ಜನರಿಗೆ ಲಸಿಕೆ ಗುರಿ:  ಜಿಲ್ಲೆಯಲ್ಲಿ 18ರಿಂದ 45 ವರ್ಷದೊಳಗಿನ 5,75,031 ಜನರು, 45ರಿಂದ 60 ವರ್ಷದೊಳಗಿನ 2,84,873 ಮಂದಿ, 60 ವರ್ಷ ಮೇಲ್ಪಟ್ಟ 1,15,006 ಜನ ಸೇರಿದಂತೆ ಒಟ್ಟಾರೆ 9,74, 910 ಜನರಿಗೆ ಲಸಿಕೆ ನೀಡಬೇಕಾಗಿದೆ. ಮೊದಲ ಹಂತದಲ್ಲಿ 2,33,430, ಎರಡನೇ ಹಂತದಲ್ಲಿ 49,661 ಸೇರಿದಂತೆ ಒಟ್ಟಾರೆ 2,83,091 ಜನರಿಗೆ ಜೂನ್‌ 24ರ ವರೆಗೆ ಲಸಿಕೆ ನೀಡಲಾಗಿದೆ.

ಅರಿವಿನ ಕೊರತೆ: ಜಿಲ್ಲೆಯ ಗ್ರಾಮ, ತಾಂಡಾ ಪ್ರದೇಶಗಳಲ್ಲಿ ಲಸಿಕೆ ಬಗ್ಗೆ ಮೂಢನಂಬಿಕೆ ಮತ್ತು ಊಹಾಪೋಹಗಳು ಜನರ ಮನಸ್ಸಿನಲ್ಲಿ ಸೇರಿಬಿಟ್ಟಿವೆ. ಹೀಗಾಗಿ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಜಿಲ್ಲೆಯಲ್ಲಿ ಗುಳೆ ಹೋಗುವವರ ಸಂಖ್ಯೆ ಹೆಚ್ಚು. ಗ್ರಾಮೀಣ ಭಾಗದಲ್ಲಿ ಹಲವಾರು ಮನೆಗಳಿಗೆ ಬೀಗ ಹಾಕಲಾಗಿದೆ. ಕೋವಿಡ್‌ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ ರೈಲು ಮೂಲಕ ದೂರದ ಮಹಾನಗರಗಳಿಗೆ ಗಂಟು ಮೂಟೆ ಕಟ್ಟಿಕೊಂಡು ತೆರಳಿದ್ದಾರೆ.

‘ಎಪಿಎಂಸಿ, ಆಟೊ ಚಾಲಕರು, ಕಟ್ಟಡ ಕಾರ್ಮಿಕರು ಸೇರಿದಂತೆ ಶ್ರಮಿಕ ವರ್ಗದವರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ನಾವು ರಾತ್ರಿಯಾಗುತ್ತಲೇ ಮದ್ಯ ಸೇವಿಸುತ್ತೇವೆ. ಲಸಿಕೆ ಹಾಕಿಸಿಕೊಂಡ ಎರಡು ತಿಂಗಳು ಮದ್ಯ ಸೇವಿಸಬಾರದು ಎನ್ನುತ್ತಾರೆ. ಹೀಗಾಗಿ ನಮಗೆ ಲಸಿಕೆಯೇ ಬೇಡ ಎಂದು ಅನೇಕರು ತಿಳಿಸುತ್ತಾರೆ. ಇಂಥ ವಿಷಯಗಳು ಕೂಡ ಲಸಿಕಾರಕರಣಕ್ಕೆ ಹಿನ್ನಡೆಯಾಗಿವೆ’ ಎನ್ನುತ್ತಾರೆ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಡಾ.ಸೂರ್ಯಪ್ರಕಾಶ ಕಂದಕೂರ.

ಲಸಿಕೆಗೆ ವಿರೋಧ ವ್ಯಕ್ತವಾಗುವ ಗ್ರಾಮಗಳು:  ಯಾದಗಿರಿ ತಾಲ್ಲೂಕಿನ ಯರಗೋಳ, ಅಲ್ಲಿಪುರ, ಕಂಚಗಾರನಹಳ್ಳಿ, ಹೊನಗೇರಾ, ಮುಂಡರಗಿ ತಾಂಡಾ, ಬೆಳಗೇರಾ, ನಗರ ಪ್ರದೇಶದ ಲಾಡಿಸ್‌ ಗಲ್ಲಿ, ಮುಸ್ಲಿಂಪುರ, ಹೆಂಡಗಾರ ಅಗಸಿ, ಗಂಗಾನಗರ, ದುರ್ಗಾನಗರ, ಗಣೇಶ ನಗರ, ಶಹಾಪುರ ನಗರದ ಕವಸಪುರ, ಸೈದರ್‌ ಓಣಿ, ಫಿಲ್ಟರ್‌ ಬೆಡ್‌ ಏರಿಯಾ, ಮೀನುಗಾರ ಓಣಿ, ಅಗ್ನಿಶಾಮಕದಳ ಕಚೇರಿ ಪ್ರದೇಶ, ಬುದ್ಧನಗರ, ದಿಗ್ಗಿಬೇಸ್‌, ತಾಲ್ಲೂಕಿನ ಹೈಯಾಳ ಆರೋಗ್ಯ ಕೇಂದ್ರ ವ್ಯಾಪ್ತಿಯ ಐಕೂರು, ವಡಗೇರಾ ತಾಲ್ಲೂಕಿನ ನಾಯ್ಕಲ್‌, ಸುರಪುರ ತಾಲ್ಲೂಕಿನ ಕೋಡೆಕಲ್‌ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಹುಲ್ಲಿಕೇರಿ, ಕಕ್ಕೇರಾ ವ್ಯಾಪ್ತಿಯ ಹುಣಸಿಹೊಳೆ, ಹಸನಪುರ ವ್ಯಾಪ್ತಿಯ ರಂಗಂಪೇಟೆ, ದೇವರಗೋನಾಲ ವ್ಯಾಪ್ತಿಯ ವಾರಿ ಸಿದ್ಧಾಪುರ ಗ್ರಾಮಗಳಲ್ಲಿ ಲಸಿಕೆಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

***

ಜಿಲ್ಲೆಯಲ್ಲಿ ಲಸಿಕಾ ಮೇಳದ ನಂತರ ಪ್ರತಿದಿನ 6 ಸಾವಿರಕ್ಕಿಂತ ಹೆಚ್ಚು ಲಸಿಕೆ ನೀಡಲಾಗುತ್ತಿದೆ. ಈ ಮುಂಚೆ 2–3 ಸಾವಿರ ಚುಚ್ಚುಮದ್ದು ನೀಡಲಾಗುತ್ತಿತ್ತು
- ಡಾ.ರಾಗಪ್ರಿಯಾ ಆರ್‌., ಜಿಲ್ಲಾಧಿಕಾರಿ

***

ಜಿಲ್ಲೆಯ ವಿವಿಧ ತಾಲ್ಲೂಕುಗಳ ಗ್ರಾಮ, ತಾಂಡಾಗಳಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜನರು ವಿರೋಧ ಮಾಡುತ್ತಿದ್ದಾರೆ. ಆದರೂ ಜನರ ಮನವೊಲಿಸುವ ಕೆಲಸ ಮಾಡಲಾಗುತ್ತಿದೆ
- ಡಾ.ಸೂರ್ಯಪ್ರಕಾಶ ಕಂದಕೂರ, ಆರ್‌ಸಿಎಚ್‌ಒ

***

ಲಸಿಕೆ ಹಾಕಿಸಿಕೊಳ್ಳಿ ಎಂದು ಮನೆ ಮನೆಗೆ ತೆರಳಿದಾಗ ನಮಗೆ ನಿಂದಿಸುತ್ತಾರೆ. ಆದರೂ ನಾವು ಮೇಲಾಧಿಕಾರಿಗಳ ಮಾತನ್ನು ಮೀರುವಂತಿಲ್ಲ.
- ಹೆಸರು ಹೇಳಲಿಚ್ಛಿಸದ ಆಶಾ ಕಾರ್ಯಕರ್ತೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.