ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಖುಷಿ: 4 ಎಕರೆಯಲ್ಲಿ ಸಮ್ಮಿಶ್ರ ಬೆಳೆಯ ಲಾಭ

ದೋರನಹಳ್ಳಿಯಲ್ಲಿ ತಂದೆ ಜೊತೆಗೂಡಿ ಯುವ ರೈತನಿಂದ ಕೃಷಿ; ಕೈ ಹಿಡಿದ ಬದನೆ
Last Updated 2 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ದೋರನಹಳ್ಳಿ ಹೊರವಲಯದ 4 ಎಕರೆ ಜಮೀನಿನಲ್ಲಿ ತಂದೆಯ ಜೊತೆಗೂಡಿ ಯುವ ರೈತರೊಬ್ಬರು ಸಮ್ಮಿಶ್ರ ಬೆಳೆ ಬೆಳೆದಿದ್ದಾರೆ.

ತಂದೆ ಸೋಮಲಿಂಗಪ್ಪ ಗುಂಟನೂರು ಅವರಿಗೆ ಸೇರಿದ 4 ಎಕರೆ ಜಮೀನಿನಲ್ಲಿ ಮಗ ಶರಣಕುಮಾರ ಗುಂಟನೂರು 30 ಗುಂಟೆ ಈರುಳ್ಳಿ, 10 ಗುಂಟೆ ಬದನೆಕಾಯಿ, ಅರ್ಧ ಗುಂಟೆ ಟೊಮೆಟೊ, 2 ಎಕರೆಯಲ್ಲಿ ಬಿಳಿ ಜೋಳ ಬೆಳೆದು ಸಣ್ಣ ಹಿಡುವಳಿದಾರರಿಗೆ ಮಾದರಿಯಾಗಿದ್ದಾರೆ.

ಈರುಳ್ಳಿಯಲ್ಲಿ ನಷ್ಟ; ಬದನೆಯಲ್ಲಿ ಲಾಭ

30 ಗುಂಟೆಯಲ್ಲಿ ಈರುಳ್ಳಿ ಬೆಳೆಯಲಾಗಿದೆ. ಇದಕ್ಕಾಗಿ ಸುಮಾರು ₹10 ಸಾವಿರ ಖರ್ಚು ಮಾಡಲಾಗಿದೆ. ಆದರೆ, ಖರ್ಚು ಮಾಡಿದ್ದಕ್ಕಿಂತ ಕಡಿಮೆದರ ಸಿಗುತ್ತದೆ ಎನ್ನುವುದು ಯುವ ರೈತ ಶರಣಕುಮಾರ ಮಾತಾಗಿದೆ.

ಈಗಾಗಲೇ ಈರುಳ್ಳಿಗೆ ಬೆಲೆ ಕಡಿಮೆ ಇದ್ದು, ಕ್ವಿಂಟಲ್‌ಗೆ ₹1,000ರಿಂದ 1,200 ರವರೆಗೆ ಬೆಲೆ ಇದೆ. ಹೀಗಾಗಿ ಹಾಕಿದ್ದ ಬಂಡವಾಳವೂ ಈ ಬಾರಿ ಬರುವುದು ಅನುಮಾನವಾಗಿದೆ. ಇದೇ ಮೊದಲ ಬಾರಿಗೆ ಈರುಳ್ಳಿ ಹಾಕಿದ್ದು, ನಷ್ಟವಾದಂತೆ ಆಗಿದೆ ಎಂದು ಯುವ ರೈತ ಹೇಳುತ್ತಾರೆ.

ಈರುಳ್ಳಿ ಬೆಳೆ ನಷ್ಟವಾದರೂಬದನೆಕಾಯಿಗೆ ಉತ್ತಮ ಬೆಲೆ ಸಿಕ್ಕಿದೆ ಎನ್ನುತ್ತಾರೆ ಅವರು. ಬದನೆಕಾಯಿ ಬೆಳೆಗೆ ₹20,000 ಸಾವಿರ ಖರ್ಚು ಮಾಡಲಾಗಿದೆ. ಒಂದೂವರೆ ಪಟ್ಟು ಲಾಭ ಬಂದಿದೆ. ಸುಮಾರು ₹45 ಸಾವಿರ ಲಾಭ ಬಂದಿದೆ. ಇದು ನಮ್ಮ ಕೈ ಹಿಡಿದಿದೆ ಎನ್ನುತ್ತಾರೆ ಅವರು. ಮನೆ ಬಳಕೆಗಾಗಿ ಅರ್ಧ ಗುಂಟೆಯಲ್ಲಿ ಟೊಮೆಟೊ ಬೆಳೆಸಿದ್ದಾರೆ. ಈಗ ಅಂತಿಮ ಹಂತಕ್ಕೆ ಬಂದಿದೆ.

8 ವರ್ಷದಿಂದ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದರೂ ಸರ್ಕಾರದ ಸೌಲಭ್ಯದಿಂದ ದೂರವೇ ಉಳಿದಿದ್ದಾರೆ. ಸರ್ಕಾರವೂ ಇವರಿಗೆ ಯಾವುದೇ ಸಬ್ಸಿಡಿ ಕೊಟ್ಟಿಲ್ಲ. ನಮಗೆ ಇದರ ಬಗ್ಗೆ ತಿಳಿವಳಿಕೆ ಇಲ್ಲ ಎನ್ನುತ್ತಾರೆ ಶರಣಕುಮಾರ.

ಜಮೀನಿನಲ್ಲಿ ಮನೆ ನಿರ್ಮಾಣ

ಶರಣಕುಮಾರ ಕುಟುಂಬದವರು ಸದ್ಯ ಜಮೀನಿನಲ್ಲಿಯೇ ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಟ್ಟಡ ಕಾಮಗಾರಿ ಅರ್ಧವಾಗಿದ್ದು, ಅಲ್ಲಿಯೇ ಕುಟುಂಬಸ್ಥರು ಜೀವನ ಸಾಗಿಸುತ್ತಿದ್ದಾರೆ. ರಾತ್ರಿಯಲ್ಲಿ ಸೋಲಾರ್‌ ವಿದ್ಯುತ್‌ ಮೂಲಕ ದೀಪ, ಮೊಬೈಲ್‌ ಚಾರ್ಜ್‌ ಮಾಡಿಕೊಳ್ಳುತ್ತಿದ್ದಾರೆ.

ಕೊಳವೆ ಬಾವಿ ಮೂಲಕ ನೀರು

ತೋಟಗಾರಿಕೆ ಬೆಳೆಗೆ ಕೊಳವೆಬಾವಿ ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ಮಳೆಯನ್ನೇಆಶ್ರಯಿಸಿ ಬೆಳೆಯುವುದಿಲ್ಲ. ಈರುಳ್ಳಿಯನ್ನು ಕೊಯ್ಲು ಮಾಡಲಾಗಿದೆ. ಮುಂದೆ ಯಾವ ಬೆಳೆ ಸೂಕ್ತ ಎನ್ನುವುದು ಇನ್ನೂ ನಿರ್ಧಾರ ಮಾಡಿಲ್ಲ ಎಂದು ಶರಣಕುಮಾರ ತಿಳಿಸುತ್ತಾರೆ.

‘ರೈತರು ಯಾವ ಬೆಳೆಗೆ ರೋಗ ಬರುತ್ತದೆ ಎನ್ನುವುದನ್ನು ತಿಳಿದುಕೊಂಡರೆ ಅದರ ನಿಯಂತ್ರಣ ಮಾಡಲು ಸುಲಭ. ಅನುಭವವೇ ನಮಗೆ ಪಾಠ ಕಲಿಸಿಕೊಡುತ್ತದೆ. ಈ ಮೂಲಕ ಕೃಷಿ ಚಟುವಟಿಕೆಯಲ್ಲಿ ಯಶಸ್ಸು ಸಾಧ್ಯ ಎಂದು’ ಯುವ ರೈತರು ಹೇಳುವ ಮಾತಾಗಿದೆ.

***

ಇದ್ದ ಜಮೀನಿನಲ್ಲೇ ವಿವಿಧ ಬೆಳೆ ಬೆಳೆದಿದ್ದರಿಂದ ಒಂದು ನಷ್ಟವಾದರೂ ಮತ್ತೊಂದು ಬೆಳೆ ಕೈ ಹಿಡಿಯುತ್ತದೆ. ಹೀಗಾಗಿ ರೈತರುಎರಡ್ಮೂರು ಬೆಳೆ ಬೆಳೆಯಬೇಕು
ಶರಣಕುಮಾರ ಗುಂಟನೂರು, ಯುವ ರೈತ

***

ಶರಣಕುಮಾರ ನಾನು ಇಬ್ಬರು ಜೊತೆಗೂಡಿ ತೋಟಗಾರಿಕೆ ಮಾಡುತ್ತಿದ್ದೇವೆ. ಈರುಳ್ಳಿಗೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ಇಲ್ಲದಿದ್ದರಿಂದ ಈ ಬಾರಿ ನಷ್ಟಕ್ಕೊಳಗಾಗಿದ್ದೇವೆ
ಸುನಿಲ್ ಗೋಪಾಲ ರಾಠೋಡ, ರೈತ ದೋರಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT