ಸೋಮವಾರ, ಅಕ್ಟೋಬರ್ 18, 2021
27 °C

ಗುರುಮಠಕಲ್: ತುಂತುರು ಮಳೆ, ಬೆಳೆ ಹಾನಿ ಭೀತಿ

ಎಂ.ಪಿ.ಚಪೆಟ್ಲಾ Updated:

ಅಕ್ಷರ ಗಾತ್ರ : | |

Prajavani

ಗುರುಮಠಕಲ್: ಕಳೆದ ವಾರದಿಂದ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಜಿಟಿ ಜಿಟಿ ಮಳೆಯಾಗುತ್ತಿದೆ. ವರುಣನ ಚೆಲ್ಲಾಟವು ರೈತಾಪಿ ವರ್ಗದಲ್ಲಿ ಬೆಳೆ ಹಾನಿಯ ಭೀತಿಯನ್ನು ಮೂಡಿಸಿದೆ.

ಕಟಾವು ಮಾಡಿದ ಹೆಸರು, ಉದ್ದು ಬಿಸಿಲಿಗೆ ಒಣಗಿಸಿದರೆ ಕಾಳು ಹಾಳಾಗದು. ಚೀಲದಲ್ಲಿಯೇ ಇಟ್ಟರೆ ಬಿಳಿಬಣ್ಣಕ್ಕೆ ತಿರುಗಿ ಬೆಲೆ ಕಡಿಮೆಯಾಗುತ್ತದೆ. ಆದರೆ, ದಿನವೂ ಮೋಡ ಕವಿದ ವಾತಾವರಣದಿಂದ ಒಣಗಿಸಲು ಸಾಧ್ಯವಾಗಿಲ್ಲ. ಬೆಳೆದ ಅಲ್ಪ ಬೆಳೆಗೂ ಬೆಲೆ ಸಿಗದೆ ಹಾಳಾಗುವ ಭೀತಿಯನ್ನು ರೈತರು ತೋಡಿಕೊಂಡರು.

‘ಸ್ವಲ್ಪ ಮಳೆಯಾಗಿ ನಿಂತಿದ್ದರೆ ಸಮಸ್ಯೆಯಿರಲಿಲ್ಲ. ಆದರೆ, ಹೀಗೆ ಮಳೆರಾಯ ಬಿಟ್ಟು ಬಿಡದೆ ಕಾಡುತ್ತಿದ್ದಾನೆ. ಇದರಿಂದ ತೊಗರಿ ಸಸಿಗಳ ಬೇರು ಕೊಳೆಯುತ್ತದೆ. ನಮ್ಮ ಜಮೀನಿನಲ‌್ಲಿ ಈಗಾಗಲೇ ಮಳೆ ನೀರು ನಿಂತಿದ್ದರಿಂದ ಅಲ್ಲಲ್ಲಿ ತಿಗರಿ ಸತ್ತಿದೆ. ಇನ್ನೂ ಮಳೆ ಸುರಿದರೆ ಬೆಳೆ ಎಲ್ಲಾ ನಾಶವಾಗುತ್ತದೆ’ ಎಂದು ಕೃಷಿಕ ಮಾಣಿಕಪ್ಪ ಸಮಸ್ಯೆ ತೋಡಿಕೊಂಡರು.

‘ಕಳೆದ ವರ್ಷದಿಂದ ಮಳೆ ಪ್ರಮಾಣ ಹೆಚ್ಚಿದ್ದರಿಂದ ಭೂಮಿಯ ತೇವಾಂಶವೂ ಹೆಚ್ಚುತ್ತಿದೆ. ಇಲ್ಲಿಗೆ ಮಳೆ ನಿಂತರೆ ಉಳಿದ ಬೆಳೆಯಾದರೂ ಕೈಸೇರುತ್ತದೆ. ಇಲ್ಲವಾದರೆ ಮುಂಗಾರು ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಬೇಕಾದೀತು. ಉದ್ದು ಮತ್ತು ಹೆಸರು ಬೆಳೆಗಳು ಕೋಯ್ಲಿಗೆ ಬಂದಾಗ ಮಳೆ ಸುರಿದು ಸಮಸ್ಯೆಯಾಗಿದೆ. ಉದ್ದಿನ ಕಾಳು ಬಿಳಿ ಬಣ್ಣಕ್ಕೆ ತಿರುಗಿ ಬೆಲೆಯಿಲ್ಲದಂತಾಗಿದೆ. ಹೆಸರು ಕಾಳಿನದ್ದೂ ಅದೇ ಕಥೆ. ಈಗ ತೊಗರಿಯೂ ಸಾಯುವ ಲಕ್ಷಣಗಳು ಕಾಣುತ್ತಿವೆ. ನಮ್ಮ ಹಣೆ ಬರಹ ಸರಿಯಿಲ್ಲ’ ಎಂದು ರೈತರಾದ ಹಣಮಂತು, ಯಲ್ಲಪ್ಪ, ಪ್ರಸಾದ ಅಲವತ್ತುಕೊಂಡರು.

*ನಿರಂತರ ಮಳೆ ಸುರಿದು ಭೂಮಿಯಲ್ಲಿ ತೇವಾಂಶ ಹೆಚ್ಚಿದೆ. ಅಲ್ಲಲ್ಲಿ ತೊಗರಿ ಸಸಿಗಳ ಬೇರು ಕೊಳೆಯುತ್ತಿದೆ. ಹೀಗೆ ಮುಂದುವರೆದರೆ ಸಂಪೂರ್ಣ ಬೆಳೆ ನಾಶವಾಗುವ ಭೀತಿಯಿದೆ

–ಅಶೋಕ ಬೆಸ್ತ ಕಾಕಲವಾರ, ಕೃಷಿಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು