ಗುರುವಾರ , ಸೆಪ್ಟೆಂಬರ್ 23, 2021
27 °C
ಭಾನುವಾರದ ಸಂಪೂರ್ಣ ಲಾಕ್‌ಡೌನ್‌; ನಗರದ ವಿವಿಧೆಡೆ ಆಟೊ ಸಂಚಾರ

ಯಾದಗಿರಿ ನಗರದಲ್ಲಿ ಲಾಕ್‌ಡೌನ್‌ ವಿಫಲ, ಉಳಿದೆಡೆ ಯಶಸ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರದಲ್ಲಿ ಭಾನುವಾರದ ಲಾಕ್‌ಡೌನ್‌ಗೆ ಜನರು ಕ್ಯಾರೇ ಎನ್ನದೆ ಓಡಾಟ ನಡೆಸಿದ್ದರೆ, ಜಿಲ್ಲೆಯ ವಿವಿಧೆಡೆ ಕಟ್ಟುನಿಟ್ಟಾಗಿ ಜಾರಿಯಾಗಿ ಯಶಸ್ವಿಯಾಗಿದೆ. 

ಆಗಸ್ಟ್ 2ರವರೆಗೆ ರಾಜ್ಯಾದ್ಯಂತ ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್‌ ನಡೆಸಲು ಸರ್ಕಾರ ಆದೇಶಿಸಿದೆ. ಮೊದಲ ಭಾನುವಾರ ನಗರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ.

ಹಾಲು, ತರಕಾರಿ, ಅಗತ್ಯ ಸೇವೆ ಹೊರತುಪಡಿಸಿ ಉಳಿದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಬಸ್‌ ಸಂಚಾರ ಸ್ಥಗಿತಗೊಂಡಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಅಂತರ ಮರೆತು, ಮಾಸ್ಕ್ ಧರಿಸದೆ ಅನಾವಶ್ಯಕವಾಗಿ ಸಾರ್ವಜನಿಕರು ಓಡಾಟ ನಡೆಸಿದ್ದರು. ಸುಭಾಷ್, ಶಾಸ್ತ್ರಿ ವೃತ್ತ, ಹೈದರಾಬಾದ್‌ ರಸ್ತೆ ಸೇರಿದಂತೆ ವಿವಿಧೆಡೆ ಹಣ್ಣಿನ ವ್ಯಾಪಾರ ನಡೆಯಿತು. ಸಂಜೆ ವೇಳೆಗೆ ಆಟೊಗಳು ಎಲ್ಲ ಕಡೆ ಓಡಾಟ ನಡೆಸಿದವು.

ವಿದ್ಯುತ್‌ ಕಡಿತ: ನಗರದಲ್ಲಿ 110 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣೆ ಕೆಲಸದ ಅಂಗವಾಗಿ ಭಾನುವಾರ ಬೆಳಿಗ್ಗೆ 8 ರಿಂದ ಮಧ್ಯಾಹ್ನ ಮೂರು ಗಂಟೆಯ ತನಕ ವಿದ್ಯು‌ತ್‌ ಕಡಿತ ಮಾಡಲಾಗಿತ್ತು. 110 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೋಗುವ ಎಲ್ಲಾ ವಿದ್ಯುತ್ ಮಾರ್ಗಗಳಿಗೆ ವಿದ್ಯುತ್ ಸರಬರಾಜು ವ್ಯತ್ಯಯವಾಗಿತ್ತು.

ಪೊಲೀಸರಿಗೂ ಕೊರೊನಾ ಭೀತಿ: ನಗರದ ಪ್ರಮುಖ ರಸ್ತೆಗಳಲ್ಲಿ ಹೂವಿನ ವ್ಯಾಪಾರ, ಹಣ್ಣಿನ ವ್ಯಾಪಾರ ಜೋರಾಗಿ ನಡೆದಿತ್ತು. ಆದರೆ, ಎರಡು ಪ್ರಮುಖ ವೃತ್ತಗಳಲ್ಲಿ ಮಾತ್ರ ಪೊಲೀಸರು ಇದ್ದರು. ಉಳಿದೆಡೆ ಕಾಣಿಸಿಕೊಳ್ಳಲಿಲ್ಲ. ಇದರಿಂದ ಪೊಲೀಸರಿಗೂ ಕೊರೊನಾ ಭೀತಿ ಇದೆಯಾ ಎನ್ನುವಂತಾಗಿತ್ತು.

ದ್ವಿಚಕ್ರ ವಾಹನ ಸಂಚಾರ ಎಂದಿನಂತೆ ಇತ್ತು. ಅಲ್ಲಲ್ಲಿ ಆಟೊಗಳು ಓಡಾಟ ನಡೆದಿತ್ತು. ಪೊಲೀಸರು ಹೆಚ್ಚು ತಲೆಕೆಡಿಸಿಕೊಳ್ಳದೆ ಲಾಕ್‌ಡೌನ್ ಉಲ್ಲಂಘಿಸಿದವರ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲ. ಜಿಲ್ಲೆಯಲ್ಲಿ 90 ಕಂಟೇನ್ಮೆಂಟ್‌ ಝೋನ್‌ ರಚನೆಯಾಗಿದ್ದರಿಂದ ಅಲ್ಲಿಯೂ ಭದ್ರೆತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು