ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಅಪ್ಪಂದಿರ ದಿನ: ಪ್ರತಿ ದಿನವೂ ಅಪ್ಪನ ನೆನಪು

Last Updated 20 ಜೂನ್ 2021, 5:08 IST
ಅಕ್ಷರ ಗಾತ್ರ

ಚನ್ನಪಟ್ಟಣ: ‘ಅಪ್ಪ ತೀರಿಹೋಗಿ ಎರಡು ತಿಂಗಳಾಯಿತು. ಅವರು ಮನೆಯಿಂದ ಆಸ್ಪತ್ರೆಗೆ ಹೋದಾಗ ನೋಡಿದ್ದು. ಅವರ ಅಂತ್ಯಸಂಸ್ಕಾರದ ವೇಳೆಯಲ್ಲಿಯೂ ದೂರದಿಂದ ತೋರಿಸಿದರು. ಅವರು ನಮ್ಮ ಅಪ್ಪ ಎನ್ನಿಸಲಿಲ್ಲ...’

–ಹೀಗೆ ಹೇಳುವಾಗ 12 ವರ್ಷದ ಪೂಜಾಶ್ರೀ ಕಣ್ಣು ತೇವವಾಗುತ್ತವೆ.

ತಾಲ್ಲೂಕಿನ ಕನ್ನಸಂದ್ರ ಗ್ರಾಮದ 44 ವರ್ಷದ ಮೋಹನ್ ಕೋವಿಡ್‌‌ನಿಂದಾಗಿ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದಾರೆ. ಅವರು ಜೀವನೋಪಾಯಕ್ಕಾಗಿ ಅಂಗಡಿಯೊಂದನ್ನು ನಡೆಸುತ್ತಿದ್ದರು. ಅವರ ಪತ್ನಿ ರೇಖಾ. ಈ ದಂಪತಿಗೆ ಒಬ್ಬಳೇ ಮಗಳುಪೂಜಾಶ್ರೀ.

ಮೋಹನ್‌ಗೆ ಕೊರೊನಾ ಸೋಂಕು ಕಾಣಿಸಿಕೊಂಡು ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಂಕು ತೀವ್ರಗೊಂಡಾಗ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಅಲ್ಲಿಯೇ ಕೊನೆಯುಸಿರೆಳೆದಿದ್ದರು. ಮೃತದೇಹವನ್ನು ಕನ್ನಸಂದ್ರ ಗ್ರಾಮಕ್ಕೆ ತಂದು ಪಿಪಿಇ ಕಿಟ್ ಧರಿಸಿ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಕುಟುಂಬಸ್ಥರಿಗೆ ದೂರದಿಂದ ಮುಖ ತೋರಿಸಲಾಗಿತ್ತು.

ಅಂತ್ಯಸಂಸ್ಕಾರದ ವೇಳೆ ಮಗಳು ಇದ್ದರೂ ಆಕೆಗೆ ಅದು ನಮ್ಮ ಅಪ್ಪ ಎನ್ನುವ ನಂಬಿಕೆ ಬರಲಿಲ್ಲ. ಆಸ್ಪತ್ರೆಯಿಂದ ಗ್ರಾಮಕ್ಕೆ ತಂದು 10 ನಿಮಿಷದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಎಲ್ಲವೂ ಕ್ಷಣ ಮಾತ್ರದಲ್ಲಿ ನಡೆದುಹೋಯಿತು. ಅವರನ್ನು ಸರಿಯಾಗಿ ನೋಡಲೂ ಆಗಲಿಲ್ಲ ಎಂದು ನೆನೆಸಿಕೊಳ್ಳುವಾಗ ಪತ್ನಿ ರೇಖಾ ಅವರ ಕಣ್ಣಿನಲ್ಲಿ ನೀರು ತುಂಬುತ್ತದೆ.

‘ಅಪ್ಪ ಇದ್ದಾಗ ಅವರ ಜೊತೆ ಓಡಾಡಿಕೊಂಡಿದ್ದೆ. ಅವರ ಜೊತೆ ಅಂಗಡಿಗೆ ಹೋಗುತ್ತಿದ್ದೆ. ತಿಂಡಿ ತಂದು ಕೊಡುತ್ತಿದ್ದರು. ಮನೆಗೆ ಬಂದರೆ ಅಪ್ಪನ ಜೊತೆಯಲ್ಲಿಯೇ ಕಾಲ ಕಳೆಯುತ್ತಿದ್ದೆ. ಈಗ ಅಪ್ಪ ಇಲ್ಲ ಎನ್ನುವ ನೋವು ಕಾಡುತ್ತಿದೆ. ಅವರು ಎಲ್ಲೋ ಹೋಗಿದ್ದಾರೆ. ಮತ್ತೆ ಮನೆಗೆ ವಾಪಸ್ ಬರುತ್ತಾರೆ ಎನ್ನುವ ಆಶಾಭಾವನೆಯಲ್ಲಿಯೇ ಕಾಲ ಕಳೆಯುವಂತಾಗಿದೆ’ ಎಂದು ಹೇಳುವಾಗ ಪೂಜಾಶ್ರೀ ಗದ್ಗದಿತಳಾಗುತ್ತಾಳೆ.

‘ಅಪ್ಪ ಇಲ್ಲದ ಈ ಎರಡು ತಿಂಗಳು ಕಾಲ ಕಳೆಯುವುದು ಕಷ್ಟವಾಯಿತು. ಮುಂದೆಯೂ ಕಷ್ಟವಾಗುತ್ತದೆ. ಅಪ್ಪ ಕೊರೊನಾ ಸೋಂಕು ಎಂದು ಆಸ್ಪತ್ರೆಗೆ ಹೋಗುವವರೆಗೂ ಜೊತೆಯಲ್ಲಿದ್ದೆ. ಬೇಗ ವಾಪಸ್ ಬರುವುದಾಗಿ ಹೇಳಿ ಹೋದ ಅಪ್ಪ ಮನೆಗೆ ಬರಲೇ ಇಲ್ಲ’ ಎಂದು ಹೇಳುತ್ತಿದ್ದಂತೆ ಕಣ್ಣೀರು ತುಂಬಿಕೊಂಡಳು.

ಕೊರೊನಾ ಮಾರಿಗೆ ಬಲಿಯಾಗಿರುವವರ ಎಷ್ಟೋ ಮಕ್ಕಳು ಈ ರೀತಿ ಅನಾಥರಾಗಿದ್ದಾರೆ. ಯಾರಿದ್ದರೂ ಅಪ್ಪ ಇಲ್ಲ ಎನ್ನುವ ಕೊರಗು ಕಡೆಯವರೆಗೆ ಕಾಡುತ್ತದೆ. ಇಂತಹ ಸ್ಥಿತಿ ಯಾರಿಗೂ ಬರಬಾರದು ಎನ್ನುವುದು ಮೋಹನ್ ಕುಟುಂಬದವರ ನೋವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT