ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ನೊಂದವರಿಗೆ ನ್ಯಾಯ ದೊರಕಿಸುವಂತೆ ಡಿಸಿ ಸೂಚನೆ

Published 11 ಸೆಪ್ಟೆಂಬರ್ 2023, 5:50 IST
Last Updated 11 ಸೆಪ್ಟೆಂಬರ್ 2023, 5:50 IST
ಅಕ್ಷರ ಗಾತ್ರ

ಯಾದಗಿರಿ: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳನ್ನು ಕಡಿಮೆ ಮಾಡುವ ಜೊತೆಗೆ ದಾಖಲಾದ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಲು ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಕಂದಾಯ ಇಲಾಖೆ ಇನ್ನಿತರ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ನಿರ್ದೇಶಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲೆಯ ಅನುಸೂಚಿತ ಜಾತಿ, ಪಂಗಡಗಳ ದೌರ್ಜನ್ಯ ನಿಯಂತ್ರಣ ಜಾಗೃತಿ ಸಮಿತಿಯ ಸಭೆಯಲ್ಲಿ ಸದಸ್ಯರು ಕೋರಿಕೆಗೆ ಸ್ಪಂದಿಸಿ ಅವರು ಮಾತನಾಡಿದರು.

ಶೋಷಣೆ ಮಾಡಿದವರಿಗೆ ಕಾನೂನಿನಡಿ ಆಗುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮತ್ತು ದೌರ್ಜನ್ಯ ಪ್ರಕರಣಗಳಲ್ಲಿ ನೊಂದವರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಪರಿಶಿಷ್ಟ ಜಾತಿ/ವರ್ಗಗಳ ಮೇಲಿನ ದೌರ್ಜನ್ಯ ಅಧಿನಿಯಮ ಅನ್ವಯ ದಾಖಲಾದ ಪ್ರತಿಯೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ ಧನ ಮಂಜೂರು ಮಾಡಬೇಕು. ಪರಿಹಾರ ನೀಡುವಲ್ಲಿ ಯಾವುದೇ ರೀತಿಯ ವಿಳಂಬವಾಗದಂತೆ ಕ್ರಮವಹಿಸಲು ಸೂಚಿಸಿದರು.

ಸಮಿತಿಯ ಸದಸ್ಯರೊಬ್ಬರು ಮಾತನಾಡಿ ದೌರ್ಜನ್ಯ ಪ್ರಕರಣಗಳು ನಡೆದರೂ ತಪ್ಪಿತಸ್ಥರಿಗೆ ಬಂಧಿಸಿ, ಸಮುದಾಯದವರ ಮೇಲೆ ನಡೆಯುವ ದೌರ್ಜನ್ಯವನ್ನು ನಿಯಂತ್ರಿಸಬೇಕು ಎಂದು ಸಭೆಗೆ ಕೋರಿದರು. ಇದಕ್ಕೆ ಸ್ಪಂದಿಸಿದ ಡಿವೈಎಸ್ಪಿ ಬಸವೇಶ್ವರ ಯಾವುದೇ ದೌರ್ಜನ್ಯ ಪ್ರಕರಣಗಳು ನಡೆದರೆ ಅದನ್ನು ತನಿಖೆ ನಡೆಸಿ. ಯಾವುದೇ ಕಾರಣಕ್ಕೂ ತಪ್ಪಿತಸ್ಥರನ್ನು ರಕ್ಷಣೆ ಮಾಡದೆ ತ್ವರಿತವಾಗಿ ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಈ ಕುರಿತಂತೆ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಸಭೆಗೆ ವಿವರಿಸಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರು ಸಾಲ ಸೌಲಭ್ಯ ಕೋರಿ ವಿವಿಧ ಬ್ಯಾಂಕ್‌ಗಳಿಗೆ ಹೋದ ಸಂದರ್ಭದಲ್ಲಿ ಸಕಾಲಕ್ಕೆ ಸಾಲ ಸೌಲಭ್ಯ ಕಲ್ಪಿಸಲು ತಾರತಮ್ಯ ಮಾಡದೇ ಅರ್ಹ ಫಲಾನುಭವಿಗಳಿಗೆ ನೆರವಾಗಬೇಕೆಂದು ಸಮಿತಿಯ ಸದಸ್ಯರು ಕೋರಿದರು. ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಬಗ್ಗೆ ಪರಿಶೀಲಿಸಿ ಸಕಾಲಕ್ಕೆ ಅವರಿಗೆ ಸ್ಪಂದಿಸುವಂತಾಗಬೇಕು. ವಿವಿಧ ಬ್ಯಾಂಕ್‌ಗಳ ಮೂಲಕ ಸಕಾರಾತ್ಮಕ ಸ್ಪಂದನೆಯಾಗುವಂತೆ ನೋಡಿಕೊಳ್ಳಲು ಸಂಬಂಧಿಸಿದವರಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.

ದಲಿತರ ಮೇಲಿನ ದೌರ್ಜನ್ಯ ನಿಯಂತ್ರಿಸಲು ಸರ್ಕಾರದಿಂದ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರ ಇಲಾಖೆಗಳ ಮೂಲಕ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲು ಎಂದು ಸೂಚಿಸಿದರು. ಜಿಲ್ಲೆಯ ಎಲ್ಲಾ ತಾಲ್ಲೂಕಿನ ಗ್ರಾಮಗಳಲ್ಲಿ ಎನ್‌ಜಿಒ ಮೂಲಕ ಬೀದಿ ನಾಟಕ ಮೂಲಕ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶಿಸಿದರು.

ಸಮಿತಿಯ ಸದಸ್ಯರಾದ ನಾಗಣ್ಣ ಬಡಿಗೇರ ಮಾತನಾಡಿ, ಯಾದಗಿರಿ ತಾಲ್ಲೂಕಿನ ಕಿಲ್ಲನಕೇರಾ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ರೈತರು ತಮ್ಮ ಜಮೀನಿಗೆ ತೆರಳಲು ಸರಿಯಾದ ರಸ್ತೆ ಇಲ್ಲದೆ ನರಕಯಾತನೆ ಅನುಭವಿಸುತ್ತಿದ್ದು, ಹೊಲಕ್ಕೆ ರಸ್ತೆ ಮಾಡಿಕೊಡಬೇಕು ಹಾಗೂ ಕೆಲವು ಬಡ ಪರಿಶಿಷ್ಟ ವರ್ಗದ ಜನರು ಗುಡಿಸಲಿನಲ್ಲಿಯೇ ವಾಸಿಸುತ್ತಿದ್ದಾರೆ. ಮಳೆ ಬಂದಾಗ ರಕ್ಷಿಸಿಕೊಳ್ಳಲು ಆ ಗುಡಿಸಲಿಗೆ ಸಿಮೆಂಟ್ ಮಾಡಿಕೊಂಡಿದ್ದಾರೆ. ಅಂಥ ಬಡ ಕುಟುಂಬಕ್ಕೆ ಸರ್ಕಾರದಿಂದ ಮನೆ ಮಂಜೂರು ಮಾಡಲು ಕೋರಿದರು. ಸ್ಪಂದಿಸಿದ ಜಿಲ್ಲಾಧಿಕಾರಿ ಸಮಸ್ಯೆಯ ಇತ್ಯರ್ಥಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಡಿವೈಎಸ್ಪಿ ಬಸವೇಶ್ವರ, ಸಮಾಜ ಕಲ್ಯಾಣ ಇಲಾಖಾಧಿಕಾರಿ ಸರೋಜಾ, ಪರಿಶಿಷ್ಟ ವರ್ಗಗಳ ಇಲಾಖಾಧಿಕಾರಿ ಪ್ರಭುದೊರೆ, ದೌರ್ಜನ್ಯ ಸಮಿತಿ ಸದಸ್ಯರಾದ ರಮೇಶ ದೊರೆ ಆಲ್ದಾಳ, ರಮಾದೇವಿ ಕಿಲ್ಲನಕೇರಾ, ಆರ್‌ಟಿಒ ಅಧಿಕಾರಿ ಮಿಲಿಂದಕುಮಾರ ಎಸ್ ಎಸ್, ಪೊಲೀಸ್ ಇನ್ಸ್‌ಪೆಕ್ಟರ್ ದೇವಿಂದ್ರಪ್ಪ, ಜೆಸ್ಕಾಂ ಎಇ ರಾಘವೇಂದ್ರ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ದೀಪಾ ಇದ್ದರು.

ದಿಢೀರ್ ಭೇಟಿ ನೀಡಿ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿ ನಿಲಯಗಳಿಗೆ ಅಧಿಕಾರಿಗಳು ಆಗಾಗ ದಿಢೀರ್ ಭೇಟಿ ನೀಡಿ ಮಕ್ಕಳಿಗೆ ನೀಡುತ್ತಿರುವ ಮೂಲ ಸೌಕರ್ಯ ಆಹಾರದ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದುಕೊಳ್ಳಿ ವಿದ್ಯಾರ್ಥಿ ನಿಲಯದ ಸ್ವಚ್ಛತೆ ಇನ್ನಿತರ ಸೌಕರ್ಯಗಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT