ಶುಕ್ರವಾರ, ಅಕ್ಟೋಬರ್ 23, 2020
27 °C
ಯಾದಗಿರಿ ನಗರಸಭೆ ಪ್ರಗತಿ ಪರಿಶೀಲನಾ ಸಭೆ

ಯಾದಗಿರಿ ನಗರಸಭೆ: ನಗರ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಲು ಜಿಲ್ಲಾಧಿಕಾರಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕೊರೊನಾ ಸಾಂಕ್ರಾಮಿಕ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ನಗರಸಭೆಯ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್. ಅವರು ನಗರಸಭೆಯ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ನಗರಸಭೆ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎಸ್‍ಎಫ್‍ಸಿ ಮುಕ್ತ ನಿಧಿ, ನಗರೋತ್ಥಾನ ಫೇಸ್-2, ಫೇಸ್-3, ಸ್ವಚ್ಛ ಭಾರತ್ ಮಿಷನ್, ಯುಜಿಡಿ, ಕುಡಿಯುವ ನೀರು, 14 ಹಾಗೂ 15ನೇ ಹಣಕಾಸು ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ನಗರಸಭೆಯಲ್ಲಿ 31 ವಾರ್ಡ್‍ಗಳಿದ್ದು, 100 ಜನ ಪೌರಕಾರ್ಮಿಕರ ಮಂಜೂರಾತಿ ಆದೇಶವಿದೆ. ಅದರಲ್ಲಿ 70 ಜನ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್-19 ಹಿನ್ನೆಲೆಯಲ್ಲಿ ಎಲ್ಲರಿಗೂ ಕೋವಿಡ್-19 ಪರೀಕ್ಷೆ ಮಾಡಿಸಲಾಗಿದೆ. ಅವರಿಗೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ಹ್ಯಾಂಡ್ ಗ್ಲೌಸ್‍ಗಳನ್ನು ವಿತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕಳೆದ 10 ದಿನಗಳಿಂದ ಜಿಲ್ಲೆಯಲ್ಲಿ ಆಗಾಗ ಮಳೆಯಾಗುತ್ತಿದ್ದು, ಇದರಿಂದ ರಸ್ತೆಗಳು ಹಾನಿಯಾಗಿವೆ. ನಾಲ್ಕು ಮನೆಗಳು ಹಾನಿಯಾಗಿರುವ ಕುರಿತು ವರದಿ ಅಂದಾಜು ಪಟ್ಟಿಯನ್ನು ತಹಶೀಲ್ದಾರ್ ಕಚೇರಿಗೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಲುಂಬಿನಿವನ ಹತ್ತಿರ ಕಸ ಹಾಕುತ್ತಿದ್ದು, ಇದರಿಂದ ಸುತ್ತಮುತ್ತಲಿನ ಪರಿಸರ ಹಾಳಾಗುತ್ತಿದೆ. ಸಾರ್ವಜನಿಕರು ಸಂಚರಿಸುವ ಸ್ಥಳದಲ್ಲಿ ಕಸ ಹಾಕುತ್ತಿರುವವರಿಗೆ ದಂಡ ವಿಧಿಸಿ ಹಾಗೂ ಕಸ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ನಗರಸಭೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರದಲ್ಲಿ ದುರ್ವಾಸನೆಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ವಾರ್ಡ್‍ಗಳಲ್ಲಿ ದುರ್ವಾಸನೆ ಬಾರದಂತೆ ಸ್ವಚ್ಛತೆ ಕಾಪಾಡಬೇಕು ಎಂದು ಹೇಳಿದರು. ನಗರಸಭೆ ವ್ಯಾಪ್ತಿಯ ಸಾರ್ವಜನಿಕರು ಮನೆ-ಮನೆಗೆ ಕಸ ವಿಂಗಡಣೆ ಹಾಗೂ ಸಂಗ್ರಹಕ್ಕೆ ಬುಟ್ಟಿಗಳನ್ನು ವಿತರಿಸಿ, ಕಸ ಸಂಗ್ರಹಿಸಿ ಸೂಕ್ತ ವಿಲೇವಾರಿಗೆ ಕ್ರಮವಹಿಸಿದೆ ಎಂದು ನಗರಸಭೆಯ ಆರೋಗ್ಯ ನಿರೀಕ್ಷಕ ಮಾಹಿತಿ ನೀಡಿದರು.

ನಗರಸಭೆಯ ವ್ಯಾಪ್ತಿಯಲ್ಲಿ ಪ್ರತಿದಿನ 14 ಟನ್ ಕಸ ಸಂಗ್ರಹವಾಗುತ್ತಿದ್ದು, ಅದರಲ್ಲಿ 2 ಟನ್ ಪ್ಲಾಸ್ಟಿಕ್‌ ಅನ್ನು ಎಸಿಸಿ ಸಿಮೆಂಟ್ ಕಾರ್ಖಾನೆಗೆ ನೀಡಲಾಗುತ್ತಿದೆ. ಉಳಿದ ಕಸವನ್ನು ನಗರ ಹೊರವಲಯದ ಬಬಲಾದ ಹತ್ತಿರ ವಿಂಗಡಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ನಗರಸಭೆಯ ವ್ಯಾಪ್ತಿಯಲ್ಲಿ 14 ಸಾವಿರ ಮನೆಗಳಿದ್ದು, ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಿಸಲಾಗಿದೆ. 22 ಸಮುದಾಯ ಶೌಚಾಲಯ ಹಾಗೂ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸ್ವಚ್ಛತೆ, ಕಸ ವಿಂಗಡಣೆಯ ಕುರಿತು ಆಟೋ, ಬ್ಯಾನರ್ ಹಾಗೂ ಡಂಗೂರ ಸಾರುವ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು. ಕಾಮಗಾರಿಯ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಏಜೆನ್ಸಿಗಳು ಕಾಮಗಾರಿಯ ನಿರ್ವಹಣೆಯಲ್ಲಿ ವಿಳಂಬ ಮಾಡುತ್ತಿರುವ ಕುರಿತು ನೋಟಿಸ್ ಜಾರಿ ಮಾಡಬೇಕು ಎಂದು ನಗರಸಭೆಯ ಪ್ರಭಾರಿ ಪೌರಾಯುಕ್ತ ಎಚ್.ಬಕ್ಕಪ್ಪ ಅವರಿಗೆ ಸೂಚಿಸಿದರು.

ಸಭೆಯಲ್ಲಿ ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಂ. ಗಂಗಾಧರಗೌಡ, ಕೆಯುಐಡಿಎಫ್‍ಸಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅಶೋಕ ಕುಮಾರ, ಪರಿಸರ ಎಂಜಿನಿಯರ್‌ ಸಂಗಮೇಶ ಪಡಶೆಟ್ಟಿ, ಕಿರಿಯ ಎಂಜಿನಿಯರ್‌, ಕಾಮಗಾರಿಯ ಶಾಖಾ ನಿರ್ವಾಹಕ ನಾಗರಾಜ ಹಾಗೂ ಸಿಬ್ಬಂದಿ ಇದ್ದರು.

***

ನಗರದಲ್ಲಿ ಶೇ 100ರಷ್ಟು ಸಾರ್ವಜನಿಕ ಶೌಚಾಲಯಗಳು ಚಾಲನೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು

ಡಾ.ರಾಗಪ್ರಿಯಾ, ಜಿಲ್ಲಾಧಿಕಾರಿ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.