ಗುರುವಾರ , ಮಾರ್ಚ್ 30, 2023
21 °C
ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ವಾಣಿಜ್ಯ ಬೆಳೆಯಾಗಿರುವ ಹತ್ತಿ; ಮಾರುಕಟ್ಟೆಗೆ ಲಗ್ಗೆ ಇಟ್ಟ ‘ಬಿಳಿ ಬಂಗಾರ’

ಯಾದಗಿರಿ–ಹತ್ತಿ ಇಳುವರಿ ಕುಸಿತ; ಧಾರಣೆ ಜಿಗಿತ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಹೆಚ್ಚಿನ ಕ್ಷೇತ್ರದಲ್ಲಿ ವಾಣಿಜ್ಯ ಬೆಳೆಯಾದ ಹತ್ತಿಯನ್ನು ಬೆಳೆಯಲಾಗಿದ್ದು, ಧಾರಣೆ ಚಿನ್ನದ ಬೆಲೆಯಂತೆ ಏರಿಕೆ ಕಾಣುತ್ತಿದೆ. ಇದು ರೈತರಿಗೆ ಸಮಾಧಾನ ನೀಡಿದೆ. ಆದರೆ, ಇಳುವರಿ ಕುಸಿದಿದೆ. ಹತ್ತಿ ಸದ್ಯಕ್ಕೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಸದ್ಯ ಪ್ರತಿ ಕ್ವಿಂಟಲ್‌ಗೆ ಧಾರಣೆ ₹8,500 ಇದೆ. ಕಳೆದ ವರ್ಷ ದರ ₹ 5,000 ಅಸುಪಾಸು ಇತ್ತು. ಈ ಬಾರಿ ಬೆಲೆ ಹೆಚ್ಚಳವಾಗಿದ್ದು, ರೈತರು ಸಂತಸಗೊಂಡಿದ್ದಾರೆ. ಇನ್ನೂ ಹೆಚ್ಚಳವಾಗುವ ನಿರೀಕ್ಷೆಯನ್ನು ರೈತರು ಹೊಂದಿದ್ದಾರೆ.

ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹತ್ತಿ ಬಿತ್ತನೆ ಪ್ರದೇಶ ಹೆಚ್ಚಳವಾಗುತ್ತಿದೆ. ಮುಂಗಾರು ಹಂಗಾಮಿನಲ್ಲಿ 1.30 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಹತ್ತಿ ಬಿತ್ತನೆಯಾಗಿದೆ. 180 ರಿಂದ 190 ದಿನಗಳ ಬೆಳೆಯಾಗಿದ್ದು, ಸಿಂಹಪಾಲು ಪಡೆದಿದೆ.

ಶಹಾಪುರ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ಹತ್ತಿ ಬಿತ್ತನೆಯಾಗಿದೆ. ನಂತರದ ಸ್ಥಾನದಲ್ಲಿ ಯಾದಗಿರಿ ಮತ್ತು ಸುರಪುರ ತಾಲ್ಲೂಕುಗಳಿವೆ. ರಾಜ್ಯ ಹೆದ್ದಾರಿಯ ಎರಡು ಬದಿಯಲ್ಲಿ ಹತ್ತಿ ಹೊಲಗಳೇ ಕಾಣಸಿಗುತ್ತವೆ.

‘ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಜಿಲ್ಲೆಗೆ ಹತ್ತಿ ಖರೀದಿದಾರರು ಬಂದಿದ್ದಾರೆ. ನೇರವಾಗಿ ಜಮೀನಿನಲ್ಲಿ ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ’ ಎನ್ನುತ್ತಾರೆ ಮುಡಬೂಳ ಗ್ರಾಮದ ರೈತ ವೆಂಕಟೇಶ.

ಅಧಿಕ ಮಳೆ, ಹುಳು ಬಾಧೆ: ಮುಂಗಾರು ಹಂಗಾಮಿನ ಹತ್ತಿ ಬೆಳೆಗೆ ಅಧಿಕ ಮಳೆ ಮತ್ತು ತಂಬಾಕು ಕೀಡೆ ಬಾಧೆ ಕಾಣಿಸಿಕೊಂಡಿದ್ದರಿಂದ ಇಳುವರಿ ಕುಂಠಿತವಾಗಿದೆ. ಇದರಿಂದ ರೈತರಿಗೆ ಬೆಲೆ ಇದ್ದರೆ ಇಳುವರಿ ಇಲ್ಲದಂತೆ ಆಗಿದೆ. ಜಮೀನು ಗುತ್ತಿಗೆ ಪಡೆದು ಹತ್ತಿ ಬಿತ್ತನೆ ಮಾಡಿದ ರೈತರು ಕೈಕೈ ಹಿಸುಕಿಕೊಳ್ಳುವಂತೆ ಆಗಿದೆ.

ಆಧುನಿಕವಾಗಿ ಹತ್ತಿ ಕೀಳಲು ಯಂತ್ರವಿಲ್ಲ. ಅನಿವಾರ್ಯವಾಗಿ ಕೂಲಿ ಕಾರ್ಮಿಕರನ್ನು ರೈತರು ಅವಲಂಬಿಸಿದ್ದಾರೆ. ಅದರಲ್ಲೂ ಚಿಕ್ಕ ಮಕ್ಕಳು ಹಾಗೂ ಮಹಿಳೆಯರು ಹತ್ತಿ ಕೀಳುವ ಕೆಲಸದಲ್ಲಿ ನಿರತರಾಗಿದ್ದಾರೆ.  ₹5ಗೆ ಒಂದು ಕೆ.ಜಿ ಹತ್ತಿಯನ್ನು ಕೂಲಿ ಕಾರ್ಮಿಕರು ಪಡೆಯುತ್ತಿದ್ದಾರೆ. ಇದು ತುಸು ದುಬಾರಿ ಎನಿಸಿದರೂ ಬೇಸರದ ನಡುವೆ ರೈತರು ಕೂಲಿ ನೀಡುತ್ತಿದ್ದಾರೆ.

‘ಹತ್ತಿ ಧಾರಣೆ ಹೆಚ್ಚಾಗಿರುವುದನ್ನು ಕಂಡ ಕೆಲ ಪುಂಡರು ರಾತ್ರಿ ಸಮಯದಲ್ಲಿ ಜಮೀನುಗಳಿಗೆ ನುಗ್ಗಿ ಹತ್ತಿ ಕೀಳಿ ಕದಿಯುತ್ತಿರುವ ಬಗ್ಗೆ ಅಲ್ಲಲ್ಲಿ ವರದಿಯಾಗಿದೆ. ರೈತರು ಹತ್ತಿ ಸಂರಕ್ಷಣೆಗಾಗಿ ಜಮೀನುಗಳಲ್ಲಿ ಮೊಕ್ಕಾಂ ಹೂಡಿದ್ದಾರೆ. ಇನ್ನು ಹೆಚ್ಚಿನ ಬೆಲೆಯ ನಿರೀಕ್ಷೆಯಲ್ಲಿ ರೈತರು ಕಾಯ್ದು ನೋಡುತ್ತಿದ್ದಾರೆ’ ಎನ್ನುತ್ತಾರೆ ರೈತ ಮುಖಂಡ ಶರಣಪ್ಪ.

‌ಹತ್ತಿ ಖರೀದಿ ಕೇಂದ್ರಗಳು ತೆರೆಯಲಿ: ಜಿಲ್ಲೆಯಲ್ಲಿ ಹತ್ತಿ ಎಲ್ಲ ಖಾಸಗಿಯವರು ಖರೀದಿ ಮಾಡಿದ ನಂತರ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಅದಕ್ಕೆ ಬದಲಾಗಿ ಶಾಶ್ವತವಾಗಿ ಕೇಂದ್ರವನ್ನು ಸ್ಥಾಪಿಸಬೇಕು. ಆಗ ರೈತರು ಯಾವಾಗ ಬೇಕೋ ಆಗ ಮಾರಾಟ ಮಾಡಿಕೊಳ್ಳಲು ಸಾಧ್ಯ. ಈಗ ಹೊರ ರಾಜ್ಯಗಳಿಂದ ಖರೀದಿದಾರರು ಆಗಮಿಸುತ್ತಿದ್ದಾರೆ. ಹೀಗಾಗಿ ರೈತರ ಹಿತದೃಷ್ಟಿಯಿಂದ ಸರ್ಕಾರ ಶಾಶ್ವತ ಕೇಂದ್ರ ಸ್ಥಾಪಿಸಬೇಕು’ ಎಂದು ರೈತರು ಆಗ್ರಹಿಸಿದ್ದಾರೆ.

***

ಸುರಪುರ: ರೈತರ ಕೈಹಿಡಿದ ಹತ್ತಿ ಬೆಳೆ

ಸುರಪುರ: ಹತ್ತಿ ಬೆಳೆಗೆ ದಾಖಲೆ ಬೆಲೆ ದೊರಕಿದ್ದು, ರೈತರ ಬದುಕು ಹಸನಾಗುವತ್ತ ಸಾಗಿದೆ. ಕ್ವಿಂಟಲ್‌ಗೆ ₹8,000 ದಿಂದ 9,000 ಇದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ.

ತಾಲ್ಲೂಕಿನಲ್ಲಿ ಭತ್ತದ ಜೊತೆಗೆ ಹತ್ತಿಯನ್ನೂ ಅಧಿಕವಾಗಿ ಬೆಳೆಯಲಾಗುತ್ತಿದೆ. ತಾಲ್ಲೂಕಿನ ಸುರಪುರ, ಕೆಂಭಾವಿ ಮತ್ತು ಕಕ್ಕೇರಾ ಹೋಬಳಿ ಸೇರಿದಂತೆ ಅಂದಾಜು 19.318 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ.

ಹೆಚ್ಚಾಗಿ ಬಿ.ಟಿ. ಹೈಬ್ರಿಡ್ ತಳಿ ಬೆಳೆಯಲಾಗಿದ್ದು, ಬಹುತೇಕ ಕಡೆ ಮೊದಲ ಹಂತದ ರಾಶಿ ಮಾಡಲಾಗಿದೆ. ಮಧ್ಯಮ ಗಾತ್ರದ ಹತ್ತಿಯಾಗಿದ್ದು, ಕನಿಷ್ಠ ಬೆಂಬಲ ಬೆಲೆ 2020-21ರಲ್ಲಿ ₹5515 ಇತ್ತು. 2021-22 ರಲ್ಲಿ ₹5726 ಬೆಲೆ ನಿಗದಿ ಪಡಿಸಲಾಗಿದೆ.

ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಸಿಗುತ್ತಿರುವುದರಿಂದ ಹತ್ತಿ ಖರೀದಿ ಕೇಂದ್ರ ತೆರೆದಿಲ್ಲ. ಜೂನ್ ತಿಂಗಳಲ್ಲಿ ಬಿತ್ತನೆ ಮಾಡಲಾಗಿದ್ದು, ಅಕ್ಟೋಬರ್‌ನಲ್ಲಿ ಮೊದಲ ಹಂತದ ರಾಶಿ ಬಂದಿದೆ. ಇನ್ನು ಎರಡು ಬಾರಿ ರಾಶಿ ಮಾಡಲಾಗುತ್ತದೆ.

ಚಂದಲಾಪುರದ ರೈತ ವಿಶ್ವರಾಜ ಒಂಟೂರ ಅವರಿಗೆ 15 ಎಕರೆಯಲ್ಲಿ ಮೊದಲ ಹಂತದ ರಾಶಿಯಲ್ಲಿ 100 ಕ್ವಿಂಟಲ್ ಹತ್ತಿ ಬಂದಿದೆ. ಇನ್ನೂ 50 ರಿಂದ 60 ಕ್ವಿಂಟಲ್ ಬರಬಹುದೆಂಬ ನಿರೀಕ್ಷೆಯ ಇದೆ. ಒಂದು ಎಕರೆಗೆ 10 ಕ್ವಿಂಟಲ್ ಇಳುವರಿ ಬರುತ್ತಿದೆ. ₹80 ಸಾವಿರ ಬೆಲೆ ಸಿಗಲಿದ್ದು, ಅದರಲ್ಲಿ ₹30 ಸಾವಿರ ಖರ್ಚು ತಗುಲಿದೆ.

***

ಜಿಲ್ಲೆಯಲ್ಲಿರುವ ಹತ್ತಿ ಮಿಲ್‌ಗಳ ವಿವರ

ಯಾದಗಿರಿ; 1

ಶಹಾಪುರ;7

ಸುರಪುರ;2

ಒಟ್ಟು;10

***

ಶಹಾಪುರ ತಾಲ್ಲೂಕಿನಲ್ಲಿ ಏಳು ಹತ್ತಿ ಕಾರ್ಖಾನೆಗಳಿವೆ. ಹತ್ತಿ ಬೆಲೆ ಹೆಚ್ಚಳವಾಗಿದ್ದರಿಂದ ಖರೀದಿದಾರರು ನೇರವಾಗಿ ಜಮೀನುಗಳಿಗೆ ಬಂದು ಖರೀದಿಸುತ್ತಿದ್ದಾರೆ

- ಅಶೋಕರಾವ ಮಲ್ಲಬಾದಿ, ರೈತ, ಮುಡಬೂಳ

***

ಭತ್ತಕ್ಕಿಂತ ಅಧಿಕ ಲಾಭ ಹತ್ತಿಯಲ್ಲಿ ದೊರಕಿದೆ. ಕಾರ್ಮಿಕರ ಕೊರತೆ ಇದೆ. ಬೇರೆ ಕಡೆಯಿಂದ ಕಾರ್ಮಿಕರನ್ನು ಕರೆಸಿ ಹತ್ತಿ ಬಿಡಿಸಲಾಗಿದೆ. ಇದೇ ಬೆಲೆ ಸತತ ದೊರೆತಲ್ಲಿ ರೈತ ಸಂಕಷ್ಟದಿಂದ ದೂರವಾಗುತ್ತಾನೆ

- ನಿಂಗಯ್ಯ ದೇವಿಕೇರಿ, ರೈತ

***

ಮುಂಕಟ್ಟು (ನಿಗದಿಪಡಿಸಿದ ಸಮಯಕ್ಕೆ ಮೊದಲು) ಬಿತ್ತಿದ ಹತ್ತಿ ಮಳೆಯಿಂದ ಸ್ವಲ್ಪ ಮಟ್ಟಿಗೆ ಹಾಳಾಗಿದೆ. ಹಿಂಕಟ್ಟು ಬಿತ್ತಿದ ಮತ್ತು ನೀರಾವರಿ ವ್ಯಾಪ್ತಿಯ ಬೆಳೆ ಬಂಪರ್ ಬಂದಿದೆ. ಸದ್ಯ ಇರುವ ಬೆಲೆ ದಾಖಲೆ ಮಟ್ಟದ್ದು

- ಡಾ. ಭೀಮರಾಯ ಹವಾಲ್ದಾರ್, ಕೃಷಿ ಅಧಿಕಾರಿ

***

ನಾಲ್ಕುವರೆ ಎಕರೆಯಲ್ಲಿ ಹತ್ತಿ ಬಿತ್ತನೆ ಮಾಡಲಾಗಿದ್ದು, ಅಧಿಕ ಮಳೆಯಿಂದ ಹತ್ತಿ ಇಳುವರಿ ಕುಂಠಿತಗೊಂಡಿದೆ. ಇಲ್ಲದೇ ಬಂಪರ್‌ ಲಾಭ ಪಡೆಯಬಹುದಿತ್ತು

- ತಿಪ್ಪಣ್ಣ ಮುದ್ನಾಳ, ರೈತ

****

ಪ್ರಸಕ್ತ ವರ್ಷ ಹತ್ತಿ ಧಾರಣಿ ಉತ್ತಮವಾಗಿದೆ. ಗುಜರಾತ್‌ ಹಾಗೂ ಇನ್ನಿತರ ರಾಜ್ಯದಲ್ಲಿ ಪ್ರವಾಹ ಹಾಗೂ ಇನ್ನಿತರ ಕಾರಣದಿಂದ ಬೆಳೆ ನಷ್ಟವಾಗಿದೆ. ಪ್ರತಿ ಎಕರೆಗೆ ಎಷ್ಟು ಇಳುವರಿ ಬರುತ್ತಲಿದೆ ಎಂಬುವುದು ಇನ್ನೂ ನಿಖರವಾಗಿ ಗೊತ್ತಾಗಿಲ್ಲ

- ಸುನಿಲಕುಮಾರ, ಸಹಾಯಕ ಕೃಷಿ ನಿರ್ದೇಶಕ, ಶಹಾಪುರ

ಪೂರಕ ಮಾಹಿತಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು