ಗುರುವಾರ , ಮೇ 6, 2021
23 °C
ರಮೇಶ ಜಾರಕಿಹೊಳಿ ರಾಜೀನಾಮೆಗೆ ಆಗ್ರಹ

ಎಸ್‌ಐಟಿ ಕೈಗೊಂಬೆಯಂತೆ ವರ್ತಿಸುತ್ತಿದೆ: ಸ್ಯಾಂಸನ್‌ ಮಾಳಿಕೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಯುವತಿಗೆ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ಲೈಂಗಿಕವಾಗಿ ಶೋಷಣೆ ಮಾಡಿದ ಮಾಜಿ ಸಚಿವ ರಮೇಶ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕು’ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾ ವಕ್ತಾರ ಸ್ಯಾಂಸನ್ ಎಂ.ಮಾಳಿಕೇರಿ ಆಗ್ರಹಿಸಿದರು.

‘ಬಿಜೆಪಿ ಪಕ್ಷದವರು ರಾಮರಾಜ್ಯ ಮಾಡುತ್ತೇವೆ ಎಂದು ಹೇಳಿ ರಾಜ್ಯದಲ್ಲಿ ಹೆಣ್ಣಿಗೆ ಭದ್ರತೆ ಇಲ್ಲದಂತೆ ಮಾಡಿದ್ದಾರೆ. ಸಿ.ಡಿ ಪ್ರಕರಣದಲ್ಲಿ ಆರೋಪಿಯಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಆರೋಪ ಮಾಡಿದವರ ವಿರುದ್ಧ ತನಿಖೆ ಮಾಡುತ್ತಿರುವುದು ಯಾವ ನ್ಯಾಯ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಆರೋಪ ಕೇಳಿ ಬಂದಾಗ ಕೇವಲ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದ್ದಾರೆ. ಆದರೆ, ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದ ರಮೇಶ ಅವರು ಶಾಸಕ ಸ್ಥಾನಕ್ಕೂ ರಾಜಿನಾಮೆ ಸಲ್ಲಿಸಬೇಕು. ಸಮ್ಮಿಶ್ರ ಸರ್ಕಾರವನ್ನು ತಾವೇ ಕೆಡವಿದ್ದೇವೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವುದು ಪ್ರಜಾಪ‍್ರಭುತ್ವದ ಅಣಕ’ ಎಂದು ಹೇಳಿದರು.

‘ಬಿಜೆಪಿ ಸರ್ಕಾರದವರು ರಮೇಶ ಜಾರಕಿಹೊಳಿಗೆ ಅಂಜುತ್ತಿದ್ದಾರೆ. ಹೀಗಾಗಿ ಅವರನ್ನು ರಕ್ಷಿಸುವ ಕೆಲಸ ಮಾಡಲಾಗುತ್ತಿದೆ. ಜೊತೆಗೆ ಪೊಲೀಸರು ಈ ಪ್ರಕರಣದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. 28 ದಿನಗಳಾದರೂ ಬಂಧಿಸದಿದ್ದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಅಧಿಕಾರ ದುರಾಸೆಗಾಗಿ ಪಕ್ಷದ ತತ್ವ ಸಿದ್ಧಾಂತ ಲೆಕ್ಕಿಸದೆ ಗೂಂಡಾ ವರ್ತನೆ, ಅತ್ಯಾಚಾರ ಸೇರಿದಂತೆ ಸಮಾಜಬಾಹಿರ ಕೆಲಸವನ್ನು ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರನ್ನು ಬಹಿರಂಗವಾಗಿ ಅವಾಚ್ಯ ಪದ ಬಳಸಿ ನಿಂದಿಸಿದ್ದಾರೆ. ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಸಂತ್ರಸ್ತರ ಕುಟುಂಬದವರಿಗೆ ಜೀವ ಬೆದರಿಕೆ ಹಾಕಿ ಸಾಕ್ಷಿಗಳನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ. ಎಸ್‌ಐಟಿ ಜಾರಕಿಹೊಳಿ ಕೈಗೊಂಬೆಯಂತೆ ವರ್ತಿಸುತ್ತಿದೆ. ಆರೋಪಿಗಳನ್ನು ವಿಚಾರಿಸುವ ಬದಲು ಆರೋಪ ಮಾಡಿದವರನ್ನೆ ಟಾರ್ಗೆಟ್‌ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಚನ್ನಾರೆಡ್ಡಿ ಪಾಟೀಲ ತುನ್ನೂರು, ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರ, ಕೆಪಿಸಿಸಿ ಸದಸ್ಯ ಶರಣಪ್ಪ ಕೂಲೂರು, ಯಾದಗಿರಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರೆಪ್ಪ ಬಿಳ್ಹಾರ ಹಾಗೂ ಕೆಪಿಸಿಸಿ ವೀಕ್ಷಕ ರಾಘವೇಂದ್ರ ಮಾನಸಗಲ್‌ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು