ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ಡೆಂಗಿ ಭೀತಿ: ಜಿಲ್ಲೆಯಲ್ಲಿ ಪರೀಕ್ಷೆ ಹೆಚ್ಚಳ

ಜನವರಿ 1ರಿಂದ ಆಗಸ್ಟ್‌ 23ರ ರವರೆಗೆ 2,770 ಸ್ಯಾಂಪಲ್‌ ಪರೀಕ್ಷೆ
Published : 28 ಆಗಸ್ಟ್ 2024, 4:56 IST
Last Updated : 28 ಆಗಸ್ಟ್ 2024, 4:56 IST
ಫಾಲೋ ಮಾಡಿ
Comments

ಯಾದಗಿರಿ: ರಾಜ್ಯದ ವಿವಿಧೆಡೆ ಡೆಂಗಿ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜಿಲ್ಲೆಯಲ್ಲೂ ತಪಾಸಣೆ ಕೈಗೊಂಡು ಪರೀಕ್ಷೆ ಹೆಚ್ಚಿಸಲಾಗಿದೆ.

ಜಿಲ್ಲೆಯಲ್ಲಿ ಜನವರಿ 1ರಿಂದ ಆಗಸ್ಟ್‌ 23ರವರೆಗೆ 2,770 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 71 ಡೆಂಗಿ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಆಗಸ್ಟ್‌ 23ರಂದು 151 ಪರೀಕ್ಷೆ ಮಾಡಿದ್ದು, 18 ವರ್ಷ ಮೇಲ್ಪಟ್ಟ ವಯಸ್ಸಿನ ಒಬ್ಬರಿಗೆ ಡೆಂಗಿ ಪ್ರಕರಣ ಪತ್ತೆಯಾಗಿದೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗಿ ಜ್ವರದ ಪ್ರಕರಣಗಳ ಭೀತಿ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿಂದ ಪರೀಕ್ಷೆಗಳು ಹೆಚ್ಚಾಗಿದ್ದರಿಂದ ಪಾಟಿಸಿವ್‌ ಪ್ರಕರಣಗಳು ಕಂಡು ಬರುತ್ತಿವೆ.

ಯಾದಗಿರಿ, ಗುರುಮಠಕಲ್‌ ತಾಲ್ಲೂಕಿನಲ್ಲಿ 1,299, ಶಹಾಪುರ, ವಡಗೇರಾ ತಾಲ್ಲೂಕಿನಲ್ಲಿ 656, ಸುರಪುರ, ಹುಣಸಗಿ ತಾಲ್ಲೂಕಿನಲ್ಲಿ 814 ಸ್ಯಾಂಪಲ್‌ಗಳನ್ನು ಪರೀಕ್ಷೆಗ ಒಳಪಡಿಸಲಾಗಿದೆ. ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳು ಏರಿಕೆಯಾದ ಪರಿಣಾಮ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಡೆಂಗಿ ವಾರ್‌ರೂಮ್ ಆರಂಭಿಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಮಾನಿಟರಿಂಗ್‌ ಮಾಡಲಾಗುತ್ತಿದೆ.

ವರ್ಷದೊಳಗಿನವರಿಗೆ ಪಾಸಿಟಿವ್‌: ಜಿಲ್ಲೆಯಲ್ಲಿ ಒಂದು ವರ್ಷದೊಳಗಿನ ನವಜಾತು ಶಿಶುವಿಗೂ ಡೆಂಗಿ ಪ್ರಕರಣ ದೃಢಪಟ್ಟಿದೆ. 1ರಿಂದ 18 ವಯಸ್ಸಿನ 22 ಜನ, 18 ವರ್ಷ ಮೇಲ್ಟಟ್ಟ 48 ಜನರಿಗೆ ಡೆಂಗಿ ದೃಢಪಟ್ಟಿದೆ. ಆದರೆ, ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು ಇಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

‌ಹೇಗೆ ಡೆಂಗಿ ಉತ್ಪತ್ತಿ?: ಸಂಗ್ರಹ ಮಾಡಿದ ಶುದ್ಧ ನೀರಿನಲ್ಲೇ ಈಡೀಸ್ ಸೊಳ್ಳೆ ಮೊಟ್ಟೆ ಹಾಕುತ್ತವೆ. ಪ್ರತಿ ಶುಕ್ರವಾರ ಆಶಾ ಕಾರ್ಯಕರ್ತೆಯರು ಮನೆಮನೆಗೆ ಹೋಗಿ ಲಾರ್ವಾ ಸರ್ವೆ ನಡೆಸಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಡೆಂಗಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ನೀಡಿದ್ದಾರೆ.

‘ಒಂದೇ ಮನೆಯಲ್ಲಿ ಒಂದಕ್ಕಿಂತ ಹೆಚ್ಚಿನ ಡೆಂಗಿ ಪ್ರಕರಣಗಳು ದೃಢಪಟ್ಟಿದ್ದರೆ, ಅಂಥ ಮನೆಗಳನ್ನು ಹಾಟ್‌ಸ್ಪಾಟ್ ಮಾಡಲು ಸರ್ಕಾರದ ನಿರ್ದೇಶನವಿದೆ. ಜಿಲ್ಲೆಯಲ್ಲಿ ಇದುವರೆಗೆ ಒಂದೇ ಮನೆಯಲ್ಲಿ ಎರಡು ಡೆಂಗಿ ಪ್ರಕರಣ ದೃಢಪಟ್ಟ ಹಾಟ್‌ಸ್ಪಾಟ್‌ಗಳು ಇಲ್ಲ’ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಮುಬಾಸಿರ್‌ ಸಾಜೀದ್ ತಿಳಿಸಿದರು.

‘ಜಿಲ್ಲೆಯಲ್ಲಿ ಪ್ರತಿ ಬುಧವಾರ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಆರೋಗ್ಯ ಮೇಳ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಪ್ರತಿ ಶುಕ್ರವಾರ ಲಾರ್ವಾ ಸರ್ವೆ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳು ಡೆಂಗಿ ನಿಯಂತ್ರಣಕ್ಕೆ ನಮಗೆ ಪ್ರಕರಣಗಳ ಬಗ್ಗೆ ಮಾಹಿತಿ ನೀಡುತ್ತಿವೆ. ಬೆಂಗಳೂರು, ಮುಂಬೈ ಮತ್ತಿತರರ ಕಡೆಯಿಂದ ಬಂದವರಿಗೆ ಡೆಂಗಿ ಲಕ್ಷಣಗಳಿದ್ದು, ಚಿಕಿತ್ಸೆ ಪಡೆದರೆ ಆರೋಗ್ಯಯುತ ಜೀವನ ನಡೆಸಬಹುದು’ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಸದ್ಯ ಡೆಂಗಿ ಸಕ್ರಿಯ ಪ್ರಕರಣಗಳು ಇಲ್ಲ. ಜೂನ್‌ 1ರಿಂದ ಇಲ್ಲಿಯವರೆಗೆ ತಪಾಸಣೆ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ಡೆಂಗಿ ಜ್ವರ ಬಂದವರು ಸದ್ಯ ಎಲ್ಲರೂ ಗುಣಮುಖರಾಗಿದ್ದಾರೆ
ಡಾ.ಮುಬಾಸಿರ್‌ ಸಾಜೀದ್ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ

ಕೋವಿಡ್‌ನಂತೆ ನಿಗಾ

ಜಿಲ್ಲೆಯಲ್ಲಿ ಡೆಂಗಿ ಪತ್ತೆಯವರನ್ನು 14 ದಿನಗಳ ಕೋವಿಡ್‌ನಂತೆ ನಿಗಾ ವಹಿಸಲಾಗುತ್ತಿದೆ. ಡಿಸ್ಟಿಕ್ಟ್ ಪಬ್ಲಿಕ್ ಹೆಲ್ತ್ (ಡಿಪಿಎಚ್) ಲ್ಯಾಬ್ ಪ್ರತಿದಿನ ಪರೀಕ್ಷೆ ನಡೆಸಲಾಗುತ್ತದೆ. ಈ ವರದಿಯ ಆಧಾರದಲ್ಲಿ ಡೆಂಗಿ ದೃಢಪಟ್ಟವರಿಗೆ ಹಾಗೂ ಸಂಶಯಾಸ್ಪದ ಡೆಂಗಿ ಇದ್ದವರಿಗೆ ಡೆಂಗಿ ವಾರ್ ರೂಮ್ ಸಿಬ್ಬಂದಿ ಪ್ರತಿದಿನ ಕರೆಮಾಡಿ ಆರೋಗ್ಯದ ಬಗ್ಗೆ ವಿವರ ಪಡೆದು ಏನಾದರೂ ಸಮಸ್ಯೆ ಕಂಡುಬಂದರೆ ಸೂಕ್ತ ಮಾರ್ಗದರ್ಶನ ಮಾಡಲಿದ್ದಾರೆ. ಈ ಮೂಲಕ ಆರೋಗ್ಯ ಇಲಾಖೆ ಸಿಬ್ಬಂದಿ ನಿಗಾ ವಹಿಸಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಡೆಂಗಿ ರೋಗ ಲಕ್ಷಣಗಳು

ಜಿಲ್ಲೆಯಲ್ಲಿ ಆಗಾಗ ಮಳೆ ಸುರಿದು ಬಿಸಿಲಿನ ವಾತಾವರಣ ಕಂಡು ಬರುತ್ತಿದೆ. ಹೀಗಾಗಿ ಸೊಳ್ಳೆಗಳ ಉತ್ಪತ್ತಿಗೆ ಇದು ಕಾರಣವಾಗಿದೆ. ಜ್ವರ ತೀವ್ರ ತಲೆನೋವು ಕಣ್ಣುನೋವು ಸ್ನಾಯು ಮತ್ತು ಕೀಲು ನೋವು ಚರ್ಮದ ದದ್ದುಗಳು ಹಾಗೂ ವಾಕರಿಕೆ ವಾಂತಿ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡದೇ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಮಳೆಗಾಲದಲ್ಲಿ ಎಲ್ಲೆಂದರಲ್ಲಿ ನೀರು ಸಂಗ್ರಹವಾಗುವುದರಿಂದ ಸೊಳ್ಳೆ ಉತ್ಪತ್ತಿ ತಾಣಗಳಾಗಿ ಮಾರ್ಪಟ್ಟು ರೋಗ ಹರಡುವ ಸಾಧ್ಯತೆಗಳೂ ಇರುವುದರಿಂದ ಮುಂಜಾಗ್ರತೆ ವಹಿಸಬೇಕಿದೆ. ಮನೆಯ ಸುತ್ತಮುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಈ ಮೂಲಕ ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳು ನೀಡುವ ಎಚ್ಚರಿಕೆಯಾಗಿದೆ.

ತಾಲ್ಲೂಕುವಾರು ಡೆಂಗಿ ಮಾಹಿತಿ (ತಾಲ್ಲೂಕು; ಪಾಟಿಸಿವ್ ಪ್ರಕರಣ)

ಶಹಾಪುರ;22

ಸುರಪುರ;33

ಯಾದಗಿರಿ;16

ಒಟ್ಟು;71

ಆಧಾರ: ಡಿಎಚ್‌ಒ ಕಚೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT