ಬುಧವಾರ, ಫೆಬ್ರವರಿ 26, 2020
19 °C
ಉಪವಿಭಾಗಾಧಿಕಾರಿ ಸೋಮನಾಳ ಅಧ್ಯಕ್ಷತೆಯಲ್ಲಿ ಜಾಗೃತಿ, ಉಸ್ತುವಾರಿ ಸಮಿತಿ ಸಭೆ

ಯಾದಗಿರಿ: ಮಾಹಿತಿ ನೀಡದ ಎಇಇ ವಿರುದ್ಧ ಕ್ರಮಕ್ಕೆ ನಿರ್ಣಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರಾದ ಭವನದ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್)ದ ಎಇಇ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲು ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ತೀರ್ಮಾನಿಸಿತು.

ಜಿಲ್ಲಾಡಳಿತ ಭವನದಲ್ಲಿ ಉಪವಿಭಾಗಾಧಿಕಾರಿ ಶಂಕರಗೌಡ ಎಸ್.ಸೋಮನಾಳ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಮಿತಿ ಸಭೆಯಲ್ಲಿ  ಕೆಆರ್‌ಐಡಿಎಲ್ ಎಇಇ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಜಿಲ್ಲಾ ಮಟ್ಟದ ಸಮಿತಿಗೆ ಶಿಫಾರಸು ಮಾಡಲು ಒಮ್ಮತದ ನಿರ್ಣಯ ಕೈಗೊಂಡರು.

ಶಂಕರಗೌಡ ಎಸ್.ಸೋಮನಾಳ ಮಾತನಾಡಿ, ನೊಂದ ಜೀವಗಳಿಗೆ ನ್ಯಾಯ ಒದಗಿಸುವ ಕೆಲಸವನ್ನು ಜಾಗೃತಿ ಮತ್ತು ಉಸ್ತುವಾರಿ ಸಮಿತಿಯು ಮಾಡುತ್ತದೆ. ಸಮಿತಿಯ ಎಲ್ಲಾ ಸದಸ್ಯರು ಕಡ್ಡಾಯವಾಗಿ ಸಭೆಗೆ ಹಾಜರಾಗಿ ಇಲ್ಲಿ ನಡೆಯುವ ಚರ್ಚೆ, ತೀರ್ಮಾನಗಳ ಅನುಸಾರ ಕಾರ್ಯ ನಿರ್ವಹಿಸಬೇಕು. ಬೇಜವಾಬ್ದಾರಿಯಿಂದ ವರ್ತಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮೇಲಧಿಕಾರಿಗೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಗೆ ಗೈರಾದ ಅಧಿಕಾರಿಗಳಿಗೆ 24 ಗಂಟೆಗಳಲ್ಲಿ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಲು ಸೂಚಿಸಿದರು.

ಯಾದಗಿರಿ ಉಪ ವಿಭಾಗದಲ್ಲಿ 2019-20ನೇ ಸಾಲಿನಲ್ಲಿ ಇಲ್ಲಿಯವರೆಗೆ ಎಸ್‍ಸಿ, ಎಸ್‍ಟಿ ಕಾಯ್ದೆಯಡಿ 29 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಜಾತಿ ನಿಂದನೆ ಮತ್ತು ಇನ್ನಿತರ 21 ಪ್ರಕರಣಗಳಲ್ಲಿ ವರ್ಷ ಕಳೆದರೂ ಪರಿಹಾರ ಧನ ಮಂಜೂರು ಮಾಡಿಲ್ಲ. ಖಜಾನೆ-2 ತೊಂದರೆ ಇದ್ದರೆ, ಪರಿಹಾರಕ್ಕೆ ವರ್ಷ ಬೇಕಿಲ್ಲ. ತಕ್ಷಣ ಪರಿಹಾರ ಧನ ವಿತರಣೆಗೆ ಮತ್ತು ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಶಿವಲಿಂಗಪ್ಪ ಪುಟಗಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಕಾಲೊನಿಗಳಿಗೆ ಸರ್ಕಾರದಿಂದ ಮಂಜೂರಾದ ಸಿ.ಸಿ ರಸ್ತೆ ಮತ್ತು ಚರಂಡಿಗಳನ್ನು ಸವರ್ಣೀಯರ ಕಾಲೊನಿಗಳಲ್ಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯ ಸಾಯಬಣ್ಣ ತಳಕ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಚನ್ನಬಸವ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕ ವೆಂಕಟೇಶ್ ಮುಂಡರಗಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು