ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಾಪುರ–ಮನಗೂಳಿ ರಾಜ್ಯ ಹೆದ್ದಾರಿ ಕಥೆ ವ್ಯಥೆ–ಬಗೆಹರಿಯದ ಗೊಂದಲ; ಸಂಚಾರ ಸಂಕಷ್ಟ

Last Updated 25 ಸೆಪ್ಟೆಂಬರ್ 2021, 2:46 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ದೇವಾಪುರ–ಮನಗೂಳಿ ರಾಜ್ಯ ಹೆದ್ದಾರಿಯ ನಾಗರಾಳ, ಹಂದ್ರಾಳ, ಕೋನಾಳ ಗ್ರಾಮಗಳಲ್ಲಿ ಹಾದು ಹೋಗಿರುವ ರಸ್ತೆಯು ಜನರ, ವಾಹನಗಳ ಸುಗಮ ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ.

ದೇವಾಪುರ ಕ್ರಾಸ್ ಬಳಿಯ ನಾಗರಾಳದಿಂದ ಕೋನಾಳ ವರೆಗಿನ 6 ಕಿ.ಮೀ. ರಸ್ತೆ ಮಾತ್ರ ನಿರ್ಮಾಣವಾಗದೇ ನನೆಗುದಿಗೆ ಬಿದ್ದಿದೆ. ವಿಜಯಪುರ, ಬಾಗಲಕೋಟೆ, ಮಹಾರಾಷ್ಟ್ರದ ಮೀರಜ್ ಸೇರಿದಂತೆ ರಾಜ್ಯ ಹೊರರಾಜ್ಯದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ.

ಭೂ ಪರಿಹಾರ ಸಮಸ್ಯೆಯಿಂದ ಆರು ಕಿ.ಮೀ ರಸ್ತೆ ಹದಗೆಟ್ಟಿದ್ದು, ಈ ಭಾಗದಲ್ಲಿ ಸಂಚರಿಸುವ ಪ್ರತಿಯೊಬ್ಬ ಪ್ರಯಾಣಿಕರು ಪರದಾಡುತ್ತಿದ್ದಾರೆ. ಹಂದ್ರಳ, ಕೋನಾಳ, ನಾಗರಾಳ ರೈತರು ತಮಗೆ ಪರಿಹಾರ ಭೂ ಪರಿಹಾರ ಸಿಕ್ಕಿಲ್ಲ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದರಿಂದ ಅತ್ತ ಕಾಮಗಾರಿ ಪೂರ್ಣಗೊಳ್ಳದೆ ಇತ್ತ ರಸ್ತೆ ಸರಿಯಿಲ್ಲದೆ ನಡುವೆ ಪ್ರಯಾಣಿಕರು ಹೈರಾಣಾಗುತ್ತಿದ್ದಾರೆ.

109 ಕೀ.ಮಿ ಉದ್ದ ಕಾಮಗಾರಿ: ದೇವಾಪುರ ಮತ್ತು ಮನಗೂಳಿ ರಾಜ್ಯ ಹೆದ್ದಾರಿ 109 ಕೀ.ಮಿ. ಉದ್ದವಿದ್ದು, 103 ಕೀ.ಮಿ ರಸ್ತೆ ಪೂರ್ಣಗೊಂಡಿದೆ. ಇನ್ನುಳಿದ 6 ಕೀ.ಮಿ ರಸ್ತೆ ಮಾತ್ರ ರೈತರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರಿಂದ ಅಪೂರ್ಣಗೊಂಡಿದೆ.

ತೂಗೂಯ್ಯಾಲೆಯಲ್ಲಿ ಪ್ರಯಾಣ: ಈ ಆರು ಕಿ.ಮೀ ರಸ್ತೆ ಪ್ರಯಾಣ ಮಾಡುವುದು ತೂಗೂಯ್ಯಾಲೆಯಲ್ಲಿ ಮಾಡಿದಂತೆ ಭಾಸವಾಗುತ್ತದೆ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಪ್ರಯಾಣಿಕರು ಸಂಕಷ್ಟ ಪಡಬೇಕಾಗಿದೆ.

ಕೆಂಪು ಮಣ್ಣಿನಲ್ಲಿ ತಗ್ಗು ದಿನ್ನೆಗಳ ಮೇಲಾಟ: ಸದ್ಯ ರಸ್ತೆಯಲ್ಲಿ ಕೆಂಪು ಮಣ್ಣು ಹಾಕಲಾಗಿದ್ದು, ಅಲ್ಲಲ್ಲಿ ತಗ್ಗುದಿನ್ನೆಗಳು ಬಿದ್ದಿವೆ. ಇದರಿಂದ ದ್ವಿಚಕ್ರ ವಾಹನ ಸವಾರರು, ಆಟೊ, ಟಂಟಂ, ಬಸ್‌ನ ಪ್ರಯಾಣಿಕರಿಗೆ ಪ್ರಯಾಣವು ತುಂಬ ಪ್ರಯಾಸಕರವಾಗಿದೆ.

ಖಾಸಗಿ ವಾಹನಗಳ ಟಾಪ್ ಪ್ರಯಾಣ: ಈ ರಸ್ತೆಯಲ್ಲಿ ಬಸ್‌ ಅಲ್ಲದೇ ಖಾಸಗಿ ವಾಹನಗಳು ಸಂಚಾರ ಮಾಡುತ್ತಿದ್ದು, ಟಾಪ್‌ ಪ್ರಯಾಣ ಮಾಡುತ್ತಿದ್ದಾರೆ. ಮೊದಲೇ ರಸ್ತೆ ಸರಿಯಿಲ್ಲದಿದ್ದರಿಂದ ಏನಾದರೂ ಅನಾಹುತವಾದರೆ ಯಾರು ಗತಿ ಎನ್ನುವ ಪ್ರಶ್ನೆಯೂ ಕಾಡುತ್ತಿದೆ.
ಭಾರಿ ಗಾತ್ರದ ಟಿಪ್ಪರ್ ವಾಹನಗಳು ಸಂಚರಿಸುತ್ತವೆ. ಮಳೆ ಬಂದರೆ ಅಲ್ಲಲ್ಲಿ ವಾಹನಗಳು ರಸ್ತೆ ಮಧ್ಯೆಯೇ ಸಿಲುಕಿ ಬಿಡುತ್ತವೆ. ಇದು ಯಾವಾಗ ಪರಿಹಾರ ಆಗುತ್ತದೆ ಎಂದು ಇಲ್ಲಿಯ ಜನತೆ ಕಾಯುತ್ತಿದ್ದಾರೆ.

ಜನರಿಗೆ ಕಷ್ಟ ಆಗುತ್ತದೆ: ‘ರಸ್ತೆ ದುರಸ್ತಿಗೆ ಸಹಿ ಸಂಗ್ರಹ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ. ಆದರೂ ಇನ್ನೂ ರಸ್ತೆ ದುರಸ್ತಿಯಾಗಿಲ್ಲ ಎನ್ನುತ್ತಾರೆ ಹೋರಾಟಗಾರ ನಿಂಗು ಪಾಟೀಲ ಹೆಬ್ಬಾಳ.

‘ಸಂಬಂಧಿಸಿದ ಅಧಿಕಾರಿಗಳಿಗೆ, ಶಾಸಕರಿಗೆ ಮನವಿ ಮಾಡಿದ್ದರಿಂದ ತಾತ್ಕಾಲಿಕವಾಗಿ ರಸ್ತೆಗೆ ಮರಂ ಹಾಕಿದ್ದಾರೆ. ಮಳೆಗಾಲದಲ್ಲಿ ತಗ್ಗು ದಿನ್ನೆಗಳು ಬೀಳುತ್ತಿವೆ. ಬೇಸಿಗೆಯಲ್ಲಿ ರಸ್ತೆಯು ಸಂಪೂರ್ಣವಾಗಿ ದೂಳುಮಯವಾಗಿರುತ್ತದೆ. ಹೀಗಾಗಿ ಈ ಭಾಗಕ್ಕೆ ಬರಲು ಅನೇಕರು ಹಿಂಜರಿಯುತ್ತಿದ್ದಾರೆ. ರಸ್ತೆ ನಿರ್ಮಾಣ ಆಗದ ಕುರಿತು ಈ ಭಾಗದ ಜನತೆ ರೋಸಿ ಹೋಗಿದ್ದಾರೆ’ ಎನ್ನುತ್ತಾರೆ ಅವರು.

***

ಕಲಬುರ್ಗಿ ನ್ಯಾಯಾಲಯದಿಂದ 10 ಮೀಟರ್‌ ರಸ್ತೆ ಮಾಡಲು ಅನುಮತಿ ಸಿಕ್ಕಿದೆ. ಟೆಂಟರ್‌ ಕರೆದು ಕಾಮಗಾರಿ ಆರಂಭಿಸಲಾಗುವುದು

- ಅಮೀನ್‌ ಮುಕ್ತಾರ, ಪಿಡಬ್ಲ್ಯುಡಿ ಎಇ

***

ಕೆಲ ಪಟ್ಟಭದ್ರಹಿತಾಸಕ್ತಿ ಗುಂಪುಗಳಿಂದ ರಸ್ತೆ ಇಷ್ಟು ಹದಗೆಡಲು ಕಾರಣವಾಗಿದೆ. ಪ್ರಯಾಣಿಕರಿಗಂತೂ ಈ ಭಾಗದಲ್ಲಿ ಪ್ರಯಾಣಿಸುವುದು ನರಕಯಾತನೆಯಾಗಿದೆ

-ನಿಂಗು ಪಾಟೀಲ ಹೆಬ್ಬಾಳ, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT