ಶುಕ್ರವಾರ, ಫೆಬ್ರವರಿ 21, 2020
23 °C
ಸ್ಪರ್ಧಾತ್ಮಕ ಯುಗದಲ್ಲಿ ಓದುಗರ ಬೇಡಿಕೆಗೆ ತಕ್ಕಂತೆ ಶೀಘ್ರ ಮಾಹಿತಿ

ಗ್ರಂಥಾಲಯಗಳಿಗೆ ಡಿಜಿಟಲ್ ಸ್ಪರ್ಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಸ್ಪರ್ಧಾತ್ಮಕ ಯುಗದಲ್ಲಿ ಓದುಗರ ಬೇಡಿಕೆಗೆ ತಕ್ಕಂತೆ ಶೀಘ್ರ ಮಾಹಿತಿ ಒದಗಿಸಲು ಡಿಜಿಟಲ್ ಗ್ರಂಥಾಲಯ ಸೇವೆಯನ್ನು ರಾಜ್ಯದ 30 ಜಿಲ್ಲಾ ಕೇಂದ್ರ, ನಗರ ಕೇಂದ್ರ ಹಾಗೂ ತಾಲ್ಲೂಕು ಮಟ್ಟದ ಶಾಖಾ ಗ್ರಂಥಾಲಯಗಳಲ್ಲಿ ಒದಗಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ತಿಳಿಸಿದರು.

ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿ ಇಲಾಖೆಯಿಂದ ಜಿಲ್ಲೆಗೆ ಸರಬರಾಜು ಆಗಿರುವ ಕಂಪ್ಯೂಟರ್, ಟ್ಯಾಬ್‍ಗಳನ್ನು ವೀಕ್ಷಿಸಿ ಅವರು ಮಾತನಾಡಿದರು.

ಜಿಲ್ಲೆಯ 6 ತಾಲ್ಲೂಕು ಗ್ರಂಥಾಲಯಗಳು ಸೇರಿದಂತೆ ನಗರದಲ್ಲಿರುವ ಗ್ರಂಥಾಲಯಗಳಿಗೆ ಕಂಪ್ಯೂಟರ್ ಹಾಗೂ ಟ್ಯಾಬ್‍ಗಳನ್ನು ಅಳವಡಿಸಲಾಗಿದೆ. ಕೇಂದ್ರ ಗ್ರಂಥಾಲಯದ ಮೊದಲ ಮಹಡಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರವೇ ಲೋಕಾರ್ಪಣೆ ಮಾಡಲು ಮುಖ್ಯ ಗ್ರಂಥಾಲಯ ಅಧಿಕಾರಿ ಎಂ.ಎಸ್.ರಬಿನಾಳಗೆ ಸೂಚಿಸಿದರು.

ಎಸ್ಸೆಸ್ಸೆಲ್ಸಿ ಹಾಗೂ ಪಿ.ಯು.ಸಿ. ನಂತರ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕೆಂಬ ಮಾಹಿತಿ ನೀಡುವ ಕರಿಯರ್ ಗೈಡ್‍ಗಳನ್ನು ಗ್ರಂಥಾಲಯಕ್ಕೆ ಸರಬರಾಜು ಮಾಡಲು ತಿಳಿಸಿದರು.

ಕೆಕೆಆರ್‌ಡಿಬಿ ವತಿಯಿಂದ ಪ್ರಾಯೋಗಿಕವಾಗಿ ಜಿಲ್ಲೆಯ 15 ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಕಿಯೋಸ್ಕ್ ಅಂತರ್ಜಾಲ ಸಂಪರ್ಕ ಸೇವೆ ಕಲ್ಪಿಸಲಾಗಿದೆ ಎಂದು ಕಲಬುರ್ಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ನಲಿನ್ ಅತುಲ್ ಮಾಹಿತಿ ನೀಡಿದರು.

ಜಿಲ್ಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಯಾದಗಿರಿ ನಗರದಲ್ಲಿ ₹1.70 ಕೋಟಿ ವೆಚ್ಚದಲ್ಲಿ ಹೈಟೆಕ್ ಗ್ರಂಥಾಲಯ ನಿರ್ಮಾಣಕ್ಕೆ ನಿವೇಶನ ಗುರುತಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದೆ. ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುವುದೆಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ 88 ಗ್ರಾಮ ಪಂಚಾಯತಿಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಾಕಿ ಉಳಿದ ಗ್ರಾಮ ಪಂಚಾಯತಿಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.

ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ಎಂ.ಎಸ್.ರಬಿನಾಳ, ಗ್ರಂಥಪಾಲಕ ಪರಮೇಶ್ವರ ಮದರಗಿ, ಎಫ್‌ಡಿಎ ಎಂ.ಎನ್.ಪಟೇಲ್, ಗೌತಮ್ ಕಡೂನ್, ಗ್ರಂಥಾಲಯ ಸಹಾಯಕ ಪಾಟೀಲ ಬಸನಗೌಡ, ನಿಂಗಮ್ಮ ಸಜ್ಜನ್, ಕಾಸಿಂ ರೊಟ್ನಡಗಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು