ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ: ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳಲ್ಲಿ ಅರ್ಧದಷ್ಟು ಹುದ್ದೆಗಳು ಖಾಲಿ

Published 1 ಜುಲೈ 2024, 5:44 IST
Last Updated 1 ಜುಲೈ 2024, 5:44 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಆರು ತಾಲ್ಲೂಕುಗಳ ಪ್ರಾಥಮಿಕ, ಸಮುದಾಯ, ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ‘ಇಲ್ಲ’ಗಳ ಮಧ್ಯೆ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಮಂಜೂರು ಹುದ್ದೆಗಳಿಗಿಂತ ಅರ್ಧಕ್ಕಿಂತ ಖಾಲಿ ಇವೆ.

ತಜ್ಞ ವೈದ್ಯರು ಸೇರಿದಂತೆ ಜಿಲ್ಲೆಯಲ್ಲಿ ಎ ಗ್ರೇಡ್‌ನ 116 ಹುದ್ದೆಗಳಿವೆ. ಇದರಲ್ಲಿ 61 ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 55 ಹುದ್ದೆಗಳು ಖಾಲಿ ಇವೆ. ಜಿಲ್ಲಾ ಕೇಂದ್ರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಜಿಲ್ಲಾಸ್ಪತ್ರೆ, ನಗರ ಆರೋಗ್ಯ, ನಮ್ಮ ಕ್ಲಿನಿಕ್‌ಗಳಲ್ಲಿ ಅಗತ್ಯಕ್ಕಿಂತ ವೈದ್ಯರ ಕೊರತೆ ಕಾಡುತ್ತಿದೆ. ಇನ್ನು ತಾಲ್ಲೂಕು, ಗ್ರಾಮೀಣ ಭಾಗದಲ್ಲಿ ಸಮಸ್ಯೆ ಹೇಳತೀರಾಗಿದೆ.

ಸರ್ಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಸಮಸ್ಯೆಗಳು ಹಾಗೂ ಸವಾಲುಗಳು ಸಮವಾಗಿ ಅಂಟಿಕೊಂಡಿವೆ. ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಲ್ಲಗಳ ನಡುವೆ ಕರ್ತವ್ಯ ನಿರ್ವಹಿಸಬೇಕು. ಸಿಬ್ಬಂದಿ ಕೊರತೆ, ಔಷಧಿ ಸಂಗ್ರಹದ ಕೋಣೆಯ ಬರ, ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ. ವಸತಿ ಕೊರತೆ, ರೋಗ ತಪಾಸಣೆಗೆ ಯಂತ್ರಗಳ ಬರ ಇವೆಲ್ಲದರ ನಡುವೆ ರೋಗಿಯನ್ನು ತಪಾಸಣೆ ಮಾಡುವ ಸವಾಲುಗಳು ಇವೆ ಎನ್ನುತ್ತಾರೆ ವೈದ್ಯರು.

ಅಲ್ಲದೆ, ವೈದ್ಯರಿಗೆ ಗ್ರಾಮೀಣ ಪ್ರದೇಶದಲ್ಲಿ ಕಾಡುವ ಸಾಂಕ್ರಾಮಿಕ ರೋಗದ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸುವ ಹೊಣೆಗಾರಿಕೆ ಇದೆ. ಜಿಲ್ಲೆಯಲ್ಲಿ ಹೆಚ್ಚಿನ ಪ್ರಾಥಮಿಕ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಸಾಕಷ್ಟು ಹುದ್ದೆಗಳ ಕೊರತೆ ಇವೆ ಎನ್ನುತ್ತಾರೆ ಸಾರ್ವಜನಿಕರು.

ಎಲ್ಲೆಲ್ಲಿ ಎಷ್ಟೆಷ್ಟು ಖಾಲಿ: ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಒಂದು ಸಮುದಾಯ ಆರೋಗ್ಯ ಕೇಂದ್ರವಿದೆ. ಆಸ್ಪತ್ರೆಗಳಲ್ಲಿ ಸರಿಯಾದ ಸಿಬ್ಬಂದಿ ಹಾಗೂ ವೈದ್ಯರಿಲ್ಲದೆ ಈ ಭಾಗದ ರೋಗಿಗಳು ದೂರದ ಜಿಲ್ಲಾ ಕೇಂದ್ರಕ್ಕೆ ಇಲ್ಲವೆ ಪಕ್ಕದ ರಾಯಚೂರು ಜಿಲ್ಲೆಗೆ ಹೋಗುವುದು ಅನಿವಾರ್ಯವಾಗಿದೆ.

ತಾಲ್ಲೂಕಿನ ಬೆಂಡೆಬೆಂಬಳಿ ಹಾಗೂ ತಡಿಬಿಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಡಗೇರಾ ಸಮುದಾಯ ಕೇಂದ್ರದ ವೈದ್ಯರು ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತಿದ್ದಾರೆ. ಇನ್ನು ಹಯ್ಯಾಳ (ಬಿ) ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಹಾಪುರ ವೈದ್ಯಾಧಿಕಾರಿಗಳು ಉಸ್ತುವಾರಿ ವಹಿಸಿಕೊಂಡಿದ್ದಾರೆ.

ವಡಗೇರಾ ಪಟ್ಟಣದಲ್ಲಿ ಇರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ತ್ರೀ ರೋಗ ತಜ್ಞರು ಇಲ್ಲ. ಸಾಮಾನ್ಯ ಹೆರಿಗೆ ಮಾತ್ರ ಆಸ್ಪತ್ರೆಯಲ್ಲಿ ಮಾಡುತ್ತಾರೆ. ತುರ್ತು ಸನ್ನಿವೇಶದಲ್ಲಿ ಜಿಲ್ಲಾ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸುತ್ತಾರೆ. ಇನ್ನೂ ಅರವಳಿಕೆ ತಜ್ಞರು, ಕ್ಷ ಕಿರಣ ತಜ್ಞರು ಇಲ್ಲ.

ಕೆಲವೊಂದು ಆಸ್ಪತ್ರೆಗಳಲ್ಲಿ ಆಯುಷ್ಮಾನ್‌ ವೈದ್ಯರು ಇದ್ದಾರೆ. ಆದರೆ, ಎಂಬಿಬಿಎಸ್ ವೈದ್ಯರಿಲ್ಲದಿರುವುದರಿಂದ ರೋಗಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

‘ಇಷ್ಟೆಲ್ಲಾ ಸಮಸ್ಯೆಗಳು ನೂತನ ತಾಲ್ಲೂಕು ವಡಗೇರಾ ವ್ಯಾಪ್ತಿಯಲ್ಲಿ ಇರುವ ಆಸ್ಪತ್ರೆಗಳಲ್ಲಿ ಇದ್ದರೂ ಯಾವೊಬ್ಬ ಜನಪ್ರತಿನಿಧಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತಿಲ್ಲ’ ಎಂಬ ಆರೋಪ ಜನರಿಂದ ಕೇಳಿಬಂದಿದೆ.

ಕೇಂದ್ರಗಳಲ್ಲಿ ವೈದ್ಯರ ಕೊರತೆ: ಹುಣಸಗಿ ತಾಲ್ಲೂಕಿನಾದ್ಯಂತ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಹುಣಸಗಿ ಪಟ್ಟಣದಲ್ಲಿ ಸಮುದಾಯ ಆರೋಗ್ಯ ಕೇಂದ್ರವಿದ್ದು, ಬಹುತೇಕ ಆರೋಗ್ಯ ಕೇಂದ್ರಗಳು ವೈದ್ಯರ ಕೊರತೆ ಎದುರಿಸುತ್ತಿವೆ. ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಕಾಯಂ ವೈದ್ಯರಿಲ್ಲದೆ ಪ್ರಭಾರಿಗಳ ಮೇಲೆ ಕಾರ್ಯ ನಿರ್ವಹಿಸುವಂತಾಗಿದೆ. ಇದರಿಂದಾಗಿ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹುಣಸಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರು ವೈದ್ಯರು ಬೇಕಾಗಿದ್ದು, ಸದ್ಯ ಮೂವರು ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳ ತಜ್ಞರು, ಪ್ರಸೂತಿ ತಜ್ಞರು, ಅರವಳಿಕೆ ತಜ್ಞರು, ಸೀನಿಯರ್ ಮೆಡಿಕಲ್ ಆಫೀಸರ್, ದಂತ ವೈದ್ಯರು ಸೇರಿದಂತೆ ಇತರ ತಜ್ಞ ವೈದ್ಯರ ಅಗತ್ಯವಿದ್ದು, ಮೂವರು ಕಾರ್ಯನಿರ್ವಹಿಸುತ್ತಿದ್ದಾರೆ.

‘ತಾಲ್ಲೂಕು ಕೇಂದ್ರವಾಗಿರುವ ಈ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಿತ್ಯವೂ ಸುಮಾರು 150 ರಿಂದ 200 ಜನ ಹೊರರೋಗಿಗಳು ತಪಾಸಣೆಗೆ ಆಗಮಿಸುತ್ತಿದ್ದಾರೆ. ಅಲ್ಲದೆ ಪ್ರತಿದಿನ 15 ರಿಂದ 20 ಜನ ಒಳರೋಗಿಗಳು ಕೂಡ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಡಾ. ಎಸ್.ಬಿ.ಪಾಟೀಲ ಮಾಹಿತಿ ನೀಡಿದರು.

‘ಹುಣಸಗಿ ತಾಲ್ಲೂಕಿನ ಸಾರ್ವಜನಿಕರಿಗೆ ತ್ವರಿತ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಲಭ್ಯವಿರುವ ವೈದ್ಯಕೀಯ ಸಿಬ್ಬಂದಿಯನ್ನೇ ಬಳಸಿಕೊಂಡು ಗುಣಮಟ್ಟದ ಸೇವೆ ನೀಡುವಲ್ಲಿ ಮುಂದಾಗುತ್ತಿದ್ದೇವೆ’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಆರ್.ವಿ.ನಾಯಕ ಮಾಹಿತಿ ನೀಡಿದರು.

ಪೂರಕ ವರದಿ: ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ, ನಾಮದೇವ ವಾಟ್ಕರ್‌

ಯಾದಗಿರಿ ನಗರ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ
ಯಾದಗಿರಿ ನಗರ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ
ವಡಗೇರಾ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರ
ವಡಗೇರಾ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರ
ಜಿಲ್ಲೆಯಲ್ಲಿ ಸಿಬ್ಬಂದಿ ಕೊರತೆಯ ಮಧ್ಯೆಯೂ ಉತ್ತಮವಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಸರ್ಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ. ಆಸ್ಪತ್ರೆಯಲ್ಲಿ ಸೌಲಭ್ಯ ಕಲ್ಪಿಸಲಾಗುತ್ತಿದೆ
ಡಾ. ಪ್ರಭುಲಿಂಗ ಮಾನಕರ್‌ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಗ್ರಾಮೀಣ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಇನ್ನಿತರ ಮಾಹಿತಿಯನ್ನು ವೈದ್ಯರು ನೀಡಬೇಕು. ವಸತಿ ಹಾಗೂ ಅಗತ್ಯ ಸೌಲಭ್ಯಗಳು ಇಲ್ಲ. ಒತ್ತಡದ ನಡುವೆ ಕೆಲಸ ನಿರ್ವಹಿಸಬೇಕು
ಡಾ. ರಮೇಶ ಗುತ್ತೆದಾರ ಟಿಎಚ್ಒ ಶಹಾಪುರ
ಯಾದಗಿರಿ ಜಿಲ್ಲೆಯಲ್ಲಿ ಎಂಬಿಬಿಎಸ್ ಪದವಿ ಪಡೆದ ವೈದ್ಯರು ಸೇವೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೆಚ್ಚಿನ ಓದಿಗಾಗಿ ಬೇರೆಡೆ ತೆರಳುವುದರಿಂದ ನಮ್ಮಲ್ಲಿ ವೈದ್ಯರ ಕೊರತೆ ಕಾಡುತ್ತಲಿದೆ
ಡಾ. ಯಲ್ಲಪ್ಪ ಪಾಟೀಲ ಹುಲಕಲ್‌ ಸಾರ್ವಜನಿಕ ಆಡಳಿತ ವೈದ್ಯಾಧಿಕಾರಿ ಶಹಾಪುರ
ಕಳೆದ ಒಂದು ವರ್ಷದಿಂದ ತಡಿಬಿಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಂಬಿಬಿಎಸ್ ವೈದ್ಯರು ಇಲ್ಲದಿರುವುದರಿಂದ ರೋಗಿಗಳಿಗೆ ಮಹಿಳೆಯರಿಗೆ ಸಾಕಷ್ಟು ಸಮಸ್ಯೆಯಾಗಿದೆ. ತುರ್ತು ಸಮಯದಲ್ಲಿ ರೋಗಿಗಳನ್ನು ಜಿಲ್ಲಾ ಕೇಂದ್ರಕ್ಕೆ ಕರೆದುಕೊಂಡು ಹೋಗುವುದು ಅನಿವಾರ್ಯವಾಗಿದೆ
ರವಿಕುಮಾರ ದೇವರಮನಿ ಜಿಲ್ಲಾಧ್ಯಕ್ಷ ವಿಷ್ಣುಸೇನಾ
ತಜ್ಞ ವೈದ್ಯರ ಕೊರತೆ
ಜಿಲ್ಲೆಯಲ್ಲಿ ತಜ್ಞ ವೈದ್ಯರ ಕೊರತೆ ಕಾಡುತ್ತಿದೆ. ಜಿಲ್ಲೆಯಾಗಿ 14 ವರ್ಷಗಳಾದರೂ ಮಂಜೂರಾದ ಹುದ್ದೆಗಳು ಇನ್ನೂ ಭರ್ತಿಯಾಗಿಲ್ಲ. ಇದರಿಂದ ಶಿಫಾರಸು ಮಾಡುವುದು ಸಾಮಾನ್ಯವಾಗಿದೆ. ಮುಖ್ಯವಾಗಿ ಅರವಳಿಕೆ ತಜ್ಞರು ಸ್ತ್ರೀರೋಗ ತಜ್ಞರು ಸ್ಥಾನಿಕ ವೈದ್ಯಾಧಿಕಾರಿ ಸಮುದಾಯ ಆರೋಗ್ಯಾಧಿಕಾರಿ ತಾಲ್ಲೂಕು ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸಕರು ಕಿವಿ ಮತ್ತು ಗಂಟಲು ತಜ್ಞರು ಮೂಳೆ ತಜ್ಞರು ಮಕ್ಕಳ ವೈದ್ಯರು ದಂತ ತಜ್ಞರು ಸೇರಿದಂತೆ ಹಲವಾರು ಹುದ್ದೆಗಳು ಖಾಲಿ ಇವೆ.
‘ಡಯಾಲಿಸಿಸ್ ಕೇಂದ್ರ ಆರಂಭಿಸಲಿ’
ಹುಣಸಗಿ ವೇಗವಾಗಿ ಬೆಳೆಯುತ್ತಿರುವ ತಾಲ್ಲೂಕು ಕೇಂದ್ರವಾಗಿದ್ದರಿಂದಾಗಿ ಗುಣಮಟ್ಟದ ಮತ್ತು ಹೆಚ್ಚಿನ ವೈದ್ಯಕೀಯ ಸೇವೆ ನೀಡುವ ನಿಟ್ಟಿನಲ್ಲಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಕೇಂದ್ರ ಆರಂಭಿಸುವ ಅಗತ್ಯವಿದೆ. ‘ಡಯಾಲಿಸಿಸ್‌ ಜೊತೆಗೆ ಎಕ್ಸ್‌ರೇ ಸ್ಕ್ಯಾನಿಂಗ್ ಸೇರಿದಂತೆ ಇತರ ವೈದ್ಯಕೀಯ ಸೇವೆ ಹಾಗೂ ಸೂಕ್ತ ಸಿಬ್ಬಂದಿ ನೇಮಿಸುವ ಮೂಲಕ ಆರೋಗ್ಯ ರಕ್ಷಣೆಗೆ ಮುಂದಾಗಲು ಶಾಸಕ ರಾಜಾ ವೇಣುಗೋಪಾಲ ನಾಯಕ ಅವರ ಗಮನಕ್ಕೆ ತರಲಾಗುವುದು. ಈ ಕುರಿತು ಸರ್ಕಾರ ಮಟ್ಟದಲ್ಲಿ ಪ್ರಯತ್ನಿಸಲಾಗುವುದು’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ದಂಡಿನ್ ಕೆಪಿಸಿಸಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT