ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಭಾವಿ: ಹಳ್ಳ ಹಿಡಿದ ಕುಡಿಯುವ ನೀರಿನ ಯೋಜನೆ

ಪಟ್ಟಣದ ಜನತೆಗೆ ಎರಡು ದಿನಕ್ಕೊಮ್ಮೆ ನೀರು
Published 24 ಜೂನ್ 2023, 6:02 IST
Last Updated 24 ಜೂನ್ 2023, 6:02 IST
ಅಕ್ಷರ ಗಾತ್ರ

ಕೆಂಭಾವಿ: ಪಟ್ಟಣದ ಜನರಿಗೆ ಕುಡಿಯುವ ನೀರೊದಗಿಸುವ ನಿಟ್ಟಿನಲ್ಲಿ ಸಿಲಕಮಟ್ಟಿ ಹಳ್ಳದ ಬಳಿ ನಿರ್ಮಿಸಲಾದ ಬಾವಿ ಯೋಜನೆ ಸಂಪೂರ್ಣ ಹಳ್ಳ ಹಿಡಿದಿದೆ.

ಸರ್ಕಾರದ ಹಣ ಖರ್ಚಾದರೂ ಜನರಿಗೆ ಕುಡಿಯುವ ನೀರು ಮಾತ್ರ ದೊರೆಯುತ್ತಿಲ್ಲ. ಸುಮಾರು ಮೂರು ವರ್ಷಗಳ ಹಿಂದೆ ಕೈಗೆತ್ತಿಕೊಂಡಿರುವ ಈ ಜನೋಪಯೋಗಿ ಬೃಹತ್ ಕಾಮಗಾರಿ, ಅಧಿಕಾರಿಗಳ ನಿರ್ಲಕ್ಷ ಮತ್ತು ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದ ಅರ್ಧಕ್ಕೆ ನಿಂತಿದೆ. ಸಂಬಂಧಿಸಿದ ಅನುದಾನ ಬಿಡುಗಡೆಯಾಗಿ ಕಾಮಗಾರಿ ಮುಗಿದ ಬಗ್ಗೆ ವರದಿ ಸಲ್ಲಿಸಿ, ಅನುದಾನದ ಹಣವನ್ನು ನುಂಗಿಹಾಕಲಾಗಿದೆ ಎಂಬ ಆರೋಪಗಳು ಕೇಳಿವೆ. 

ನೀರಿದ್ದರೂ ಸಿಗದ ಸೌಲಭ್ಯ: ಪುರಸಭೆ ವತಿಯಿಂದ ಸುಮಾರು ₹ 50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಬಾವಿ ಹಾಗೂ ಪೈಪ್‍ಲೈನ್ ಕಾಮಗಾರಿ ಬಗ್ಗೆ ಈಗ ಹಲವು ಗೊಂದಲಗಳು ಏರ್ಪಟ್ಟಿವೆ. ಮುದನೂರ ರಸ್ತೆಯಲ್ಲಿರುವ ಪಟ್ಟಣದಿಂದ 3 ಕಿ.ಮೀ ದೂರದಲ್ಲಿರುವ ಸಿಲಕಮಟ್ಟಿ ಹಳ್ಳದ ಬಳಿ ತೋಡಿರುವ ಹೆಚ್ಚಿನ ಪ್ರಮಾಣದಲ್ಲಿ ಬಾವಿಯಲ್ಲಿ ನೀರಿದ್ದರೂ ಪಟ್ಟಣಕ್ಕೆ ನೀರೊದಗಿಸಲು ಅಧಿಕಾರಿಗಳು ಮಾತ್ರ ಹಿಂದೇಟು ಹಾಕುತ್ತಿದ್ದಾರೆ.

ಹಳ್ಳದಿಂದ ಪಟ್ಟಣದ ಓವರ್ ಹೆಡ್ ಟ್ಯಾಂಕ್‍ಗೆ ಸಂಪರ್ಕ ಕಲ್ಪಿಸಿ, ಪಟ್ಟಣದ ನಾಗರಿಕರಿಗೆ 14ನೇ ಹಣಕಾಸು ಯೋಜನೆ, ಎಸ್‍ಎಫ್‍ಸಿ ಉಳಿಕೆ ಹಣ ಹಾಗೂ ಸ್ಥಳೀಯ ಶಾಸಕ ಅನುದಾನದಲ್ಲಿ ಈ ಕಾಮಗಾರಿ ಕೈಗತ್ತಿಕೊಳ್ಳಲಾಗಿತ್ತು. ಬಾವಿಯಿಂದ ಮಾಡಿದ ಪೈಪ್‍ಲೈನ್ ಕೆಲಸವೂ ಅರ್ಧಕ್ಕೆ ನಿಲ್ಲಿಸಿ, ಹಳೆ ಪೈಪ್‍ಗಳಿಗೆ ನೀರಿನ ಸಂಪರ್ಕ ಕಲ್ಪಿಸಿ, ಲಕ್ಷಾನುಗಟ್ಟಲೆ ಅನುದಾನ ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.

ಇಲ್ಲಿಯವರೆಗೂ ನೀರು ಮಾತ್ರ ಪೂರೈಕೆಯಾಗಿಲ್ಲ. ಅಧಿಕಾರಿಗಳು, ಜನರನ್ನು ಯಾಮಾರಿಸುವ ಕೆಲಸ ಮಾಡುತ್ತಿದ್ದಾರೆ. 2022ರ ನವೆಂಬರ್ 11ರಂದು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಂತರ ಕಾಮಗಾರಿ ಸಂಪೂರ್ಣ ಹಣ ಪಾವತಿಯಾಗಿದೆ ಎನ್ನಲಾಗಿದೆ. ಆದರೆ ಕುಡಿಯುವ ನೀರು ಮಾತ್ರ ಪಟ್ಟಣಕ್ಕೆ ಬಂದು ತಲುಪದೇ ಇರುವುದು ವಿಪರ್ಯಾಸವೇ ಸರಿ.

ಜಿಲ್ಲಾಧಿಕಾರಿಗಳು ಈ ಬಗ್ಗೆ ವಿಶೇಷ ಕಾಳಜಿ ವಹಿಸಿ ಖುದ್ದು, ಸ್ಥಳಕ್ಕೆ ಬೇಟಿ ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಪಟ್ಟಣದ ಜನತೆಗೆ ಕುಡಿಯುವ ನೀರು ಒದಗಿಸಬೇಕೆಂದು ಜನರು ಒತ್ತಾಯಿಸಿದ್ದಾರೆ.

ಬಾವಿಯಲ್ಲಿ ಕೆಸರಿ ತುಂಬಿಕೊಂಡಿದೆ. ಅದನ್ನು ಸ್ವಚ್ಛಗೊಳಿಸಿ ಪಟ್ಟಣದ ಜನರಿಗೆ ಬಾವಿಯಿಂದ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗುವುದು

-ಮಲ್ಲಿಕಾರ್ಜುನ ದಾಸನಕೇರಿ ಮುಖ್ಯಾಧಿಕಾರಿ ಪುರಸಭೆ

ಎರಡು ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜುಗೊಳಿಸಲಾಗುತ್ತಿದೆ. ಆದರೆ ಹಲವು ಬಡಾವಣೆಗಳಿಗೆ ನೀರು ಒದಗಿಸಲಾಗುತ್ತಿಲ್ಲ. ಹಣ ಖರ್ಚಾದರೂ ಕುಡಿಯುವ ನೀರು ಮಾತ್ರ ಜನರಿಗೆ ಮರೀಚಿಕೆಯಾಗಿದೆ.

-ಮಹಿಪಾಲರೆಡ್ಡಿ ಡಿಗ್ಗಾವಿ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT