ಬುಧವಾರ, ಆಗಸ್ಟ್ 17, 2022
30 °C
ಡಿ.22ರಂದು ಮೊದಲ ಹಂತದ ಮತದಾನ, ಮತಬೇಟೆಗಿಳಿದ ಅಭ್ಯರ್ಥಿಗಳು

ಗ್ರಾಮ ಪಂಚಾಯಿತಿ ಚುನಾವಣೆ: ಚಳಿಯಲ್ಲೂ ಪ್ರಚಾರದ ಬಿಸಿ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆ ಡಿ.22 ರಂದು ನಡೆಯುತ್ತಿದ್ದು, ಗ್ರಾಮಗಳಲ್ಲಿ ಮಾಗಿ ಚಳಿಯಲ್ಲೂ ಪ್ರಚಾರದ ಅಬ್ಬರ ಕಾವೇರಿದೆ.

ಶಹಾಪುರ, ಸುರಪುರ, ಹುಣಸಗಿ ತಾಲ್ಲೂಕಿನಲ್ಲಿ ಮೊದಲ ಹಂತದ ಚುನಾವಣೆ ಮಂಗಳವಾರ ನಡೆಯಲಿದೆ. ಮತದಾನದ ದಿನ ಸಮೀಪವಾಗುತ್ತಿದ್ದಂತೆ ಕೊರೆವ ಚಳಿಯಲ್ಲೂ ಅಭ್ಯರ್ಥಿಗಳು ಮತ ಬೇಟೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ 31, 30ರ ಅಸುಪಾಸು ಗರಿಷ್ಠ, 16,17, 14 ಕನಿಷ್ಠ ಉಷ್ಣಾಂಶ ದಾಖಲಾಗುತ್ತಿದೆ. ಇದರ ಮಧ್ಯೆಯೂ ಚುನಾವಣಾ ಬಿಸಿ ಏರಿದೆ.

ಶಹಾಪುರ ತಾಲ್ಲೂಕಿನ ಚಟ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಬೆಳ್ಳಂ ಬೆಳಿಗ್ಗೆಯೇ ಅಭ್ಯರ್ಥಿಗಳು ತಮ್ಮ ಬೆಂಬಲಿಗರ ಗುಂಪು ಮಾಡಿಕೊಂಡು ಕರಪತ್ರ ಹಂಚುವಲ್ಲಿ ನಿರತರಾಗಿದ್ದರು. ಮತದಾರರನ್ನು ಭೇಟಿಯಾಗಿ ತಮ್ಮ ಗುರುತಿಗೆ ಮತ ಹಾಕುವಂತೆ ವಿನಂತಿಸಿಕೊಳ್ಳುವುದು ಕಂಡು ಬಂತು. ಚಟ್ನಳ್ಳಿ, ಮರಮಕಲ್‌, ಬಲಕಲ್‌, ನಾಲ್ವಡಗಿ, ನಾಲ್ವಡಗಿ ತಾಂಡಾ, ಕರಣಗಿ ತಾಂಡಾ ವ್ಯಾಪ್ತಿ ಒಳಗೊಂಡಿದೆ.

ಭರವಸೆಗಳ ಮಹಾಪೂರ: ಅಭ್ಯರ್ಥಿಗಳು ತಮ್ಮ ಗುರುತಿನ ಚಿಹ್ನೆಯ ಕರ ಪತ್ರ ಮುದ್ರಿಸಿ ಗ್ರಾಮಕ್ಕೆ ತಾನು ಗೆದ್ದರೆ ಯಾವ ರೀತಿ ಸೌಲಭ್ಯ ಕಲ್ಪಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಸುಸಜ್ಜಿತ ಒಳಚರಂಡಿ, ಮೂಲ ಸೌಕರ್ಯ, ಜಿ.ಪಂ, ತಾ.ಪಂಗಳಿಂದ ಗ್ರಾಮಕ್ಕೆ ವಿವಿಧ ಸೌಲಭ್ಯ ತರುವ ಪ್ರಯತ್ನ, ಗ್ರಾಮದ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು, ಮಾದರಿ ಗ್ರಾಮಕ್ಕೆ ಪ್ರಯತ್ನ ಇತ್ಯಾದಿ ಭರವಸೆಗಳ ಮಹಾಪೂರ ಹರಿಸುತ್ತಿದ್ದಾರೆ.

ಹೋಟೆಲ್‌ಗಳಲ್ಲಿ ಹಾಲು ಖರೀದಿ ಹೆಚ್ಚಳ: ಚುನಾವಣೆ ಅಂಗವಾಗಿ ಗ್ರಾಮದ ಬಹುತೇಕ ಹೋಟೆಲ್‌ಗಳು ಭರ್ತಿಯಾಗುತ್ತಿವೆ. ಅಭ್ಯರ್ಥಿಗಳ ಬೆಂಬಲಿಗರು ಹೋಟೆಲ್‌ಗಳಲ್ಲಿ ತಿಂಡಿ, ಚಹಾ ಸೇವಿಸಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದರಿಂದ ಹೋಟೆಲ್‌ನವರು ಚಹಾ ಮಾಡಲು ಹೆಚ್ಚು ಹಾಲು ಖರೀದಿ ಮಾಡುತ್ತಿದ್ದಾರೆ.

‘ಹೋಟೆಲ್‌ನವರು ಈ ಹಿಂದೆ ಎರಡು ಲೀಟರ್‌ ಹಾಲು ಖರೀದಿಸುತ್ತಿದ್ದರು. ಈಗ 4 ಲೀಟರ್ ತೆಗೆದುಕೊಳ್ಳುತ್ತಿದ್ದಾರೆ. ವ್ಯಾಪಾರವೂ ಹೆಚ್ಚಾಗಿದೆ’ ಎನ್ನುತ್ತಾರೆ ಹಾಲಿನ ವ್ಯಾಪಾರಿ ನಾಗಪ್ಪ ನಾಯ್ಕಲ್‌.

ಸಂಜೆ ರಂಗೇರಿದ ಚುನಾವಣಾ ಕಣ: ಬೆಳಿಗ್ಗೆಯ ಪ್ರಚಾರ ತಿಂಡಿ, ಚಹಾಕ್ಕೆ ಮುಗಿದು ಹೋದರೆ, ಸಂಜೆ ಗುಂಡು, ತುಂಡು ಚಾಲ್ತಿಯಲ್ಲಿದೆ. ಈಗ ಹಳ್ಳಿಗಳಲ್ಲೂ ಮದ್ಯ ಮಾರಾಟ ನಡೆಯುತ್ತಿದೆ. ಇದರಿಂದ ಸಂಜೆ ವೇಳೆ ಚುನಾವಣಾ ರಣ ರಂಗೇರುತ್ತದೆ.

ಚುನಾವಣೆ ಅಂಗವಾಗಿ ಕೆಲಸ: ‘ಈ ಹಿಂದೆ ಸ್ಪರ್ಧಿಸಿದವರು ಗ್ರಾಮದಲ್ಲಿ ಅದು ಮಾಡುತ್ತೇವೆ, ಇದು ಮಾಡುತ್ತೇವೆ ಎಂದು ಹೇಳಿದ್ದರು. ಈಗಲೂ ಅದನ್ನೇ ಹೇಳುತ್ತಿದ್ದಾರೆ. ತಿಂಗಳ ಹಿಂದೆ ಗ್ರಾಮದ ಮುಖ್ಯ ರಸ್ತೆ ದುರಸ್ತಿ ಮಾಡಿಸಿದ್ದಾರೆ. ಮಳೆಗಾಲದಲ್ಲಿ ಸಮಸ್ಯೆ ಹೆಚ್ಚಾಗಿತ್ತು. ಆಗ ಏನೂ ಮಾಡದವರು ಚುನಾವಣೆಯಲ್ಲಿ ಜಯ ಗಳಿಸಲು ಮಾಡಿದ್ದಾರೆ’ ಎಂದು ಚಟ್ನಳ್ಳಿ ಗ್ರಾಮಸ್ಥರಾದ ಸೈದಪ್ಪ ಇಜೇರಿ, ಹಣಮಂತ ಕರ್ನಾಳ ಹೇಳುತ್ತಾರೆ.

‘ಚುನಾವಣೆ ಹತ್ತಿರ ಬಂದಾಗ ಹಳ್ಳಿ, ತಾಂಡಾಕ್ಕೆ ತೆರಳುವ ರಸ್ತೆಗೆ ಮರಂ ಹಾಕಿಸಿದ್ದಾರೆ. ಈ ಹಿಂದೆ ತಗ್ಗು ದಿನ್ನೆಗಳಿಂದ ಕೂಡಿತ್ತು. ಈಗ ಚುನಾವಣೆ ಅಂಗವಾಗಿ ಕೆಲಸಗಳನ್ನು ಮಾಡಿಸುತ್ತಿದ್ದಾರೆ. ಐದು ವರ್ಷ ಕೇವಲ ಭರವಸೆಯಲ್ಲಿಯೇ ಕಾಲ ತಳ್ಳಿದ್ದರು’ ಎಂದು ನಾಲ್ವಡಗಿ ಗ್ರಾಮಸ್ಥರಾದ ಅಶೋಕ ಶಾಖಾಪುರ, ಬಸವರಾಜ ಕುರಿಯರ ಹೇಳುತ್ತಾರೆ.

ಡಿ.21 ನಿರ್ಣಾಯಕ ದಿನ!
ಮೊದಲ ಹಂತದ ಚುನಾವಣೆಗೆ ಮತದಾನದ ಹಿಂದಿನ ದಿನ ನಿರ್ಣಾಯಕವಾಗಲಿದೆ. ಡಿ.21ರಂದು ರಾತ್ರಿಯೇ ಯಾವ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎನ್ನುವ ನಿರ್ಣಯವಾಗುತ್ತದೆ!. ಅಂದು ನಡೆಯುವ ತೀರ್ಮಾನ ಮುಂದಿನ ಐದು ವರ್ಷಗಳ ಭವಿಷ್ಯವನ್ನು ಬರೆಯಲಿದೆ. ಅಭ್ಯರ್ಥಿಗಳು ಕೂಡ ಅಂದು ‘ಹೆಚ್ಚಿನ’ ಕೆಲಸ ಮಾಡಿ ತಮ್ಮತ್ತ ಮತದಾರರನ್ನು ಸೆಳೆಯುವ ಕೆಲಸ ಮಾಡುತ್ತಾರೆ.

‘ಸೋಮವಾರ ರಾತ್ರಿಯೇ ಗೆಲ್ಲುವ ಅಭ್ಯರ್ಥಿ ನಿರ್ಣಯವಾಗುತ್ತದೆ. ಅಂದು ಯಾವ ಅಭ್ಯರ್ಥಿ ಎಷ್ಟು ಖರ್ಚು ಮಾಡಿದ ಎನ್ನುವುದರ ಮೇಲೆ ವಿಜಯದ ಮಾಲೆ ನಿರ್ಧಾರವಾಗುತ್ತದೆ. ಹಣ, ಮದ್ಯ ಹಂಚುವುದು ಈಗ ಗುಟ್ಟಾಗಿ ಉಳಿದಿಲ್ಲ’ ಎಂದು ಚಟ್ನಳ್ಳಿ ಗ್ರಾಮದ ಹಿರಿಯ ಹಣಮಂತ ಕರ್ನಾಳ ಅಭಿಪ್ರಾಯಪಟ್ಟರು.

***

ಗ್ರಾಮದಲ್ಲಿ ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಈ ಮುಂಚೆ ಸ್ಪರ್ಧಿಸಿದವರಿಗೆ ಮತ್ತೆ ಯಾಕೆ ಸ್ಪರ್ಧಿಸಿದ್ದೀರಿ ಎಂದು ಕೇಳುತ್ತಾರೆ. ಹೊಸಬರಿಗೆ ಅಭಿವೃದ್ಧಿ ಕೆಲಸ ಮಾಡಿ ಎಂದು ಗ್ರಾಮಸ್ಥರು ಹೇಳುತ್ತಾರೆ.
-ಸಿದ್ದಲಿಂಗರೆಡ್ಡಿ ಕಲ್ಮನಿ, ಚಟ್ನಳ್ಳಿ ಗ್ರಾಮಸ್ಥ

***

ನಮ್ಮ ಗ್ರಾಮದಲ್ಲಿ ಎರಡು ಸ್ಥಾನಗಳಿದ್ದು, ಐದು ಜನ ಸ್ಪರ್ಧಿಸಿದ್ದಾರೆ. ಸದ್ಯ ಯಾವುದೇ ಜಗಳ ನಡೆದಿಲ್ಲ, ಗ್ರಾಮ ಶಾಂತಿಯುತವಾಗಿದೆ. ಜಿದ್ದಾಜಿದ್ದಿ ಇಲ್ಲ.
-ಮಹಾದೇವರಡ್ಡಿ ಕುರಕುಂದಿ, ಬಲಕಲ್ ಗ್ರಾಮಸ್ಥ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು