ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಣಸಗಿ | ಜನರಿಗೆ ಕುತೂಹಲ, ಅಭ್ಯರ್ಥಿಗಳಿಗೆ ಢವಢವ...

ಹುಣಸಗಿ: ಪಟ್ಟಣ ಪಂಚಾಯಿತಿ ಚುನಾವಣೆ ಮತ ಎಣಿಕೆ ಇಂದು
ಭೀಮಶೇನರಾವ್ ಕುಲಕರ್ಣಿ
Published 30 ಡಿಸೆಂಬರ್ 2023, 6:21 IST
Last Updated 30 ಡಿಸೆಂಬರ್ 2023, 6:21 IST
ಅಕ್ಷರ ಗಾತ್ರ

ಹುಣಸಗಿ: ತಾಲ್ಲೂಕಿನಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿನ ಪಟ್ಟಣ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕಾರ್ಯ ಶನಿವಾರ (ಡಿ.30) ನಡೆಯಲಿದ್ದು, ಅಭ್ಯರ್ಥಿಗಳಿಗೆ ಎದೆಯಲ್ಲಿ ಢವಢವ ಶುರುವಾಗಿದೆ.

ಮಹಿಳಾ ಮೀಸಲಾಯಿತಿ ಫಲವಾಗಿ ಯುಕೆಪಿ ಕ್ಯಾಂಪ್, ಮಾತೋಶ್ರೀ ಶಿವಲಿಂಗಮ್ಮ ಕಾಲೊನಿ ಸೇರಿದಂತೆ ಇತರ ಕೆಲ ವಾರ್ಡ್‌ಗಳಲ್ಲಿ ಈ ಬಾರಿ ತಮ್ಮ ಮನೆಗೆ ಮಾತ್ರ ಸೀಮಿತವಾಗಿರುವವರಿಗೆ ಎರಡೂ ಪಕ್ಷಗಳು ಗುರುತಿಸಿ ಟಿಕೆಟ್ ನೀಡಲಾಗಿದೆ. ಇದರಿಂದಾಗಿ ಚುನಾವಣೆಯಲ್ಲಿ ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ, ಮತದಾರ ಪ್ರಭುಗಳು ಯಾರಿಗೆ ಆಶೀರ್ವದಿಸಲಿದ್ದಾರೆ ತಿಳಿಯದಂತಾಗಿದೆ ಎಂದು ಮಹಿಳಾ ಅಭ್ಯರ್ಥಿಯೊಬ್ಬರು ತಿಳಿಸಿದರು.

‘ಇಲ್ಲಿಯವರೆಗೂ ನಮ್ಮ ಮನೆಗಳು ರಾಜಕೀಯದಿಂದ ದೂರ ಇದ್ದವು. ಆದರೆ ಈ ಬಾರಿ ಒಂದನೇ ವಾರ್ಡ್‌ನಿಂದ ಬಿಜೆಪಿ ಗುರುತಿಸಿ ಟಿಕೆಟ್ ನೀಡಿದ್ದರಿಂದಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಒಂದು ಲೆಕ್ಕಾಚಾರದಂತೆ ಬಹುತೇಕ ಮತಗಳು ನನಗೆ ಬಂದಿದ್ದು, ಗೆಲ್ಲುವ ವಿಶ್ವಾಸವಿದೆ’ ಎಂದು ಒಂದನೇ ವಾರ್ಡ್ ಅಭ್ಯರ್ಥಿ ಲಕ್ಷ್ಮಿಬಾಯಿ ಮರೆಪ್ಪ ಕಟ್ಟಿಮನಿ ಹೇಳಿದರು.

‘ಹುಣಸಗಿ ಅಭಿವೃದ್ಧಿಗಾಗಿ ನನಗೂ ಒಂದು ಅವಕಾಶ ಸಿಕ್ಕಲ್ಲಿ ಸಾಕಷ್ಟು ಶ್ರಮಿಸುವ ಉದ್ದೇಶದೊಂದಿಗೆ ಚುನಾವಣೆ ಎದುರಿಸಿದ್ದೇನೆ. ಫಲಿತಾಂಶಕ್ಕಾಗಿ ಕುತೂಹಲದಿಂದಲೇ ಕಾಯುತ್ತಿದ್ದೇನೆ’ ಎಂದು ಬಿ.ಇ, ಎಂ.ಟೆಕ್ ಪದವೀಧರ ಶಿವರುದ್ರಪ್ಪ ದೇಸಾಯಿ ತಿಳಿಸಿದರು.

‘ಹಲವು ಬಾರಿ ನಮ್ಮ ಕುಟುಂಬದವರು ಚುನಾವಣೆಗಳನ್ನು ಎದುರಿಸುತ್ತಾ ಬಂದಿದ್ದಾರೆ. ನಾನು ಪದವೀಧರೆಯಾಗಿದ್ದು, ಈ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಪದವೀಧರ ಮಹಿಳೆಯರು ಸ್ಪರ್ಧಿಸಿಲ್ಲ. ಆದ್ದರಿಂದ 14ನೇ ವಾರ್ಡ್‌ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ್ದು, ಯಾವುದೇ ಫಲಿತಾಂಶ ಬಂದರೂ ಗೌರವಿಸುತ್ತೇನೆ’ ಎಂದು ಶಶಿಕಲಾ ನರಸಪ್ಪಗೌಡ ಬಿರಾದಾರ ಹೇಳಿದರು.

8 ಸುತ್ತುಗಳಲ್ಲಿ ಎಣಿಕೆ ಕಾರ್ಯ

‘ಪಟ್ಟಣ ಪಂಚಾಯಿತಿಯ 16 ವಾರ್ಡ್‌ಗಳಿಗೆ ಬುಧವಾರ ಚುನಾವಣೆ ನಡೆದಿತ್ತು. ಚುನಾವಣೆಯ ಮತ ಎಣಿಕೆಗೆ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದೆ’ ಎಂದು ತಹಶೀಲ್ದಾರ್ ಬಸಲಿಂಗಪ್ಪ ನೈಕೋಡಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಒಟ್ಟು 16 ಬೂತ್‌ಗಳ ಪೈಕಿ 1ರಿಂದ 8ರ ವರೆಗೆ ಹಾಗೂ 9ರಿಂದ 16 ಹೀಗೆ ಎರಡು ಟೇಬಲ್‌ಗಳಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ. ಒಟ್ಟು 8 ಸುತ್ತುಗಳಲ್ಲಿ ಎಣಿಕೆ ಕಾರ್ಯ ನಡೆಯಲಿದೆ. ಇದಕ್ಕಾಗಿ ಓರ್ವ ಮೇಲ್ವಿಚಾರಕರು ಹಾಗೂ ಎಣಿಕೆ ಸಹಾಯಕರನ್ನು ನಿಯೋಜಿಸಲಾಗಿದೆ’ ಎಂದು ವಿವರಿಸಿದರು.

ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಕಲಂ 144 ಜಾರಿಗೊಳಿಸಲಾಗಿದ್ದು, ಶನಿವಾರವೂ ಮುಂದುವರಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT