ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಸಿಲಿಗಿಂತ ಏರಿಕೆಯಾದ ಚುನಾವಣಾ ಕಾವು

ಭೀಮಶೇನರಾವ್ ಕುಲಕರ್ಣಿ
Published 13 ಏಪ್ರಿಲ್ 2024, 6:07 IST
Last Updated 13 ಏಪ್ರಿಲ್ 2024, 6:07 IST
ಅಕ್ಷರ ಗಾತ್ರ

ಹುಣಸಗಿ: ಸುರಪುರ ವಿಧಾನಸಭಾ ಮತಕ್ಷೇತ್ರ ಉಪ ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಪ್ರತಿ ಗ್ರಾಮದಲ್ಲಿಯೂ ಹೊಟೇಲ್, ಕಟ್ಟೆ, ಸೇರಿದಂತೆ ಇತರ ಪ್ರದೇಶಗಳಲ್ಲಿ ಚುನಾವಣೆಯದ್ದೇ ಮಾತುಕತೆ ನಡೆಯುತ್ತಿದೆ.

ತಾಲ್ಲೂಕಿನಲ್ಲಿ ಬೇಸಿಗೆ ಬಿಸಿಲಿನ ಪ್ರಖರತೆ 39 ಡಿಗ್ರಿ ಸೆಲ್ಸಿಯಸ್ನಿಂದ 41 ಡಿಗ್ರಿ ಸೆಲ್ಸಿಯಸ್‌ಗೆ ಏರತೊಡಗಿದ್ದರೇ, ಇತ್ತ ದಿನದಿಂದ ದಿನಕ್ಕೆ ಚುನವಣಾ ಕಾವು ಕೂಡಾ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಸಿಲನ್ನು ಲೆಕ್ಕಿಸದೇ ನಾಮಪತ್ರ ಸಲ್ಲಿಕೆಗೆಗೂ ಮುನ್ನವೇ ಪ್ರಚಾರ ಭರಾಟೆ, ಕಾರ್ಯಕರ್ತರ ಸಭೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.

ಯಾದಗಿರಿ ಜಿಲ್ಲೆಯಲ್ಲಿಯೇ ಕಾಂಗ್ರೆಸ್ ವಲಯದಲ್ಲಿ ಅತ್ಯಂತ ಹಿರಿಯನಾಯಕ ಶಾಸಕ ದಿ. ರಾಜಾ ವೆಂಕಟಪ್ಪನಾಯಕ ಅವರು, ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿಯೇ ಕಳೆದ ಬಾರಿ ಚುನಾವಣೆ ಎದುರಿಸಿದ್ದರು. ಅದರಂತೆ 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಮಾಜಿ ಸಚಿವ ರಾಜೂಗೌಡ ಅವರ ವಿರುದ್ಧ ಜಯ ಸಾಧಿಸಿದ್ದರು. ಪ್ರಧಾನಿ ಮೋದಿ ಅವರು ಬಂದು ಸಾವಿರಾರು ಕೋಟಿ ವೆಚ್ಚದ ಕಾಲುವೆ ಸ್ವಯಂ ಚಾಲಿತ ಗೇಟ್ ಅಳವಡಿಕೆ ಸೇರಿದಂತೆ ವಿವಿಧ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೂ ಕ್ಷೇತ್ರದ ಜನತೆ ರಾಜಾ ವೆಂಕಟಪ್ಪನಾಯಕ ಅವರ ಕೈ ಹಿಡಿದಿದ್ದರು.

ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪರಮ ಆಪ್ತರಲ್ಲಿ ಒಬ್ಬರಾಗಿದ್ದರಿಂದಾಗಿ ಶಾಸಕ ರಾಜಾ ವೆಂಕಟಪ್ಪನಾಯಕ ಅವರಿಗೆ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಸಂಭ್ರಮದಲ್ಲಿರುವ ಸಂದರ್ಭದಲ್ಲಿಯೇ ಒಂದು ವಾರದಲ್ಲಿಯೇ ರಾಜಾ ವೆಂಕಟಪ್ಪನಾಯಕ ಅವರು ಅಕಾಲಿಕ ನಿಧನ ರಾಗಿದ್ದರಿಂದಾಗಿ ಸುರಪುರ ಕ್ಷೇತ್ರಕ್ಕೆ ಉಪಚುನಾವಣೆ ಎದುರುರಾಗಿದೆ.

ದೇಶದಲ್ಲಿ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದರೂ ರಾಜ್ಯದಲ್ಲಿಯೇ ಈ ಸುರಪುರ ವಿಧಾನಸಭಾ ಮತಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದ್ದರಿಂದಾಗಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಚಿತ್ತ ಈ ಚುನಾವಣೆಯತ್ತ ಎಂದರೂ ತಪ್ಪಾಗಲಾರದು. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರ ಮಾರ್ಗದರ್ಶನದಲ್ಲಿಯೇ ಕಾಂಗ್ರೆಸ್ ಚುನಾವಣೆ ಎದುರಿಸುತ್ತಿದೆ.

ಹಿಂದೆ 2003 ರವರೆಗೂ ರಾಜಾ ವೆಂಕಟಪ್ಪನಾಯಕ ಅವರ ಪಾಳೆಯಲ್ಲಿಯೇ ಬೆಳೆದಿದ್ದ ಮಾಜಿ ಸಚಿವ ರಾಜೂಗೌಡ ಅವರು 2004 ರ ಚುನಾವಣೆಯಲ್ಲಿ ರಾಜಾ ವೆಂಕಟಪ್ಪನಾಯಕ ಅವರು ವಿರುದ್ಧ ಕನ್ನಡನಾಡು ಪಕ್ಷದಿಂದ ಸ್ಪರ್ಧಿಸಿ ಏಕೈಕ ಶಾಸಕರಾಗಿ ಆಯ್ಕೆಯಾಗುವ ಮೂಲಕ ರಾಜ್ಯದಲ್ಲಿಯೇ ಗಮನ ಸೆಳೆದಿದ್ದರು.
ಆ ಬಳಿಕ 2008ರಲ್ಲಿ ನಡೆದ ವಿಧಾನ ಸಭಾ ಚುಣಾವಣೆಯಲ್ಲಿ ಸ್ಪರ್ಧಿಸಿ ಮತ್ತೊಮ್ಮೆ ಗೆದ್ದು, ಅಂದಿನ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದಲ್ಲಿ ಸಣ್ಣ ಕೈಗಾರಿಕೆ ಸಚಿವರಾಗಿ ಕೆಲಸ ನಿರ್ವಹಿಸಿದ್ದರು. ಅಲ್ಲದೇ ಬಿ.ಎಸ್.ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಹಲವಾರು ಜನ ಮುಖ್ಯಮಂತ್ರಿಗಳನ್ನು ಹಾಗೂ ಸಚಿವರನ್ನು ಕ್ಷೇತ್ರಕ್ಕೆ ಕರೆತರುವ ಮೂಲಕ ಹಾಗೂ ಸರ್ಕಾರ ಮಟ್ಟದಲ್ಲಿ ಕೋಟ್ಯಂತ ಅನುದಾನ ತರುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿದ್ದರು. ಸದ್ಯ ಮತ್ತೆ ಈ ಉಪಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆ ಮುಂದಾಗಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಯಾಗಿರುವ ರಾಜಾ ವೇಣುಗೋಪಾಲ ನಾಯಕ ಅವರ ವಿರುದ್ಧ ಹುಣಸಗಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ 2015ರಲ್ಲಿ ಬಸವರಾಜಸ್ವಾಮಿ ಸ್ಥಾವರಮಠ ಅವರನ್ನು ಕಣಕ್ಕೆ ಇಳಿಸಿ ಗೆಲ್ಲಿಸುವಲ್ಲಿ ರಾಜೂಗೌಡ ಅವರು ಯಶಸ್ವಿಯಾಗಿದ್ದರು. ಕಳೆದ ಎರಡು ವಾರಗಳಿಂದಲೂ ಇಬ್ಬರೂ ನಾಯಕರು ತಮ್ಮ ಬೆಂಬಲಿಗರು ಹಾಗೂ ಹಿರಿಯ ಮುಖಂಡರೊಂದಿಗೆ, ಕಾರ್ಯಕರ್ತರ ಸಭೆಯಲ್ಲಿ ನಿರತರಾಗಿದ್ದಾರೆ. ನಾಮಪತ್ರ ಸಲ್ಲಿಕೆಯ ಬಳಿಕ ಇನ್ನೂ ಹೆಚ್ಚಿನ ತುರುಸು ಕಂಡು ಬರುವ ಎಲ್ಲ ಲಕ್ಷಣಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT