ಭಾನುವಾರ, ಮೇ 16, 2021
26 °C
ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆ ನಿರ್ವಹಣೆ ಅಸಮರ್ಪಕ: ರೈತರ ಆರೋಪ

ಶಹಾಪುರ: ಅವಸರದ ಕಾಮಗಾರಿ ಜೊತೆ ನಕಲಿ ಬಿಲ್!

ಟಿ.ನಾಗೇಂದ್ರ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ಪ್ರತಿವರ್ಷ ಜೂನ್‌ ಮೊದಲ ವಾರದಲ್ಲಿ ಕಾಲುವೆಗೆ ನೀರು ಹರಿಸಬೇಕು. ನಂತರ ಮಾರ್ಚ್ ತಿಂಗಳಲ್ಲಿ ನೀರು ಸ್ಥಗಿತಗೊಳಿಸಿ ಕ್ಲೋಜರ್‌ ಅವಧಿ (3 ತಿಂಗಳು) ಕಾಲುವೆ ದುರಸ್ತಿಗೊಳಿಸಬೇಕು ಎಂಬ ನಿಯಮವಿದೆ. ಆದರೆ, ಕೃಷ್ಣಾ ಜಲಭಾಗ್ಯ ನಿಗಮದ (ಕೆಬಿಜೆಎನ್ಎಲ್) ಎಂಜಿನಿಯರ್‌ಗಳು ಇದು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪವಿದೆ.

ಕಾಲುವೆ ನೀರು ಸ್ಥಗಿತಗೊಂಡ ತಕ್ಷಣ ಕಾಲುವೆ ಜಾಲದಲ್ಲಿ ಜಾಲಿ ಗಿಡ ತೆಗೆಯುವುದು, ಹೂಳೆತ್ತುವುದು, ಒಡೆದ ಪೈಪು ದುರಸ್ತಿ, ಕಾಲುವೆ ಸೀಳಿ ಪೋಲಾಗುತ್ತಿರುವ ನೀರು ಸರಿಯಾಗಿ ಸಾಗಿಸಲು ಸಣ್ಣಪುಟ್ಟ ದುರಸ್ತಿ ಕೆಲಸಗಳನ್ನು ನಿರ್ವಹಿಸಬೇಕು. ಆದರೆ, ನಿಗಮದ ಎಂಜಿನಿಯರ್‌ಗಳು ಏಪ್ರಿಲ್ ತಿಂಗಳಲ್ಲಿ ಅಂದಾಜು ಪಟ್ಟಿ ಸಿದ್ಧಪಡಿಸಿ ಅದನ್ನು ಮೇ ಅಂತ್ಯದಲ್ಲಿ ಅನುಮೋದನೆ ಪಡೆದು ಕೆಲಸ ಆರಂಭಿಸುತ್ತಾರೆ. ಕೇವಲ ಒಂದು ತಿಂಗಳಲ್ಲಿ ಅರೆಬರೆ ಕೆಲಸ ನಿರ್ವಹಿಸುವುದು ಇಲ್ಲಿ ಸಾಮಾನ್ಯವಾಗಿದೆ. ಅಲ್ಲದೆ ಹಲವು ಕಡೆ ಕೆಲಸ ಪೂರ್ಣಗೊಳಿಸಲಾಗಿದೆ ಎಂದು ನಕಲಿ ಬಿಲ್ ಪಾವತಿಸುವುದು ಹಲವು ವರ್ಷಗಳಿಂದ ನಡೆದು ಬಂದ ಸಂಪ್ರದಾಯದಂತೆ ಆಗಿದೆ ಎಂಬುವುದು ರೈತರ ಆರೋಪ.

‘ಅರೆಬರೆ ಕಾಮಗಾರಿಯಿಂದ ನೀರು ಸುಗಮವಾಗಿ  ಕಾಲವೆಗೆ ಹರಿಯುವುದಿಲ್ಲ. ಇದರಿಂದ ಅದೇ ಕಾಲುವೆ ವ್ಯಾಪ್ತಿಯ ರೈತರು
ನೀರಿನಿಂದ ವಂಚಿತರಾಗಿದ್ದಾರೆ.

ಅಲ್ಲದೆ ವಿತರಣಾ ಕಾಲುವೆಗೆ ಅಕ್ರಮವಾಗಿ ರಂಧ್ರ ಕೊರೆದು ಪೈಪ್ ಲೈನ್ ಮೂಲಕ ನೀರು ಕಬಳಿಸುತ್ತಾರೆ. ಕಾಲುವೆ ನೀರು ಸ್ಥಗಿತವಾದ ಬಳಿಕ ಅಕ್ರಮವಾಗಿ ಹಾಕಿದ ಪೈಪು ಕಾಲುವೆಯುದ್ದಕ್ಕೂ ಕಾಣುತ್ತೇವೆ. ಆದರೆ, ಎಂಜಿನಿಯರ್ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗುವುದಿಲ್ಲ’ ಎನ್ನುತ್ತಾರೆ ರೈತ ಶರಣಪ್ಪ.

ಬರದ ದವಡೆಯಿಂದ ಹೊರ ಬಂದು ರೈತರ ಬಾಳಲ್ಲಿ ಹಸಿರು ಮೂಡಿಸುವ ಉದ್ದೇಶದಿಂದ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ನೀರಾವರಿ ವ್ಯಾಪ್ತಿಯಲ್ಲಿ ಲಘು ಬೆಳೆಗಳನ್ನು ಬೆಳೆಯಬೇಕು ಎಂಬ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ.

ಕಾಲಮಿತಿಯಲ್ಲಿ ಕಾಲುವೆ ಜಾಲದಲ್ಲಿ ದುರಸ್ತಿ ಕೆಲಸಗಳನ್ನು ಕೈಗೆತ್ತಿಕೊಂಡು ನಿಗದಿಪಡಿಸಿದ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಅಕ್ರಮವಾಗಿ ಕಾಲುವೆ ಸೀಳುವುದು, ಕೃತಕ ಕೆರೆ ನಿರ್ಮಾಣ ಮಾಡಿ ರೈತರ ಹೆಸರಿನಲ್ಲಿ ನೀರು ಕಬಳಿಸುವ ವ್ಯಕ್ತಿಗಳ ವಿರುದ್ಧ ದಿಟ್ಟ ಕ್ರಮ ತೆಗೆದುಕೊಳ್ಳಬೇಕು ಎಂದು ರೈತರು ಮನವಿ ಮಾಡಿದ್ದಾರೆ.

ಕೋಟ್ಯಂತರ ರೂಪಾಯಿ ಕರ ಬಾಕಿ: ‘ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಎರಡು ಅವಧಿಗೂ ರೈತರು ಬೆಳೆಗೆ ನೀರು ತೆಗೆದುಕೊಳ್ಳುತ್ತಾರೆ. ಆದರೆ, ನೀರಾವರಿ ಕರ ಮಾತ್ರ ಪಾವತಿಸುವುದನ್ನು ಮರೆತು ಬಿಟ್ಟಿದ್ದಾರೆ. ಸುಮಾರು ₹1 ಸಾವಿರ ಕೋಟಿಗೂ ಅಧಿಕ ನೀರಾವರಿ ಕರ ಬಾಕಿ ಇದೆ. ಅಲ್ಲದೆ ಬೆಳೆ ಪದ್ಧತಿ ಉಲ್ಲಂಘಿಸಿ ಭತ್ತ ನಾಟಿ ಮಾಡಿದ್ದರೆ ದಂಡ ರೂಪದಲ್ಲಿ ಕರ ಪಾವತಿಸಬೇಕು. ರೈತರ ಸಹಭಾಗಿತ್ವದಲ್ಲಿ ಕರ ಸಂಗ್ರಹಿಸಿಕೊಂಡು ಅಭಿವೃದ್ಧಿ ಕೆಲಸ ಮಾಡಿದರೆ ನಿಗಮದಿಂದ ನಯಾ ಪೈಸೆಗೆ ಕೈಯೊಡ್ಡುವ ಅವಶ್ಯಕತೆ ಬರುವುದಿಲ್ಲ’ ಎಂದು ರೈತ ಮುಖಂಡ ಭಾಸ್ಕರರಾವ ಮುಡಬೂಳ ಹೇಳುತ್ತಾರೆ.

‘ಆದರೆ, ತುಂಗಭದ್ರ ಅಚ್ಚುಕಟ್ಟು ಪ್ರದೇಶದಲ್ಲಿ ನೀರಾವರಿ ಕರವನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡುತ್ತಾರೆ. ಬ್ಯಾಂಕ್‌ಗೆ ಕೃಷಿ ಸಾಲ ಪಡೆಯಲು ತೆರಳಿದರೆ, ಕಡ್ಡಾಯವಾಗಿ ಕರ ಪಾವತಿಸಿದ ರಸೀದಿ ಲಗತ್ತಿಸಬೇಕು. ಅದರಂತೆ ನಮ್ಮಲ್ಲಿ ಕಟ್ಟುನಿಟ್ಟಾಗಿ ಕರ ವಸೂಲಿ ಮಾಡಬೇಕು. ರೈತರು ಸಹ ಸ್ವಯಂ ಪ್ರೇರಣೆಯಿಂದ ಕರ ನೀಡಲು ಮುಂದೆ ಬರಬೇಕು. ಇದರಿಂದ ಕಾಲುವೆ ವ್ಯಾಪ್ತಿಯಲ್ಲಿ ದುರಸ್ತಿ ಕೆಲಸ ನಿರ್ವಹಿಸಲು ನೆರವಾಗುತ್ತದೆ’ ಎಂದು ಹೇಳುತ್ತಾರೆ.

ಕಣ್ಣು ಮುಚ್ಚಿದ ಸಂಘ: ರೈತರ ಸಹಭಾಗಿತ್ವದಲ್ಲಿ ನೀರು ಸದ್ಭಳಕೆ ಮಾಡಿಕೊಳ್ಳಬೇಕು. ನೀರಿನ ಕರವನ್ನು ವಸೂಲಿ ಮಾಡಿ ಬಂದ ಹಣದಿಂದ ಕಾಲುವೆ ದುರಸ್ತಿಗೊಳಿಸಬೇಕು ಎಂಬ ಉದ್ದೇಶದಿಂದ ಸ್ಥಾಪಿಸಿದ ನೀರು ಬಳಕೆದಾರ ಸಹಕಾರ ಸಂಘಗಳು ಕಣ್ಣು ಮುಚ್ಚಿವೆ. ಗುತ್ತಿಗೆ ಕೆಲಸವನ್ನು ಪಡೆದುಕೊಳ್ಳುವ ತರಾತುರಿಯಲ್ಲಿ ರೂಪ ತಾಳಿದ ಸಂಘಗಳು ಪುನಶ್ಚೇತನಗೊಳ್ಳದೆ ಮುಗ್ಗರಿಸಿವೆ. ಸಹಕಾರ ಸಂಘದ ಮೂಲಕ ಕ್ಲೋಜರ್ ಅವಧಿಯಲ್ಲಿ ದುರಸ್ತಿ ಕೆಲಸ ನಿರ್ವಹಿಸಲು ಅವಕಾಶವಿದೆ. ಆದರೆ, ನೀರು ಬಳಕೆದಾರ ಸಂಘುಗಳು ಮುಂದಾಗುತ್ತಿಲ್ಲ ಎನ್ನುತ್ತಾರೆ ರೈತರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು