ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿ ಕೃಷ್ಣೆಯಿಂದ ರೈತರ ಬದುಕು ಹಸನು: ರಾಜೂಗೌಡ

Last Updated 12 ಜುಲೈ 2020, 15:39 IST
ಅಕ್ಷರ ಗಾತ್ರ

ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಈ ಬಾರಿಯ ನೀರಾವರಿ ಸಲಹಾ ಸಮಿತಿ ಸಭೆಯನ್ನು ಆಲಮಟ್ಟಿಯಲ್ಲಿ ಶೀಘ್ರದಲ್ಲಿಯೇ ನಡೆಸುವಂತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರೊಂದಿಗೆ ಮಾತನಾಡಿರುವುದಾಗಿ ಸುರಪುರ ಶಾಸಕ ರಾಜೂಗೌಡ ಹೇಳಿದರು.

ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದ ಗೇಟ್‌ಗೆ ಪೂಜೆ ಸಲ್ಲಿಸಿದ ಬಳಿಕ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

ನಾಲ್ಕು ಜಿಲ್ಲೆಯ ರೈತರ ಜೀವನಾಡಿಯಾಗಿರುವ ಕೃಷ್ಣೆ ನದಿಯಿಂದ ಬಸವಸಾಗರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದು ಸಂತಸದ ಸಂಗತಿಯಾಗಿದೆ. ಕೃಷ್ಣೆ ಕೃಪೆಯಿಂದಾಗಿಯೇ ಲಕ್ಷಾಂತರ ರೈತರ ಬದುಕು ಹಸನಾಗುವಂತೆ ಮಾಡಿದ್ದು, ರೈತರು ಸ್ವಾವಲಂಬಿಗಳಾಗಿ ಬದುಕು ನಡೆಸುವಂತಾಗಿದೆ. ನಮ್ಮ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ತಾಯಿ ಕೃಷ್ಣೆಯ ಕೃಪೆಯಿಂದ ರೈತರ ಜಮೀನುಗಳಿಗೆ ನೀರಾವರಿ ಕಲ್ಪಿಸಲಾಗಿದೆ. ಆದ್ದರಿಂದ ನಿತ್ಯವೂ ಕೃಷ್ಣೆಯನ್ನು ನೆನೆದುಕೊಳ್ಳೋಣ ಎಂದರು.

ಕೊರೊನಾದ ವಿಷಮ ಪರಿಸ್ಥಿತಿಯಲ್ಲಿ ರೈತರು ಕೂಡಾ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಕೃಷಿಯಲ್ಲಿ ತೊಡಗಿಕೊಳ್ಳುವಾಗಲೂ ಸುರಕ್ಷಿತ ಅಂತರ ಕಾಪಾಡಿಕೊಂಡು ಕಡ್ಡಾಯವಾಗಿಮಾಸ್ಕ್ ಬಳಸಬೇಕು ಎಂದರು.

ಮುಖ್ಯ ಎಂಜಿನಿಯರ್ ಎಸ್.ರಂಗಾರಾಂ ಮಾತನಾಡಿ, ಮಹಾರಾಷ್ಟ್ರ ಸೇರಿದಂತೆ ಕೃಷ್ಣಾ ನದಿ ಪಾತ್ರದಲ್ಲಿ ಮಳೆಯಾಗುತ್ತಿದ್ದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಆದ್ದರಿಂದ ಜಲಾಶಯದ ಮಟ್ಟ ಕಾಯ್ದುಕೊಂಡು ಹೆಚ್ಚಿನ ನೀರನ್ನು ಕೃಷ್ಣಾ ನದಿಗೆ ಹರಿ ಬಿಡಲಾಗುತ್ತಿದ್ದು, ನದಿ ತೀರದಲ್ಲಿರುವ ಗ್ರಾಮಗಳ ಜನರು ನದಿಯತ್ತ ತೆರಳದಂತೆ ಜಾಗ್ರತೆ ವಹಿಸಬೇಕು ಎಂದರು.

ಡ್ಯಾಂ ಡಿವಿಜನ್ ಕಾರ್ಯನಿರ್ವಾಹಕ ಎಂಜಿನಿಯರ್ ಶಂಕರ ನಾಯ್ಕೋಡಿ ಮಾತನಾಡಿ, ಭಾನುವಾರದವರೆಗೂ 33 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಒಟ್ಟು 29.65 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, 40 ಸಾವಿರ ಕ್ಯುಸೆಕ್ ಒಳಹರಿವು ದಾಖಲಾಗುತ್ತದೆ. ಅದರಂತೆ 4 ಕ್ರಷ್ಟ್‌ಗೇಟ್‌ಗಳ ಮುಖಾಂತರ 28,480 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ ಎಂದು ವಿವರಿಸಿದರು.

ರಾಘವೇಂದ್ರಾಚಾರ್ಯ ಮಾರಲಬಾವಿ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು.

ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಎಲ್. ಹಳ್ಳೂರ, ಎಂಜಿನಿಯರ್‌ಗಳಾದ ವಿಜಯಕುಮಾರ ಅರಳಿ, ರೈಸಾ ಬೇಗಂ, ಸ್ನೇಹಾ, ನಾಗಮ್ಮ, ರಾಮಚಂದ್ರ, ಅಮಪರಪ್ಪ, ಶೌಕತ್, ಗೌತಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT