ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಕರಿಗೆ ಸಿಗದ ನ್ಯಾಯಯುತ ಬೆಲೆ; ರೈತ ಸಂಘ ಪ್ರತಿಭಟನೆ

Last Updated 13 ಏಪ್ರಿಲ್ 2022, 4:25 IST
ಅಕ್ಷರ ಗಾತ್ರ

ಸುರಪುರ: ದಿನ ಬಳಕೆ ವಸ್ತುಗಳ ಬೆಲೆ ಏರಿಕೆ, ಬೆಂಬಲ ಬೆಲೆ ನಿಗದಿ ಮತ್ತು ಖರೀದಿ ಕೇಂದ್ರ ಆರಂಭ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಮುಖಂಡರು ಎಪಿಎಂಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಯ್ಯಣ್ಣ ಹಾಲಬಾವಿ ಮಾತನಾಡಿ, ‘ಅಡುಗೆ ಎಣ್ಣೆ, ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನ ಬಳಕೆಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ರೈತರು ಬೆಳೆದ ಶೇಂಗಾ ಮತ್ತು ಭತ್ತ ಬೆಳೆಗಳಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ. ಬೀಜ ಗೊಬ್ಬರಕ್ಕೆ ಖರ್ಚು ಮಾಡಿದ ಹಣ ಕೈಗೆ ಬಾರದೆ ಮಾಡಿದ ಸಾಲ ತೀರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಇದು ರೈತರು ಕೂಲಿ ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಿದೆ’ ಎಂದರು.

ತಾಲ್ಲೂಕು ಘಟಕದ ಅಧ್ಯಕ್ಷ ಹಣಮಂತ್ರಾಯ ಮಡಿವಾಳ ಮಾತನಾಡಿ, ‘ಅತಿವೃಷ್ಟಿ, ಅನಾವೃಷ್ಟಿ, ಬೆಳೆಗಳಿಗೆ ಯೋಗ್ಯ ಬೆಲೆ ಸಿಗದೆ ಇರುವುದು ರೈತನನ್ನು ಹತಾಷಕ್ಕೆ ಸಿಲುಕಿಸಿದೆ. ಶೇಂಗಾ ಮತ್ತು ಭತ್ತ ಕಟಾವಿಗೆ ಬಂದಿವೆ. ಶೇಂಗಾಕ್ಕೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಪ್ರತಿ ಹಂತದಲ್ಲೂ ನಷ್ಟ ಅನುಭವಿಸುತ್ತಿರುವ ರೈತರು ಆತ್ಮಹತ್ಯೆ ಹಾದಿ ತುಳಿಯುವಂತಾಗಿದೆ’ ಎಂದು ಹೇಳಿದರು.

‘ಕೆಲಸಕ್ಕೆ ಬಾರದ ವಿಷಯಗಳನ್ನು ಕೆದಕುತ್ತಾ ಜನಪ್ರತಿನಿಧಿಗಳು ಕಾಲ ಹರಣ ಮಾಡುವುದು ಸರಿಯಲ್ಲ. ಸರ್ಕಾರದ ಮೇಲೆ ಒತ್ತಡ ತಂದು ರೈತರ ನೆರವಿಗೆ ಬರಬೇಕು. ಶೇಂಗಾ, ಜೋಳ, ಸಜ್ಜಿ ಮತ್ತು ಭತ್ತಕ್ಕೆ ಬೆಂಬಲ ಬೆಲೆಯಲ್ಲಿ ಖರೀದಿಸುವ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸಿದರು.

ಬೇಡಿಕೆಯ ಮನವಿ ಪತ್ರವನ್ನು ತಹಶೀಲ್ದಾರ್ ಮಲ್ಯಯ್ಯ ದಂಡು ಅವರಿಗೆ ಸಲ್ಲಿಸಿದರು.

ಪ್ರಮುಖರಾದ ಮಲ್ಲಯ್ಯ ಕಮತಗಿ, ಸಾಹೇಬಗೌಡ ಮದಲಿಂಗನಾಳ, ರಾಘು ಕುಪಗಲ್, ಹಣಮಗೌಡ ನಾರಾಯಣಪುರ, ನಾಗಪ್ಪ ಕುಪಗಲ್, ಶರಣು ಮೇಟಿ, ವೆಂಕಟೇಶ ಕುಪಗಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT